ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರವಾದಲ್ಲಿದ್ದಾರೆ, ಅಮೆರಿಕ ಸಂಸತ್ತಿನಲ್ಲಿ ಐತಿಹಾಸಿಕ ಭಾಷಣ ಮಾಡಿದ್ದಾರೆ, ಅವರ ಮಾತಿಗೆ ನೆರೆದಿದ್ದ ಜನ ಎದ್ದು ಚಪ್ಪಾಳೆ ತಟ್ಟಿದ್ದಷ್ಟೇ ಅಲ್ಲದೆ ಶಿಳ್ಳೆ ಹಾಕಿ ಸಂತಸ ವ್ಯಕ್ತಪಡಿಸಿದ್ದಾರೆ..
ಪ್ರಜಾಪ್ರಭುತ್ವವೆಂಬುದು ನಮ್ಮ ಎರಡು ದೇಶಗಳ ಪವಿತ್ರ ಬಾಂಧವ್ಯಗಳಲ್ಲಿ ಒಂದಾಗಿದೆ, ಘನತೆ ಹಾಗೂ ಸಮಾನತೆಯನ್ನು ಬೆಂಬಲಿಸಲು ಪ್ರಜಾಪ್ರಭುತ್ವವೊಂದೇ ದಾರಿ, ಭಾರತವು ಪ್ರಜಾಪ್ರಭುತ್ವದ ತಾಯಿ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ..
ಆಧುನಿಕ ಭಾರತದಲ್ಲಿ ಮಹಿಳೆಯರು ನಮ್ಮನ್ನು ಉತ್ತಮ ಭವಿಷ್ಯದತ್ತ ಕೊಂಡೊಯ್ಯುತ್ತಿದ್ದಾರೆ. ಭಾರತದ ದೃಷ್ಟಿ ಕೇವಲ ಮಹಿಳೆಯರಿಗೆ ಅನುಕೂಲವಾಗುವ ಅಭಿವೃದ್ಧಿಯಲ್ಲ, ಇದು ಮಹಿಳಾ ನೇತೃತ್ವದ ಅಭಿವೃದ್ಧಿ ಎಂದರು.
ಆರ್ಥಿಕತೆಯನ್ನು ನಗದುರಹಿತವಾಗಿಸಲು ಭಾರತ ಡಿಜಿಟಲ್ ಕ್ರಾಂತಿ ಮಾಡಿದೆ. ಭಾರತದಲ್ಲಿ ಕೋಟ್ಯಂತರ ಜನರು ಯುಪಿಐ ಮೂಲಕ ತಮ್ಮ ವಹಿವಾಟು ಮಾಡುತ್ತಿದ್ದಾರೆ. ಇದು ಆರ್ಥಿಕತೆಯಲ್ಲಿ ಪಾರದರ್ಶಕತೆಯನ್ನು ತಂದಿದೆ, ಭ್ರಷ್ಟಾಚಾರವನ್ನು ಕೂಡ ಕಡಿಮೆ ಮಾಡಲಾಗಿದೆ ಎಂದರು..
ಆರೋಗ್ಯ ಕ್ಷೇತ್ರದಲ್ಲಿ ಭಾರತದ ಶಕ್ತಿಯನ್ನು ಮನಗಂಡ ಪ್ರಧಾನಿ ಮೋದಿ ಭಾರತ ಈಗ ಜಾಗತಿಕ ಔಷಧಾಲಯವಾಗಿದೆ ಎಂದು ಹೇಳಿದರು. ಪ್ರಪಂಚದ ಬಹುತೇಕ ಔಷಧಗಳನ್ನು ಭಾರತದಲ್ಲಿ ತಯಾರಿಸಿ ರಫ್ತು ಮಾಡಲಾಗುತ್ತಿದೆ ಎಂದರು..
ಅಮೆರಿಕ ಹಾಗೂ ಭಾರತ ವಿಶ್ವ ಎರಡು ದೊಡ್ಡ ಪ್ರಜಾಪ್ರಭುತ್ವ ಶಕ್ತಿಗಳಾಗಿವೆ. ಅವರು ಜತೆಗೂಡಿದರೆ ಇಡೀ ಜಗತ್ತಿಗೆ ಲಾಭ.ಪ್ಯಾರಿಸ್ ಹವಾಮಾನ ಶೃಂಗಸಭೆಯ ಬದ್ಧತೆಯನ್ನು ಪೂರೈಸಿದ ಏಕೈಕ ಜಿ20 ದೇಶ ಭಾರತ. ನಾವು 2030ರ ನಿಗದಿತ ಗುರಿಗಿಂತ 9 ವರ್ಷಗಳ ಮೊದಲೇ ನಮ್ಮ ಶಕ್ತಿಯ ಮೂಲಗಳಲ್ಲಿ ಶೇ.40ಕ್ಕಿಂತ ಹೆಚ್ಚು ನವೀಕರಿಸಬಹುದಾದ ಇಂಧನ ಮೂಲ ಹೊಂದಿದ್ದೇವೆ ಎಂದು ಹೇಳಿದರು..
ಕಳೆದ ಹಲವು ವರ್ಷಗಳಲ್ಲಿ, ಎಐ ಅಥವಾ ಕೃತಕ ಬುದ್ಧಿಮತ್ತೆಯಲ್ಲಿ ಹಲವು ಪ್ರಗತಿಗಳಾಗಿವೆ. ಅದೇ ಸಮಯದಲ್ಲಿ, ಮತ್ತೊಂದು ಎಐ, ಅಂದರೆ ಅಮೇರಿಕ ಮತ್ತು ಭಾರತದ ಮಧ್ಯೆ ಇನ್ನೂ ಹೆಚ್ಚು ಮಹತ್ವದ ಬೆಳವಣಿಗೆ ಕಂಡುಬಂದಿದೆ ಎಂದು ಮೋದಿ ಹೇಳಿದರು. ಅಷ್ಟರಲ್ಲಿ ಅಮೆರಿಕ ಕಾಂಗ್ರೆಸ್ನ ಎಲ್ಲ ಸದಸ್ಯರು ಎದ್ದು ನಿಂತು ಚಪ್ಪಾಳೆ ತಟ್ಟಿದರು…