ಮರಣದಿಂ ಮುಂದೇನು? ಪ್ರೇತವೋ? ಭೂತವೋ?|

ಮರಣದ ನಂತರ

ಮರಣದಿಂ ಮುಂದೇನು? ಪ್ರೇತವೋ? ಭೂತವೋ?|ಪರಲೋಕವೋ? ಪುನರ್ಜನ್ಮವೋ? ಅದೇನೋ!||

ತಿರುಗಿ ಬಂದವರಿಲ್ಲ, ವರದಿ ತಂದವರಿಲ್ಲ|

ಧರೆಯ ಬಾಳ್ಗದರಿನೇಂ?-ಮಂಕುತಿಮ್ಮ||

ಮರಣ ಹೊಂದಿದ ನಂತರ ಮುಂದೆ ಏನು? ಪ್ರೇತವಾಗುತ್ತೇವೋ, ಭೂತವಾಗುತ್ತೇವೋ ಬಲ್ಲವರು ಯಾರು? ಇನ್ನೊಂದು ಲೋಕಕ್ಕೆ ಹೋಗಿ ಶಾಶ್ವತವಾದ ಸಾಯುಜ್ಯವನ್ನು ಪಡೆಯುತ್ತೇವೋ ಅಥವಾ ಮತ್ತೆ ಭೂಮಿಯಲ್ಲಿ ಹುಟ್ಟಿ ಬರುತ್ತೇವೋ ಯಾರಿಗೆ ತಿಳಿದಿದೆ. ಸತ್ತವರು ಯಾರೂ ತಿರುಗಿ ಬಂದವರಿಲ್ಲ. ಹೀಗಿದೆ ಎಂದು ವರದಿ ತಂದವರೂ ಇಲ್ಲ. ಈ ಭೂಮಿಯ ಬಾಳಿಗೆ ಅದರಿಂದ ಏನೂ ಆಗಬೇಕಾದದ್ದಿಲ್ಲ.

ಎಲ್ಲಾ ಮತ-ಧರ್ಮಗಳು ದೇವರ ಮೇಲಿನ ನಂಬಿಕೆಯನ್ನು ಅವಲಂಬಿಸಿಯೆ ಹುಟ್ಟಿ ಕೊಂಡಿವೆ, ಅನುಸಿರಿಸಲ್ಪಡುತ್ತಿವೆ. ವಿಪರ್ಯಾಸವೆಂದರೆ ದೇವರನ್ನು ನಂಬುವುದಕ್ಕಿಂತಲೂ ಹೆಚ್ಚಾಗಿ, ಕೆಟ್ಟತನವನ್ನು ಪ್ರಚೋದಿಸುವ ದುಷ್ಟ ಶಕ್ತಿಗಳನ್ನು ನಂಬುತ್ತೇವೆ. ಸ್ವತಂತ್ರ ಆಲೋಚನೆಯನ್ನು ಮರೆತು ಊಹಾಪೋಹಗಳಿಗೆ, ಪೊಳ್ಳು ಆಚರಣೆಗಳಿಗೆ ಬದ್ದರಾಗಿ ಬಾಳುತ್ತೇವೆ. ರೂಢಿಗತವಾಗಿ ಬಂದ ಆಚರಣೆಯನ್ನು, ನಂಬಿಕೆ –ನಡಾವಳಿಯನ್ನು ನಾವೂ ಅನುಸರಿಸುತ್ತೇವೆ. ಯಾವುದನ್ನೂ ಪ್ರಶ್ನಿಸುವ, ಪರಿಶೀಲಿಸುವ ಗೋಜಿಗೇ ಹೋಗದೆ ಅಂಧಾನುಕರಣೆಯನ್ನು ಮಾಡುತ್ತಿದ್ದೇವೆ.

ಸ್ವರ್ಗ-ನರಕದ ಕಲ್ಪನೆ ನಮ್ಮ ನಡುವೆ ಪ್ರಚಲಿತವಾಗಿದೆ. ಪಾಪ ಕಾರ್ಯ ಮಾಡಿದಾಗ ದೇವರು ಶಿಕ್ಷಿಸುತ್ತಾನೆ, ನರಕದೊಳಗೆ ಕುದಿವ ಕೊಪ್ಪರಿಗೆ ಎಣ್ಣೆಗೆ ಹಾಕುತ್ತಾನೆ, ಅಥವಾ ಕರ್ಮದೋಷಗಳನ್ನು ಆಧರಿಸಿ ಮತ್ತೆ ಪುನರ್ಜನ್ಮವನ್ನು ನೀಡುತ್ತಾನೆ. ಒಂದು ವೇಳೆ ದೋಷವಧಿಕವಾದರೆ, ಅಭೀಪ್ಸೆಗಳು ತೀರದೆ ಹೋದರೆ ಪ್ರೇತಾತ್ಮವಾಗಿ ಅಲೆಯುವ ದುಸ್ಥಿತಿ ಒದಗುತ್ತದೆ ಹೀಗೆ ಹತ್ತು ಹಲವು ನಂಬಿಕೆಗಳು ನಮ್ಮ ನಡುವೆ ಗಾಢವಾಗಿ ಬೇರೂರಿದೆ. ನಾವು ನಂಬಿದ್ದೇವೆ.

ಸಾಮಾನ್ಯ ಜನರಿಗೆ ಸ್ವಂತ ವಿವೇಕದಿಂದ ಸತ್ಯ-ಧರ್ಮವನ್ನು ವಿವೇಚಿಸಲು ಸಾಧ್ಯವಿಲ್ಲ. ಅವರ ಅನುಭವ ಮತ್ತು ಜ್ಞಾನ ಮಿತವಾದದ್ದು. ಜೊತೆಗೆ ಕಾಮ, ಕ್ರೋಧ ಲೋಭಾದಿಗಳು ಸಾಮಾನ್ಯ ಜನರ ಸ್ವಭಾವದ ಭಾಗವೇ ಆಗಿದೆ. ಹೀಗಿರುವಾಗ ಧರ್ಮದ ಹಾದಿಯನ್ನು ಅರಸಿ ಮುನ್ನಡೆಯುವುದು ಅವರಿಂದ ಸಾಧ್ಯವೇ ಇಲ್ಲ. ಅದಕ್ಕಾಗಿ ನಮ್ಮ ಹಿರಿಯರು ಶಾಸ್ತ್ರ-ಸಂಪ್ರದಾಯ,ನಂಬಿಕೆಗಳನ್ನು ಜೀವನಶೈಲಿಯೊಳಗೆ ಅಳವಡಿಸಿಕೊಂಡರು. ಪಾಪಭೀತಿ, ಪುಣ್ಯಪ್ರೀತಿಗಳನ್ನು ಜನಸಾಮಾನ್ಯರಲ್ಲಿ ಮೂಡಿಸುವ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಕಾಯ್ದುಕೊಂಡರು. ಜನಜೀವನವನ್ನು ಶಿಸ್ತು ಮತ್ತು ಸಂಯಮಕ್ಕೆ ಒಳಪಡುವಂತೆ ಮಾಡಿದರು. ಆದರೆ ಈಗ ಇಂತಹ ನಂಬಿಕೆಯೇ ಮೂಢನಂಬಿಕೆಯಾಗಿ ಬಲಿತು ಮುಗ್ದರನ್ನು ಆಹುತಿ ತೆಗೆದುಕೊಳ್ಳುತ್ತಿದೆ. ಆಷಾಢಭೂತಿಗಳಿಗೆ ಹಣ ಮಾಡುವ ದಂಧೆಯಾಗಿದೆ.

ನಂಬಿಕೆಗಳು ಸತ್ಯ ಮತ್ತು ಪ್ರಾಮಾಣಿಕತೆಯ ನೆಲೆಗಟ್ಟಿನಲ್ಲಿದ್ದಾಗಲಷ್ಟೇ ಅದು ಉಳಿಯ ಬಲ್ಲುದು. ಒತ್ತಾಯಪೂರ್ವಕವಾಗಿಯೋ, ನಾಟಕೀಯವಾಗಿಯೋ ತೊಡಗಿಸಿಕೊಂಡ ಯಾವ ಆಧ್ಯಾತ್ಮಿಕ ಸಾಧನೆಗೂ ಅರ್ಥವೇ ಇಲ್ಲ. ಅದು ಒಂದು ರೀತಿಯ ಆತ್ಮವಂಚನೆ, ಆಯುಷ್ಯದ ವ್ಯಯ ಅಷ್ಟೇ.

ಒಬ್ಬಾತ ಮೆಟ್ಟು ಹೊಲಿದು ಬದುಕುವ ಸಮಗಾರನಿದ್ದ. ತನ್ನ ಬದುಕಿನಲ್ಲಿ ಆತ ಸಂತೃಪ್ತನಿದ್ದ. ಮನೆ,ಸಂಸಾರ ಏನೂ ಇಲ್ಲದ ಏಕಾಂಗಿ ಆತ. ಆದರೆ ಭಗವಂತನ ಅನನ್ಯ ಭಕ್ತ. ಒಂದು ದಿನ ರಾತ್ರಿ ಮಲಗುವ ಹೊತ್ತಿನಲ್ಲಿ ದೇವರಲ್ಲಿ ಬೇಡಿಕೊಂಡ ಎಷ್ಟು ವರ್ಷ ನಿನ್ನನ್ನು ಆರಾಧಿಸಿದ್ದೆನೆ, ಏನನ್ನೂ ಬೇಡಿದವನಲ್ಲ, ಆದರೆ ನನ್ನ ಒಂದು ಆಸೆಯನ್ನು ನೆರವೇರಿಸು. ನಿನ್ನನ್ನು ಕಾಣುವ, ನಿನ್ನ ಜೊತೆ ಒಡನಾಡುವ ಭಾಗ್ಯವನ್ನು ನೀಡು ಎಂದು ಬೇಡಿಕೊಂಡ. ಹಾಗೆಯೇ ನಿದ್ದೆಹೋದ.ರಾತ್ರಿ ಸರಿಹೊತ್ತಿನಲ್ಲಿ ಅವನೊಂದು ಕನಸು ಕಂಡ.ಅದರಲ್ಲಿ ದೇವರ ಧ್ವನಿ ಕೇಳಿಸಿತು.’ ನಾಳೆ ನಾನು ನಿನ್ನಡೆಗೆ ಬರುತ್ತೇನೆ. ನಿನ್ನ ಜೊತೆ ಒಂದು ಹೊತ್ತು ಊಟ ಮಾಡುತ್ತೇನೆ. ಸಿದ್ದನಿರು’ ಎಂಬ ಮಾತನ್ನು ಕೇಳಿಸಿಕೊಂಡ. ಆನಂದಿತನಾದ. ಆತ ನಿಜವಾದ ಭಕ್ತನಾದ್ದರಿಂದ ಕನಸನ್ನು ನಂಬಿ ವಿಶೇಷ ಅಡುಗೆ ತಯಾರಿಸಿ ಕಾದ. ನಡು ಮಧ್ಯಾಹ್ನದ ವೇಳೆಗೆ ಒಬ್ಬಾಕೆ ಹೆಣ್ಣುಮಗಳು, ಎಳೆಯ ಕೂಸೊಂದನ್ನು ಎತ್ತಿಕೊಂಡು ಅವನ ಪುಟ್ಟ ಅಂಗಡಿ ಇದ್ದ ಆ ದಾರಿಯಾಗಿ ಬಂದಳು. ಬಹಳ ಬಳಲಿದ್ದ ಆಕೆಯನ್ನು ಸಮಾಗಾರ ಮಾತನಾಡಿಸಿದ, ಹಸಿವು ಮತ್ತು ದಾಹದಿಂದ ಸೋತಿದ್ದ ಅವರಿಬ್ಬರಿಗೆ ತಾನು ದೇವರಿಗೆಂದು ಮಾಡಿದ ಅಡುಗೆಯಲ್ಲಿ ಸ್ವಲ್ಪವನ್ನು ನೀಡಿದ. ಆಕೆ ಅದನ್ನು ಉಂಡು, ಆತನಿಗೆ ಕೃತಜ್ಞತೆಯನ್ನು ಹೇಳಿ ಹೊರಟು ಹೋದಳು. ಹೀಗೆಯೇ ಒಬ್ಬ ವಯೋವೃಧ್ದರು ಆ ದಾರಿಯಲ್ಲಿ ಬಂದರು. ಮೈಯೆಲ್ಲಾ ಕಜ್ಜಿಯಾಗಿದ್ದ ಒಂದು ನಾಯಿ ಕೂಡಾ ಆ ದಾರಿಯಲ್ಲಿ ಬಂದಿತು. ಸಮಗಾರ ಆ ಜೀವಗಳನ್ನೂ ಉಪಚರಿಸಿದ, ಆಹಾರವನ್ನು ನೀಡಿದ. ಹೀಗಿರುತ್ತಾ ಸಂಜೆ ಕಳೆಯಿತು, ರಾತ್ರಿ ಜಾರಿತು. ಸಮಗಾರನಿಗೆ ತೀವ್ರ ನಿರಾಶೆ ಮತ್ತು ದುಃಖವಾಯಿತು. ಬಹುಶಃ ದೇವರಿಗೆಂದು ಮಾಡಿದ ಅಡುಗೆಯನ್ನು ಆ ಮೂವರಿಗೆ ನೀಡಿದುದಕ್ಕೆ ದೇವರು ಸಿಟ್ಟಾಗಿ ಬರಲಿಲ್ಲ ಎಂದು ಭಾವಿಸಿ ಕೊರಗಿದ. ತನ್ನದು ತಪ್ಪಾಯಿತೆ ಎಂದು ಪ್ರಶ್ನಿಸಿಕೊಂಡ; ಹಾಗೆಯೇ ನಿದ್ರೆ ಹೋದ . ಆಗ ಮತ್ತೆ ಕನಸು ಮೂಡಿತು, ದೇವರ ದನಿ ಕೇಳಿಸಿತು. ಸಮಗಾರನು ಯಾಕೆ ಬರಲೆ ಇಲ್ಲ ಎಂದು ಪ್ರಶ್ನಿಸಿದ. ಅದಕ್ಕೆ ದೇವರು ನಕ್ಕು, ನಾನು ಬಂದಿದ್ದೆ ನೀನು ಕೊಟ್ಟ ಆಹಾರವನ್ನು ಸೇವಿಸಿದ್ದೆ, ಒಂದಲ್ಲ ಮೂರು ಮೂರು ಸಾರಿ ಬಂದೆ. ಪ್ರೀತಿಯಿಂದ, ಕಾಳಜಿಯಿಂದ ನೀನು ಬಡಿಸಿದುದನ್ನು ತಿಂದೆ.’ ಎಂದು ನುಡಿದ. ಸಮಗಾರನಿಗೆ ಆಗ ತಿಳಿವು ತಿಳಿಯಾಯಿತು.

ದೇವರನ್ನು ಹುಡುಕಿ, ಕಲ್ಪಿಸಿ ಹೊರಡುವುದಲ್ಲ. ನಮ್ಮ ಪರಿಸರದಲ್ಲೇ ಅವಿನಾಶಿಯಾಗಿ ಸ್ಥಿತನಾಗಿರುವ ಭಗವಂತನನ್ನು ಕಾಣಬೇಕು. ಹೋಮ-ಹವನ,ಜಪತಪ ಆಚರಣೆಗಳೆಲ್ಲ ದೇವರನ್ನು ಕಾಣಲು ನಮ್ಮ ಮನಸ್ಸನ್ನು ಸಿದ್ಧಗೊಳಿಸುವ ವೇದಿಕೆಯೇ ಹೊರತು, ಅದುವೇ ದಾರಿಯಲ್ಲ. ಭಗವಂತನೊಲಿಯುವುದು ನಿರ್ವಾಜ್ಯವಾದ,ನಿಷ್ಕಲ್ಮಶ ಪ್ರೀತಿಗೆ, ಅಚಲವಾದ ನಂಬಿಕೆಗೆ. ನಮ್ಮೊಳಗೆ ಕರುಣೆ , ಅಂತಃಕರಣವಿದ್ದಾಗ ಪ್ರಪಂಚ ಸ್ವರ್ಗಸಮಾನವಾಗಿರುತ್ತದೆ. ಅಸೂಯೆ, ಸಿಟ್ಟು, ಹಗೆತನಗಳಿದ್ದಾಗ ಬದುಕು ನರಕವಾಗಿ ಬಿಡುತ್ತದೆ..

ಸತ್ತ ಮೆಲಿನ ಬದುಕಿಗಾಗಿ ಈ ಕ್ಷಣದ ಸಂತಸವನ್ನು ಮರೆಯುವುದು, ಕಡೆಗಣಿಸುವುದು ಸರಿಯಲ್ಲ. ನಮ್ಮ ಜೀವನದಲ್ಲಿ ಸ್ವರ್ಗ ಮತ್ತು ನರಕವನ್ನು ಸೃಷ್ಟಿಸಿಕೊಳ್ಳುವವರು ನಾವೇ. ಎಲ್ಲರ ಬದುಕು ದೇವನ ಆಣತಿಗೆ ಒಳಪಟ್ಟೇ…

ಇದೆ. ನಮ್ಮ ಬದುಕೆಂಬ ನಾಟಕದ ಸೂತ್ರಧಾರ ಆತ. ಆತ ನಡೆಸಿದಂತೆ ನಡೆವ ಪಯಣಿಗರು ನಾವು. ಹಾಗೆಂದು ನಾವು ಸೋಮಾರಿಗಳಾಗಿ ಕುಳಿತು ಬಿಡುವುದಕ್ಕಿಲ್ಲ. ದೇವರು ಸಂಕಲ್ಪಿತ ಸತ್ಕಾರ್ಯಕ್ಕೆ ನಮ್ಮನ್ನು ಆಯ್ದುಕೊಳ್ಳಬೇಕಾದರೆ ನಮ್ಮಲ್ಲಿ ಆತ್ಮಶುದ್ಧಿ ಇರಬೇಕು. ಅದಕ್ಕಾಗಿ ಉತ್ತಮ ಚಿಂತನೆ ಮತ್ತು ಜೀವನಶೈಲಿ (ವೈಶಾಲಿ ಸಹೋದರಿ) ನಮ್ಮದಾಗಿರಬೇಕು. ಆ ಕಡೆಗೆ ನಮ್ಮ ಗಮನ ಇರಬೇಕೇ ಹೊರತು ಕ್ಷಣಿಕತೆಯನ್ನು ಬೆನ್ನಟ್ಟುವುದಲ್ಲ.

ಹಾಗಾಗಿ ನಮ್ಮ ಪರಿಸರದಲ್ಲಿ ಮಿಳಿತವಾಗಿರುವ ದೈವೀ ಶಕ್ತಿಯನ್ನು ಆಂತರ್ಯದ ಕಂಗಳಿಂದ ವೀಕ್ಷಿಸೋಣ. ಸತ್ತ ಮೇಲಿನ ಬಾಳುವೆಯ ಬಗ್ಗೆ ನಿಖರವಾಗಿ ಹೇಳಬಲ್ಲವರು ಯಾರೂ ಇಲ್ಲ. ಇರುವಷ್ಟು ಕಾಲ ಜಗಳ-ಕದನಗಳ ಮರೆತು ಎಲ್ಲರೊಳಗೊಂದಾಗಿ ನಗುನಗುತ ಬಾಳೋಣ….

Sathish Billava

Leave a Reply

Your email address will not be published. Required fields are marked *