ಗುಜರಾತ್​​ನಲ್ಲಿ ತಾಯಿ ಹೀರಾಬೆನ್​​ರನ್ನು ಭೇಟಿಯಾಗಿ ಆಶೀರ್ವಾದ ಪಡೆದ ಪ್ರಧಾನಿ ಮೋದಿ; ಒಟ್ಟಿಗೇ ಊಟ ಮಾಡಿದ ಅಮ್ಮ-ಮಗ

ಗುಜರಾತ್​ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ (PM Modi) ನಿನ್ನೆ ತಮ್ಮ ತಾಯಿಯನ್ನು ಭೇಟಿಯಾಗಿದ್ದಾರೆ. ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಹೊರಬಿದ್ದು, ಅದರಲ್ಲಿ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿದ ಬೆನ್ನಲ್ಲೇ ಪ್ರಧಾನಿ ಮೋದಿ ಗುಜರಾತ್​ಗೆ ತೆರಳಿದ್ದಾರೆ. ಇದು ಅವರ ತವರು ರಾಜ್ಯವಾಗಿದ್ದು, ವರ್ಷದ ಕೊನೆಯಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ನಿನ್ನೆ ಅಹ್ಮದಾಬಾದ್​ ಏರ್​​ಪೋರ್ಟ್​​ನಿಂದ ಗಾಂಧಿನಗರದಲ್ಲಿರುವ ಕಮಲಂ ಬಿಜೆಪಿ ಪ್ರಧಾನ ಕಚೇರಿಯವರೆಗೆ ರೋಡ್​ ಶೋ ನಡೆಸಿದ ಬಳಿಕ ಸಂಜೆ ವೇಳೆ ತಮ್ಮ ತಾಯಿ ಹೀರಾಬೆನ್ (Heeraben)​ ಇದ್ದ ಮನೆಗೆ ಹೋಗಿ, ಅವರ ಆಶೀರ್ವಾದ ಪಡೆದಿದ್ದಾರೆ. ಅಮ್ಮನೊಂದಿಗೆ ಕುಳಿತು ಊಟ ಮಾಡಿದ್ದಾರೆ. ಇತ್ತೀಚೆಗೆ ಸುಷ್ಮಾ ಸ್ವರಾಜ್​ ಜನ್ಮ ದಿನದಂದು ಪ್ರಧಾನಿ ಮೋದಿ ತಮ್ಮ ತಾಯಿಯನ್ನು ನೆನಪಿಸಿಕೊಂಡು, ಹಳೇ ಘಟನೆಯೊಂದರ ಮೆಲುಕು ಹಾಕಿದ್ದರು.


ಅದಕ್ಕೂ ಮೊದಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅಹ್ಮದಾಬಾದ್​​ನಲ್ಲಿ ಗುಜರಾತ್​ ಪಂಚಾಯತ್​ ಮಹಾಸಮ್ಮೇಳನದಲ್ಲಿ ಭಾಷಣ ಮಾಡಿದರು. ಈ ವೇಳೆ ಮಹಾತ್ಮ ಗಾಂಧಿ ಮತ್ತು ಸರ್ದಾರ್​ ವಲ್ಲಭಬಾಯಿ ಪಟೇಲ್​ ಉಲ್ಲೇಖ ಮಾಡಿದ ಅವರು, ಮಹಾತ್ಮ ಗಾಂಧಿ ಯಾವಾಗಲೂ ಗ್ರಾಮೀಣ ಅಭಿವೃದ್ಧಿ ಬಗ್ಗೆ ಮಾತನಾಡುತ್ತಿದ್ದರು. ಹಳ್ಳಿಗಳು ಸ್ವಾವಲಂಬಿಯಾಗಬೇಕು ಎಂಬುದು ಅವರ ಪರಿಕಲ್ಪನೆಯಾಗಿತ್ತು. ನಾವಿಂದು ಗ್ರಾಮೀಣ ವಿಕಾಸದ ಮೂಲಕ ಬಾಪು ಕನಸನ್ನು ನನಸು ಮಾಡಿದ್ದೇವೆ ಎಂದು ಹೇಳಿದರು. ಅದಕ್ಕೂ ಮೊದಲು ಬಿಜೆಪಿ ಪ್ರಧಾನ ಕಚೇರಿಯಲ್ಲಿ ಪಕ್ಷದ ನಾಯಕರು, ಕಾರ್ಯಕರ್ತರೊಂದಿಗೆ ಸಭೆ ನಡೆಸಿದ್ದ ಪ್ರಧಾನಿ ಮೋದಿ, ಇನ್ನಷ್ಟು ಪರಿಣಾಮಕಾರಿಯಾಗಿ ಜನಸೇವೆ ಮಾಡುವ ವಿಧಾನಗಳ ಬಗ್ಗೆ ಚರ್ಚಿಸಿದರು.

ಜನರು ನೀಡುತ್ತಿರುವ ಬೆಂಬಲ, ಸಹಕಾರಕ್ಕೆ ನಾನು ವಿಧೇಯನಾಗಿರುತ್ತೇನೆ. ಅಪಾರ ಸಂಖ್ಯೆಯ ಜನರು ಬೆಂಬಲ ನೀಡಿದಾಗ ನಮ್ಮಲ್ಲಿ ಕೆಲಸ ಮಾಡುವ ಉತ್ಸಾಹವೂ ಹೆಚ್ಚಾಗುತ್ತದೆ ಎಂದು ಮೋದಿ ಹೇಳಿದ್ದಾರೆ. ಗುಜರಾತ್​ನಲ್ಲಿ ವರ್ಷದ ಕೊನೆಯಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಈ ನಿಟ್ಟಿನಲ್ಲಿ ಪ್ರಧಾನಿ ಮೋದಿ ಭೇಟಿ ಅತ್ಯಂತ ಮಹತ್ವ ಎನ್ನಿಸಿದೆ. ಈಗಷ್ಟೇ ಐದು ರಾಜ್ಯಗಳ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಉತ್ತರಪ್ರದೇಶ, ಉತ್ತರಾಖಂಡ್​, ಗೋವಾ, ಮಣಿಪುರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.

Leave a Reply

Your email address will not be published. Required fields are marked *