ದೇವಸ್ಥಾನಗಳಲ್ಲೂ ಮೈಕ್‌ ಬಳಕೆಯಿಂದ ಶಬ್ಧ ಮಾಲಿನ್ಯವಾದ್ರೆ ಕ್ರಮ.. ಗೃಹ ಸಚಿವ ಆರಗ

ಬೆಂಗಳೂರು : ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್​ನವರು ಎಲ್ಲದರಲ್ಲೂ ರಾಜಕಾರಣ ಮಾಡುತ್ತಾರೆ. ಸ್ವಾತಂತ್ರ್ಯ ಬಂದಾಗಿನಿಂದ ವೋಟ್ ಬ್ಯಾಂಕ್ ರಾಜಕಾರಣ ಮಾಡಿಕೊಂಡೇ ಸಿಂಹಾಸನದ ಮೇಲೆ ಕೂತಿದ್ದಾರೆ. ಒಂದು ವೇಳೆ ವೋಟ್​ಬ್ಯಾಂಕ್​ನ ಬುಡ ಅಲ್ಲಾಡಿದರೇ ಕಾಂಗ್ರೆಸ್​ ಪತನವಾಗುವ ಭಯದಲ್ಲೇ ಅವರಿದ್ದಾರೆ. ಹಾಗಾಗಿ, ಹಿಜಾಬ್​ ಸೇರಿದಂತೆ ಯಾವುದೇ ವಿಷಯದ ಬಗ್ಗೆ ಗಟ್ಟಿಯಾದ ನಿಲುವನ್ನು ಅವರು ಎಲ್ಲೂ ಪ್ರಕಟಿಸುತ್ತಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಆರೋಪಿಸಿದ್ದಾರೆ.

ಮಸೀದಿಯಲ್ಲಿ ಧ್ವನಿವರ್ಧಕಗಳ ನಿಷೇಧ ಸಂಬಂಧ ಬಗ್ಗೆ ವಿಧಾನಸೌಧದ ಮುಂದೆ ಪ್ರತಿಕ್ರಿಯಿಸಿದ ಅವರು, ಎಲ್ಲವನ್ನೂ ಕೂಡ ನಿಯಮದ ಅಡಿಯಲ್ಲೇ ಮಾಡಬೇಕಾಗುತ್ತದೆ. ಆಜಾನ್​ ಮಾತ್ರವಲ್ಲ ಒಂದು ಬಸ್ ಓಡಿಸುವುದಕ್ಕೂ ಕೂಡ ಒಂದು ಡೆಸಿಬಲ್ ಲಿಮಿಟ್ ಇರಬೇಕು. ಶಬ್ಧಮಾಲಿನ್ಯದ ಬಗ್ಗೆ ಸುಪ್ರಿಂಕೋರ್ಟ್ ಆದೇಶಗಳನ್ನು ನೀಡಿದೆ.

ಅವುಗಳ ಪ್ರಕಾರವೇ ನಡೆದುಕೊಳ್ಳಬೇಕಾಗುತ್ತದೆ. ಎಲ್ಲಿ ಸುಪ್ರಿಂಕೋರ್ಟ್ ಆದೇಶ ಉಲ್ಲಂಘನೆ ಆಗಿದೆ‌ ಎಂಬುದನ್ನು ಪರೀಕ್ಷೆ ಮಾಡಿ, ಅದನ್ನು ವಿಶ್ವಾಸಪೂರಕವಾಗಿಯೇ ಸರಿಪಡಿಸಬೇಕು ಎಂದು ಸ್ಥಳೀಯ ಪೊಲೀಸರಿಗೆ ಹೇಳಿದ್ದೇನೆ. ಯಾವುದೇ ರೀತಿಯ ಘರ್ಷಣೆ ಅಥವಾ ಲಾ ಅಂಡ್ ಆರ್ಡರ್ ಉಲ್ಲಂಘನೆ ಆಗದಂತೆ ನೋಡಿಕೊಳ್ಳುವಂತೆ ತಿಳಿಸಲಾಗಿದೆ.

ಮಸೀದಿ ಮಾತ್ರವಲ್ಲ ದೇವಸ್ಥಾನಗಳಲ್ಲೂ ಎಲ್ಲಿ ಧ್ವನಿವರ್ಧಕಗಳನ್ನು ಬಳಸಿ ಶಬ್ಧಮಾಲಿನ್ಯ ಮಾಡಲಾಗುತ್ತದೆಯೋ ಅಲ್ಲೆಲ್ಲ ಕ್ರಮಕೈಗೊಳ್ಳುವಂತೆ ಪೊಲೀಸರಿಗೆ ತಿಳಿಸಲಾಗಿದೆ. ಎಲ್ಲರೂ ಪೊಲೀಸರ ಮಾತು ಕೇಳಿದರೆ ಶಾಂತಿಯುತವಾಗಿ ಸಮಸ್ಯೆ ಬಗೆಹರಿಯುತ್ತದೆ. ಸಭೆ ನಡೆಸುವುದು ನೋಟಿಸ್ ನೀಡುವುದು ಎಲ್ಲವನ್ನೂ ಸ್ಥಳೀಯ ಪೊಲೀಸರು ಮಾಡುತ್ತಾರೆ ಎಂದರು.

ಹಿಜಾಬ್, ಹಲಾಲ್ ವಿಚಾರಗಳಲ್ಲಿ ಕಾಂಗ್ರೆಸ್ ತನ್ನ ನಿಲುವು ಏನು ಅನ್ನುವುದನ್ನು ಸ್ಪಷ್ಟವಾಗಿ ಹೇಳಬೇಕಲ್ಲ. ಡಿ ಕೆ ಶಿವಕುಮಾರ್ ಅವರೇ ಹಿಜಾಬ್​ ಬಗ್ಗೆ ಎಲ್ಲೂ ಮಾತನಾಡಬೇಡಿ ಎಂದು ಹೇಳುತ್ತಾರೆ. ಸತ್ಯ ಹೇಳುವ ಧೈರ್ಯ ಇಲ್ಲ ಎಂದಾದರೆ ಯಾಕೆ ಇಲ್ಲಿದ್ದಾರೆ ಎಂದು ಹೇಳಿದರು.

Leave a Reply

Your email address will not be published. Required fields are marked *