ಆನೆ ನಡೆದದ್ದೇ ದಾರಿ” ಅಂತಾರೆ. ಆದರೆ ಆನೆ ಮುಖದ ಗಣಪ ಮಾತ್ರ ಸರಕಾರ ಹೇಳ್ದಂಗೆ ನಡೀಬೇಕು….

ಭಾರತ ಸ್ವಾತಂತ್ರ್ಯ ಸಂಗ್ರಾಮಕ್ಕೆ ಪೂರಕವಾಗಿ ಜನರನ್ನು ಸಂಘಟಿಸುವ ಉದ್ದೇಶದಿಂದ ಲೋಕಮಾನ್ಯ ಬಾಲಗಂಗಾಧರ ತಿಲಕರು 1893ರಲ್ಲಿ ಮೊದಲ ಬಾರಿಗೆ ಸಾರ್ವಜನಿಕ ಗಣೇಶೋತ್ಸವವನ್ನು ಪ್ರಾರಂಭಿಸಿದರು. ಗಣೇಶನ ಉತ್ಸವದ ಉದ್ದೇಶ ಜನಲ್ಲಿ ಒಗ್ಗಟ್ಟು ಸೃಷ್ಟಿಮಾಡಿ ಸ್ವಾತಂತ್ರ್ಯ ಹೋರಾಟವನ್ನು ತೀವ್ರಗೊಳಿಸುವುದಾಗಿತ್ತು.

ಲಕ್ಷಾಂತರ ಭಾರತೀಯರ ಕಂಗಳಲ್ಲಿ ಸ್ವಾತಂತ್ರ್ಯದ ಕನಸಿತ್ತು. ಸಾವಿರಾರು ದೇಶಭಕ್ತರ ಅಂತರಂಗದ ಸ್ವಾತಂತ್ರ್ಯದ ತುಡಿತಕ್ಕೆ ಗಣೇಶೋತ್ಸವ ಒಂದು ಅಭಿವ್ಯಕ್ತ ವೇದಿಕೆಯಾಗಿತ್ತು. ಆ ಕಾಲದಲ್ಲಿ ಟಿವಿ, ಟೆಲಿಕಾಂ, ಇಂಟರ್ನೆಟ್ ಸೌಲಭ್ಯ, ಪತ್ರಿಕಾ ಸ್ವಾತಂತ್ರ್ಯ ಯಾವುದೂ ಇರಲಿಲ್ಲ. ದೇಶದ ಜನರನ್ನು ಒಂದುಗುಡಿಸುವುದು ಒಂದು ದೊಡ್ಡ ಸವಾಲಾಗಿತ್ತು ಆ ಸವಾಲಿಗೆ ಉತ್ತರವಾಗಿ ಗಣೇಶನ ಉತ್ಸವ ನಿಂತಿತ್ತು. ಜನ ಗಣೇಶೋತ್ಸವ ವೇದಿಕೆಗಳಿಂದ ಹೊರಹೊಮ್ಮಿದ ವಿಚಾರಧಾರೆಗಳು, ಕ್ರಾಂತಿಯ ಭಾಷಣಗಳು ಲಕ್ಷಾಂತರ ಭಾರತೀಯ ಯುವ ಮನಸ್ಸುಗಳಲ್ಲಿ ಗುಪ್ತಗಾಮಿನಿಯಾಗಿದ್ದ ಸ್ವಾತಂತ್ರ್ಯದ ಕೆಚ್ಚನ್ನು ಉದ್ದೀಪನಗೊಳಿಸಿ ಬಡಿದೆಬ್ಬಿಸಿತ್ತು.

ಪೂನಾದಲ್ಲಿ ಮೊದಲ ಗಣೇಶೋತ್ಸವ ಏರ್ಪಡಿಸಿದ್ದ ತಿಲಕರು ತಮ್ಮ ಪತ್ರಿಕೆ “ಕೇಸರಿ’ ಮತ್ತು ತಮ್ಮ ಪ್ರಭಾವಶಾಲಿ ಭಾಷಣಗಳ ಮೂಲಕ ಗಣೇಶೋತ್ಸವವನ್ನು ಮಹಾರಾಷ್ಟ್ರದಾದ್ಯಂತ ಜನಪ್ರಿಯಗೊಳಿಸಿದ್ದರು. ಈ ವೇದಿಕೆಗಳು ಕೇವಲ ಭಾಷಣಕ್ಕಷ್ಟೇ ಸೀಮಿತವಾಗದೆ ಮಲ್ಲಕಂಭ, ಕುಸ್ತಿ ಮೊದಲಾದ ದೇಸೀ ಕ್ರೀಡೆಗಳಿಗೆ, ದೇಶಭಕ್ತಿ ಗೀತೆ, ಜಯ ಘೋಷಣೆಗೂ ನಾಂದಿಯಾಗಿತ್ತು. ಗಣಪತಿ ಬಪ್ಪ ಮೊರಯಾ ಘೋಷಣೆಯೊಂದಿಗೇ ” ಸ್ವಾತಂತ್ರ್ಯ ಲಕ್ಷ್ಮೀ ಕೀ ಜೈ’ ಘೋಷಣೆಯೂ ಲಕ್ಷಾಂತರ ಜನರ ನಾಡಿ ಮಿಡಿತಕ್ಕೆ ಸಾಕ್ಷಿಯಾಗಿ ರೋಮಾಂಚನಗೊಳಿಸಿತ್ತು. ಈ ಉತ್ಸವ ನಂತರದ ದಿನಗಳಲ್ಲಿ ದೇಶಾದ್ಯಂತ ಹರಡಿತು. ಅಲ್ಲಲ್ಲಿ ಜನರು ಗಣೇಶನ ಮಣ್ಣಿನ ಮೂರ್ತಿ ಇಟ್ಟು ಪೂಜಿಸತೊಡಗಿದರು. ಗಣೇಶನ ಉತ್ಸವದಿಂದಾಗಿ ಸ್ವಾತಂತ್ರ್ಯ ಹೋರಾಟಕ್ಕೆ ಒಂದು ಸ್ಪಷ್ಟವಾದ ದಿಕ್ಕು ಪ್ರಾಪ್ತಿಯಾಯಿತು. ಇಲ್ಲಿ ಜನ ಜಾತಿ ಧರ್ಮ ಯಾವುದೇ ಭೇದಭಾವ ಇಲ್ಲದೆ ಭಾಗವಹಿಸುತ್ತಿದ್ದರು.

ಆದರೆ ಇಂದು ಇದೆ ಉತ್ಸವ ಆಚರಿಸಲು ಸಂಘಟಕರಿಗೆ ನೂರೆಂಟು ವಿಘ್ನ. ಹಲವಾರು ವರ್ಷಗಳಿಂದ ನಡೆಯುತ್ತಾ ಬರುತ್ತಿದ್ದ ಉತ್ಸವಕ್ಕೆ ಕೆಲವು ಕಡೆಗಳಲ್ಲಿ ಅನ್ಯಧರ್ಮಿಯರಿಂದ ವಿರೋಧ. ಇನ್ನೂ ಕೆಲವು ಕಡೆ ಸರ್ಕಾರದಿಂದ ಕ್ರಮ. ಮೆರವಣಿಗೆ ಎಲ್ಲಿಂದ ಹೇಗೆ ಹೋಗಬೇಕು ಅನ್ನೋದು ಕೂಡ ಈಗ ಒಂದು ಸೂಕ್ಷ್ಮ ವಿಚಾರ!! ಒಂದು ಉತ್ಸವ ನಡೆಸಲು ಸರ್ಕಾರದಿಂದ ನೂರೆಂಟು ಅನುಮತಿಬೇಕು. ಅಂದು ಗಣೇಶನ ಉತ್ಸವ ಯಾವ ಉದ್ದೇಶಕ್ಕಾಗಿ ಆರಂಭವಾಯಿತೋ ಇಂದು ಎಲ್ಲರೂ ಅದನ್ನು ಮರೆತೇಬಿಟ್ಟಹಾಗಿದೆ.

ಸರ್ಕಾರ ಹಾಗೂ ಜನರು ಗಣೇಶ ಚತುರ್ಥಿ ಬರೀ ಹಬ್ಬವಲ್ಲ! ಸ್ವರಾಜ್ಯದ ಕಲ್ಪನೆ ಜನರಲ್ಲಿ ಮೂಡಿಸಿ ಜನರನ್ನು ಸಂಘಟಿಸಿ ಸ್ವಾತಂತ್ರ್ಯ ಪ್ರಾಪ್ತಿಗೆ ನಾಂದಿ ಹಾಡಿದ ಮಹಾನ್ ಉತ್ಸವ ಅನ್ನೋದನ್ನು ಯಾರೂ ಮರೆಯಲೇಬಾರದು. ವಿಶೇಷವಾಗಿ ಸರ್ಕಾರ…..

Leave a Reply

Your email address will not be published. Required fields are marked *