ಕಾಶ್ಮೀರ ಪಂಡಿತರನ್ನು ಇನ್ನು ಯಾರಿಂದಲೂ ಓಡಿಸಲು ಸಾಧ್ಯವಿಲ್ಲ: ಮೋಹನ್ ಭಾಗವತ್

ನವದೆಹಲಿ: ಕಾಶ್ಮೀರಿ ಪಂಡಿತರು ಶೀಘ್ರವೇ ತಮ್ಮ ಊರಿಗೆ ಮರಳಲು ಸಾಧ್ಯವಾಗಲಿದೆ. ಇನ್ನು ಮುಂದೆ ಅವರನ್ನು ಅಲ್ಲಿಂದ ಯಾರು ಕೂಡಾ ಓಡಿಸಲು ಸಾಧ್ಯವಿಲ್ಲ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆ ನೀಡಿದ್ದಾರೆ.

ಕಾಶ್ಮೀರಿ ಪಂಡಿತರು ಶೀಘ್ರವೇ ತಮ್ಮ ಊರಿಗೆ ಮರಳಲು ಸಾಧ್ಯವಾಗಲಿದ್ದು, ಅವರು ಮತ್ತೆ ಎಂದಿಗೂ ಸ್ಥಳಾಂತರಗೊಳ್ಳದಂತೆ ಅನುಕೂಲಕರ ವಾತಾವರಣ ಸೃಷ್ಟಿಸುವ ಕೆಲಸ ನಡೆಯುತ್ತಿದೆ ಎಂದು ಮೋಹನ್ ಭಾಗವತ್ ತಿಳಿಸಿದರು.

ಇತ್ತೀಚೆಗೆ ಬಿಡುಗಡೆಯಾಗಿದ್ದ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಕುರಿತು ಮಾತನಾಡಿದ ಭಾಗವತ್ 1990ರಲ್ಲಿ ಕಾಶ್ಮೀರಿ ಪಂಡಿತರು ತಮ್ಮ ಊರು ತೊರೆದ ಹಿಂದಿನ ವಾಸ್ತವಿಕತೆಯನ್ನು ದೇಶಾದ್ಯಂತ ಪ್ರದರ್ಶಿಸಿ ಸಾರ್ವಜನಿಕ ಜಾಗೃತಿ ಮೂಡಿಸಿದೆ ಎಂದು ಶ್ಲಾಘಿಸಿದರು.

ಕಾಶ್ಮೀರಿ ಪಂಡಿತರನ್ನು ತಮ್ಮೂರಿಗೆ ಕಳುಹಿಸುವ ಪ್ರತಿಜ್ಞೆಯನ್ನು ಈಡೇರಿಸುವ ಸಮಯ ಬಂದಿದೆ. ಈ ಪ್ರತಿಜ್ಞೆಯನ್ನು ಪೂರೈಸಲು ಹೆಚ್ಚು ದಿನ ತೆಗೆದುಕೊಳ್ಳುವುದಿಲ್ಲ. ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿದ್ದು, ಇದು ಶೀಘ್ರವೇ ನಿಜವಾಗಲಿದೆ ಎಂದು ತಿಳಿಸಿದರು.

ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದ್ದರೂ ಕಾಶ್ಮೀರಿ ಪಂಡಿತರು ದೇಶದ ವಿವಿಧ ಭಾಗಗಳಲ್ಲಿ ವಾಸಿಸಬೇಕಾಗಿದೆ. ನಾವು ಎಲ್ಲಿ ಬೇಕಾದರೂ ಬದುಕಬಹುದು ಆದರೆ ನಮ್ಮ ತಾಯ್ನಾಡನ್ನು ಮರೆಯಲು ಸಾಧ್ಯವಿಲ್ಲ. ಆರ್ಟಿಕಲ್ 370 ಯನ್ನು ತೆಗೆದು ಹಾಕಿರುವುದರಿಂದ ಕಾಶ್ಮೀರಿ ಪಂಡಿತರು ತಮ್ಮೂರಿಗೆ ಮರಳಲು ಇದು ದಾರಿಯಾಗಿದೆ ಎಂದರು.

ದಿ ಕಾಶ್ಮೀರ್ ಫೈಲ್ಸ್ ಚಿತ್ರ ಕಾಶ್ಮೀರಿ ಪಂಡಿತರ ನೈಜ ಕಥೆಯನ್ನು ಪ್ರಪಂಚದ ಮುಂದೆ ಎತ್ತಿ ತೋರಿಸಿದೆ. ಈ ಹಿಂದೆ ನೀವು ಸ್ಥಾಳಾಂತರವನ್ನು ಎದುರಿಸಿದ್ದೀರಿ. ಭವಿಷ್ಯದಲ್ಲಿ ಇಂತಹ ದುರ್ಘಟನೆ ಸಂಭವಿಸುವುದಿಲ್ಲ ಎಂದು ಭರವಸೆ ನೀಡಿದರು.

Leave a Reply

Your email address will not be published. Required fields are marked *