‘ಯಾರಿಗೇಳೋಣಾ ನಮ್ಮ ಪ್ರಾಬ್ಲಂ’..ಸಚಿವ ಸ್ಥಾನದ ಆಫರ್..? ಕಾಂಗ್ರೆಸ್ ತೊರೆಯುವ ವಿಚಾರದಲ್ಲಿ ಇಬ್ರಾಹಿಂ ಗೊಂದಲ!

ಬೆಂಗಳೂರು: ಕಾಂಗ್ರೆಸ್ ಪಕ್ಷವನ್ನು ತೊರೆಯಲು ನಿರ್ಧರಿಸಿದ್ದ ಮಾಜಿ ಕೇಂದ್ರ ಸಚಿವ ಹಾಗೂ ಎಮ್ಮೆಲ್ಸಿ ಸಿ.ಎಂ. ಇಬ್ರಾಹಿಂಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೀಡಿದ್ದಾರೆ ಎನ್ನಲಾದ ದೊಡ್ಡ ಆಫರ್ ಇನ್ನಷ್ಟು ಗೊಂದಲಕ್ಕೆ ಸಿಲುಕಿಸಿದೆ. ಹೀಗಾಗಿ ಅವರು ತಮ್ಮ ಮುಂದಿನ ನಡೆಯ ಬಗ್ಗೆ ಸದ್ಯ ಯಾವುದೇ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ ಎಂದು ತಿಳಿದು ಬಂದಿದೆ. ವಿಧಾನ ಪರಿಷತ್ ಸದಸ್ಯತ್ವ ಹಾಗೂ ಕೇಂದ್ರದ ಮಾಜಿ ಸಚಿವರೂ ಆಗಿರುವ ಸಿಎಂ ಇಬ್ರಾಹಿಂ ಅವರ ಪರಿಷತ್ ಕಾಲಾವಧಿ 2024ಕ್ಕೆ ಕೊನೆಗೊಳ್ಳಲಿದೆ.

ಇದನ್ನೇ ಆಧಾರವಾಗಿಟ್ಟುಕೊಂಡು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿಶೇಷ ಯೋಜನೆ ರೂಪಿಸಿದ್ದು, ಪ್ರಮುಖ ಅಲ್ಪಸಂಖ್ಯಾತ ನಾಯಕನನ್ನು ಕಳೆದುಕೊಳ್ಳಲು ಸಿದ್ಧರಿಲ್ಲ. ಕಾಂಗ್ರೆಸ್ ಮತ ಬ್ಯಾಂಕ್ ಆಗಿರುವ ಮುಸಲ್ಮಾನ್ ಸಮುದಾಯದವರು ಇಬ್ರಾಹಿಂ ಪಕ್ಷ ಬಿಡುವುದರಿಂದ ಕೊಂಚ ಮಟ್ಟಿನ ಗೊಂದಲಕ್ಕೆ ಒಳಗಾಗಬಾರದು ಎಂದು ನಿರ್ಧರಿಸಿದ್ದಾರೆ. ಹೀಗಾಗಿ ವಿಧಾನ ಮಂಡಲ ಅಧಿವೇಶನ ಮುಗಿಯುತ್ತಿದ್ದಂತೆ ಇಬ್ರಾಹಿಂ ಭೇಟಿ ಮಾಡಿ ಮಾತುಕತೆ ನಡೆಸುವ ಸಾಧ್ಯತೆ ಇದೆ.

ಈಗಾಗಲೇ ತಮ್ಮ ಆಪ್ತ ಹಾಗೂ ಮಾಜಿ ಸಚಿವ ಜಮೀರ್ ಅಹ್ಮದ್​ ಅವರನ್ನು ಇಬ್ರಾಹಿಂ ನಿವಾಸಕ್ಕೆ ಕಳುಹಿಸಿಕೊಟ್ಟಿದ್ದ ಸಿದ್ದರಾಮಯ್ಯ ಸಚಿವ ಸ್ಥಾನ ನೀಡುವ ಭರವಸೆ ಕೊಟ್ಟಿದ್ದಾರೆ. ಸಿಎಂ ಇಬ್ರಾಹಿಂ ನಿವಾಸಕ್ಕೆ ತೆರಳಿದ್ದ ಸಂದರ್ಭ ಜಮೀರ್ ಅಹ್ಮದ್ ಭರವಸೆಯ ಮಾತನಾಡಿದ್ದು, ಸಿದ್ದರಾಮಯ್ಯ ನೀಡಿರುವ ಮಾಹಿತಿಯಂತೆ ತಮ್ಮನ್ನು ಅವರು ಭೇಟಿಯಾಗಲಿದ್ದಾರೆ. ಅಲ್ಲಿಯವರೆಗೆ ತಾಳ್ಮೆಯಿಂದ ಇರಿ ಎಂದು ಹೇಳಿದ್ದಾರೆ.

2023 ರಲ್ಲಿ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರುವ ಅವಕಾಶ ಇದೆ. ಪರಿಷತ್​ನ ಸಾಕಷ್ಟು ಹಿರಿಯ ಸದಸ್ಯರು ನಿವೃತ್ತಿಹೊಂದುವ ಹಿನ್ನೆಲೆ ಇರುವವರಲ್ಲಿ ಪ್ರತಿಪಕ್ಷ ನಾಯಕರನ್ನು ಹೊರತುಪಡಿಸಿದರೆ ತಮಗೇ ಎರಡನೇಯದಾಗಿ ಸಚಿವ ಸ್ಥಾನ ಸಿಗುವ ಅವಕಾಶ ಇದೆ. ದಯವಿಟ್ಟು ದುಡುಕಿ ನಿರ್ಧಾರ ಕೈಗೊಳ್ಳಬೇಡಿ. ತಮ್ಮ ಸದಸ್ಯತ್ವ ಅವಧಿ 2024ರವರೆಗೆ ಇದ್ದು, ಇನ್ನೊಂದು ಅವಧಿಗೆ ನವೀಕರಿಸಿಕೊಂಡು ಸರ್ಕಾರದಲ್ಲಿ ಪೂರ್ಣಾವಧಿ ಸಚಿವರಾಗುವ ಅವಕಾಶವಿದೆ. ಪಕ್ಷಕ್ಕಾಗಿ ದುಡಿದಿದ್ದೀರಿ. ಜೆಡಿಎಸ್ ತೊರೆದು ಸಿದ್ದರಾಮಯ್ಯ ಜತೆ ಬಂದಿದ್ದೀರಿ. ಅವರು ನಿಮಗೆ ಅವಕಾಶ ನೀಡುತ್ತಾರೆ. ಭರವಸೆ ಇಡಿ ಎಂದು ಮನವಿ ಮಾಡಿದ್ದಾರೆ ಎಂಬ ಮಾಹಿತಿ ಇದೆ.

ಗೊಂದಲದಲ್ಲಿ ಇಬ್ರಾಹಿಂ: ಜೆಡಿಎಸ್ ಪಕ್ಷ ಸೇರಿದರೆ ಸದ್ಯ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಸಿಗುವುದಿಲ್ಲ. ರಾಜೀನಾಮೆ ನೀಡಿರುವ ವಿಧಾನ ಪರಿಷತ್ ಸದಸ್ಯತ್ವವೂ ಸಿಗುವುದು ಅನುಮಾನ. ಕಾರಣ ವಿಧಾನಸಭೆಯಲ್ಲಿ ಜೆಡಿಎಸ್ ಸದಸ್ಯರ ಕೊರತೆ ಇದೆ. ಸದ್ಯಕ್ಕೆ ಜೆಡಿಎಸ್​ನಿಂದ ಸಿಕ್ಕ ಭರವಸೆ ಅಂದರೆ ಭದ್ರಾವತಿಯಿಂದ ಜೆಡಿಎಸ್ ಟಿಕೆಟ್ ನೀಡುವುದು.

ದೊಡ್ಡ ಮೊತ್ತದ ಹಣ ವ್ಯಯಿಸಿ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿ ವಿರುದ್ಧ ಸೆಣೆಸುವುದು ಕಷ್ಟದ ಮಾತು. ಅಪ್ಪಾಜಿಗೌಡರಿಗೆ ಇದ್ದ ವರ್ಚಸ್ಸು ತಮಗಿಲ್ಲ. ಅಲ್ಲದೇ ಈ ಹಿಂದೆ ಕಾಂಗ್ರೆಸ್ ಪಕ್ಷದಿಂದಲೇ ಕಣಕ್ಕಿಳಿದು ಮೂರನೇ ಸ್ಥಾನ ತಲುಪಿದ್ದು ಇಬ್ರಾಹಿಂಗೆ ನೆನಪಿದೆ. ಸದ್ಯ ಏನೂ ಆಗಿಲ್ಲ ಅಂತ ಕಾಂಗ್ರೆಸ್​ನಲ್ಲೇ ಉಳಿದುಕೊಂಡರೆ ಕನಿಷ್ಠ ಇರುವ ಆರ್ಥಿಕ ಸಂಕಷ್ಟದಲ್ಲಿ ಮೂರು ವರ್ಷ ಪರಿಷತ್ ಸದಸ್ಯರಾಗಿಯಾದರೂ ಮುಂದುವರಿಯಬಹುದು. ಮುಂದೆ ಯಾವ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ನೋಡಿಕೊಂಡು ನಿರ್ಧರಿಸಿದರೆ ಆಯಿತು ಅನ್ನುವ ಚಿಂತನೆ ಮಾಡಿದ್ದಾರೆ ಎಂಬ ಮಾಹಿತಿ ಇದೆ.

ಒಟ್ಟಾರೆ ಕಾಂಗ್ರೆಸ್ ಪಕ್ಷದಲ್ಲಿ ಉಳಿಯುವದೋ, ಜೆಡಿಎಸ್ ಸೇರುವುದೋ ಅನ್ನುವ ಗೊಂದಲದಲ್ಲೇ ಇರುವ ಇಬ್ರಾಹಿಂ ವಿಧಾನಸೌಧದಕ್ಕೆ ಬಂದರೂ, ಪರಿಷತ್ ಮೊಗಸಾಲೆಯಲ್ಲೇ ಕುಳಿತು ಎದ್ದು ಹೋಗುತ್ತಿದ್ದಾರೆ. ಒಳಗೆ ಬರುತ್ತಿಲ್ಲ. ಚರ್ಚೆಯಲ್ಲಿ ಭಾಗಿಯಾಗುತ್ತಿಲ್ಲ. ಸಾಕಷ್ಟು ದೊಡ್ಡ ಗೊಂದಲದಲ್ಲಿ ಅವರಿದ್ದಾರೆ ಎಂಬ ಮಾಹಿತಿ ಇದೆ. ಕಾಂಗ್ರೆಸ್ ಕೈಗೊಳ್ಳುವ ನಿಲುವು ಇವರ ಭವಿಷ್ಯದ ದಾರಿಯನ್ನು ನಿರ್ಧರಿಸಲಿದೆ.

Leave a Reply

Your email address will not be published. Required fields are marked *