ಯಡಿಯೂರಪ್ಪನವರನ್ನು ಕೆಳಗಿಳಿಸಿದ ದಿನವೇ ಬಿಜೆಪಿ ಹಣೆಬರಹ ನಿರ್ಧಾರವಾಗಿತ್ತು..!!

ಯಡಿಯೂರಪ್ಪ ನವರ ಹೆಸರು ಕೇಳಿದಾಕ್ಷಣ ಅಂಡಲ್ಲಿ ಉರಿ ಹೊತ್ತಿಸಿಕೊಂಡು ಊಳಿಡುವ ಜೀವಿಗಳು ಈ ಬರಹ_ಓದಲೇಬೇಡಿ..

ಯಡಿಯೂರಪ್ಪನವರನ್ನು ಕೆಳಗಿಳಿಸಿದ ದಿನವೇ ಬಿಜೆಪಿ ಹಣೆಬರಹ ನಿರ್ಧಾರವಾಗಿತ್ತು..!!

ಕರ್ನಾಟಕ ವಿಧಾನ ಸಭಾ ಚುನಾವಣೆಯ ಫಲಿತಾಂಶ ಬಂದಂದಿನಿಂದ, ರಾಜ್ಯ ಬಿಜೆಪಿ ಥೇಟು ಸೂತಕದ ಮನೆಯಂತಾಗಿದೆ. ಫಲಿತಾಂಶ ಬಂದು ಒಂದು ತಿಂಗಳು ಕಳೆದರೂ, ಸೂತಕದ ಮನೆಯಿಂದ ಬರೀ ಆರ್ತನಾದವೇ. ನಾಯಕರ ಮುಖದಲ್ಲಿ ವಿಷಾದದ ಛಾಯೆ. ಸೋಲಿನಿಂದ ಕಂಗೆಟ್ಟು ಬಸವಳಿದ ಮುಖದಲ್ಲಿ ಅಸಹಾಯಕತೆ, ಹತಾಶೆಯ ಬಿಗಿದ ಸ್ನಾಯುಗಳು. ಎಲ್ಲರ ಮುಖವೂ ಕಪ್ಪಿಟ್ಟು ಕಳಾಹೀನ. ಉತ್ಸಾಹವೇ ಇಲ್ಲ. ಸೋಲಿಗೆ ಸಾವಿರ ವ್ಯಾಖ್ಯಾನ, ಆದರೂ ಇಲ್ಲ ಸಮಾಧಾನ. ಯಾರೂ ಇಂಥ ಪರಾಭವವನ್ನು ನಿರೀಕ್ಷಿಸಿರಲಿಲ್ಲ. ಮೋದಿಯಂಥ ಬ್ರಹ್ಮಾಸ್ತ್ರ ಇದ್ದೂ ಈ ರೀತಿ ಕಪಾಳಮೋಕ್ಷ ಆಗಬಹುದು ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಅಧಿಕಾರ ಬಂದಾಗ ಅಟ್ಟಹಾಸ ಮೆರೆದರೆ, ತಾವು ಏನೂ ಮಾಡಿದರೂ ನಡೆದುಹೋಗುತ್ತದೆ ಎಂಬ ದರ್ಪ ಆವರಿಸಿದರೆ, ಜನರು ವಾಪಸ್ ಕೊಡುವ ತಿರುಗೇಟು ಅದೆಷ್ಟು ಮರ್ಮಾಘಾತವಾಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕಾದರೆ ಚುನಾವಣೆಯ ನೇತೃತ್ವ ಹೊತ್ತ ರಾಜ್ಯ ಬಿಜೆಪಿ ನಾಯಕರನ್ನು ಒಮ್ಮೆ ಕೇಳಿ ನೋಡಬೇಕು.

‘ಮಕಾಡೆ ಮಲಗಿದರೂ ಮೀಸೆ ಮಣ್ಣಾಗಿಲ್ಲ’ ಎನ್ನುವ ಸಂಘ ಪರಿವಾರದ ನಾಯಕರು ಮಾತ್ರ, ‘ಪಕ್ಷ ಈಗ ಶುದ್ಧವಾಗಿದೆ. ಇನ್ನು ಎರಡು ಚುನಾವಣೆಗಳಲ್ಲಿ ಸೋತರೂ ಪರವಾಗಿಲ್ಲ, ಪಕ್ಷವನ್ನು ಮತ್ತೊಮ್ಮೆ ಕಟ್ಟಿ ಅಧಿಕಾರಕ್ಕೆ ತರೋಣ, ಚರೈವೇತಿ.. ಚರೈವೇತಿ.. ಎಂದು ತಮ್ಮನ್ನೇ ಸಮಾಧಾನಪಡಿಸಿಕೊಳ್ಳುತ್ತಾ, ಸೆಲ್ಫಿಗೆ ಪೋಸು ಕೊಡುವಾಗಿನ ಒತ್ತಾಯದ ಹಲ್ಕಿರಿಯುತ್ತಾ, ಕಾರ್ಯಕರ್ತರ ಮುಂದೆ ನಗೆಪಾಟಲಿಗೀಡಾದರೂ, ಹುಳ್ಳಹುಳ್ಳಗೆ ನಗುತ್ತಾ, ವಿಲಕ್ಷಣ ಸಮಾಧಾನಕ್ಕೆ ಹಾತೊರೆಯುತ್ತಾ, ಒಳಗೊಳಗೇ ತಮ್ಮ ಪರಿಸ್ಥಿತಿಯ ಬಗ್ಗೇ ಮರುಕ ಪಡುತ್ತಾ, ಅದನ್ನು ತೋರಗೊಡದ ಕಳ್ಳಹುಲ್ಯನಂತಾಗಿದ್ದಾರೆ. ಇಂಥವರ ಬಾಯಿಂದ ಸೋಲಿಗೆ ಕಾರಣಗಳನ್ನು ಕೇಳುವುದೇ ಕರ್ಣಾನಂದ. ಬಿಜೆಪಿ ವ್ಯವಹಾರ ನೋಡಿಕೊಳ್ಳುವ ಸಂಘದ ನಾಯಕರು ಏನೇನೋ ಸಬೂಬು, ಕಾರಣಗಳನ್ನು ನೀಡುತ್ತಿದ್ದಾರೆ. ಗೋಲ್ ಪೋಸ್ಟ್ ಗಳನ್ನು ತಮಗೆ ಇಷ್ಟವಾದ ಕಡೆಗಳಲ್ಲಿ ಇಡುತ್ತಿದ್ದಾರೆ. ಅವರ ಮಾತುಗಳನ್ನು ಕೇಳಿದರೆ, ಮುಗೀತ್, ‘ಸಂಘ ವೀಕಿರ’ವೇ.

‘ಕಾಂಗ್ರೆಸ್ ಬಿಟ್ಟಿಭಾಗ್ಯಗಳಿಂದ, ಐದು ಗ್ಯಾರಂಟಿಗಳಿಂದ ಚುನಾವಣೆ ಗೆದ್ದಿತು, ಪಕ್ಷ ಸಂಘಟನೆಯಿಂದಲ್ಲ’ ಎಂದು ಈ ನಾಯಕರು ತಮ್ಮ ಸೋಲಿಗೆ ಕಾರಣ ಹೇಳುವುದನ್ನು ಕೇಳಿದರೆ, ಬ್ಯಾಂಡೇಡ್ ಕಟ್ಟದಿರುವುದೇ ಕ್ಯಾನ್ಸರ್ ರೋಗ ಉಲ್ಭಣವಾಗಲು ಕಾರಣ ಎಂದು ಹೇಳಿದಂತೆ ಕೇಳಿಸುತ್ತದೆ. ಯಾಕೆಂದರೆ, ಬಿಟ್ಟಿಭಾಗ್ಯಗಳನ್ನು ಘೋಷಿಸಿದ್ದು ಕಾಂಗ್ರೆಸ್ ಮಾತ್ರ ಅಲ್ಲ. ಬಿಜೆಪಿ ಸಹ ಇಂಥ ಭಾಗ್ಯಗಳನ್ನು ಘೋಷಿಸಿತ್ತು. ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ, ಅರ್ಧ ಲೀಟರ್ ಹಾಲು ಕೊಡ್ತೇವೆ, ಸಿರಿಧಾನ್ಯ ಕೊಡ್ತೇವೆ ಎಂದು ಹೇಳಿರಲಿಲ್ಲವೇ? ಅಂದರೆ ತನ್ನ ಸೋಲಿಗೆ ತಾನು ಕಾರಣವಲ್ಲ, ಬೇರೆಯವರು ಕಾರಣ ಎಂದು ಹೇಳಿ ಜಾರಿಕೊಳ್ಳುವ ಪ್ರಯತ್ನವಿದು.

ಬಿಜೆಪಿ ಸೋಲಿಗೆ ಕಾರಣವೇನು ಎಂದು ವಿಶ್ಲೇಸುವವರು ಚುನಾವಣೆಯ ಸುತ್ತಮುತ್ತಲ ವಿದ್ಯಮಾನ, ಬೆಳವಣಿಗೆಗಳನ್ನು ಉದಾಹರಿಸುತ್ತಿರುವುದು ಹಾಸ್ಯಾಸ್ಪದ. ಯಾವತ್ತು ಬಿಜೆಪಿ ಹೈಕಮಾಂಡ್, ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿತೋ, ಅಂದೇ ಬಿಜೆಪಿ ಹಣೆಬರಹವೇನು ಎಂಬುದು ನಿರ್ಧಾರವಾಗಿ ಹೋಗಿತ್ತು. ಬಿಜೆಪಿ ಅಂದೇ ಅಂಬೋ ಎಂದು ಮಲಗಿ ಹೋಗಿತ್ತು. ಮುಂದಿನ ಎರಡೂ ಚಿಲ್ಲರೆ ವರ್ಷಗಳ ಬೆಳವಣಿಗೆ, ಶವಪೆಟ್ಟಿಗೆಗೆ ಹೊಡೆದ ಅಂತಿಮ ಮೊಳೆ ಅಷ್ಟೇ. ರಾಜಕಾರಣದ ಓನಾಮ ಬಲ್ಲ ಎಂಥವರಲ್ಲೂ ಮೂಡುವ ಪ್ರಶ್ನೆ ಅಂದ್ರೆ, ಯಡಿಯೂರಪ್ಪನವರನ್ನು ಕೆಳಗಿಳಿಸಿದ್ದೇಕೆ, ಅವರನ್ನು ಕೆಳಗಿಳಿಸಿ ಏನನ್ನು ಸಾಧಿಸಬೇಕು ಎಂದಿದ್ದಿರಿ ಹಾಗೂ ಅದನ್ನು ನಂತರ ಸಾಧಿಸಿದಿರಾ?

ಮೊದಲ ಎರಡು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳದೇ, ಅವರನ್ನು ಪದಚ್ಯುತಗೊಳಿಸಿದ್ದು, ಮರ ಇಳಿಯಲು ಗೊತ್ತಿಲ್ಲದವನು ಮರ ಏರಿದಂತಾಗಿತ್ತು. ಬಿಜೆಪಿಯ ಬಿಗ್ ಬಾಸ್ ಮಾಡಿದ ಮೊದಲ ತಪ್ಪು ಇದು. ಮುಂದಿನವುಗಳೆಲ್ಲಾ ತಪ್ಪಿಗೆ ತಪ್ಪು ಮತ್ತು ಮತ್ತಷ್ಟು ತಪ್ಪುಗಳನ್ನು ಸೇರಿಸುವ ಕೊಂಡಿಗಳಷ್ಟೇ. ಯಡಿಯೂರಪ್ಪನವರನ್ನು ಯಾವ ಕಾರಣಕ್ಕೆ ಇಳಿಸುತ್ತಿದ್ದೇವೆ, ಅವರು ಮಾಡಿದ ಪ್ರಮಾದಗಳೇನು ಎಂದು ಯಾರೂ ಹೇಳಲಿಲ್ಲ. ಅಷ್ಟಕ್ಕೂ ಅವರನ್ನು ಇಳಿಸುವ ಅಗತ್ಯವಾದರೂ ಏನಿತ್ತು? ಯಾರೋ ಒಂದಿಬ್ಬರಿಗೆ ಯಡಿಯೂರಪ್ಪ ಸರಿಯಿಲ್ಲ ಎಂಬ ಕಾರಣಕ್ಕೆ ಅವರನ್ನು ನೋಯಿಸಿ, ಮನಹಿಂಸಿಸಿ ಮನೆಗೆ ಕಳಿಸಿದರೆ ಏನಾಗುತ್ತದೆ ಎಂಬುದಕ್ಕೆ ಚುನಾವಣೆ ಫಲಿತಾಂಶ ಉತ್ತರವಾಗಿದೆ. ಯಡಿಯೂರಪ್ಪ ಇಳಿದ ದಿನವೇ ಬಿಜೆಪಿಯೂ ಇಳಿದು ಹೋಯಿತು.

ಯಡಿಯೂರಪ್ಪನವರನ್ನು ಅಧಿಕಾರದಿಂದ ಕೆಳಗಿಳಿಸಲು ಏನಾದರೂ ಕಾರಣ ಇರಲೇಬೇಕಲ್ಲ? ಹೀಗೆ ಕೆಳಗಿಳಿಸಿದವರ ಪ್ರಕಾರ, ಯಡಿಯೂರಪ್ಪನವರ ಕಾಲದಲ್ಲಿ ಭ್ರಷ್ಟಾಚಾರ ಮಿತಿ ಮೀರಿತ್ತು, ಆಡಳಿತದಲ್ಲಿ ಬಿಗಿ ಇರಲಿಲ್ಲ, ಈ ನಾಯಕತ್ವದಲ್ಲಿ ಮುಂದುವರಿದರೆ ಬಿಜೆಪಿಗೆ ಭವಿಷ್ಯವಿಲ್ಲ ಎಂಬುದು. ಸರಿ, ಸ್ವಚ್ಛ ಆಡಳಿತದ ಸರಕಾರ ನೀಡಲೇಬೇಕು ಎಂದಿದ್ದರೆ, ಸರಕಾರ ರಚನೆಗೆ ಮುಂದಾಗಬೇಡಿ, ಆಪರೇಷನ್ ಕಮಲ ಮಾಡಬೇಡಿ, ಬಹುಮತವನ್ನು manufacture ಮಾಡಲು ಬಹಳ ಖರ್ಚಾಗುತ್ತದೆ, ಅದು ಭ್ರಷ್ಟಾಚಾರಕ್ಕೆ ಎಡೆಮಾಡಿಕೊಡುತ್ತದೆ, ಆ ರೀತಿ ಮಾಡುವ ಬದಲು ಪ್ರತಿಪಕ್ಷದಲ್ಲೇ ಇರೋಣ ಎಂದು ಯಡಿಯೂರಪ್ಪನವರಿಗೆ ಆರಂಭದಲ್ಲಿಯೇ ಸ್ಪಷ್ಟವಾಗಿ ಹೇಳಬಹುದಿತ್ತಲ್ಲ? ಯಾಕೆ ಹೇಳಲಿಲ್ಲ? ಬಹುಮತ ತಯಾರಿಸಿ, ಸರಕಾರ ರಚನೆಗೆ ಮುಂದಾದಾಗ ಸುಮ್ಮನಿದ್ದು, ನಂತರ ನಿಮ್ಮ ಆಡಳಿತದಲ್ಲಿ ಭ್ರಷ್ಟಾಚಾರ ಮಿತಿ ಮೀರಿತು ಅಂದ್ರೆ ಹೇಗೆ? ಇದು ಒಂಥರಾ, ‘ಹಾದರ ಮಾಡು ಪರವಾಗಿಲ್ಲ, ಆದರೆ ಶೀಲ ಕೆಡಿಸಿಕೊಳ್ಳಬೇಡ’ ಎಂದು ಹೇಳಿದಂತೆ ಧ್ವನಿಸುತ್ತದೆ.

ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ರಾಜೀನಾಮೆ ಕೊಡಿಸಿ, ಅವರನ್ನು ಮುಂಬೈಗೆ ಕಳಿಸಿ, ಅವರನ್ನೆಲ್ಲ ಮಂತ್ರಿಗಳನ್ನಾಗಿ ಮಾಡಿ, ನಂತರ ಅವರನ್ನೆಲ್ಲ ಮರುಚುನಾವಣೆಗಳಲ್ಲಿ ಗೆಲ್ಲಿಸುವುದು ಸಣ್ಣ ಕೆಲಸವಾ? ಇದಕ್ಕೆಲ್ಲಾ ನೂರಾರು ಕೋಟಿ ರುಪಾಯಿ ಖರ್ಚಾಗುವುದಿಲ್ಲವಾ? ಆ ಹಣವನ್ನು ಭ್ರಷ್ಟ ಮಾರ್ಗದಿಂದಲೇ ಹೊಂದಿಸಬೇಕಲ್ಲ? ಆಗ ಸಂಘ ಪರಿವಾರದ ‘ನೀತಿನಾಯಕರು’ ಸುಮ್ಮನಿದ್ದುದು ಏಕೆ? ಆಗಲೇ ಯಡಿಯೂರಪ್ಪನವರಿಗೆ ಗದರಿ, ಕಿವಿ ಹಿಂಡಬಹುದಿತ್ತಲ್ಲ? ಯಡಿಯೂರಪ್ಪನವರಿಂದ ಕೈಯಿಂದ ಪಾಪ ಕಾರ್ಯ ಮಾಡಿಸಬೇಕು, ಹಾಗೆಂದು ಅದರ ಫಲಾನುಭವಗಳನ್ನು ತಾವೂ ಅನುಭವಿಸಬೇಕು, ಆದರೆ ಪರಮಪವಿತ್ರರಾಗಿರಬೇಕು ಎಂದು ಯೋಚಿಸಿದರೆ ಹೇಗೆ? ಭ್ರಷ್ಟಾಚಾರದಲ್ಲಿ ಹುಟ್ಟಿದ ಸರಕಾರ ಭ್ರಷ್ಟಾಚಾರದಲ್ಲಿ ಬೆಳೆಯುವುದಿಲ್ಲ ಎಂಬ ಸಂಗತಿ ಈ ‘ನೀತಿನಾಯಕ’ರಿಗೆ ಗೊತ್ತಿಲ್ಲವಾ? ಹೀಗಿರುವಾಗ ಯಡಿಯೂರಪ್ಪನವರನ್ನು ದೂರುವುದರಲ್ಲಿ ಅರ್ಥವೇ ಇಲ್ಲ. ‘ಹೊಡೆಯುವುದಕ್ಕೆ ಬೇರೆಯವರ ಕೈ, ಹೊಗಳಿಕೆಗೆ ನನ್ನ ಕೈ’ ಅಂದ್ರೆ ಹೇಗೆ?

ಯಡಿಯೂರಪ್ಪನವರು ಸಿಎಂ ಆದ ದಿನದಿಂದ ಹೆಜ್ಜೆಗೆ ಹೆಜ್ಜೆಗೆ ಕಟ್ಟಿ ಹಾಕುವ ಪ್ರಯತ್ನಗಳಾದವು. ಅವರಿಗೆ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳಲು ಬಿಡಲೇ ಇಲ್ಲ. ದಿಲ್ಲಿಗೆ ಹೋದರೆ, ಅವರಿಗೆ ಪಕ್ಷದ ಅಧ್ಯಕ್ಷರ ಅಪಾಯಿಂಟಮೆಂಟ್ ಸಿಗುತ್ತದೆಂಬ ಗ್ಯಾರಂಟಿ ಇರಲಿಲ್ಲ. ಪ್ರಧಾನಿ ದರ್ಶನ ಕರುಣಿಸುತ್ತಾರೆ ಎಂಬ ಖಾತ್ರಿ ಇರಲಿಲ್ಲ. ಪಾಪ, ಒಂದೆರಡು ಸಲ ಬರಿಗೈಲಿ ಬಂದರು. ಅವಮಾನವಾಗುವುದೆಂದು ದಿಲ್ಲಿ ಕಡೆಗೆ ಮುಖ ಹಾಕುವುದನ್ನೇ ಬಿಟ್ಟರು. ಅನಂತಕುಮಾರ ಇದ್ದಾಗ ಅವರಿಗೆ ತೊಡರುಗಾಲಾಗಲು ಪಕ್ಷದೊಳಗೇ ‘ದೀನದಯಾಳ ವೇದಿಕೆ’, ಯಡಿಯೂರಪ್ಪನವರಿಗೆ ಬ್ರೇಕ್ ಹಾಕಲು ‘ರಾಯಣ್ಣ ಬ್ರಿಗೇಡ್’ ಗಳನ್ನು ಹುಟ್ಟು ಹಾಕುವಂತೆ ಪ್ರಚೋದಿಸಿದ್ದ ಶಕ್ತಿಗಳೇ, ಯಡಿಯೂರಪ್ಪನವರನ್ನು ಕಟ್ಟಿ ಹಾಕಲು ಮುಂದಾದವು.

ಕಾಲಕಾಲಕ್ಕೆ ನಾಯಕತ್ವ ಬದಲಾವಣೆ ಗುಸುಗುಸು ಜೀವಂತವಾಗಿಟ್ಟು, ಸರಕಾರವನ್ನು ಅಸ್ಥಿರಗೊಳಿಸುವ, ಅನಿಶ್ಚಿತತೆಯಲ್ಲಿ ದಿನದೂಡುವ, ಮನೆಮಂದಿಯೇ ಕೊಳ್ಳಿಯಿಡುವ ಕೆಟ್ಟ ಸಂಪ್ರದಾಯವನ್ನು ಜಾರಿಯಲ್ಲಿಟ್ಟರು. ಇಷ್ಟೂ ಸಾಲದೆಂಬಂತೆ, ಬಸವನಗೌಡ ಪಾಟೀಲ್ ಯತ್ನಾಳ್ ಅವರನ್ನು ಯಡಿಯೂರಪ್ಪನವರ ವಿರುದ್ಧ ‘ಕೂಗುಮಾರಿ’ಯಂತೆ ಬಳಸಿಕೊಳ್ಳಲಾಯಿತು. ತಮ್ಮ ಪಕ್ಷದ ಮುಖ್ಯಮಂತ್ರಿ ಮತ್ತು ಅವರ ಮಗನ ವಿರುದ್ಧವೇ ಅವರು ಸದನದ ಒಳಗೆ ಮತ್ತು ಹೊರಗೆ ಭ್ರಷ್ಟಾಚಾರದ ಆರೋಪ ಮಾಡಿದರು. ವೈಯಕ್ತಿಕ ತೇಜೋವಧೆಗಿಳಿದರು. ಅವರನ್ನು ಸುಮ್ಮನಿರಿಸುವ ಯಾವ ಪ್ರಯತ್ನವನ್ನೂ ಈ ‘ನೀತಿನಾಯಕ’ರು ಮಾಡಲಿಲ್ಲ. ಅವರೇ ಕೀಲಿ ಕೊಟ್ಟು, ಪುಂಗಿ ಊದುತ್ತಿರುವಾಗ, ಸುಮ್ಮನಾಗೆಂದು ಹೇಳಿದರೆ ಕೂಗುಮಾರಿ ಸುಮ್ಮನೆ ಕೂರುವುದಾ?! ಸಾರ್ವಜನಿಕವಾಗಿ ಸ್ವಪಕ್ಷೀಯರೇ ಯಡಿಯೂರಪ್ಪನವರ ಮಾನ ಹರಾಜು ಹಾಕಿದರೂ, ಪಕ್ಷದ ಉಸ್ತುವಾರಿಯಾದ ಹಿಡಬುರಕಿ ಹೆತ್ಲಾಂಡಿ ಅರುಣ್ ಸಿಂಗ್, ಯತ್ನಾಳ್ ಗೆ ಶೋಕಾಸ್ ನೀಡಲಿಲ್ಲ. ಹೋಗಲಿ, ಅವರನ್ನು ಕರೆದು ಬುದ್ಧಿಮಾತು ಹೇಳಲಿಲ್ಲ. ಇನ್ನು ಪಕ್ಷದ ಶಿಸ್ತು ಸಮಿತಿಯಂತೂ ಕಣ್ ಕಟ್, ಬಾಯ್ ಮುಚ್ !

ಈ ಎಲ್ಲ ಹಸಿಹಸಿ ಅವಮಾನಗಳನ್ನು ನುಂಗಿಕೊಳ್ಳುವ ಅಸಹಾಯಕ ಸ್ಥಿತಿಯನ್ನು ಮುಖ್ಯಮಂತ್ರಿ ಯಡಿಯೂರಪ್ಪಗೆ ತಂದೊಡ್ಡಿದರು. ಯತ್ನಾಳ್ ಎಂಬ ಬೊಂಬೆಗೆ ಕೀಲಿ ಕೊಟ್ಟು ಸಂತೋಷ ಅನುಭವಿಸುತ್ತಿರುವವರು ಯಾರು ಎಂಬುದು ಎಲ್ಲರಿಗೂ ಗೊತ್ತಿತ್ತು. ಶಿಸ್ತಿನ ಪಕ್ಷದಲ್ಲಿ ಇಂಥ ಅಶಿಸ್ತನ್ನು ಸಹಿಸಿಕೊಂಡಿದ್ದೇಕೆ? ಬಿಜೆಪಿಯಲ್ಲಿ ಸೂಜಿಬಿದ್ದರೂ ಕಣ್ಣಲ್ಲಿ ಕಣ್ಣಿಟ್ಟು ನೋಡುವ ‘ಸಂಘ’ದವರು ಯಾಕೆ ಸುಮ್ಮನಿದ್ದರು? ಮುಖ್ಯಮಂತ್ರಿ ವಿರುದ್ಧ ಪ್ರತಿಪಕ್ಷಗಳಿಗಿಂತ ಸ್ವಪಕ್ಷೀಯರೇ ಹೆಚ್ಚಿನ ಗುರುತರ ಆರೋಪ ಮಾಡಿದರು! ಒಂದು ರೀತಿಯಲ್ಲಿ ಯಡಿಯೂರಪ್ಪನವರಿಗೆ, ತಮ್ಮ ಪಕ್ಷದ ಕೆಲವು ನಾಯಕರೇ ಪ್ರತಿಪಕ್ಷ ನಾಯಕರಂತೆ ವರ್ತಿಸಿದರು. ಸಿದ್ದರಾಮಯ್ಯನವರು ಆರೋಪ ಮಾಡಿದರೆ ಯಡಿಯೂರಪ್ಪ ಧೈರ್ಯದಿಂದ ಎದುರಿಸುತ್ತಿದ್ದರು. ಆದರೆ ತಮ್ಮ ಪಕ್ಷದವರೇ ಬೀದಿ ಜಗಳಕ್ಕೆ ನಿಂತರೆ ಏನು ಮಾಡುವುದು?

ಹೀಗೆ ಯಡಿಯೂರಪ್ಪನವರ ಹೆಡೆಮುರಿಗೆ ಕಟ್ಟುವ ಪ್ರಯತ್ನ ನಿರಂತರವಾಗಿ, ವ್ಯವಸ್ಥಿತವಾಗಿ ನಡೆಯಿತು. ಬಿಗ್ ಬಾಸ್ ಮನೆಯಿಂದ ಹೊಸ ಹೊಸ ಟಾಸ್ಕ್ ಗಳು ಬರುತ್ತಿದ್ದವು. ಆಗಾಗ ಸಿ.ಟಿ.ರವಿ., ಈಶ್ವರಪ್ಪ ಬಿಗ್ ಬಾಸ್ ಮನೆಯ ಅಶರೀರವಾಣಿಗೆ ಅಂಟೆನಾಗಳಾದರು! ಯಡಿಯೂರಪ್ಪನವರನ್ನು ಕೆಳಗಿಳಿಸುವುದು ಒಂದಂಶ ಹೋರಾಟವಾಯಿತು. ಅವರ ಮತ್ತು ಅವರ ಪುತ್ರನ ಮೇಲೆ ಭ್ರಷ್ಟಾಚಾರ, ದುರಾಡಳಿತದ ಆರೋಪ ಹೊರಿಸಲಾಯಿತು. ಯಡಿಯೂರಪ್ಪ ಪದಚ್ಯುತಗೊಂಡರೆ ಬಿಜೆಪಿ ಪಾವನ ಪವಿತ್ರ ಗಂಗೆಯಾಗುತ್ತದೆ ಎಂದೇ ಬಿಂಬಿಸಿದರು. ಯಡಿಯೂರಪ್ಪನವರು ಬಿಜೆಪಿಗೆ ಹತ್ತಿದ ಗೆದ್ದಲು ಎಂಬುದನ್ನು ಸಾಬೀತು ಮಾಡಬೇಕಿತ್ತು. ಅದಕ್ಕೆ ಏನೇನೆಲ್ಲ ಮಾಡಬೇಕೋ ಅವನ್ನೆಲ್ಲಾ ಮಾಡಿದರು.

ಕರ್ನಾಟಕದಲ್ಲಿ ಸೈಕಲ್ ತುಳಿದು, ಕೆಂಪು ಬಸ್ ಏರಿ, ರಾಜ್ಯದುದ್ದಕ್ಕೂ ಹೋರಾಟ ಮಾಡಿ, ಅದೇ ತಮ್ಮ ರಾಜಕೀಯ ಅಸ್ತ್ರವನ್ನಾಗಿಸಿಕೊಂಡಿದ್ದ, ಆ ಮೂಲಕವಾಗಿ ಪಕ್ಷವನ್ನು ತಳಮಟ್ಟದಿಂದ ಕಟ್ಟಿದ್ದ, ಪಕ್ಷವನ್ನು ವಿಧಾನಸೌಧದಲ್ಲಿ ಪ್ರತಿಷ್ಠಾಪಿಸಲು ಕಾರಣೀಕರ್ತರಾಗಿದ್ದ ಯಡಿಯೂರಪ್ಪನವರಂಥ ಜ್ಯೇಷ್ಠ ನಾಯಕನನ್ನು ನಿರ್ದಯವಾಗಿ ಪಕ್ಷದ ಕೆಲವು ನಾಯಕರು ನಡೆಸಿಕೊಂಡರು. ಅವರಿಗೂ ತಾನು ಸೋಲಿನ ಕಣದಲ್ಲಿ ಸೆಣಸುತ್ತಿದ್ದೇನೆ ಎಂದು ಅನಿಸಿರಬೇಕು. ತೀವ್ರ ಮನನೊಂದು, ಭಾರವಾದ ಹೃದಯದಿಂದ, ಕಣ್ಣೀರು ಹಾಕುತ್ತ ‘ಉಸ್ಸಪ್ಪಾ’ ಎಂದು ರಾಜೀನಾಮೆ ಪತ್ರ ಮಡಗಿಬಿಟ್ಟರು! ಎಂಥ ದುರಂತ ನೋಡಿ, ಅವರ ರಾಜಿನಾಮೆಗೆ ಮುಹೂರ್ತವಿಟ್ಟಿದ್ದು, ಅವರ ಸರಕಾರ ಎರಡನೇ ವರ್ಷ ಪೂರೈಸಿದ ದಿನದಂದೇ. ಸರಕಾರ ಎರಡನೇ ವಾರ್ಷಿಕೋತ್ಸವ ಆಚರಿಸಿ ಸಂಭ್ರಮಿಸಬೇಕಾದ ದಿನ, ಪಕ್ಷ ಕಟ್ಟಿದ ನಾಯಕ ಕಣ್ಣೀರುಡುತ್ತಾ ಶಸ್ತ್ರ ಕಳೆದುಕೊಂಡ ದುರಂತ ನಾಯಕನಂತೆ ಮನೆಗೆ ನಡೆದು ಹೋದರು. ಇದು ಯಡಿಯೂರಪ್ಪನವರಿಗೆ ತೋರುವ ವಿದಾಯ ಆಗಿರಲಿಲ್ಲ. ಇಂಥ ಅಮಾನುಷ ನಡೆಗೆ ಅವರು ಖಂಡಿತವಾಗಿಯೂ ಅರ್ಹರಾಗಿರಲಿಲ್ಲ.

ಅಂದೇ ರಾಜ್ಯದ ಮಹಾಜನರು ಬಿಜೆಪಿ ಭವಿಷ್ಯದ ಬಗ್ಗೆ ಟಿಪ್ಪಣಿ ಬರೆದು ಕಿಸೆಯಲ್ಲಿ ಇಟ್ಟುಕೊಂಡರು. ಪಕ್ಷದ ಹಣೆಬರಹ ಏನೆಂಬುದು ಗೋಡೆ ಮೇಲೆ ಬರೆದಷ್ಟು ಸ್ಪಷ್ಟವಾಗಿ ಹೋಗಿತ್ತು.

ಸರಿ, ಬಸವರಾಜ ಬೊಮ್ಮಾಯಿ ಬಂದರು. ಯಡಿಯೂರಪ್ಪನವರನ್ನು ಕೆಳಗಿಳಿಸಿದ ಬಿಗ್ ಬಾಸ್, ಸರಕಾರವನ್ನು ನಿಯಂತ್ರಿಸಲು ಮುಂದಾದರು. ಅಲ್ಲೂ ಬೇಕಾದವರನ್ನೇ ಮಂತ್ರಿ ಮಾಡುವ, ಆಗದವರನ್ನು ದೂರವಿಡುವ, ಹಗೆತನವನ್ನು ಪೊರೆಯುವ, ಮನಸೋ ಇಚ್ಛೆ ಕಾರಭಾರ ಮುಂದುವರಿಯಿತು. ಅರಗ ಜ್ಞಾನೇಂದ್ರ ಅವರಂಥ ‘ಪ್ಯಾದೆ ಮೆಂಟಾಲಿಟಿ’ಯವರೆಲ್ಲ ಗೃಹಸಚಿವರಾದರು. ‘ಸಂಘದ ಕೂಸು’ ಸುನೀಲ್ ‘ಇಂಧನ’ ಖಾತೆ ಹೊಡಕೊಂಡರು. ಅಪಾತ್ರರೆಲ್ಲ ಏನೇನೋ ಆದರು. ಬೊಮ್ಮಾಯಿ ಆಡಳಿತ ಶುರುವಾಗುವ ಹೊತ್ತಿಗೆ ಬಹುಪಾಲು ಮೂಲ ಬಿಜೆಪಿಗಳೆಲ್ಲ ಮನೆ ಸೇರಿ, ‘ಬಾಂಬೆ ಬಾಯ್ಸ್’ ಮುಂಚೂಣಿ ಸ್ಥಾನವನ್ನು ಅಲಂಕರಿಸಿದ್ದರು. ಸ್ವಚ್ಛತಾ ಕಾರ್ಯಕ್ರಮವನ್ನು ಆರಂಭಿಸಬೇಕಿತ್ತಲ್ಲ? ಅದು ಆರಂಭವಾಗಲೇ ಇಲ್ಲ.

ಬೊಮ್ಮಾಯಿ ಸಂಘದ ‘ನೀತಿನಾಯಕ’ರ ಹಿಡಿತಕ್ಕೆ ಕೊನೆಗೂ ಸಿಗಲೇ ಇಲ್ಲ. ಅವರು ಆರಂಭದಿಂದಲೂ ಇಡೀ ಮೈಗೆ ಎಣ್ಣೆ ಸವರಿಯೇ ಕುಳಿತುಕೊಂಡಿದ್ದರು. ಅವರ ಮಂಡೆ ಹಿಡಿದರೂ ಬೋಳು, ಕುಂಡೆ ಹಿಡಿದರೂ ಬೋಳು. ಜೀವನದಲ್ಲೆಂದೂ ‘ಕೇಶವಕೃಪಾ’ ಮತ್ತು ‘ಜಗನ್ನಾಥ ಭವನ’ದ ಹೊಸ್ತಿಲು ತುಳಿಯದ ಬೊಮ್ಮಾಯಿ, ವಿಧಾನ ಸೌಧಕ್ಕೆ ಛಂಗನೆ ಜಿಗಿದು ಕುಳಿತುಕೊಂಡರು. ಮುಂದೇನಾಯಿತು ಎಂಬುದು ಗೊತ್ತೇ ಇದೆ. ಹುರುಳೆಷ್ಟೋ ಗೊತ್ತಿಲ್ಲ, ಅವರ ಸರಕಾರಕ್ಕೆ ಅಂಟಿದ ‘ಭ್ರಷ್ಟಾಚಾರದ ಅಪರಾವತಾರ’, ‘ನಲವತ್ತು ಪರ್ಸೆಂಟ್ ಕಮಿಷನ್ ಸರಕಾರ’ ಎಂಬ ಕೊಳೆಯನ್ನು ಎಲ್ಲ ನಿರ್ಮಾ ಸಾಬೂನು ಹಚ್ಚಿ ತೊಳೆದರೂ ಶುಭ್ರವಾಗಲು ಕೊನೆಗೂ ಸಾಧ್ಯವಾಗಲೇ ಇಲ್ಲ. ಹಾಗಾದರೆ ಸಂಘದ ‘ನೀತಿನಾಯಕ’ರು ಸಾಧಿಸಿದ್ದೇನು? ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲ್ ಬಗ್ಗೆ ಬರೆದು ಜಾಗ ವ್ಯರ್ಥ ಮಾಡುವುದು ಬೇಡ ಬಿಡಿ.

ಹದಿನೈದು ದಿನ ಕರ್ನಾಟಕದಲ್ಲಿ ಚುನಾವಣಾ ಪ್ರವಾಸ ಮಾಡುವ ಬದಲು, ಮೋದಿ ಮತ್ತು ಶಾ, ಎರಡು ಗಂಟೆ ರಾಜ್ಯ ಬಿಜೆಪಿ ಬಗ್ಗೆ ತಲೆ ಕೆಡಿಸಿಕೊಂಡು, ಇಲ್ಲಿನ ದೋಷಗಳನ್ನು ಸರಿಪಡಿಸಲು ಸಮಯ ನೀಡಿದ್ದರೆ, ಈಗ ಕಂಗಾಲಾಗಿ ಕುಳಿತುಕೊಳ್ಳುವ ಪರಿಸ್ಥಿತಿಯೇ ಬರುತ್ತಿರಲಿಲ್ಲ.

ಬಿಜೆಪಿ ಸೋಲಿಗೆ ಪರಾಮರ್ಶೆ, ಆತ್ಮಾವಲೋಕನ ಆರಂಭವಾಗುವುದಿದ್ದರೆ, ಅದು ಸಂಘದಿಂದಲೇ ಆರಂಭವಾಗುವುದು ಒಳ್ಳೆಯದು. ಸೋಲಿನ ಹೊಣೆಯನ್ನು ಯಾರದ್ದೋ ಕೃಪೆಯಿಂದ ಸಿಎಂ ಆದವರ ಮೇಲೆ ಹೊರಿಸುವುದಕ್ಕಿಂತ, ಹೆಜ್ಜೆಹೆಜ್ಜೆಗೆ ಸರಕಾರವನ್ನು ನಿಯಂತ್ರಿಸಿದ, ಚುನಾವಣೆಯನ್ನು ತಮ್ಮ ಮೂಗಿನ ನೇರಕ್ಕೆ ಕೊಂಡೊಯ್ದ ‘ಕೇಶವಕೃಪಾ’ವೋ, ‘ಬಿಗ್ ಬಾಸ್ ಮನೆ’ ನಾಯಕರೋ ಹೊರುವುದು ಮೇಲು. ಆಗಲಾದರೂ ಬಿಜೆಪಿ ಸ್ವಚ್ಛವಾಗಬಹುದು.

ಬಿಜೆಪಿಗೆ ಸಂಘ ಮಾರ್ಗದರ್ಶನ ಮಾಡಬೇಕು, ರಾಜಕೀಯ ಮಾಡುವುದನ್ನು ರಾಜಕಾರಣಿಗಳಿಗೆ ಬಿಡಬೇಕು. ಈಗ ಆಗುತ್ತಿರುವುದೇ ಬೇರೆ. ಅದೇ ಸಮಸ್ಯೆಗೆ ಕಾರಣ. ಅತಿಯಾದ ‘ಸಂತೋಷ’ವೇ ದುಃಖಕ್ಕೆ ಕಾರಣ!

Leave a Reply

Your email address will not be published. Required fields are marked *