Friendship Day -ಸುಮಧುರ ಈ ಸ್ನೇಹ ಬಂಧ..

ಸ್ನೇಹವು ಒಬ್ಬ ವ್ಯಕ್ತಿಗೆ ನೀಡಬಹುದಾದ ಅತ್ಯಂತ ದುಬಾರಿ ಮತ್ತು ಸುಂದರವಾದ ಉಡುಗೊರೆಯಾಗಿದೆ. ಸಮಯ ಕಳೆದಂತೆ, ಬಹಳಷ್ಟು ಜನ ಸ್ನೇಹಿತರು ಹಿಂದೆ ಸರಿಯುತ್ತಾರೆ, ಆದರೆ ಕೆಲವರು ಮಾತ್ರ ನಿಮ್ಮೊಂದಿಗೆ ಶಾಶ್ವತವಾಗಿ ಉಳಿಯುತ್ತಾರೆ ಅದುವೇ ಸುಮಧುರ ಸ್ನೇಹ ಬಂಧ. ಅಂತಹ ಸ್ನೇಹದ ನೆನಪುಗಳನ್ನು ಸ್ಮರಿಸುವ ಈ ವಿಶೇಷ ದಿನವೇ ಸ್ನೇಹಿತರ ದಿನ. ನಿಮ್ಮೆಲ್ಲರಿಗೂ ಸ್ನೇಹಿತರ ದಿನದ ಹಾರ್ಧಿಕ ಶುಭಾಷಯಗಳು.

ನಿಜವಾದ ಸ್ನೇಹ ಸುಲಭವಾಗಿ ಸಿಗುವುದಿಲ್ಲ, ಅದನ್ನು ನಾವು ಪ್ರೀತಿಯಿಂದ ಸಂಪಾದಿಸಿಕೊಳ್ಳಬೇಕು. ಹಾಗೇ ಸಂಪಾದಿಸಿದ ಸ್ನೇಹವನ್ನು ಪ್ರೀತಿ, ನಂಬಿಕೆ, ಕಾಳಜಿ ಮತ್ತು ವಿಶ್ವಾಸದಿಂದ ಚಿರ ಕಾಲ ಉಳಿಸಿಕೊಂಡು ಹೋಗುವಂತಾಗಬೇಕು. ಆಗ ಮಾತ್ರ ಸ್ನೇಹ ಎನ್ನುವ ಪದಕ್ಕೆ ಮತ್ತು ಸ್ನೇಹ ಎನ್ನುವ ಸಂಬಂಧಕ್ಕೆ ಒಂದು ಅಗಾಧವಾದ ಅರ್ಥ ಸಿಗುತ್ತದೆ.
ಸ್ನೇಹ ದಿನವನ್ನು ಮೊದಲು ಹಾಲ್ಮಾರ್ಕ್ ಕಾರ್ಡ್ಸ್ ಮತ್ತು ಅದರ ಸಂಸ್ಥಾಪಕ ಜಾಯ್ಸ್ ಹಾಲ್ 20 ನೇ ಶತಮಾನದ ಆರಂಭದಲ್ಲಿ ಪ್ರಸ್ತಾಪಿಸಿದರು, ಸ್ನೇಹವನ್ನು ಗೌರವಿಸಲು ಮತ್ತು ಅದಕ್ಕಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಲು ಒಂದು ದಿನವನ್ನು ರಚಿಸುವ ಉದ್ದೇಶದಿಂದ ಈ ಆಚರಣೆಯ ಪ್ರಸ್ತಾಪ ಮಾಡಿದರು. ನಂತರ ಅಂತರರಾಷ್ಟ್ರೀಯ ಸ್ನೇಹಿತರ ದಿನವಾಗಿ ಮುಂದುವರೆಯಿತು. ಪ್ರಪಂಚದಾದ್ಯಂತ ಅನೇಕ ದೇಶಗಳು ಸ್ನೇಹಿತರ ದಿನವನ್ನು ಅಳವಡಿಸಿಕೊಂಡವು. ಇವರ ಈ ಸುಂದರ ಕಲ್ಪನೆಯು ಜಗತ್ತಿನಲ್ಲಿ ಸ್ನೇಹಿತರ ದಿನ ಎಂಬ ಸುಂದರ ದಿನವನ್ನು ಆಚರಿಸಲು ಸಾಕ್ಷಿಯಾಯಿತು.

ಮತ್ತೊಂದು ಇತಿಹಾಸ ಮೂಲವು ಸ್ನೇಹಿತರ ದಿನವನ್ನು ಮೊದಲು 1958 ರಲ್ಲಿ ಪರಾಗ್ವೆಯಲ್ಲಿ ಪ್ರಾರಂಭಿಸಲಾಯಿತು. ಅಂದಿನಿಂದ ಈ ದಿನವು ಜಾಗತಿಕ ಮಟ್ಟದಲ್ಲಿ ಮನ್ನಣೆ ಪಡೆಯಿತು. ನಂತರ 1997 ರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಿಂದ ಅಧಿಕೃತವಾಗಿ ಗುರುತಿಸಲ್ಪಟ್ಟಿತು. 2011 ರಲ್ಲಿ ವಿಶ್ವಸಂಸ್ಥೆಯು ಜುಲೈ 30 ಅನ್ನು ಅಂತರರಾಷ್ಟ್ರೀಯ ಸ್ನೇಹಿತರ ದಿನವೆಂದು ಘೋಷಿಸಿತು. 1935 ರಲ್ಲಿ, ಯುನೈಟೆಡ್ ಸ್ಟೇಟ್ಸ್‌ ಕಾಂಗ್ರೆಸ್ ಆಗಸ್ಟ್ ಮೊದಲ ಭಾನುವಾರವನ್ನು ರಾಷ್ಟ್ರೀಯ ಸ್ನೇಹಿತರ ದಿನವೆಂದು ಘೋಷಿಸಿತು. ಸ್ನೇಹಿತರ ದಿನದ ಸಂಬಂಧದ ಮಹತ್ವವನ್ನು ಮತ್ತಷ್ಟು ಒತ್ತಿಹೇಳಿತು.

ಸ್ನೇಹವು ಎಲ್ಲಾ ಅಡೆತಡೆಗಳು ಮತ್ತು ಗಡಿಗಳನ್ನು ಮೀರಿದ ಸಾರ್ವತ್ರಿಕ ಮೌಲ್ಯವಾಗಿದೆ. ಎಲ್ಲರಿಗೂ ಸಂತೋಷ ಮತ್ತು ಭರವಸೆಯನ್ನು ತರುತ್ತದೆ. ಈ ದಿನದಂದು, ಜನರು ಸಾಮಾನ್ಯವಾಗಿ ಗ್ರೀಟಿಂಗ್‌ ಕಾರ್ಡ್‌ಗಳು, ಉಡುಗೊರೆಗಳು, ಹೂವುಗಳು, ಚಾಕೊಲೇಟ್‌ಗಳು, ರಿಸ್ಟ್ ಬ್ಯಾಂಡ್‌ಗಳು ಅಥವಾ ಸ್ನೇಹದ ಇತರ ಸಂಕೇತಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ತಮ್ಮ ಸ್ನೇಹಿತರ ಮೇಲಿನ ಪ್ರೀತಿ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾರೆ. ಸ್ನೇಹಿತರನ್ನು ಮರು ಸಂಪರ್ಕಿಸಿ ಒಟ್ಟಿಗೆ ಸಮಯ ಕಳೆಯುವ ಮೂಲಕ ಹಳೇ ನೆನಪುಗಳನ್ನು ಹಂಚಿಕೊಳ್ಳುತ್ತಾರೆ. ಮೋಜು-ಮಸ್ತಿ ಮಾಡುತ್ತಾ ಪರಸ್ಪರರ ಸಹವಾಸವನ್ನು ಆನಂದಿಸುತ್ತಾರೆ. ಸ್ನೇಹಿತರ ದಿನವು ನೆನಪಿನಲ್ಲಿ ಉಳಿಯುವಂತೆ ಬಹಳ ಸಂತೋಷದಿಂದ ಆಚರಿಸುತ್ತಾರೆ.

ಸ್ನೇಹವು ನಮ್ಮ ಜೀವನವನ್ನು ಅನೇಕ ರೀತಿಯಲ್ಲಿ ಶ್ರೀಮಂತಗೊಳಿಸುವ ಅಮೂಲ್ಯ ಸಂಬಂಧವಾಗಿದೆ. ನಿಮಗಿಂತ ಚೆನ್ನಾಗಿ ನಿಮ್ಮನ್ನು ಅರ್ಥಮಾಡಿಕೊಳ್ಳುವ, ತೊಂದರೆಯ ಸಮಯದಲ್ಲಿ ನಿಮ್ಮನ್ನು ಬೆಂಬಲಿಸುವ, ನೀವು ಕೆಳಗಿಳಿದಾಗ ನಿಮ್ಮನ್ನು ಹುರಿದುಂಬಿಸುವವರು ಮತ್ತು ಯಾವಾಗಲೂ ನಿಮಗೆ ಒಳ್ಳೆಯದನ್ನು ಬಯಸುವವರು ನಿಮ್ಮ ನಿಜವಾದ ಸ್ನೇಹಿತರು. ಜೀವನದಲ್ಲಿ ಎಲ್ಲರೂ ಅಂತಹ ಅದ್ಭುತ ಸ್ನೇಹಿತರನ್ನು ಹೊಂದಿರುತ್ತಾರೆ.

ಜಗತ್ತಿನಲ್ಲಿ ಕೃಷ್ಣ-ಸುಧಾಮ, ದುರ್ಯೋಧನ-ಕರ್ಣ ಸೇರಿದಂತೆ ಹಲವು ಶ್ರೇಷ್ಠ ಸ್ನೇಹ ಸಂಬಂಧವನ್ನು ನೋಡಿದ್ದೇವೆ. ಇಂತಹ ಅದೆಷ್ಟೋ ಸುಮಧುರ ಸ್ನೇಹ ಬಾಂಧವ್ಯವು ನಮಗೆ ಬದುಕಿನ ಪಾಠವನ್ನೂ ಹೇಳಿಕೊಟ್ಟಿವೆ. ಹಾಗೆಯೇ ನಾವು ಸ್ನೇಹ ಸಂಬಂಧವನ್ನು ನಿಶ್ಕಲ್ಮಶ ಭಾವದಿಂದ ನೋಡಬೇಕು.

ಪ್ರತಿವರ್ಷ ಜಗತ್ತಿನ ವಿವಿಧ ಭಾಗಗಳಲ್ಲಿ ಸ್ನೇಹಿತರ ದಿನವನ್ನು ಬಹಳ ವಿಶೇಷವಾಗಿ ಆಚರಿಸಲಾಗುತ್ತದೆ.
ಜುಲೈ 30 ರಂದು ಕೆಲವು ದೇಶಗಳಲ್ಲಿ ಅಂತರರಾಷ್ಟ್ರೀಯ ಸ್ನೇಹಿತರ ದಿನವನ್ನು ಆಚರಿಸಿದರೆ, ಇನ್ನೂ ಕೆಲವು ದೇಶಗಳಲ್ಲಿ ಆಗಸ್ಟ್‌ ತಿಂಗಳ ಮೊದಲ ಭಾನುವಾರವನ್ನು ಸ್ನೇಹಿತರ ದಿನ ಎಂದು ಆಚರಿಸುತ್ತಾರೆ. ಭಾರತ, ಅಮೆರಿಕ, ಯುಎಇ, ಬಾಂಗ್ಲಾ ಮುಂತಾದ ಕಡೆಗಳಲ್ಲಿ ಆಗಸ್ಟ್‌ ಮೊದಲ ವಾರ ಇಂಟರ್‌ನ್ಯಾಷನಲ್‌ ಫ್ರೆಂಡ್‌ಶಿಪ್‌ ಡೇ ಆಚರಿಸಲಾಗುತ್ತದೆ.
ಸ್ನೇಹ ಸೌಹಾರ್ದವನ್ನು ನೆನಪಿಸುವ ಈ ಸುಂದರ ದಿನದ ಆಚರಣೆಯು ಬಹಳ ಸಂಭ್ರಮದಿಂದ ಕೂಡಿರುತ್ತದೆ. ಅಂತರರಾಷ್ಟ್ರೀಯ ಸ್ನೇಹಿತರ ದಿನವು ಸ್ನೇಹಿತರಿಗೆ ಕೃತಜ್ಞತೆ ಹಾಗೂ ಪ್ರೀತಿಯನ್ನು ವ್ಯಕ್ತಪಡಿಸಲು ಪರಿಪೂರ್ಣ ಅವಕಾಶವನ್ನು ಒದಗಿಸುತ್ತದೆ. ಈ ದಿನದಂದು ಸ್ನೇಹಿತರೊಂದಿಗೆ ಕಾಲ ಕಳೆಯುವುದು, ಟ್ರಿಪ್‌ ಆಯೋಜಿಸುವುದು, ಉಡುಗೊರೆಗಳನ್ನು ನೀಡುವುದು, ಸಂದೇಶ ಕಳುಹಿಸುವುದು, ಹಾಡುಗಳನ್ನು ಡೆಡಿಕೇಟ್‌ ಮಾಡುವುದು, ವಾಟ್ಸ್‌ಆಪ್‌, ಫೇಸ್‌ಬುಕ್‌, ಇನ್‌ಸ್ಟಾಗ್ರಾಂಗಳಲ್ಲಿ ಸ್ಟೇಟಸ್‌ ಹಾಕಿಕೊಳ್ಳುವ ಮೂಲಕ ಪ್ರೀತಿ ಹಾಗೂ ಮೆಚ್ಚುಗೆಯನ್ನು ವ್ಯಕ್ತಪಡಿಸಲಾಗುತ್ತದೆ.

– ಅಮೃತ ಕೆ
ಊರುಗಡೂರು ಶಿವಮೊಗ್ಗ

Leave a Reply

Your email address will not be published. Required fields are marked *