ಭಾರತೀಯ ಸಂಸ್ಕೃತಿಯ ಸಂಸ್ಥಾಪಕ ಭಗವಾನ್ ‘ಮನು’…

ನಮ್ಮ ದೇಶದ ವಾಮಪಂಥೀಯರು ‘ಮನು’ ಎಂಬ ಹೆಸರನ್ನ ಯಾವ ರೀತಿ ದುಷ್ಪ್ರಚಾರ ಮಾಡಿದ್ದಾರೆಂದರೆ ‘ಮನು’ ಎಂಬ ಪದ ಕೇಳಿದ ಕೂಡಲೆ ಜನರು ಮೂಗುಮುರಿಯ ತೊಡಗುತ್ತಾರೆ.

ತಕ್ಷಣವೇ ‘ಮನುವಾದಿ’ ಕೋಮುವಾದಿ ಹಾಗೂ ಮೂಢನಂಬಿಕೆಗೆ ಜೋತು ಬಿದ್ದವನೆಂಬ ಬಿರುದು ಪಾಲಿಸಿಬಿಡುತ್ತಾರೆ…ಆದರೆ ಆ ರೀತಿ ಹೇಳುವವರಿಗೆ ‘ಮನು’ವಿನ ಪರಂಪರೆಯ ಅರಿವೇ ಇರುವುದಿಲ್ಲ..

ಮನುಸ್ಮೃತಿ ಹಾಗೂ ಮನು ಎರಡೂ ಒಂದಕ್ಕೊಂದು ಪರ್ಯಾಯ ಪದಗಳು ಅಂತ ಭಾವಿಸಿಕೊಂಡುಬಿಟ್ಟಿದ್ದಾರೆ.ಆದರೆ ಅದು ಸತ್ಯವಲ್ಲ.

ಭಾರತೀಯ ಸಂಸ್ಕೃತಿಯಲ್ಲಿ ಒಟ್ಟು ಹದಿನಾಲ್ಕು ಮನುಗಳು ಎಂಬ ಪ್ರತೀತಿ ಇದೆ.ಇವರಲ್ಲಿ ಮೊದಲನೇ ಮನು ಹಾಗೂ ಆತನ ಪತ್ನಿಯ ಹೆಸರು ಸತ್ಯರೂಪ ಸ್ವಯಂಭೂ ಎನ್ನಲಾಗಿದೆ.ಮೊದಲ ಮನು ನೇರವಾಗಿ ಬ್ರಹ್ಮನಿಂದಲೇ ಸೃಷ್ಟಿಯಾದವ.ಒಂದು ರೀತಿಯಲ್ಲಿ ಈತ ಮಾನವನ ವಿಕಾಸ ಮತ್ತು ಸಂಸ್ಕೃತಿಯ ಆರಂಭದ ಪ್ರತೀಕ.ಅಂದಿನಿಂದ ಮಾನವನು ಸಾಮಾಜಿಕ‌ ನೀತಿ ನಿಯಮಗಳೊಂದಿಗೆ ಜೀವನ ಯಾತ್ರೆಯನ್ನ ಪ್ರಾರಂಭಿಸಿದ.

ಸನಾತನ ಧರ್ಮದಲ್ಲಿ ಒಟ್ಟು ಹದಿನಾಲ್ಕು ‘ಮನು’ಗಳು ಎಂದು ಪ್ರತೀತಿ.

ಮಹಾಭಾರತದಲ್ಲಿ ಎಂಟು ಮನುಗಳ ವರ್ಣನೆ ಇದ್ದರೆ ಪುರಾಣಗಳಲ್ಲಿ ಹದಿನಾಲ್ಕು ಮನುಗಳು ಎಂದು ಹೇಳಲಾಗಿದೆ.

ಇದೇ ರೀತಿ ಜೈನರಲ್ಲಿ ಕೂಡ ಹದಿನಾಲ್ಕು ಶಲಾಕಾ ಪುರುಷರು ಎಂಬ ಮಾನ್ಯತೆ ಇದೆ.ಇವರನ್ನು ಮನುಗಳ ಸಮಾನವೆಂದೇ ಹೇಳಲಾಗುತ್ತದೆ.

 

ಹದಿನಾಲ್ಕು ಮನುಗಳಲ್ಲಿ ಪ್ರಮುಖರು

ಸ್ವಯಂಭೂ ಮನು

ಸ್ವರೋಚಿತ ಮನು

ಉತ್ತಮ ಮನು

ತಾಮಸ ಮನು

ರೈವತ ಮನು

ಚಾಕ್ಷುಷಿ ಮನು

ವೈವಸ್ವತ ಮನು (ವರ್ತಮಾನ ಕಲ್ಪದ ಮನು)

ಇವುಗಳಲ್ಲದೇ ಸಾವರ್ಣೀ ಮನು,ದಕ್ಷ ಸಾವರ್ಣೀ ಮನು ಮತ್ತಿತರರ ವರ್ಣನೆ ಇದೆ.

ಪ್ರಥಮ ‘ಸ್ವಯಂಭೂ ಮನು’ ಹಾಗೂ ಆತನ ಪತ್ನಿ ಸತ್ಯರೂಪ.ಇವರಿಗೆ ಆಕೂತಿ,ದೇವಹೂತಿ ಹಾಗೂ ಪ್ರಸೂತಿ ಎಂಬ ಮೂವರು ಪುತ್ರಿಯರು.ಅಲ್ಲದೇ ಪ್ರಿಯವ್ರತ ಮತ್ತು ಉತ್ಥಾನಪಾದ ಎಂಬ ಪುತ್ರರು ಜನಿಸಿದರು.

ಮೂವರು ಪುತ್ರಿಯರನ್ನು ಬೇರೆ ಬೇರೆ ಪ್ರಜಾಪತಿಗಳಿಗೆ ಕೊಟ್ಟು ವಿವಾಹ ಮಾಡಲಾಯಿತು.ಹಾಗಾಗಿ ಇವರುಗಳು ಆಗಿನ ಕಲ್ಪದಲ್ಲಿ ವಿಶ್ವದ ಮಹಾನ್ ಮಾತೆಯರಾಗಿಯೂ,ಪ್ರಜಾಪಾಲಕರಾಗಿಯೂ ಕರೆಯಲಾಗುವುದು.

ಸ್ವಯಂಭೂ ಮನುವಿನ ಒಬ್ಬ ಮಗನಾದ ಉತ್ಥಾನಪಾದನ ವಿವಾಹ ಸುರೂಚಿ ಮತ್ತು ಸುನೀತಿ ಎಂಬ ಕನ್ಯೆಯರೊಡನೆ ಆಯಿತು.ಈ ಸುನೀತಿ ಮತ್ತು ಉತ್ಥಾನಪಾದ ದಂಪತಿಗಳ ಮಗನೇ ಭಗವಾನ್ ವಿಷ್ಣುವಿನ ಮಹಾನ್ ಭಕ್ತನಾದ ಧ್ರುವ..ಈತನ ಕಥೆಯು ವಿಷ್ಣು ಪುರಾಣದಲ್ಲಿ ಬರುತ್ತದೆ.

ಮನುವಿನ ಇನ್ನೊಬ್ಬ ಪುತ್ರ ಪ್ರಿಯವ್ರತನ ವಿವಾಹ ವಿಶ್ವಕರ್ಮನ ಮಗಳೊಡನೆ ನೆರವೇರಿಸಲಾಯಿತು.ಈ ದಂಪತಿಗಳಿಗೆ ಹತ್ತು ಪುತ್ರರಾದರು.

ಈ ಕಥೆಗಳು ಪುರಾಣಗಳಲ್ಲಿ ಬರುತ್ತವೆ.ಈ ಪೌರಾಣಿಕ ಕತೆಗಳ ಮುಖಾಂತರ ಆಗಿನ ಕಾಲದ ಸಂಸ್ಕೃತಿಯಲ್ಲಿ ಸಮಾಜದ ವ್ಯವಸ್ಥೆ ಹೇಗಿತ್ತು ಎಂಬುದನ್ನ ತಿಳಿಯಬಹುದಾಗಿದೆ.

ಆದರೆ ನಮಗೆ ವರ್ತಮಾನದ ಮನು ಅರ್ಥಾತ್ ವೈವಸ್ವತ ಮನುವಿನ ಕತೆಯು ಅತ್ಯಂತ ಮಹತ್ವಪೂರ್ಣವಾಗಿದೆ.ಪುರಾಣ ಹಾಗೂ ಮಹಾಭಾರತದಲ್ಲಿನ ವರ್ಣನೆಯ ಪ್ರಕಾರ ‘ವೈವಸ್ವತ ಮನು’ ದ್ರವಿಡ ದೇಶ ಅರ್ಥಾತ್ ಸಂಗಮ ಭೂ ಪ್ರದೇಶದ ಆಡಳಿತಗಾರನಾಗಿದ್ದ..

ಜಲಪ್ರಳಯದ ಕಾರಣದಿಂದ ಸಮುದ್ರದ ನೀರಿನ ಮಟ್ಟ ಅಗಾಧವಾಗಿ ಏರಿದ್ದರಿಂದ ತನ್ನ ಪ್ರಜೆಗಳು ಹಾಗೂ ಮಾನವಜಾತಿಯನ್ನು ಉಳಿಸುವುದಕ್ಕಾಗಿ ಒಂದು ಬೃಹತ್ ಹಡಗಿನಲ್ಲಿ ಅವರೆಲ್ಲರ ಕರೆದುಕೊಂಡು ಉತ್ತರ ಭಾರತದೆಡೆ ತೆರಳಿ ಆರ್ಯವರ್ತದಲ್ಲಿ ನೆಲಸಿ ಹೊಸ ಸಂಸ್ಕೃತಿಯ ಸ್ಥಾಪನೆ ಮಾಡಿದನು.

ಈ ವೈವಸ್ವತ ಮನುವೇ ‘ಸೂರ್ಯವಂಶ’ದ ಸಂಸ್ಥಾಪಕನಾದನು…ಈತನೇ ಅಯೋಧ್ಯೆಯನ್ನು ನಿರ್ಮಾಣ ಮಾಡಿ,ವರ್ತಮಾನದ ಸಮಾಜಕ್ಕೆ ನೀತಿ-ನಿಯಮಗಳನ್ನು ರೂಪಿಸಿದನು.

ಇನ್ನು ಮನುಸ್ಮೃತಿ ಬಗ್ಗೆ ಹೇಳಬೇಕೆಂದರೆ ಇದು ಮೌರ್ಯೋತ್ತರ ಕಾಲದಲ್ಲಿ ಬರೆದದ್ದು ಹಲವು ಬಾರಿ ಸಂಸ್ಕರಣಗೊಂಡಿದ್ದಲ್ಲದೇ,ನಂತರದಲ್ಲಿ ಅನೇಕರ ಕೈವಾಡದಿಂದ ಕೆಲವೊಂದು ನಿಯಮಗಳು ಸೇರಿಕೊಂಡವೆಂದು ಹೇಳಲಾಗುತ್ತದೆ.

ಹಾಗಾಗಿ ಈ ಮನುಸ್ಮೃತಿ ಯ ಆಧಾರದ ಮೇಲೆ ಮಹಾನ್ ಮನು ಪರಂಪರೆಯನ್ನ ಅಲ್ಲಗೆಳೆಯುವುದು ನಮ್ಮ ಪುರಾತನ ಸನಾತನಕ್ಕೆ ನಾವು ದ್ರೋಹ ಮಾಡಿದಂತಾಗುತ್ತದೆ.

ನಾನು ಕೂಡ ಈ ಭರತಭೂಮಿಯ ಮಹಾನ್ ಸಭ್ಯ ಸಂಸ್ಕೃತಿಯ ಸಂಸ್ಥಾಪಕನಾದ ಭಗವಾನ್ ಮನುವಿನ ವಂಶಜನೆಂಬ ಹೆಮ್ಮೆ ನನ್ನಲ್ಲಿದೆ…

Leave a Reply

Your email address will not be published. Required fields are marked *