ಕೊಹ್ಲಿ ಈಗ ಸೋತಿದ್ದಾನೆ. ಹಾಗಾಗಿ ಆತನನ್ನು ಈಗ ಇನ್ನಷ್ಟು ಜಾಸ್ತಿ ಬೆಂಬಲಿಸುತ್ತೇನೆ

ಕುಂಬ್ಳೆಯಂಥ ಜೆಂಟ್ಲ್ ಮನ್ ಕ್ರಿಕೆಟರ್, ಕ್ರಿಕೆಟ್ ಗಾಗಿ ಪ್ರಾಣವನ್ನೂ ಪಣಕ್ಕಿಟ್ಟಾತನನ್ನು ಕೋಚ್ ಪಟ್ಟದಿಂದ ಇಳಿಸಿ ಅವಮಾನಿಸಿ ತನ್ನ ಮೂಗಿನ ನೇರಕ್ಕೆ ನಡೆಯೋ ಶೋಕಿಲಾಲ ರವಿಶಾಸ್ತ್ರಿಯನ್ನು ಪಕ್ಕಕ್ಕಿಟ್ಟುಕೊಂಡದ್ದು..

ರವಿಚಂದ್ರನ್ ಅಶ್ವಿನ್ ನಂಥ ಬೌಲರ್ರನ್ನು ಫಾರ್ಮಿನ ಉತ್ತುಂಗದಲ್ಲಿದ್ದಾಗ್ಯೂ ಇನ್ನಿಲ್ಲದಂತೆ ಕಡೆಗಣಿಸಿದ್ದು…

ಆಕ್ರಮಣಕಾರಿ ಪ್ರವೃತ್ತಿ ಹೆಸರಲ್ಲಿ ಬಯ್ಗುಳದ ಬಾಯಿ ಮಾಡಿಕೊಂಡು ಇಂಡಿಯನ್ ಕ್ಯಾಪ್ಟನ್ ಸ್ಥಾನದ ಘನತೆಗೆ ಕಪ್ಪುಚುಕ್ಕೆ ಇಟ್ಟದ್ದು..

ಈ ಮೂರೇ ನನಗೆ ಕೊಹ್ಲಿ ಮೇಲಿರೋ ಕಂಪ್ಲೇಂಟು.

ಆ ಮೂರನೇ ಪಾಯಿಂಟು ಗೆಲುವಿನ ಸರಮಾಲೆಗಳಲ್ಲಿ ಒಪ್ಪಿತವಾಗಿ ಹೋಗಿರಬಹುದು..ಅಥವಾ ಇಂದಿನ ಜನರೇಶನ್ ಬಯಸೋದೇ ಆ ಥರದ ಆಕ್ರಮಣಕಾರಿ ಮನೋಭಾವ ಇದ್ದಿರಲೂಬಹುದು. ಆದರೆ ಮಿಕ್ಕಿರೋ ಎರಡು ಪಾಯಿಂಟುಗಳನ್ನು ನನ್ನ ವಿರೋಧಿಗಳೂ ಕೊಹ್ಲಿಯ ಫ್ಯಾನುಗಳೂ ಖಂಡಿತ ಒಪ್ಪುತ್ತಾರೆ ಅಂದ್ಕೋತೀನಿ.

 

ಈ ಮೂರು ದೂರುಗಳನ್ನು ಬದಿಗಿಟ್ಟರೆ ಕೊಹ್ಲಿ ನಂಗಿಷ್ಟ‌. ಆತನ ಡೆಡಿಕೇಶನ್, ಕ್ರಿಕೆಟ್ ಪ್ರೀತಿ, ಪ್ಯಾಶನ್, ಹಾರ್ಡ್ ವರ್ಕ್ ಎಲ್ಲವೂ ನಂಗಿಷ್ಟ. ಮುಖ ಮಾಸ್ಕ್ ಮಾಡಿ ತೋರಿಸಿದರೂ ಇದು ಕೊಹ್ಲಿಯದೇ ಶಾಟ್ ಎಂದು ಗುರುತಿಸಬಲ್ಲಂಥ ಕೆಲವು ಶಾಟ್ ಗಳಿವೆ ಕೊಹ್ಲಿಯದ್ದು. ಅವುಗಳನ್ನು ನೋಡೋದೇ ಒಂದು ಸೊಗಸು. ಟೆಸ್ಟ್ ಮತ್ತು ಒನ್ ಡೇ ಪಂದ್ಯಗಳಲ್ಲಿ ಆತ ಇನ್ನಿಂಗ್ಸ್ ಕಟ್ಟುತ್ತಿದ್ದ ರೀತಿಯೇ ಮಾಡರ್ನ್ ಡೇ ಕ್ರಿಕೆಟ್ ಟೆಕ್ಸ್ಟ್ ಬುಕ್ ನಲ್ಲಿ ಒಂದು ಚಾಪ್ಟರ್ ಆಗಬಹುದು. ಆತನ ಆಟದಲ್ಲಿ ಕ್ಯಾಲ್ಕ್ಯುಲೇಟೆಡ್ ತಾಳ್ಮೆ ಕ್ಯಾಲ್ಕುಲೇಟೆಡ್ ಅಗ್ರೆಶನ್ ಕಾಣುತ್ತಿತ್ತು. ಔಟಾದ ಅಂದ್ರೆ ಸಚಿನ್ ನಂತೆಯೇ ಮುಂದಿನ ಇನ್ನಿಂಗ್ಸ್ ಬ್ಯಾಟ್ ಹಿಡಿಯೋ ವರೆಗೂ ತಲೆಕೆಡಿಸಿಕೊಳ್ತಿದ್ದ.. ಎಲ್ಲಿ ತಪ್ಪಾಯ್ತು.. ಏನು ತಪ್ಪಾಯ್ತು.. ಹೀಗೆ ಮಾತ್ರ ಔಟಾಗಬಾರ್ದು ಇನ್ಮುಂದೆ ಅಂತ ಆ ಔಟಾದ ವಿಡಿಯೋ ನೋಡಿ ನೋಡಿ ನೆಟ್ಟಲ್ಲಿ ಬಾಲ್ ಹಾಕಿಸಿಕೊಂಡು ತಿದ್ದಿಕೊಳ್ತಿದ್ದ. ರನೌಟ್ ಆದ್ರೆ ತನ್ನದೇ ತಪ್ಪು ಎಂಬ ಸಿಟ್ಟಿನಲ್ಲಿ ನೆಟ್ ನಲ್ಲಿ ಒಂದು ತುದಿಯಿಂದ ಇನ್ನೊಂದು ತುದಿಗೆ ಓಡಿಓಡಿಓಡಿ ಸುಸ್ತಾಗೋ ತನಕ ಓಡಿ ಪ್ರಾಯಶ್ಚಿತ್ತ ಮಾಡ್ಕೊಳ್ತಿದ್ದ. ಡೇ ನೈಟ್ ಮ್ಯಾಚ್ ಆಡಿ ಮಿಕ್ಕವರೆಲ್ಲ ಪಾರ್ಟಿಗೋ ನಿದ್ದೆಗೋ ಜಾರಿದರೆ…ಈತ ಮಾತ್ರ ನಡುರಾತ್ರಿ ಒಂದೂವರೆಗೆ ಜಿಮ್ ನಲ್ಲಿ ಬೆವರು ಸುರಿಸುತ್ತಿದ್ದ‌.

 

ಸಚಿನ್ ದಂತಕತೆ ಇರಬಹುದು ಬ್ರಾಡ್ ಮನ್ ಕ್ರಿಕೆಟ್ ನ ಮುತ್ತಜ್ಜ ಇರಬಹುದು, ಲಾರಾ ದ್ರಾವಿಡ್ ಧೋನಿ ಸೆಹ್ವಾಗ್ ರಂಥ ದಿಗ್ಗಜ ಆಟಗಾರರಿರಬಹುದು. ಆದರೆ ಅವರೆಲ್ಲರಿಂದಾಚೆ ಕೊಹ್ಲಿ ಎಂಬ ರನ್ ಮಶಿನ್ ತನ್ನ ಕ್ಲ್ಯಾಸ್ & ಮಾಸ್ ಇಮೇಜಿನಿಂದ ಯೂತ್ ಐಕಾನ್ ಆಗಿದ್ದು ಸುಳ್ಳಲ್ಲ.

 

ತೀರಾ ಮೂರುವರ್ಷದ ಹಿಂದಿನತನಕ ಈ ಕೊಹ್ಲಿ ಯಾರ ರೆಕಾರ್ಡನ್ನೂ ಉಳಿಸೋದಿಲ್ಲ ಎಂದೇ ಅನಿಸುತ್ತಿತ್ತು. ಆತ ತನ್ನ ಉತ್ತುಂಗದ ಫಾರ್ಮಲ್ಲಿ ಬ್ಯಾಟಿಂಗ್ ಆಡ್ತಾ ಇದ್ದಾಗ ಕ್ರಿಕೆಟ್ ನಲ್ಲಿ ಮೊದಲಿದ್ದ ಕ್ವಾಲಿಟಿ ಬೌಲಿಂಗ್ ಈಗಿಲ್ಲ ಅನಿಸುತ್ತಿತ್ತು. ಆತ ಎದುರಿಸುತ್ತಿರೋ ಬೌಲರ್ ಗಳು ಕ್ಲಬ್ ಲೆವೆಲ್‌ಬೌಲರ್ಸ್ ಅನಿಸುತ್ತಿತ್ತು. ಆದರೆ ಅದು ನಿಜವಲ್ಲ.. ಆತನ ಬ್ಯಾಟಿಂಗ್ ಹಾಗಿತ್ತು. ಕ್ಲಾಸ್ ಬೌಲರ್ ಗಳೂ ಕಳಪೆ ಅನಿಸುತ್ತಿದ್ದರು. ಸ್ಪಿನ್ ಸ್ವಿಂಗ್ ಮತ್ತು ಫಾಸ್ಟ್ ಬೌಲರ್ ಗಳನ್ನು ಒಂದೇ ನಿರ್ದಯತೆ ಮತ್ತು ಗೌರವದಿಂದ ಕಾಣುತ್ತಿದ್ದ ಕೊಹ್ಲಿ ಅದೇ ಕಾರಣಕ್ಕೆ ಓಪನರ್ ಆಗಿಯೂ ನಂಬರ್ ಥ್ರೀ ಆಗಿಯೂ ಕ್ಲಿಕ್ ಆಗಿದ್ದು.

 

ನಿಸ್ಸಂಶಯವಾಗಿಯೂ ಕೊಹ್ಲಿ ಬೆಸ್ಟ್ ಕ್ಯಾಪ್ಟನ್ ಅಲ್ಲ. ಅಷ್ಟೊಂದು ದಾಖಲೆಯ ಗೆಲುವುಗಳ ಹೊರತಾಗಿಯೂ ಕೊಹ್ಲಿ ಒಳ್ಳೆ ಕ್ಯಾಪ್ಟನ್ ಅಲ್ಲ. ಆದರೆ ಕೊಹ್ಲಿಯ as a player ನಿರ್ವಿವಾದಿತವಾಗಿ ದಿ‌‌ ಬೆಸ್ಟ್.

 

ಪ್ರತಿ ರೈಲಿಗೂ ಒಂದು ಕೊನೆಯ ನಿಲ್ದಾಣ ಎಂಬುದಿರುತ್ತದೆ. ಜಂಕ್ಷನ್ ಎಂಬುದಿರುತ್ತದೆ.

ಎಂಥಾ ಬೆಸ್ಟ್ ಅನಿಸಿಕೊಂಡಾತನಿಗೂ ಒಂದು ಕೆಟ್ಟ ಅವಧಿ ಎಂಬುದಿರುತ್ತದೆ.

 

ಕೊಹ್ಲಿ ಕೊನೆಯ ನಿಲ್ದಾಣದಲ್ಲಿದ್ದಾನಾ? ಅದು ಅವನು ನಿರ್ಧರಿಸಿಕೊಳ್ಳಬೇಕು. ಅವನ ಆಟ ಅವನ ಸಾಮರ್ಥ್ಯ ಕಂಡಿರೋ ನಮಗನಿಸೋದು ಆತ ಒಂದು ಜಂಕ್ಷನ್ನಿಗೆ ಬಂದು ನಿಂತಿದ್ದಾನೆ. ಅದು ಅವನ ಕೊನೆಯ ನಿಲ್ದಾಣ ಖಂಡಿತ ಅಲ್ಲ.

 

ಕೊಹ್ಲಿಯ ಫಾರ್ಮ್ ಕೈ ಕೊಟ್ಟಿದೆ. ಬ್ಯಾಟಿಂಗ್ ಕ್ರೀಸ್ ನಲ್ಲಿ ನಿಂತಾಗ ಇರುತ್ತಿದ್ದ ಅಂದಿನ ಆತ್ಮವಿಶ್ವಾಸ ಇಂದು ಕಾಣುತ್ತಿಲ್ಲ. ಇದು ಈಗಿನ ಐಪಿಎಲ್ ಮಾತ್ರವಲ್ಲ. ಅದಕ್ಕೂ ಮುನ್ನ ಆತ ಕ್ಯಾಪ್ಟನ್ ಆಗಿದ್ದ ಸೀರೀಸ್ ಮತ್ತು ಕ್ಯಾಪ್ಟನ್ಸೀ ಬಿಟ್ಕೊಟ್ಟ ನಂತರದ ಸೀರೀಸಿನಲ್ಲೂ ಕಂಡಿದೆ.

ಸಚಿನ್ ನಂಥ ಸಚಿನ್ ಇಂಥ ರನ್ ಬರ ಎದುರಿಸಿಲ್ವಾ? ಪ್ರೂವ್ ಮಾಡೋಕೇನೂ ಉಳಿದಿಲ್ಲ ಎಂಬಷ್ಟು ಸಾಧಿಸಿದ ನಂತರ ಸಚಿನ್ ವರ್ಷಗಟ್ಲೆ ಫಾರ್ಮ್ ಕಳಕೊಂಡದ್ದಿದೆ. ಮತ್ತೆ ಫೀನಿಕ್ಸಿನಂತೆ ಎದ್ದದ್ದಿದೆ. ಹಾಗಂತ ಅವರ ಆ ಕಳಕೊಂಡ ಫಾರ್ಮ್ ನ ಟೈಮಿನ ರೆಕಾರ್ಡ್ ತೆರೆದು ನೋಡಿದರೆ ಅದು ನಾವು ಟೀಕಿಸುವಷ್ಟು ಟ್ರಾಲ್ ಮಾಡುವಷ್ಟು ಕೆಟ್ಟದಾಗಿರೋದಿಲ್ಲ. ಪ್ರತಿ ಮ್ಯಾಚೂ ನೂರು ಹೊಡೆಯುತ್ತಿದ್ದಾತ ಕೆಲವು‌ಮ್ಯಾಚ್ ನೂರರ ಬದಲು ಐವತ್ತೋ ಎಪ್ಪತ್ತೋ ಹೊಡೆದರೆ ಅದು ಕಳಪೆ ಅನಿಸುತ್ತದಲ್ಲ ಹಾಗೆ. ಟೀಕಾಕಾರರು ಸಚಿನ್ ಬ್ಯಾಟಿನಿಂದ ಶತಕ ಬರದೆ ಇಷ್ಟು ವರ್ಷ ಆಯ್ತು ಎಂದು ತೋರಿಸುತ್ತಾರೆ. ತೊಂಬತ್ತರ ಆಸುಪಾಸಿನಲ್ಲಿ ಎಷ್ಟು ಬಾರಿ ಔಟಾದ ಎಂಬುದರ ಬಗ್ಗೆ ಮಾತಾಡೋದೇ ಇಲ್ಲ. ಸಚಿನ್ ನ ನರ್ವಸ್ ನೈಂಟಿಗಳೆಲ್ಲ ಸೆಂಚುರಿಯಾಗಿ ಬದಲಾಗಿದ್ರೆ ಅದು ಇನ್ಯಾವ ಪರಿ ದಾಖಲೆಗಳಾಗ್ತಿದ್ದವೋ.

ಹಾಗೆಯೇ ಕೊಹ್ಲಿ ಕೂಡ ಸೆಂಚುರಿ ಬರ ಎದುರಿಸಿರಬಹುದು..ಆದರೆ ಆತನ ಬ್ಯಾಟಿನಿಂದ ಆ ಲೀನ್ ಪ್ಯಾಚಿನಲ್ಲೂ ರನ್ಸ್ ಬಂದಿವೆ. ನಾವು‌ ನೋಡಬಯಸೋ ಆಟ ಅವನಿಂದ ಬಂದಿಲ್ಲ ಅಷ್ಟೆ. ತಂಡದಲ್ಲಿ ಉಳ್ಕೊಳೋಕೂ ಲಾಯಕ್ ಇಲ್ಲ ಅನಿಸುವಷ್ಟು ಬಾರಿ ವಿಫಲನಾಗಿದ್ದ ರೋಹಿತ್ ಶರ್ಮಾನ ನಿಜವಾದ ಸಾಮರ್ಥ್ಯ ಹೊರಬರಲು ವರ್ಷಗಳೇ ಬೇಕಾದವು. ಆಗಲೇ ಆತನನ್ನು ಕೈಬಿಟ್ಟಿದ್ದರೆ ಆತನ ಒನ್ ಡೇ ಡಬಲ್ ಸೆಂಚುರಿಗಳನ್ನು ಮಿಸ್ ಮಾಡ್ಕೋತಿದ್ವಿ. ಹಲವು ಅದ್ಭುತ ಮ್ಯಾಚ್ ವಿನ್ನಿಂಗ್ ಆಟಗಳನ್ನು ಕಳ್ಕೊತಿದ್ವಿ. ಅಫ್ ಕೋರ್ಸ್ ಯಾರೂ ಅನಿವಾರ್ಯರಲ್ಲ ಆತನ ಜಾಗದಲ್ಲಿ ಇನ್ನೊಬ್ಬ ಬಂದು ಮಿಂಚುತ್ತಿದ್ದನೋ ಏನೋ.. ಆದರೆ ರೋಹಿತ್ ಮಾಗಲು ಅಷ್ಟು ಟೈಮ್ ಬೇಕಾಗಿತ್ತು. ಪ್ರೂವ್ ಮಾಡಿರದ ರೋಹಿತ್ ಗೇ ನಾವಷ್ಟು ಅವಕಾಶ ಕೊಟ್ಟವರು.. ಎಲ್ಲವನ್ನೂ ಪ್ರೂವ್ ಮಾಡಿದ ಕೊಹ್ಲಿ ವಿಚಾರದಲ್ಲಿ ಕಟುವಾಗಬೇಕಾ.

ಕ್ರಿಕೆಟ್ ಅಭಿಮಾನಿಗಳು ಕೊಹ್ಲಿ ಫ್ಯಾನ್ ಮತ್ತು ಅಭಿಮಾನಿಗಳು ವಿರೋಧಿಗಳು ವಿಶ್ಲೇಷಕರು ಹಾಗೂ ಬಿಸಿಸಿಐ ಈ ಹೊತ್ತಿನಲ್ಲಿಕೊಹ್ಲಿಯೊಂದಿಗಿರಬೇಕು. ಗೆದ್ದಾಗ ಎಲ್ಲರೂ ಇರ್ತಾರೆ ಸೋತಾಗ ಅನಾಥಭಾವ ಹುಟ್ಟಿಸಬಾರದು. ಹಾಗಂತ ನೀನ್ ಹೆಂಗ್ ಆಡಿದ್ರೂ ಕಿಂಗೇ ಎಂದು ಎತ್ತಾಡಿಸ್ತಾ ಕೂರಬಾರದು.

ಆತ ಈ ವೈಫಲ್ಯದಿಂದ ಹೊರಬರಲು ಸಹಕರಿಸಬೇಕು.. ಆತ ಆತ್ಮವಿಶ್ವಾಸ ಮರಳಿಪಡೆಯಲು ಸಮಯ ನೀಡಬೇಕು. ಆತನಿಗೆ ಚಿಕ್ಕ ಬ್ರೇಕ್ ಬೇಕಿರಬಹುದು.. ಒಂದಷ್ಟು ರಣಜಿ ಅಥವಾ ಕೌಂಟಿ ಪಂದ್ಯಗಳು ಬೇಕಿದೆಯೇನೋ..ಅಥವಾ ಮನಸಿಗೂ ದೇಹಕ್ಕೂ ವಿಶ್ರಾಂತಿ ಬೇಕೇನೋ…ಆಪ್ತರ ಚಿಕ್ಕದೊಂದು ಕೌನ್ಸೆಲಿಂಗ್ ಬೇಕೇನೋ.. ಬಿಸಿಸಿಐನಿಂದ ಆದ ಗಾಯದ ಮೇಲಿನ ಬರೆ ಮಾಯಲು ಸಮಯ ಬೇಕೇನೋ.. ಅದೇನೇ ಇದ್ದರೂ ಸಮಯವಷ್ಟೇ ಎಲ್ಲವನ್ನೂ ಸರಿ ಮಾಡಬಲ್ಲದು.

 

ಯಾಕಂದ್ರೆ ಕೊಹ್ಲಿಯ ರಿಟೈರ್ಮೆಂಟ್ ಬಗ್ಗೆ ಯೋಚಿಸೋದೇ ಆತುರದ ಆಲೋಚನೆ. ಆತನ ಫಿಟ್ನೆಸ್ ಲೆವೆಲ್ ನೋಡಿದ್ರೆ ಇನ್ನೂ ಕನಿಷ್ಠ ಐದಾರು ವರ್ಷಗಳ ಕ್ರಿಕೆಟ್ ಖಂಡಿತ ಆತನಲ್ಲಿದೆ. ಒನ್‌ಡೇ ಮತ್ತು ಟೆಸ್ಟ್ ನಲ್ಲಿ ಇನ್ನೂ ಕೊಹ್ಲಿಯ ಆಟ ಬಾಕಿಯಿದೆ. ಆತ ರಿಟೈರ್ ಆಗೋದೇ ಆದಲ್ಲಿ ಟಿ೨೦ ಮತ್ತು ಈ ಹಣದಾಹಿ ಐಪಿಎಲ್ ಗಳಿಂದ ರಿಟೈರ್ ಆಗಬಹುದು. ಅದು ಟೆಸ್ಟ್ ಹಾಗೂ ಒನ್ ಡೇ ಪಂದ್ಯಗಳಲ್ಲಿ ಆತನ ನೈಜ ಆಟವನ್ನು ಮರಳಿ ಹೊರತರಬಹುದು.‌ ಇಷ್ಟಕ್ಕೂ ಕೊಹ್ಲಿ ನ್ಯಾಚುರಲ್ ಟಿ೨೦ ಪ್ಲೇಯರ್ ಏನಲ್ಲ. ಈ ಫಾರ್ಮೆಟ್ಟಿಗೆ ಹಲವರಂತೆ ಹೊಂದಿಕೊಂಡಿದ್ದಾನಷ್ಟೆ.

ಕೊಹ್ಲಿ ಐಪಿಎಲ್ ನಲ್ಲಿ ಹಿಂದೆಲ್ಲ ಅಬ್ಬರಿಸಿರಬಹುದು.. ಆರೆಂಜ್ ಕ್ಯಾಪೂ ಪಡೆದಿರಬಹುದು.. ಆದರೆ‌ ಕೊಹ್ಲಿಯ ಆ ಅಬ್ಬರವಾಗಲೀ ರನ್ ಹೊಳೆಯಾಗಲೀ ಒಮ್ಮೆಯೂ ಕಪ್ ಗೆಲ್ಲಿಸಿಕೊಡಲಿಲ್ಲ‌ ಅನ್ನೋದು ವಾಸ್ತವ. ಐಪಿಎಲ್‌ನಲ್ಲಿ ಈಗ ಬ್ಯಾಟಿಂಗ್ ರೀತಿರಿವಾಜುಗಳೇ ಬದಲಾಗಿದೆ. ಕೊಹ್ಲಿಯ ಆಟದ ಶೈಲಿ ಔಟ್ ಡೇಟೆಡ್ ಅನಿಸುತ್ತಿದೆ. ಹದಿನೈದು ಬಾಲಿಗೆ ಐವತ್ತು ಮೂವತ್ತು ಬಾಲಿಗೆ ಸೆಂಚುರಿ ಹೊಡೆಯುವ ಸ್ಪರ್ಧೆ ನಡೆಯುತ್ತಿದೆ. ಕೊನೆಯ ಓವರ್ ನಲ್ಲಿ ಮೂವತ್ತು ರನ್ ಹೊಡೆದು ಗೆಲ್ಲುವುದೂ ಸುಲಭ ಎನ್ನುವ ಶೈಲಿಯ ಬ್ಯಾಟಿಂಗ್ ಅಬ್ಬರ ಚಾಲ್ತಿಯಲ್ಲಿದೆ. ಇದು ಕ್ಲ್ಯಾಸಿಕ್ ನಂಬರ್ ಥ್ರೀ ಬ್ಯಾಟ್ಸ್ ಮನ್ ಕೊಹ್ಲಿಗೆ ಆಗಿಬರೋ‌ ಆಟವಾಗಿ ಉಳಿದಿಲ್ಲ. ಕೊಹ್ಲಿಯ ನಲವತ್ತು ಬಾಲಿಗೆ ಐವತ್ತು ಅರವತ್ತುಗಳು ಇಂದಿನ ಲೆಕ್ಕದಲ್ಲಿ ನಿಧಾನಗತಿಯ ಆಟ.ಆ ಆಟ ಗೆಲುವಿಗೆ ನಯಾಪೈಸ ಕಾಂಟ್ರಿಬ್ಯೂಟ್ ಮಾಡುವುದಿಲ್ಲ. ಹಾಗಂತ ಆ ಆಟ ಕೊಹ್ಲಿಯಿಂದ ಸಾಧ್ಯವೇ ಇಲ್ಲ ಅಂತೇನಲ್ಲ. ಹತ್ತು ರನ್ ಗಾಗಿ ನೂರೈವತ್ತು ಬಾಲು ಕುಟ್ಟುತ್ತಿದ್ದ ಟೆಸ್ಟ್ ವಾಲ್ ದ್ರಾವಿಡ್ ಟಿ೨೦ಯಲ್ಲಿ ಇಪ್ಪತ್ಮೂರು ಬಾಲಿಗೆ ಐವತ್ತು ಚಚ್ಚಿದ್ದು ನೋಡಿಲ್ವಾ ನಾವು. ಆದರೆ ಈ ಹೊಡಿಬಡಿ ಫಾರ್ಮೆಟ್ ಅಷ್ಟು ವರ್ಷ ಶ್ರದ್ಧೆಯಿಂದ ಕಲಿತ ಪಠ್ಯಶೈಲಿಯನ್ನು ಮರೆಸಿಹಾಕೋದಂತೂ ದಿಟ. ಟೆಸ್ಟ್ ಮತ್ತು ಒನ್ ಡೇ ಗೆ ಕೊಹ್ಲಿಯ ಅಗತ್ಯವಿದೆ. ಆತ ಅಲ್ಲಿ‌ ಹೆಚ್ಚು ಗಮನಕೊಟ್ಟು ದೇಶಕ್ಕೆ ತನ್ನ ಸೇವೆ ಸಲ್ಲಿಸಬೇಕಿದೆ. ಆ ಆಟದ ಲಯಕ್ಕೆ ಬರಲು ಕೊಹ್ಲಿ ಅದೇನು ಬೇಕೋ ಮಾಡಲಿ. ಐಪಿಎಲ್‌ ಈಗಾಗಲೇ ಕಳಕೊಂಡಿರುವ ಆತನ ಆಟ ಮತ್ತು ಆತ್ಮವಿಶ್ವಾಸವನ್ನು ಮತ್ತಷ್ಟು ಕಸಿದುಕೊಳ್ಳದಿರಲಿ.

ಕೊಹ್ಲಿಯನ್ನು ಈ ರೀತಿ ನೋಡಲು ಬೇಜಾರಾಗುತ್ತದೆ. ನಾಯಕನ ಸ್ಥಾನದಿಂದಿಳಿದರೂ‌ ನಾಯಕನಂತೆಯೇ ಅನಿಸುವ ಧೋನಿ.. ನಾಯಕನಾಗಿದ್ದರೂ ನಾಯಕ ಅನಿಸದ ಕೊಹ್ಲಿ ಇಬ್ಬರೂ ತದ್ವಿರುದ್ಧ ಕ್ಯಾರಕ್ಟರ್ ಗಳು. ಆದರೆ ಅವರಿಬ್ಬರೂ ಒಬ್ಬರನ್ನೊಬ್ಬರು ಅಪಾರವಾಗಿ ಗೌರವಿಸುತ್ತಾರೆ. ಅಂತೆಯೇ ನಾನು ಇಬ್ಬರನ್ನೂ ಹಲವಾರು ಕಾರಣಗಳಿಗೆ ಅಭಿಮಾನಿಸುತ್ತೇನೆ.

ಕೊಹ್ಲಿ ಈಗ ಸೋತಿದ್ದಾನೆ. ಹಾಗಾಗಿ ಆತನನ್ನು ಈಗ ಇನ್ನಷ್ಟು ಜಾಸ್ತಿ ಬೆಂಬಲಿಸುತ್ತೇನೆ.

Leave a Reply

Your email address will not be published. Required fields are marked *