ತಾಯಿ ಆಸೆಯಂತೆ ಬದುಕಿದ ‘ಕೆಜಿಎಫ್ ಸುಲ್ತಾನ’!

ಕೆಜಿಎಫ್‌ ಚಾಪ್ಟರ್ 1ನಲ್ಲಿ ಮುಂಬೈನಲ್ಲಿದ್ದ ‘ರಾಕಿ’ ಗರುಡನನ್ನು ಕೊಲೆ ಮಾಡುವ ಸುಪಾರಿ ಪಡೆದು ನರಾಚಿ ಎಂಬ ಭೂಲೋಕದ ನರಕಕ್ಕೆ ಎಂಟ್ರಿ ಕೊಡುತ್ತಾನೆ. ಸಾವಿಗೆ ಹೆದರದ ಬಲಶಾಲಿ ಹಾಗೂ ಬುದ್ಧಿವಂತನಾಗಿರುವ ರಾಕಿ ಸಮಯ ನೋಡಿಕೊಂಡು ಗರುಡನನ್ನು ಅವನ ಕೆಲಸಗಾರರು, ಬಾಡಿಗಾರ್ಡ್​ಗಳ‌ ಮುಂದೆ ಸಾಯಿಸುತ್ತಾನೆ. ಅಲ್ಲಿಗೆ ಭಾಗ 1ರ ಕಥೆ ಮುಗಿದಿತ್ತು. ಮುಂದೇನು? ಎಂಬ ದೊಡ್ಡ ಕುತೂಹಲ ಹುಟ್ಟಿಸಿದ್ದು ಕೆಜಿಎಫ್ ಚಾಪ್ಟರ್ -2.

ಅದ್ಧೂರಿ ಮೇಕಿಂಗ್: ಚಿನ್ನದ ಸಾಮ್ರಾಜ್ಯ ಕೆಜಿಎಫ್‌ನಲ್ಲಿ ರಾಕಿ ಹೊಸ ನಾಯಕನಾಗಿ ಅಧಿಕಾರ ಏರುತ್ತಾನೆ. ತನಗೆ ಸುಪಾರಿ ಕೊಟ್ಟವರನ್ನೇ ಬಿಸ್ನೆಸ್‌ ಪಾರ್ಟನರ್​ ಆಗಿ ಮಾಡಿಕೊಳ್ಳುತ್ತಾನೆ. ಈ ಚಿತ್ರದಲ್ಲಿ ರಾಕಿಯ ಬದುಕಿನ ಶೈಲಿ ಬದಲಾಗಿದೆ. ಹಾಸಿಗೆ ಇದ್ದಷ್ಟು ಕಾಲು ಚಾಚು ಎನ್ನುವ ಬದಲು, ಹಾಸಿಗೆಯನ್ನೇ ದೊಡ್ಡದು ಮಾಡಿಕೊಂಡಿದ್ದಾನೆ. ಟೆರಿಟರಿ ಹಾಕ್ಕೊಂಡು ಬದುಕುವವ ನಾನಲ್ಲ, ಇಡೀ ಜಗತ್ತೇ ನನ್ನ ಟೆರಿಟರಿ ಎಂದು ಬೀಗುತ್ತಾನೆ. ಇಂಡಿಯಾಗೆ ನಾನೇ ಸಿಇಓ‌ ಅಂತಾ ಸಿನಿಮಾದಲ್ಲಿ ಬರುವ ಪಂಚಿಂಗ್ ಡೈಲಾಗ್​ಗಳು ಸಿನಿಮಾ ಪ್ರಿಯರಿಗೆ ಸಖತ್ ಕಿಕ್ ಕೊಡುತ್ತೆ. ಕೆಜಿಎಫ್​​ನಲ್ಲಿರುವ ಚಿನ್ನದ ವ್ಯಾಮೋಹಕ್ಕೆ ಒಳಗಾಗುವ ರಾಕಿ, ನಾನೇ ಕಿಂಗ್ ಎಂದು ಮೆರೆಯುವ ಹೊತ್ತಿಗೆ ಅಧೀರ ಅಂದ್ರೆ ಸಂಜಯ್ ದತ್ ಹೊಸ ಲುಕ್​ನಲ್ಲಿ ಬಂದು ನಿಲ್ಲುತ್ತಾನೆ. ಇಲ್ಲಿಂದ ಕೆಜಿಎಫ್ ಚಾಪ್ಟರ್ ಸಿನಿಮಾದ ಕಥೆ ತೆರೆದುಕೊಳ್ಳುತ್ತದೆ.

ಮೊದಲೇ ಚಿತ್ರತಂಡ ಹೇಳಿದಂತೆ ಕೆಜಿಎಫ್ 1ಕ್ಕಿಂತ ಕೆಜಿಎಫ್ ಚಾಪ್ಟರ್ 2 ಹತ್ತು ಪಟ್ಟು ಎನ್ನುವಷ್ಟು ಮೇಕಿಂಗ್ ಇದೆ. ನಿರ್ದೇಶಕ ಪ್ರಶಾಂತ್ ನೀಲ್ ಆಸೆಗೆ ತಕ್ಕಂತೆ ಕ್ಯಾಮರಾಮ್ಯಾನ್ ಭುವನ್ ಗೌಡ ನೆರಳು ಬೆಳಕಿನ ಆಟ ತೋರಿಸಿದ್ದಾರೆ. ಚಿನ್ನದ ಗಣಿಯ ಲೋಕ ಸೃಷ್ಟಿಸಿರುವ ಕಲಾ ನಿರ್ದೇಶಕ ಶಿವಕುಮಾರ್ ಚಿತ್ರದ ಹೈಲೈಟ್ಸ್. ಇದರ ಜೊತೆಗೆ ತಾಯಿಕಂಡ ಆಸೆಯಂತೆ ಸುಲ್ತಾನನಾಗಿ ರಾಕಿ ಚಿತ್ರದಲ್ಲಿ ಕಂಡುಬರುತ್ತಾನೆ.

ರೆಟ್ರೋ ಲುಕ್​ನಲ್ಲಿ ಅಬ್ಬರಿಸಿದ ‘ರಾಕಿ ಬಾಯ್’​​: ಕೆಜಿಎಫ್ ಚಾಪ್ಟರ್ 2ನಲ್ಲಿ ನಟ ಯಶ್ ರಾಕಿ ಭಾಯ್ ಆಗಿ ರೆಟ್ರೋ ಲುಕ್​ನಲ್ಲಿ ಅಬ್ಬರಿಸಿದ್ದಾರೆ. ‌ಎಂಟ್ರಿ ಸೀನ್‌ನಿಂದ‌ ಹಿಡಿದು, ಕೊನೆಯ‌ ಕ್ಲೈಮಾಕ್ಸ್​​ವರೆಗೂ ಅವರು ಸುಲ್ತಾನನಾಗಿ ಆರ್ಭಟಿಸಿದ್ದಾರೆ. ಈ ಬಾರಿ ಮಾಸ್ ಡೈಲಾಗ್ ಹೊಡೆಯುವುದು ಮಾತ್ರವಲ್ಲ, ನಾಯಕಿಯೊಂದಿಗೆ ಡ್ಯುಯೆಟ್ ಹಾಡುತ್ತಾ, ಅಮ್ಮನ ನೆನಪಿನಲ್ಲಿ ಕಣ್ಣೀರು ಹಾಕಿ ನೋಡುಗರ ಕಣ್ಣಂಚನ್ನೂ ತೇವಗೊಳಿಸುತ್ತಾರೆ. ಶ್ರೀನಿಧಿ ಶೆಟ್ಟಿ ಪಾತ್ರಕ್ಕೆ ಈ ಬಾರಿ ಜಾಸ್ತಿ ಮಹತ್ವ ಇದೆ. ಪ್ರಧಾನಿ ಆಗಿ ರವೀನಾ ಟಂಡನ್ ಖಡಕ್ ಅಭಿನಯ ತೋರಿದ್ದಾರೆ. ಆನಂದ್ ಇಂಗಳಗಿ ಪಾತ್ರದಲ್ಲಿ ಆನಂತ್ ನಾಗ್​ ಇಲ್ಲಿ ಮಿಸ್ಸಿಂಗ್ ಆಗಿದ್ರೆ, ವಿಜಯೇಂದ್ರ ಇಂಗಳಗಿ ಪಾತ್ರದಲ್ಲಿ ಪ್ರಕಾಶ್ ರೈ ಇಡೀ ಸಿನಿಮಾದ ಕಥೆ ಹೇಳುತ್ತಾರೆ.‌

ತೆಲುಗು ನಟ ರಾವ್ ರಮೇಶ್‌ ಸಿಐಡಿ ಅಧಿಕಾರಿಯಾಗಿ ಗಮನ ಸೆಳೆಯುತ್ತಾರೆ‌. ಚಿತ್ರದಲ್ಲಿ ಬರುವ ಅಚ್ಯುತ್‌ ಕುಮಾರ್, ಅಯ್ಯಪ್ಪ ಪಿ. ಮಾಳವಿಕಾ ಅವಿನಾಶ್, ಈಶ್ವರಿ ರಾವ್, ತಾರಕ್ ಪೊನ್ನಪ್ಪ, ವಸಿಷ್ಠ ಸಿಂಹ, ಶರಣ್ ತಮಗೆ ಸಿಕ್ಕ ಪಾತ್ರಗಳಲ್ಲಿ ಮಿಂಚಿದ್ದಾರೆ. ನಿರ್ದೇಶಕ ಪ್ರಶಾಂತ್ ನೀಲ್‌ ಸಾಕಷ್ಟು ಗಮನಹರಿಸಿ, ಸ್ಕ್ರಿಪ್ಟ್ ಮಾಡಿದ್ದರೂ ಕೂಡ, ಚಿತ್ರದಲ್ಲಿ ಸಣ್ಣಪುಟ್ಟ ಕೊರತೆಗಳು ಕಾಣಿಸುತ್ತವೆ. ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ನಿರ್ಮಾಪಕ ‌ವಿಜಯ್ ಕಿರಂಗದೂರ್ ಬಹು‌ಕೋಟಿಯಲ್ಲಿ ಅದ್ದೂರಿ ಮೇಕಿಂಗ್ ಸಿನಿಮಾ ಮಾಡಿರೋದು ತೆರೆ ಮೇಲೆ ಗೊತ್ತಾಗುತ್ತೆ. ತಾಯಿ ಸೆಂಟಿಮೆಂಟ್​​ನೊಂದಿಗೆ ಮುಗಿಯುವ ಕ್ಲೈಮ್ಯಾಕ್ಸ್ ನೋಡುಗರನ್ನು ಮೂಕ ವಿಸ್ಮಿತರನ್ನಾಗಿ ಮಾಡುತ್ತದೆ.

Leave a Reply

Your email address will not be published. Required fields are marked *