ನಮ್ಮನ್ನು ಕ್ಷಮಿಸಿಬಿಡೀ ಶಾಸ್ತ್ರೀಜೀ -ಮತ್ತೆ ಹುಟ್ಟಿ ಬನ್ನಿ ಭಾರತವನ್ನು ವಿಶ್ವಗುರುವನ್ನಾಗಿಸೋಕೆ

ಅದ್ಯಾಕೋ ಗೊತ್ತಿಲ್ಲ….

ತನ್ನ ಹೆಸರಿನ ಜೊತೆಗಿರೋ ಉಪನಾಮ ಇನ್ನುಳಿದವರೊಂದಿಗೆ ಬೆರೆಯಲು ಅಡ್ಡಗಾಲಾಗ್ತಿದೆ ಅನ್ನಿಸೋಕ್ ಶುರುವಾಗಿದ್ದೇ, ಹಠ ಮಾಡಿ ಜಾತಿ ಸೂಚಕವಾಗಿದ್ದ ಆ ಸರ್ ನೇಮನ್ನೇ ತೆಗೆಸಿಕೊಂಡಿದ್ದ ಆ ಬಾಲಕನಿಗೆ ಆಗಿನ್ನೂ ಕೇವಲ ಹನ್ನೆರಡು ವರ್ಷ ವಯಸ್ಸು ತುಂಬಿತ್ತಷ್ಟೇ ಅಂದ್ರೆ ನಂಬ್ತೀರಾ?

ನಂತರದಲ್ಲಿ ಕಾಶೀ ವಿದ್ಯಾಪೀಠದಿಂದ ಪದವಿ ಪಡೆದಾಗ ನೀಡುವ ಬಿರುದೇ ಕೊನೆಯವರೆಗೂ ಸರ್ ನೇಮಾಗಿ ಉಳಿದುಬಿಡ್ತು.

ಆ ಬಿರುದೇ “ಶಾಸ್ತ್ರಿ”.

ಮೂರು ವರ್ಷ ವಯಸ್ಸಾಗಿರಬಹುದು,

ಇಲ್ಲೇ ಕುಳಿತಿರು ಬೇಗ ಬರ್ತೀನಿ ಅಂತ ದಡದಲ್ಲಿ ಕೂರಿಸಿ ತಾಯಿ ರಾಮ್ ದುಲಾರಿ ದೇವಿ ಗಂಗಾ ಸ್ನಾನ ಮುಗಿಸಿ ಬಂದು ನೋಡಿದ್ರೆ ಮಗನೇ ಕಾಣುತ್ತಿಲ್ಲ. ಕೇಸ್ ದಾಖಲಿಸಿ ಊರೆಲ್ಲಾ ಹುಡುಕಾಡಿದ ನಂತರದಲ್ಲಿ ಒಲ್ಲದ ಮನಸ್ಸಿನಿಂದ ಮಗುವನ್ನು ಮರಳಿಸಿದ್ದ ದನಗಾಹಿಯೊಬ್ಬ. ಸಿಗಲೇಬೇಕಿತ್ತು ಬಿಡೀ ಯಾಕೆಂದರೆ ಹಣೆಬರಹದಲ್ಲೇ ಬರೆದುಕಳಿಸಿದ್ನಲ್ಲ ಆ ಬ್ರಹ್ಮ, ನೀನು ದನ ಕಾಯೋಕಲ್ಲ ದೇಶ ಕಾಯೋಕೆ ಹುಟ್ಟಿದವನು ಅಂತ.

ತೀರಾ ಸುಟ್ಟು ತಿನ್ನೋ ಬಡತನ, ಮನೆ ತುಂಬಾ ಮಕ್ಕಳು, ಶಾಲೆಗೆ ಹೋಗಬೇಕೆಂದರೆ ಉಕ್ಕಿ ಹರಿಯೋ ಗಂಗೆಯ ಇನ್ನೊಂದು ಬದಿಗೆ ದೋಣಿಯಲ್ಲಿ ಸಾಗಬೇಕು, ಹಣವೆಲ್ಲಿದೆ ಅಂಬಿಗನಿಗೆ ನೀಡೋಕೆ? ಹಾಗಂತ ಹೊಟ್ಟೆಯ ಹಸಿವನ್ನಾದ್ರೂ ಹಿಡಿದಿಟ್ಟುಕೊಳ್ಳಬಹುದು ಆದರೆ ಓದುವ ಹಸಿವನ್ನು ಅದುಮಿಟ್ಟುಕೊಳ್ಳೋಕ್ ಸಾಧ್ಯವೇ?

ಶಾಲೆ ಬ್ಯಾಗನ್ನು ತಲೆಗೆ ಕಟ್ಟಿಕೊಂಡು ಅಂತಹಾ ಮಹಾ ಸಾಗರದಂತಹ ಗಂಗಾನದಿಯನ್ನು ಈಜಿಯೇ ದಡ ಸೇರುತ್ತಿದ್ದ ದಿನಕ್ಕೆರಡು ಬಾರಿ ಬಾಲಕ ಬಹದ್ದೂರ್.

1921 ರಲ್ಲಿ ಅಸಹಕಾರ ಚಳುವಳಿ ಗರಿಗೆದರಿತ್ತು,

ಊಹೂಂ ಇನ್ನು ನೋಡುತ್ತಾ ಕೈ ಕಟ್ಟಿ ಕುಳಿತಿರಲು ಸಾಧ್ಯವಿಲ್ಲ ಎಂದವನೇ ಧುಮುಕಿಬಿಟ್ಟಿದ್ದ ಸ್ವಾತಂತ್ರ್ಯ ಸಂಗ್ರಾಮದ ಅಗ್ನಿ ಕುಂಡಕ್ಕೆ. ಆಗಿನ್ನೂ ಹದಿನಾರರ ಪ್ರಾಯದ ಯುವಕನಾತ. ಈತನ ಆರ್ಭಟ‌ ಅದ್ಯಾವ ಮಟ್ಟದಲ್ಲಿರುತ್ತಿತ್ತು ಅಂದ್ರೆ ತಡೆಯೋಕ್ ಬಂದ ಬ್ರಿಟಿಷರೇ ಒಂದು ಕ್ಷಣ ಬೆದರಿ ಹೋಗುತ್ತಿದ್ದರು. ಬಂಧಿಸಿ ನ್ಯಾಯಾಲಕ್ಕೆ ಕರೆದೊಯ್ದರೆ ಇನ್ನೂ ಹದಿನೇಳೆಂಬ ಕಾರಣಕ್ಕೆ ಬಿಡುಗಡೆಯಾಗಿತ್ತು. ಹಾಗಂತ ಇಂತದ್ದಕ್ಕೆಲ್ಲಾ ಹೆದರೋ ಜಾಯಮಾನವೇ ಆತನದ್ದಾಗಿರಲಿಲ್ಲ, ಮತ್ತೆ ಅಖಾಡಕ್ಕೆ ಇಳಿದವನು ಒಟ್ಟು ಒಂಬತ್ತು ವರ್ಷ ಜೈಲಲ್ಲಿದ್ದ ಯುವಕ ಬಹದ್ದೂರ್.

ಲೋಕ ಸೇವ ಸಮಿತಿಯ ಸದಸ್ಯನಾಗಿದ್ದ ಕಾರಣ ಜೈಲುವಾಸದಲ್ಲಿದ್ದ ಸದಸ್ಯರ ಮನೆಯವರಿಗೆ ಪೆನ್ಷನ್ ನೀಡಲಾಗ್ತಿತ್ತು. ಅದರಂತೆ ಬಹದ್ದೂರ್ ಪತ್ನಿ ಲಲಿತಾಳಿಗೂ ತಿಂಗಳಿಗೆ ಐವತ್ತು ರೂಪಾಯಿ ನನೀಡಲಾಗ್ತಿತ್ತು ಒಮ್ಮೆ ಹಾಗೋಹೀಗೋ ಅದರಲ್ಲಿಯೇ ಹತ್ತು ರೂಪಾಯಿ ಉಳಿಸಿದ ಲಲಿತೆ ಇನ್ನಿಲ್ಲದ ಸಂಭ್ರಮದಿಂದ ಗಂಡನಿಗೆ ಪತ್ರ ಬರೆದಿದ್ಲು, ಏನೂಂದ್ರೆ ಈ ತಿಂಗ್ಳು ನಾನು ಹತ್ತು ರೂಪಾಯಿ ಉಳಿಸಿದ್ದೀನಿ ಗೊತ್ತಾ….

ತಕ್ಷಣವೇ ಲೋಕಸೇವಾಸಮಿತಿಗೆ ಪತ್ರ ಬರೆದಿದ್ದ,

ನನ್ನ ಪತ್ನಿಯ ಖರ್ಚಿಗೆ ತಿಂಗಳಿಗೆ ನಲವತ್ತೇ ಸಾಕಾಗುತ್ತಂತೆ ಉಳಿದ ಹತ್ತು ರೂಪಾಯಿ ಇನ್ಯಾರೋ ಅಗತ್ಯ ಇರುವವರಿಗೆ ನೀಡಲು ಬಳಸಿಕೊಳ್ಳಿ. ಎಂತಹಾ ವ್ಯಕ್ತಿತ್ವ ರೀ ಅದು ಅಬ್ಬಾ.

ಈತನೋ ಅಪ್ಪಟ ವರದಕ್ಷಿಣಾ ವಿರೋದಿ,

ಮಾವನೋ ಸಂಪ್ರದಾಯವಾದಿ. ದಕ್ಷಿಣೆ ನೀಡದೆ ಕನ್ಯಾದಾನ ಮಾಡೋದೇ ಅಪರಾಧ ಎಂಬ ಮನಸ್ಥಿತಿ. ತನ್ನ ನಂಬಿಕೆಗಳಿಗೆ ಬಿಗಿಯಾಗಿ ನಿಲ್ಲುವಂತೆಯೂ ಇಲ್ಲ, ಹಾಗಂತ ವಿರುದ್ಧವಾಗಿ ಹೋದರೂ ಬದುಕಿದ್ದೂ ಸಸತ್ತಂತೆ ಕೊನೆಗೊಂದು ಉಪಾಯ ಮಾಡಿದವನು ವರದಕ್ಷಿಣೆಯಾಗಿ ಖಾದಿ ಬಟ್ಟೆ ಹಾಗೂ ಚರಕ ಪಡೆಯೋ ಮುಖಾಂತರ ಅಂತಹ ಸಂದಿಗ್ಧ ಪರಿಸ್ಥಿತಿಯನ್ನೂ ಸರಾಗವಾಗಿ ಸಂಬಾಳಿಸಿದ್ದ ಚಾಣಾಕ್ಷ.

ಸ್ವಾತಂತ್ರ್ಯಾನಂತರದ ಮೊದಲ ಮಂತ್ರಿಮಂಡಲ.

ಪೊಲೀಸ್ ಇಲಾಖೆಯ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ತಕ್ಷಣವೇ ಮಾಡಿದ್ದ ಮೊದಲ ಕೆಲಸವಾದ್ರೂ ಏನ್ ಗೊತ್ತಾ?

ಇನ್ಮುಂದೆ ಪ್ರತಿಭಟನಾಕಾರರ ಮೇಲೆ ಲಾಠೀಚಾರ್ಜ್ ಮಾಡುವಂತಿಲ್ಲ ಅನಿವಾರ್ಯವಾದಲ್ಲಿ ಗುಂಪು ಚದುರಿಸೋಕೆ ಜೆಟ್ ವಾಟರ್ ಸ್ಪ್ರೇ ಬಳಸಿ ಅವರೂ ಮನುಷ್ಯರು ಕಾಡುಮೃಗಗಳಲ್ಲ ಅನ್ನುವ ಆದೇಶ ಮಾಡುವ ಮುಖಾಂತರ ವಾಟರ್ ಸ್ಪ್ರೇ ಜೆಟ್ ಬಳಕೆಗೆ ಮುನ್ನುಡಿ ಬರೆದಿದ್ದರು ಬಹದ್ದೂರ್.

ಸಾರಿಗೆ ಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆಯೇ ದೇಶದ ಸಾರಿಗೆ ಸಂಪರ್ಕ ಇಲಾಖೆಯಲ್ಲಿ ಪುರುಷರ ಜೊತೆ ಜೊತೆಗೆ ಮಹಿಳೆಯರಿಗೂ ಕಂಡಕ್ಟರ್ ಹುದ್ದೆಗೆ ಅವಕಾಶ ಕಲ್ಪಿಸೋ ಆದೇಶ ಹೊರಡಿಸೋ ಮುಖಾಂತರ ಸಮಾನತೆಯ ಶಬ್ಧಕ್ಕೊಂದು ನಿಜವಾದ ಅರ್ಥ ನೀಡಿದ್ದೂ ಇದೇ ಬಹದ್ದೂರ್.

ಯಾರ್ಯಾರೋ ಹೇಳಿಕೊಳ್ಳಬಹುದು

ಭ್ರಷ್ಟಾಚಾರ ನಿಗ್ರಹಕ್ಕೆ ಸಮಿತಿಗಳನ್ನು ಮೊದಲು ಆಚರಣೆಗೆ ತಂದದ್ದೇ ನಾವು ಎಂದೆಲ್ಲಾ, ಆದರೆ ನೆನಪಿರಲಿ. ದೇಶದಲ್ಲಿ ಮೊದಲ ಬ್ರಷ್ಟಾಚಾರ ನಿಗ್ರಹ ದಳದ ರಚನೆ ಮಾಡಿದ್ದು ಬೇರೆಯಾರೂ ಅಲ್ಲ ಅದು ನಮ್ಮ ಬಹದ್ದೂರ್. ದೇಶದ ಅತ್ಯುನ್ನತ ತನಿಖಾ ಸಂಸ್ಥೆ CBI ಕೂಡಾ ಲಾಲ್ ಬಹದ್ದೂರ್ ಶಾಸ್ತ್ರಿಯ ಕನಸಿನ ಕೂಸು.

ದೇಶದಲ್ಲಿ ಕಂಡು ಕೇಳರಿಯದ ಭೀಕರ ಬರಗಾಲ, ಆಹಾರದ ಕೊರತೆ, ವಿದೇಶದಿಂದ ಎಗ್ಗಿಲ್ಲದ ಆಮದಿನ ಪರಿಣಾಮ ವಿತ್ತೀಯ ಕೊರತೆ…ಏನು ಮಾಡೋದು? ಪ್ರತಿಯೊಬ್ಬರೂ ವಾರದಲ್ಲೊಂದು ದಿನ ಊಟ ಬಿಟ್ಟರೂ ಎಷ್ಟು ಉಳಿಸಬಹುದೆಂಬ ಸ್ಪಷ್ಟ ಲೆಕ್ಕಾಚಾರದಡಿಯಲ್ಲಿ ತಾನೇ ಒಪ್ಪೊತ್ತಿನ ಉಪವಾಸ ಕೈಗೊಳ್ಳೋ ಮುಖಾಂತರ ಜನತೆಗೆ ಒಂದು ಕರೆಕೊಟ್ಟಿದ್ದಷ್ಟೇ. ಇಡೀ ದೇಶವೇ ವಾರದಲ್ಲೊಂದು ದಿನದ ಉಪವಾಸಕ್ಕೆ ಸಿದ್ಧವಾಗಿತ್ತಲ್ಲ. ಶಾಸ್ತ್ರಿ ಸೋಮವಾರವೆಂದೇ ಶುರುವಾಗಿ ಇಂದಿಗೂ ದೇಶದೆಲ್ಲೆಡೆ ಚಾಲ್ತಿಯಲ್ಲಿರೋ ಸೋಮವಾರದ ಉಪವಾಸ ಅಲ್ಲಿಂದಲೇ ಶುರುವಾಗಿದ್ದು.

ದೇಶ ಕಂಡ ಮಹಾನ್ ರಾಜಕಾರಣಿ ನೆಹರೂ ತನ್ನದೇ ಮೂರ್ಖ ನಿರ್ಧಾರಗಳಿಂದಾಗಿ 1962ರಲ್ಲಿ ಚೀನಾದೊಂದಿಗಿನ ಯುದ್ಧದಲ್ಲಿ ಹೀನಾಯವಾಗಿ ಸೋಲೋ ಮುಖಾಂತರ ಇಡೀ ದೇಶದ ಜೊತೆಗೇ ಭಾರತೀಯ ಸೈನ್ಯದ ಆತ್ಮಸ್ಥೈರ್ಯವನ್ನೇ ಮಣ್ಣುಪಾಲು ಮಾಡಿದ್ದನಲ್ಲ. ಅಂತಹ ನೆಹರೂ ಕೈಲೇ ಏನೂ ಆಗಲಿಲ್ಲ ಇವನ್ಯಾವ ಸೀಮೆಯ ತೊಪ್ಪಲು ಅನ್ನುವ ಮನಸ್ಥಿತಿಯಲ್ಲಿ ಈಗಿದ್ದ ಪ್ರಧಾನಿಯನ್ನು ನೋಡಿ ಕೌನ್ ರೇ ಇನೇ ತೀನ್ ಫೀಟ್ ಕಾ ಕಡ್ಡೀ ಪೈಲ್ವಾನ್… ನೆಹರೂದೇ ಪುಂಗಿ ಬಂದ್ ಮಾಡಿರೋ ನಮ್ಗೆ ಯೇ ಕ್ಯಾ ಉಖಾಡ್ಲೇಗಾ ಎಂಬ ದುರಹಂಕಾರದಲ್ಲಿ ಗಡಿಯೊಳಗೆ ನುಗ್ಗಿದ್ದ ಪಾಕಿಸ್ತಾನೀ ಸೇನೆಯನ್ನು ಹುಚ್ಚು ನಾಯಿಯೊಂದನ್ನು ಓಡಿಸುವಂತೆ ಲಾಹೋರಿನ ವರೆಗೂ ಅಟ್ಟಾಡಿಸಿಕೊಂಡು ಹೋಗಿ ಹೆಡೆಮುರಿಕಟ್ಟೋ ಮೂಲಕ ಪಾತಾಳಕ್ಕಿಳಿದ್ದಿದ್ದ ದೇಶದ ಹಾಗೂ ಭಾರತೀಯ ಸೇನೆಯ ಆತ್ಮಸ್ಥೆರ್ಯವನ್ನು ಮರಳಿ ಜೀವಂತವಾಗಿಸಿದ್ದೇ ಈ ವಾಮನಮೂರ್ತಿ ಬಹದ್ದೂರ್.

1956ರಲ್ಲಿ ರೈಲ್ವೇ ಮಂತ್ರಿಯಾಗಿದ್ದ ಸಂದರ್ಭದಲ್ಲಿ ತಮಿಳ್ನಾಡಿನಲ್ಲಾದ ಭೀಕರ ರೈಲ್ವೇ ಅಪಘಾತದಲ್ಲಿ ನೂರೈವತ್ತು ಜನ ಮರಣ ಹೊಂದುತ್ತಿದ್ದಂತೆಯೇ ಅದರ ನೈತಿಕ ಜವಬ್ದಾರಿಯನ್ನು ಹೊತ್ತು ತನ್ನ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡೋ ಮುಖಾಂತರ ದೇಶದ ರಾಜಕಾರಣದಲ್ಲಿ ಮೈಲಿಗಲ್ಲಾಗುವಂತಹ ಹೊಸ ಭಾಷ್ಯ ಬರೆದಿದ್ದು ಇದೇ ಬಹದ್ದೂರ್.

ಎಂಪ್ಲಾಯ್‌ಮೆಂಟ್ ಆಫೀಸಿನೆದುರು ಕೆಲಸಕ್ಕಾಗಿ ಅರ್ಜಿ ಸಲ್ಲಿಸಲು ಬಂದಿದ್ದ ಯುವಕನಿಗೆ, ಯಾಕಪ್ಪಾ ಅಪ್ಪನ ಹೆಸರು ಹಾಗೂ ಉದ್ಯೋಗದ ಕಾಲಂ ಖಾಲಿ ಬಿಟ್ಟಿದ್ದೀಯಲ್ಲ ಯಾರು ನಿನ್ನ ಅಪ್ಪ ಎಂದು ಪ್ರಶ್ನಿಸಿದ ಕಚೇರಿಯವರಿಗೆ ಅಂಜುತ್ತಾ ಪಿಸುದನಿಯಲ್ಲಿ ಹೇಳಿದ್ದ.

ನನ್ನಪ್ಪ ಲಾಲ್ ಬಹದ್ದೂರ್ ಶಾಸ್ತ್ರಿ ಉದ್ಯೋಗ ದೇಶದ ಪ್ರಧಾನಿ.

ಯಾಕೆಂದರೆ ಮೊದಲೇ ತಂದೆಯಿಂದ ಆಜ್ಞೆಯಾಗಿತ್ತಲ್ಲ, ನನ್ನ ಹೆಸರು ಹಾಗೂ ಪದವಿಯನ್ನು ಮನೆಯಲ್ಲಿನ ಯಾರೂ ತಮ್ಮ ಸ್ವ ಹಿತಾಸಕ್ತಿಗಳಿಗೆ ಬಳಸಿಕೊಳ್ಳುವಂತಿಲ್ಲ ಎಂದು.

ಅಷ್ಟೇ ಅಲ್ಲ ನಂತರದಲ್ಲಿ ನಿಯಮ ಮೀರಿ ತನ್ನ ಮಗನೆಂಬ ಕಾರಣಕ್ಕೆ ಉದ್ಯೋಗದಲ್ಲಿ ಮಗನಿಗೆ ನೀಡಲಾಗಿದ್ದ ಪ್ರಮೋಷನ್ ಆದೇಶವನ್ನೇ ರದ್ದು ಗೊಳಿಸಿದ್ದ ಮಹಾನ್ ವ್ಯಕ್ತಿತ್ವ ನಮ್ ಬಹದ್ದೂರ್.

ಆಳಿದ್ದು ಎರಡೇ ವರ್ಷ.

ಅಷ್ಟರಲ್ಲೇ ಅಮೆರಿಕಾಗೆ ಸಡ್ಡು ಹೊಡೆದಿದ್ದ, ಚೀನಾಗೆ ಚಳಿ ಬಿಡಿಸಿದ್ದ, ಪಾಕಿಸ್ತಾನಕ್ಕಂತೂ ಚಡ್ಡಿಯಲ್ಲಿಯೇ ಮೂತ್ರ ಮಾಡಿಸಿದ್ದ. ಇನ್ನೇನು ಮೊದಲ ಅಣುಬಾಂಬ್ ಪರೀಕ್ಷೆಗೂ ರೂಪುರೇಷೆ ಸಿದ್ಧವಾಗಿತ್ತು. ಅಂದುಕೊಂಡಂತೆಯೇ ಎಲ್ಲವೂ ಆಗಿದ್ದಿದ್ದರೆ ವರ್ಷ ಕಳೆಯುವಷ್ಟರಲ್ಲಿ ಭಾರತವನ್ನು ಜಗತ್ತಿನ ಮಹಾಶಕ್ತಿಗಳ ಸಾಲಿನ ಮೊದಲ ಪಂಕ್ತಿಯಲ್ಲಿಯೇ ನಿಲ್ಲಿಸಿ ಬಿಟ್ಟಿರುತ್ತಿದ್ದನೇನೋ ಲಾಲ್ ಬಹದ್ದೂರ್ ಶಾಸ್ತ್ರಿ.

ವಿದೇಶೀ ಶಕ್ತಿಗಳ ಶಡ್ಯಂತ್ರ ಹಾಗೂ ನಮ್ಮವೇ ಕೆಲವು ಮೀರ್ ಸಾಧಕರ ಕುತಂತ್ರಗಳ ಫಲವಾಗಿ ತಾಷ್ಕೆಂಡ್ ಒಪ್ಪಂದಕ್ಕೆ ಸಹಿ ಹಾಕಿ ಊಟ ಮಾಡಿ ಮಲಗಿದ್ದಷ್ಟೇ… ಮತ್ತೆ ಏಳಲೇ ಇಲ್ಲ. ವಿಪರ್ಯಾಸವೆಂದರೆ ಜಗತ್ತಿನ ಇತಿಹಾಸದಲ್ಲಿಯೇ ಒಂದು ದೇಶದ ಪ್ರಧಾನಿಯಂತಹ ಉನ್ನತ ಸ್ಥಾನದಲ್ಲಿದ್ದ ವ್ಯಕ್ತಿಯೊಬ್ಬನ ಸಾವು ಸಂಭವಿಸಿದಾಗಲೂ ಪೋಸ್ಟ್ ಮಾರ್ಟಮ್ ಕೂಡಾ ಮಾಡದೆ ತರಾತುರಿಯಲ್ಲಿ ಅಂತಿಮ ಸಂಸ್ಕಾರವೂ ಮಾಡಿ ಮುಗಿಸಿದ್ದು ಅಲ್ಲದ ಅದರ ಕುರಿತಾಗಿ ಸಣ್ಣದೊಂದು ತನಿಖೆಯೂ ಇಲ್ಲದಂತೆ ಕೇಸ್ ಖಲ್ಲಾಸ್ ಮಾಡಿದ್ದು ಇದೊಂದೇ ಪ್ರಕರಣವಿರಬೇಕು.

ಹೀಗೆ ಮುಕ್ತಾಯವಾಗಿತ್ತು ಒಂದು ಮಹಾನ್ ಚೇತನವೊಂದರ ಯಶೋಗಾಥೆಯ ದುರಂತ ಅಂತ್ಯ.

ಹೇಳೋಕೇ ಅಸಹ್ಯವಾಗುತ್ತೆ.

1965 ರಲ್ಲಿ ಫಿಯಟ್ ಕಾರೊಂದರ ಖರೀದಿಗಾಗಿ PNBಯಿಂದ ₹5000 ಸಾಲ ಪಡೆದಿದ್ದ ಶಾಸ್ತ್ರೀಜಿ ಆ ಸಾಲವನ್ನು ತೀರಿಸೋ ಮೊದಲೇ ತೀರಿಕೊಂಡುಬಿಟ್ಟಿದ್ದರು. ಆ ಸಾಲ ಮರುಪಾವತಿಸುವಂತೆ ಅದೆಷ್ಟು ಪತ್ರಗಳನ್ನು ಬರೆಯೋ ಮುಖಾಂತರ ಪತ್ನಿ ಲಲಿತಾ ಶಾಸ್ತ್ರಿಗೆ ಇನ್ನಿಲ್ಲದಂತೆ ಟಾರ್ಚರ್ ಕೊಡ್ತು ಅಂದ್ರೆ, ಆಕೆ ಅದೆಷ್ಟೇ ಮನವಿ ಮಾಡಿದರೂ ಸರ್ಕಾರ ಸ್ಪಂದಿಸದೇ ಇದ್ದಾಗ ಕೊನೆಗೆ ತನಗೆ ಬರುತ್ತಿದ್ದ ಪೆನ್ಷನ್ ಹಣದಲ್ಲೆ EMI ಮುಖಾಂತರ ಲೋನ್ ಕ್ಲಿಯರ್ ಮಾಡಬೇಕಾಯ್ತು.

ಅಂದಹಾಗೆ ಆಗ ದೇಶದಲ್ಲಿ ಇದ್ದದ್ದು ಐರನ್ ಲೇಡಿ ಇಂದಿರಾಗಾಂಧಿಯ ಸರ್ಕಾರ.

ಸತ್ತ ಮೇಲಾದ್ರೂ ಆ ಆತ್ಮಕ್ಕೆ ನೆಮ್ಮದಿಯಾಗಿರಲು ಬಿಟ್ಟಿದ್ರು ಅಂದ್ಕೊಂಡ್ರಾ ನಮ್ಮವರು…..ಛೇ.

ಸತ್ತು ಸಮಾಧಿಯಾದಂತಿದ್ದ ಭಾರತಮಾತೆಯನ್ನು ಮತ್ತೆ ಜೀವಂತವಾಗಿಸಿದ್ದೂ ಅಲ್ಲದೆ, ಮರಳಿ ಜಗತ್ತಿನ ಭೂಪಟದಲ್ಲಿ ತಲೆಯೆತ್ತಿ ನಿಲ್ಲುವಂತೆ ಮಾಡಿಯೂ ಪ್ರಭಾವಿ ವ್ಯಕ್ತಿಗಳ ಛಾಯೆಯ ಎದುರು ಮರೆಯಲ್ಲಿಯೇ ಉಳಿದುಹೋಗಿರುವ ಮೂರಡಿಯ ಮಹಾ ದೈತ್ಯ ವ್ಯಕ್ತಿತ್ವವೊಂದರ ಜನ್ಮದಿನವಿಂದು.

ನಮ್ಮನ್ನು ಕ್ಷಮಿಸಿಬಿಡೀ…

ಮತ್ತೆ ಹುಟ್ಟಿ ಬನ್ನಿ ಭಾರತವನ್ನು ವಿಶ್ವಗುರುವನ್ನಾಗಿಸೋಕೆ.

ಹುಟ್ಟು ಹಬ್ಬದ ಹಾರ್ದಿಕ

ಶುಭಾಶಯಗಳು

ಶಾಸ್ತ್ರೀಜೀ.

 

ಸುಧೀರ್‌ಸಾಗರ್

 

ಗಾಂಧಿ ಜಯಂತಿ ದಿನ ಮಹಾತ್ಮನ ಬಗ್ಗೆ ನಿಮಗೆ ತಿಳಿಯದಿರುವ ಮಾಹಿತಿ-

 

Leave a Reply

Your email address will not be published. Required fields are marked *