Amazon piracy -ರವಿ ಬೆಳಗೆರೆ ಪುಸ್ತಕ ಪೈರಸಿ ಪ್ರಕರಣ: ಅಮೆಜಾನ್‌ಗೆ ಹೈಕೋರ್ಟ್ ರಿಲೀಫ್

ಬೆಂಗಳೂರು: ಹಿರಿಯ ಪತ್ರಕರ್ತ ಹಾಗೂ ಲೇಖಕ ದಿವಂಗತ ರವಿ ಬೆಳಗೆರೆ ಅವರ ಪುಸ್ತಕದ ಪೈರಸಿ ಪ್ರತಿಗಳ ಮಾರಾಟ ಪ್ರಕರಣದಲ್ಲಿ ಅಮೆಜಾನ್ ಸೆಲ್ಲರ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್‌ಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ರಿಲೀಫ್ ನೀಡಿದೆ. ಅಮೆಜಾನ್ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕ್ರಿಯೆಗೆ ನ್ಯಾಯಾಲಯ ತಾತ್ಕಾಲಿಕ ತಡೆ ನೀಡಿದೆ.

‘ಹೇಳಿ ಹೋಗು ಕಾರಣ’ ಪುಸ್ತಕದ ನಕಲಿ ಪ್ರತಿಗಳನ್ನು ಆನ್‌ಲೈನ್ ಮೂಲಕ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪದ ಮೇರೆಗೆ ಭಾವನಾ ಬೆಳಗೆರೆ ಅವರು ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣದಲ್ಲಿ ಅಮೆಜಾನ್, ಫ್ಲಿಪ್‌ಕಾರ್ಟ್, ಮೀಶೋ ಸೇರಿದಂತೆ ವಿವಿಧ ಇ-ಕಾಮರ್ಸ್ ವೇದಿಕೆಗಳ ವಿರುದ್ಧ ಕಾಪಿರೈಟ್ ಉಲ್ಲಂಘನೆ ಆರೋಪ ಕೇಳಿಬಂದಿತ್ತು.

ಪ್ರಕಾಶಕರ ಅನುಮತಿಯಿಲ್ಲದೆ ಕಡಿಮೆ ಬೆಲೆಗೆ ಪುಸ್ತಕ ಮಾರಾಟ ಮಾಡಲಾಗುತ್ತಿದ್ದು, ಇದರಿಂದ ಆರ್ಥಿಕ ನಷ್ಟ ಉಂಟಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.

ಈ ಹಿನ್ನೆಲೆ ಅಮೆಜಾನ್ ಹೈಕೋರ್ಟ್ ಮೊರೆ ಹೋಗಿದ್ದು, ತಾವು ಕೇವಲ ಮಧ್ಯವರ್ತಿ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ನೇರ ಮಾರಾಟದಲ್ಲಿ ಭಾಗಿಯಾಗಿಲ್ಲ ಎಂದು ವಾದ ಮಂಡಿಸಿತು. ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 79ರ ಅಡಿಯಲ್ಲಿ ಮಧ್ಯವರ್ತಿಗಳಿಗೆ ಕಾನೂನು ರಕ್ಷಣೆ ಇದೆ ಎಂಬ ಅಂಶವನ್ನೂ ನ್ಯಾಯಾಲಯದ ಮುಂದೆ ಪ್ರಸ್ತಾಪಿಸಲಾಯಿತು.

ಪ್ರಕರಣದ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ಅಮೆಜಾನ್ ವಿರುದ್ಧದ ಮುಂದಿನ ಕ್ರಿಮಿನಲ್ ಕ್ರಮಗಳಿಗೆ ಮಧ್ಯಂತರ ತಡೆ ನೀಡಿದ್ದು, ಸರ್ಕಾರ ಹಾಗೂ ದೂರುದಾರರಿಗೆ ನೋಟಿಸ್ ಜಾರಿಗೊಳಿಸಿದೆ.

Leave a Reply

Your email address will not be published. Required fields are marked *