Crime – ಬೆಚ್ಚಿಬಿದ್ದ ವಿಜಯಪುರ ಆಸ್ತಿ ವಿವಾದಕ್ಕೆ ರಕ್ತದ ಮಳೆ: ಒಂದೇ ಕುಟುಂಬದ 6 ಜನರ ಬರ್ಬರ ಹತ್ಯೆ

ವಿಜಯಪುರ, ಮೇ 31: ಆಸ್ತಿ ವಿವಾದವೊಂದು ಭೀಕರ ಹತ್ಯಾಕಾಂಡಕ್ಕೆ ತಿರುಗಿದ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದ್ದು, ಒಂದೇ ಕುಟುಂಬದ ಆರು ಜನರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಈ ಘಟನೆ ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ನಡೆದಿದ್ದು, ಜಿಲ್ಲೆಯ ಜನತೆಯನ್ನು ಬೆಚ್ಚಿಬೀಳಿಸಿದೆ.

ಮಾಹಿತಿಯ ಪ್ರಕಾರ, ಚಡಚಣ ಪಟ್ಟಣದ ನಿರಾಳೆ ಕುಟುಂಬಕ್ಕೆ ಸೇರಿದ ದುಂಡಪ್ಪ ನಿರಾಳೆ (65), ಶಿವಪುತ್ರ ನಿರಾಳೆ (58), ಚಂದ್ರಕಾಂತ ನಿರಾಳೆ (55), ರಾಹುಲ್ ನಿರಾಳೆ (25), ಸಮರ್ಥ ನಿರಾಳೆ (23) ಹಾಗೂ ಶಬ್ಭೀರ್ ಅತ್ತಾರ (45) ಹತ್ಯೆಗೀಡಾಗಿದ್ದಾರೆ. ಘಟನೆಯಲ್ಲಿ ಅರವಿಂದ ಕಟಗಿ ಹಾಗೂ ಸಂದೀಪ ಮಾನೆ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

25 ಎಕರೆ ಜಮೀನು ವಿವಾದವೇ ಕಾರಣ?

ಗೋವಿಂದಪುರ ಗ್ರಾಮದ ಸಮೀಪದ ಸುಮಾರು 25 ಎಕರೆ ಜಮೀನನ್ನು ನಿರಾಳೆ ಕುಟುಂಬ ಕೆಲ ತಿಂಗಳ ಹಿಂದೆ ಖರೀದಿಸಿತ್ತು. ಈ ಜಮೀನಿನ ವಿಚಾರವಾಗಿ ಹಳೆಯ ವೈಷಮ್ಯ ಹಾಗೂ ವಿವಾದ ಮುಂದುವರಿದಿತ್ತು ಎನ್ನಲಾಗಿದೆ. ಜಮೀನಿನಲ್ಲಿ ಕೃಷಿ ಚಟುವಟಿಕೆ ಆರಂಭಿಸಲು ನಿರಾಳೆ ಕುಟುಂಬದವರು ಜೆಸಿಬಿ ಹಾಗೂ ಟ್ರ್ಯಾಕ್ಟರ್ ಮೂಲಕ ಸ್ವಚ್ಛತಾ ಕಾರ್ಯ ಕೈಗೊಂಡಿದ್ದ ವೇಳೆ ಈ ದಾಳಿ ನಡೆದಿದೆ.

ಖಾರದ ಪುಡಿ ಎರಚಿ ಮಾರಣಾಂತಿಕ ದಾಳಿ

ಸುಮಾರು 15 ರಿಂದ 20 ಜನರ ಗುಂಪು ಏಕಾಏಕಿ ಹೊಲಕ್ಕೆ ನುಗ್ಗಿ, ಮೊದಲು ಕಣ್ಣಿಗೆ ಖಾರದ ಪುಡಿ ಎರಚಿದೆ. ಬಳಿಕ ಮಾರಕಾಸ್ತ್ರಗಳಿಂದ ಮನಬಂದಂತೆ ಹಲ್ಲೆ ನಡೆಸಿ ಆರು ಮಂದಿಯನ್ನು ಸ್ಥಳದಲ್ಲೇ ಹತ್ಯೆ ಮಾಡಿದೆ ಎಂದು ತಿಳಿದುಬಂದಿದೆ. ಘಟನೆಯಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಹಳೆಯ ದ್ವೇಷದ ಹಿನ್ನೆಲೆ?

ಸ್ಥಳೀಯ ಮೂಲಗಳ ಪ್ರಕಾರ, ಹಲವು ವರ್ಷಗಳ ಹಿಂದಿನ ಕೊಲೆ ಪ್ರಕರಣವೊಂದರ ಹಿನ್ನೆಲೆಯಲ್ಲಿ ಎರಡು ಕುಟುಂಬಗಳ ನಡುವೆ ವೈಷಮ್ಯ ಮುಂದುವರಿದಿತ್ತು. ಇದೇ ದ್ವೇಷ ಈ ಹತ್ಯಾಕಾಂಡಕ್ಕೆ ಕಾರಣವಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಆದರೆ ನಿಖರ ಕಾರಣ ತನಿಖೆಯ ಬಳಿಕವೇ ತಿಳಿಯಬೇಕಿದೆ.

ಆರೋಪಿಗಳಿಗಾಗಿ ಶೋಧ

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

ಈ ಭೀಕರ ಹತ್ಯಾಕಾಂಡ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು, ಕಾನೂನು ಸುವ್ಯವಸ್ಥೆ ಕುರಿತು ಮತ್ತೆ ಪ್ರಶ್ನೆಗಳು ಮೂಡಿವೆ. ತನಿಖೆ ಮುಂದುವರಿದಿದೆ.

Leave a Reply

Your email address will not be published. Required fields are marked *