ಸಿದ್ದುಗೆ ರಾಜಕೀಯ ಭವಿಷ್ಯ ನುಡಿದ ಮನೆ ದೇವರು- ಒಂದೇ ಕಡೆ ನಿಂತ್ರೆ ಬಲವಿಲ್ಲ; ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಬೇಕು

ಮಂಡ್ಯ: ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ (Karnataka Election) ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎನ್ನುವುದಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಇನ್ನೂ ಗುಟ್ಟು ಬಿಟ್ಟುಕೊಟ್ಟಿಲ್ಲ. ತವರು ಕ್ಷೇತ್ರ ವರುಣಾನ  ಅಥವಾ ಕೋಲಾರ  ಕ್ಷೇತ್ರದಲ್ಲಿ ಸ್ಪರ್ಧಿಸಬೇಕೆ ಎಂಬ ವಿಚಾರವಾಗಿ ಸ್ವತಃ ಸಿದ್ದರಾಮಯ್ಯರೇ ಗೊಂದಲದಲ್ಲಿ ಇದ್ದಂತೆ ಕಾಣುತ್ತಿದೆ. ಇದೇ ಹೊತ್ತಿನಲ್ಲಿ ಸಿದ್ದು ರಾಜಕೀಯ ಭವಿಷ್ಯವನ್ನು ಮನೆ ದೇವರು ನುಡಿದಿದೆ.

ಸಿದ್ದರಾಮಯ್ಯ ಒಂದೇ ಕಡೆ ನಿಂತ್ರೆ ಬಲವಿಲ್ಲ. ಎರಡು ಕ್ಷೇತ್ರದಲ್ಲಿ ನಿಲ್ಲಬೇಕು ಎಂದು ಮಳವಳ್ಳಿ  ತಾಲೂಕಿನ ಚೊಟ್ಟನಹಳ್ಳಿ ಗ್ರಾಮದ ಆದಿನಾಡು ಚಿಕ್ಕತಾಯಮ್ಮ ದೇವರು ಭವಿಷ್ಯ ನುಡಿದಿದೆ. ಈ ದೇವರು ಸಿದ್ದರಾಮಯ್ಯ ಕುಟುಂಬದ ಮೂಲ ದೇವತೆ.

“ನಿಮಗೆ ಪ್ರಬಲ ಶಕ್ತಿಗಳ ವಿರೋಧ ಇದೆ. ಒಂದು ಕಡೆ ಬಾಹುಬಲ‌ ಚಾಚಿದ್ರೆ ಆಗಲ್ಲ. ಅರ್ಥ ಆಯ್ತೇನಪ್ಪ. ಬಾಹುಬಲ ಎರಡು ಕಡೆ ಚಾಚಬೇಕು. ಒಂದು ಕಡೆ ಚಾಚಿದ್ರೆ ತಪ್ಪಾಗುತ್ತೆ, ಅರ್ಥ ಮಾಡ್ಕೊಳ್ಳಿ. ಎರಡು ಕಡೆ ಚಾಚಿದ್ರೆ ನಾನು ಗೆಲ್ಲಿಸಿಕೊಂಡು ಬರ್ತೀನಿ” ಎಂದು ದೇವರು ತಿಳಿಸಿದೆ.

ನಾನು ನಿಮ್ಮ ಮನೆ ದೇವತೆ ಗೊತ್ತಾ? ನಾನು ಮೂಲದೇವರು. ಬೇಕಾದ್ರೆ ಅವಕಾಶ ಸಿಕ್ಕಿದ್ರೆ ಯಾವಾಗಾದ್ರು ಬಂದು ನನ್ನ ಆಶೀರ್ವಾದ ತೆಗೆದುಕೊಂಡು ಹೋಗಲು ಹೇಳು ಎಂದು ದೇವಾಲಯದ ಅರ್ಚಕ ಡಾ. ಲಿಂಗಣ್ಣ ಮೈ ಮೇಲೆ ಬಂದ ಶಕ್ತಿ ದೇವತೆ ಹೇಳಿದೆ. ಸಿದ್ದು ಪುತ್ರ ಡಾ.ಯತೀಂದ್ರ ಅವರು ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸುವ ವೇಳೆ ದೇವರು ಈ ಸೂಚನೆ ನೀಡಿದೆ.

Leave a Reply

Your email address will not be published. Required fields are marked *