ಬಲವಂತದ ಬಂದ್​ ಆಚರಣೆ ಸರಿಯಲ್ಲ – ರಸ್ತೆಗಿಳಿದರೆ ಕಾನೂನು ಕ್ರಮ: ಕಮಲ್ ಪಂತ್ ಎಚ್ಚರಿಕೆ!

ಬೆಂಗಳೂರು: ಹಿಜಾಬ್ ತೀರ್ಪು ವಿರೋಧಿಸಿ ವಿವಿಧ ಮುಸ್ಲಿಂ ಸಂಘಟನೆಗಳು ಕರ್ನಾಟಕ ಬಂದ್ ಕರೆ ನೀಡಿರುವ ಹಿನ್ನೆಲೆ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ‌ ಕಮಲ್‌ ಪಂತ್ ನೇತೃತ್ವದಲ್ಲಿ ಮುಸ್ಲಿಂ ಸಮುದಾಯದ ಮುಖಂಡರೊಂದಿಗೆ ಬುಧವಾರದಂದು ಸಭೆ ನಡೆಸಿದರು.

ನಗರದಲ್ಲಿ 144 ಸೆಕ್ಷನ್ ಜಾರಿಯಿದ್ದರೂ ಬಂದ್ ಕರೆ ನೀಡಿರುವುದು ಸರಿಯಲ್ಲ. ಇದರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಲಿದೆ. ಬಲವಂತವಾಗಿ ಅಂಗಡಿ ಮುಂಗಟ್ಟು ಮುಚ್ಚಿಸುವುದು, ರಸ್ತೆಯಲ್ಲಿ ಜನರನ್ನು ಗುಂಪು ಗೂಡಿಸುವುದು ಕಂಡು ಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕಮಲ್​ ಪಂತ್​​ ಸಭೆಯಲ್ಲಿ ತಿಳಿಸಿದರು ಎನ್ನಲಾಗಿದೆ.

ಸಭೆ ಬಳಿಕ‌ ಮಾಧ್ಯಮಗಳೊಂದಿಗೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಮಾತನಾಡಿ, ಮುಸ್ಲಿಂ ಮುಖಂಡರು ಬಂದ್​ಗೆ ಕರೆ ಕೊಟ್ಟಿದ್ದಾರೆ. ಈ ಹಿನ್ನೆಲೆ ಮುಖಂಡರ ಜೊತೆ ಸಭೆ ಮಾಡಿದ್ದೇವೆ. ಹೊರಗಡೆ ಯಾವುದೇ ಕಾರ್ಯಕ್ರಮ ಮಾಡಲ್ಲ ಅಂತಾ ಹೇಳಿದ್ದಾರೆ. ಬಲವಂತವಾಗಿ ಅಂಗಡಿ ಮುಂಗಟ್ಟು ಮುಚ್ಚಿಸುವುದಿಲ್ಲ ಹಾಗೂ ಕೆಲಸಗಳಿಗೆ ಹೋಗುವವರನ್ನು ಬಲವಂತವಾಗಿ ತಡೆಯಲ್ಲ ಎಂದು ಭರವಸೆ ನೀಡಿದ್ದಾರೆ. ಅದರೂ ಕೂಡ ಸಾಕಷ್ಟು ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಎಲ್ಲಾ ಅಧಿಕಾರಿಗಳು, ಸಿಬ್ಬಂದಿ ಬೀಟ್​ನಲ್ಲಿ ಇರಲಿದ್ದಾರೆ. ಕೆಲವು ಕಡೆ ರೂಟ್ ಮಾರ್ಚ್ ಮಾಡಲಾಗುವುದು. ಅಲ್ಲದೇ 25 ಕೆಎಸ್​ಆರ್​ಪಿ, 35 ಸಿಎಆರ್ ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

ಮುಸ್ಲಿಂ ಮುಖಂಡ ಮೌಲಾನಾ ಮುಸ್ಕೂದ್ ಇಬ್ರಾನ್ ರಶೀದ್ ಮಾತನಾಡಿ, ಹಿಜಾಬ್ ತೀರ್ಪಿನಿಂದ ಮುಸ್ಲಿಂ ಬಾಂಧವರಿಗೆ ಸ್ವಲ್ಪ ನೋವಾಗಿದೆ. ಆ ನೋವನ್ನು ಬಂದ್​ ಮೂಲಕ ತೋರಿಸಲ್ಲಿದ್ದೇವೆ. ಮುಸ್ಲಿಂ ಸಂಘಟನೆಗಳು ಬಂದ್​ಗೆ ಕರೆ ಕೊಟ್ಟಿವೆ. ಯಾರೂ ಕೂಡ ಮನೆಯಿಂದ ಆಚೆಗೆ ಬರಬಾರದು. ಯಾರೂ ಕೂಡ ಮೈದಾನದಲ್ಲಿ ಸೇರಬಾರದು. ಯಾರ್ಲಿಗಳನ್ನು ಮಾಡಬಾರದು. ಯಾರೂ ಕೂಡ ಸ್ಕೂಲ್ ಹಾಗೂ ಆಫೀಸ್​ಗಳಿಗೆ ಹೋಗದೇ ಮನೆಯಲ್ಲಿಯೇ ಇರಿ. ಶಾಂತಿಯುತವಾಗಿ ನಮ್ಮ ನೋವನ್ನು ತೋರಿಸಬೇಕು ಎಂದರು.

Leave a Reply

Your email address will not be published. Required fields are marked *