SSLC ಪರೀಕ್ಷೆಗೆ ಕ್ಷಣಗಣನೆ: ಎಕ್ಸಾಂ ಬರೆಯಲಿದ್ದಾರೆ 8,73,846 ವಿದ್ಯಾರ್ಥಿಗಳು, ಹಿಜಾಬ್​ಗೆ ನೋ ಎಂಟ್ರಿ!

ಬೆಂಗಳೂರು: ಎಸ್ಎಸ್ಎಲ್​ಸಿ ಪರೀಕ್ಷೆಗೆ ಕ್ಷಣಗಣನೆ ಪ್ರಾರಂಭವಾಗಿದೆ. ಮಾ. 28 ರಿಂದ ಏ.11ರವರೆಗೆ ರಾಜ್ಯಾದ್ಯಂತ ‘ಎಸ್‌ಎಸ್‌ಎಲ್​​ಸಿ’ ಪರೀಕ್ಷೆ ನಡೆಯಲಿದೆ. ಕಳೆದ ಎರಡು ವರ್ಷ ಕೋವಿಡ್ ಭೀತಿಯಲ್ಲಿಯೇ ಎಸ್ಎಸ್​​ಎಲ್​​ ಸಿ ಪರೀಕ್ಷೆಗಳನ್ನು ನಡೆಸಲಾಗಿತ್ತು. ಆದರೆ, ಸದ್ಯ ಕೋವಿಡ್​​ 3ನೇ ಅಲೆಯ ತೀವ್ರತೆ ಕಡಿಮೆಯಾಗಿದ್ದು, ಈಗಾಗಲೇ ಪರೀಕ್ಷಾ ಮಂಡಳಿ ಸಕಲ ಸಿದ್ಧತೆ ನಡೆಸಿದೆ.

ಈ ಬಾರಿ ಒಟ್ಟು 15,387 ಶಾಲೆಗಳಿಂದ 8,73,846 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೋಂದಾಯಿಸಿಕೊಂಡಿದ್ದಾರೆ.‌ ಅದರಲ್ಲಿ 4,52,732 ಗಂಡು ಮಕ್ಕಳು ಹಾಗೂ 4,21,110 ಹೆಣ್ಣು ಮಕ್ಕಳು, 4 ತೃತೀಯ ಲಿಂಗಿ ವಿದ್ಯಾರ್ಥಿಗಳು ಸೇರಿದ್ದಾರೆ. ಅಲ್ಲದೇ ಸುಮಾರು 5,307 ವಿಭಿನ್ನ ಸಾಮರ್ಥ್ಯವುಳ್ಳ ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ.‌

ರಾಜ್ಯದ 5,717 ಸರ್ಕಾರಿ ಶಾಲೆಗಳು, 3,412 ಅನುದಾನಿತ ಹಾಗೂ 6,258 ಅನುದಾನ ರಹಿತ ಶಾಲೆಗಳು ಪರೀಕ್ಷೆಗೆ ನೋಂದಾಯಿಸಿವೆ. ಇದರಲ್ಲಿ ಸರ್ಕಾರಿ ಶಾಲೆಯ 3,76,685 ವಿದ್ಯಾರ್ಥಿಗಳು, ಅನುದಾನಿತ ಶಾಲೆಯ 2,23,032 ವಿದ್ಯಾರ್ಥಿಗಳು ಹಾಗೂ ಅನುದಾನ ರಹಿತ 2,74,129 ವಿದ್ಯಾರ್ಥಿಗಳು ಇದ್ದಾರೆ. ರಾಜ್ಯಾದ್ಯಂತ 3,444 ಪರೀಕ್ಷಾ ಕೇಂದ್ರಗಳಿದ್ದು ಇದರಲ್ಲಿ 3,275 ಸಾಮಾನ್ಯ ಕೇಂದ್ರಗಳು ಹಾಗೂ 169 ಖಾಸಗಿ ಕೇಂದ್ರಗಳಾಗಿವೆ.‌

ಕಟ್ಟುನಿಟ್ಟಿನ ಪರೀಕ್ಷೆಗೆ ಅಧಿಕಾರಿಗಳ ನಿಯೋಜನೆ: ಪರೀಕ್ಷಾ ಕಾರ್ಯದಲ್ಲಿ ಕರ್ತವ್ಯ ನಿರ್ವಹಿಸಲು ವಿವಿಧ ಸ್ತರದ ಅಧಿಕಾರಿಗಳು, ಶಿಕ್ಷಕರು, ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. 45,289 ಪರೀಕ್ಷಾ ಕೊಠಡಿಗಳಿದ್ದು, 3,444 ಮುಖ್ಯ ಅಧೀಕ್ಷಕರು, 377 ಉಪ ಮುಖ್ಯ ಅಧೀಕ್ಷಕರ ನಿಯೋಜನೆ ಮಾಡಲಾಗಿದೆ. 3,444 ಪ್ರಶ್ನೆ ಪತ್ರಿಕೆಗಳ ಅಭಿರಕ್ಷಕರು, ಕೊಠಡಿ ಮೇಲ್ವಿಚಾರಣೆಗಾಗಿ 49,817 ಮಂದಿ, ಸ್ಥಾನಿಕ ಜಾಗೃತ ದಳದ 3,444, ಮೊಬೈಲ್ ಸ್ಟಕ್ಡ್ 3,444 ನಿಯೋಜನೆ ಮಾಡಲಾಗಿದೆ. 3,444 ಪೊಲೀಸರು, ಪ್ರಶ್ನೆ ಪತ್ರಿಕೆ ವಿತರಣೆಗೆ 1,266 ಮಂದಿಯನ್ನ ನೇಮಕ ಮಾಡಲಾಗಿದೆ.

ಮಕ್ಕಳಿಗಾಗಿ ಸಹಾಯ ವಾಣಿ: ಪರೀಕ್ಷಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಕಂಡು ಹಿಡಿಯುವ ಹಾಗೂ ಭಯ ರಹಿತವಾಗಿ ಆತ್ಮಸೈರ್ಯ ತುಂಬಲು ಮಂಡಳಿಯಲ್ಲಿ ಬೆಳಗ್ಗೆ 09.30 ರಿಂದ ಮಧ್ಯಾಹ್ನ 1.00 ಗಂಟೆಯವರೆಗೆ ನುರಿತ ವಿಷಯಾಧರಿತ ಶಿಕ್ಷಕರಿಂದ ಸಹಾಯ ವಾಣಿ ಏರ್ಪಡಿಸಲಾಗಿದೆ. ಇನ್ನು ಪರೀಕ್ಷೆ ದಿನಗಳಂದು ನಿಯಂತ್ರಣ ಕೊಠಡಿಯಾಗಿ ಬೆಳಗ್ಗೆ 10 ರಿಂದ 2 ರವರೆಗೆ ಕಾರ್ಯ ನಿರ್ವಹಿಸಲಾಗುತ್ತದೆ.

ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕಡ್ಡಾಯ: ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕಡ್ಡಾಯ ಮಾಡಲಾಗಿದೆ. ಪರೀಕ್ಷಾ ಅಕ್ರಮಗಳನ್ನ ತಡೆಯುವ ನಿಟ್ಟಿನಲ್ಲಿ ಪರೀಕ್ಷಾ ಕೇಂದ್ರ ಹಾಗೂ ಕಾರಿಡಾರ್​​ನಲ್ಲಿ ಸಿಸಿಟಿವಿ ಅಳವಡಿಸುವಂತೆ ಪರೀಕ್ಷಾ ಮಂಡಳಿ ರಾಜ್ಯದ ಶಾಲೆಗಳಿಗೆ ಸೂಚನೆ ನೀಡಿದೆ.‌ ಸಿಸಿಟಿವಿಗಳಲ್ಲಿನ ಪರೀಕ್ಷಾ ದಿನಗಳ ವಿಡಿಯೋ ದೃಶ್ಯಾವಳಿಗಳನ್ನು ಜಿಲ್ಲಾ ಹಂತದ ಸಮಿತಿಯಲ್ಲಿ ಪರಿಶೀಲಿಸಿ ವರದಿ ನೀಡುವಂತೆಯೂ ಆದೇಶಿಸಲಾಗಿದೆ.

ಪರೀಕ್ಷೆಯ ದಿನದಂದು ಉಚಿತ ಪ್ರಯಾಣ: ಪ್ರತಿ ವರ್ಷ ಎಸ್ಎಸ್ಎಲ್​​ಸಿ ಪರೀಕ್ಷೆ ನಡೆಯುವ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಕೆಎಸ್ಆರ್​​ಟಿಸಿ, ಬಿಎಂಟಿಸಿ ನಿಗಮ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುತ್ತಿದೆ. ಅಂತೆಯೇ ಈ ಬಾರಿಯೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪರೀಕ್ಷೆಗೆ ಹಾಜರಾಗುವ ರಾಜ್ಯದ ಎಲ್ಲ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ತಮ್ಮ ವಾಸಸ್ಥಳದಿಂದ ನಿಯೋಜಿತ ಪರೀಕ್ಷಾ ಕೇಂದ್ರದವರೆಗೆ ಹೋಗುವಾಗ ಮತ್ತು ಹಿಂದಿರುಗುವಾಗ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಪ್ರವೇಶ ಪತ್ರವನ್ನು ತೋರಿಸಿ ನಿಗಮದ ನಗರ, ಹೊರವಲಯ, ಸಾಮಾನ್ಯ ಹಾಗೂ ವೇಗದೂತ ಬಸ್​​ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.

ಹಿಜಾಬ್​ಗೆ ನೋ ಎಂಟ್ರಿ: ಇಂದಿನಿಂದ ಎಸ್​ಎಸ್​ಎಲ್​ಸಿ ಪರೀಕ್ಷೆಗಳು ಆರಂಭವಾಗುತ್ತಿದ್ದು, ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿ ಪರೀಕ್ಷಾ ಕೇಂದ್ರಕ್ಕೆ ಹಾಜರಾಗುವಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ವಿ.ಶ್ರೀನಿವಾಸ್​​​​ ಮೂರ್ತಿ ಸುತ್ತೋಲೆ ಹೊರಡಿಸಿದ್ದಾರೆ.

ರಾಜ್ಯದಲ್ಲಿ ಹಿಜಾಬ್​ ವಿವಾದ ಮುಂದುವರೆದಿದ್ದು, ಹೈಕೋರ್ಟ್​ ಸಮವಸ್ತ್ರ ಕಡ್ಡಾಯಗೊಳಿಸಿ ತೀರ್ಪು ನೀಡಿದೆ. ಆದರೂ ನ್ಯಾಯಾಲಯದ ತೀರ್ಪು ವಿರೋಧಿಸಿ ಶಾಲಾ – ಕಾಲೇಜುಗಳಿಗೆ ವಿದ್ಯಾರ್ಥಿಗಳು ಹಿಜಾಬ್​ ಧರಿಸಿಕೊಂಡು ಬರುತ್ತಿದ್ದಾರೆ. ಇದೀಗ ಎಸ್ಎಸ್​ಎಲ್​ಸಿ ಪರೀಕ್ಷೆಗಳಿಗೂ ಸಮವಸ್ತ್ರ ಕಡ್ಡಾಯಗೊಳಿಸಲಾಗಿದೆ.

ಹಿಜಾಬ್ ಧರಿಸಿಕೊಂಡು ಬಂದರೆ ಎಸ್​ಎಸ್ಎಲ್​ಸಿ ಪರೀಕ್ಷಗೆ ಪ್ರವೇಶ ನಿರಾಕರಿಸಲಾಗಿದ್ದು, 1995ರ ನಿಯಮ 11ರಲ್ಲಿ ಪ್ರದತ್ತವಾಗಿರುವ ಅಧಿಕಾರದನ್ವಯ ಸಮವಸ್ತ್ರ ಜಾರಿ ಮಾಡಿದೆ. ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಸರ್ಕಾರ ನಿಗದಿಪಡಿಸಿರುವ ಶಾಲಾ ಸಮವಸ್ತ್ರ ಕಡ್ಡಾಯ ಮಾಡಲಾಗಿದೆ. ಇನ್ನು ಖಾಸಗಿ ಶಾಲೆಗಳಲ್ಲಿ ಆಯಾ ಆಡಳಿತ ಮಂಡಳಿಗಳು ನಿರ್ಧರಿಸಿರುವ ಸಮವಸ್ತ್ರ ಕಡ್ಡಾಯವಾಗಿ ಇರಲಿದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *