ರಾಜ್ಯದಲ್ಲಿ ಬೇಡ ಜಂಗಮರ ಹೆಸರಿನಲ್ಲಿ ಮೇಲ್ಜಾತಿಯವರು ಎಸ್​ಸಿ ಪ್ರಮಾಣ ಪತ್ರ ಪಡೆಯುತ್ತಿದ್ದಾರೆ: ಪಿ.ರಾಜೀವ್

ಬೆಂಗಳೂರು: ಪರಿಶಿಷ್ಟ ಜಾತಿಯಲ್ಲಿ 103 ಜಾತಿಗಳಿವೆ. ಅದರಲ್ಲಿ ಬೇಡ ಜಂಗಮ ಒಂದು. ಆದರೆ, ರಾಜ್ಯದಲ್ಲಿ ಮೇಲ್ಜಾತಿಯವರು ಬೇಡ ಜಂಗಮರ ಹೆಸರಿನಲ್ಲಿ ಜಾತಿಪ್ರಮಾಣ ಪತ್ರವನ್ನು ಪಡೆಯುತ್ತಿದ್ದಾರೆ ಎಂದು ಬಿಜೆಪಿ ಸದಸ್ಯ ಪಿ. ರಾಜೀವ್‍ ಆರೋಪಿಸಿದ್ದಾರೆ. ವಿಧಾನಸಭೆಯಲ್ಲಿ ನಿಯಮ 69 ರಡಿ ಚರ್ಚೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮೇಲ್ಜಾತಿಯವರು ಬೇಡ ಜಂಗಮ ಜಾತಿಪ್ರಮಾಣ ಪತ್ರವನ್ನು ಪಡೆಯುವ ಮೂಲಕ ನಿಜವಾದ ಬೇಡ ಜಂಗಮರಿಗೆ ಅನ್ಯಾಯ ಮಾಡುತ್ತಿದ್ದಾರೆ. ಯಾವುದೇ ಸಮುದಾಯಕ್ಕೆ ಜಾತಿ ಪ್ರಮಾಣ ಪತ್ರ ನೀಡಲು ಸಂಸತ್ತಿಗೆ ಮಾತ್ರ ಅಧಿಕಾರ ಇದೆ. ಆದರೆ, ರಾಜ್ಯದಲ್ಲಿ ಮೇಲ್ಜಾತಿಯವರಿಗೆ ಬೇಡ ಜಂಗಮ ಪ್ರಮಾಣ ಪತ್ರ ನೀಡಲಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಬಿಜೆಪಿ ಸದಸ್ಯ ಎನ್‍. ಮಹೇಶ್‍ ಮಾತನಾಡಿ, ಹಿರೇಮಠ ಎನ್ನುವರು ಲಿಂಗಾಯತ ಸಮುದಾಯಕ್ಕೆ ಸೇರಿದವರು. ಇನ್ನೊಬ್ಬರು ಆರಾಧ್ಯ ಅವರೂ ಕೂಡ ಆದಿ ಕರ್ನಾಟಕ ಎಂದು ಪ್ರಮಾಣ ಪತ್ರ ಪಡೆಯುತ್ತಿದ್ದಾರೆ. ಇವರೆಲ್ಲ ಲಿಂಗಾಯತ ಸಮುದಾಯದ ಪೂಜಾರಿಗಳು ಅವರು ಬಸವಣ್ಣನ ಕಾಲದ ಬ್ರಾಹ್ಮಣರು, ಲಿಂಗಾಯತರಾದ ಮೇಲೆ ಅವರು ಸಸ್ಯಹಾರಿಗಳಾಗಿದ್ದಾರೆ. ಬೇಡ ಜಂಗಮರು ಮಾಂಸಾಹಾರಿಗಳು, ಅವರ ಭಾಷೆ ತೆಲಗು, ಜಂಗಮರು ಕನ್ನಡ ಭಾಷಿಕರು ಎಂದರು.

ಗೂಳಿಹಟ್ಟಿ ಶೇಖರ್ ಮಾತನಾಡಿ, ಕೇಂದ್ರ ಸರ್ಕಾರ ಬೇಡ ಜಂಗಮರ ಕುರಿತು ಸಮಿತಿ ರಚನೆ ಮಾಡಿ ಅಧ್ಯಯನ ನಡೆಸಿದೆ. ರಾಜ್ಯದಲ್ಲಿ ಕೇವಲ 3,000 ಜನರಿದ್ದಾರೆ. ಅವರು ಮಾಂಸಾಹಾರಿಗಳು, ಅವರ ದೇವರು ತಿರುಪತಿ ಮತ್ತು ಆಂಧ್ರದ ಪೆದ್ದಗೋಸಾಯಿ. ವೀರಶೈವ ಜಂಗಮರ ದೇವರು ಶಿವ, ನಂದಿ, ಬಸವಣ್ಣ ಎಂದು ಹೇಳಿದರು.

ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಮಾತನಾಡಿ, ಕೇಂದ್ರ ಸರ್ಕಾರ 1997 ರಲ್ಲಿ ಪರಿಶಿಷ್ಟ ಜಾತಿಗೆ ಸೇರಿಸಲು ಅವಕಾಶವನ್ನು ನೀಡಿದೆ. ಈಗಾಗಲೇ ಜಂಗಮರು ಬೇಡ ಜಂಗಮ ಪಟ್ಟಿಗೆ ಸೇರಿಸಲು ಅವಕಾಶ ಕಲ್ಪಿಸಲಾಗಿದೆ. ಸರ್ಕಾರ ನಾಗರೀಕ ನಿರ್ದೇಶನಾಲಯಕ್ಕೆ ಈ ಬಗ್ಗೆ ಪರಿಶೀಲನೆ ನಡೆಸಲು ಸೂಚನೆ ನೀಡಿದೆ. ಈಗಾಗಲೇ ಯಾರಾದರೂ ತೆಗೆದುಕೊಂಡಿದ್ದರೆ ಕೋರ್ಟ್‍ನಲ್ಲಿ ಪ್ರಶ್ನಿಸಲು ಅವಕಾಶ ಇದೆ. ಆ ರೀತಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದಿದ್ದರೆ, ಅಂತವರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಇದರಲ್ಲಿ ಸರ್ಕಾರ ರಾಜಿ ಇಲ್ಲ. ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಮೂಲಕ ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದರು.

Leave a Reply

Your email address will not be published. Required fields are marked *