ಮಂಡ್ಯ: ಶ್ರೀರಂಗಪಟ್ಟಣ ಶ್ರೀನಿವಾಸ ಅಗ್ರಹಾರ ಗ್ರಾಮದ ರೈತ (Farmer) ನವೀನ್ ಸಾಕಿದ್ದ ಹಳ್ಳಿಕಾರ್ ತಳಿಯ ಒಂಟಿ ಎತ್ತು 9.20 ಲಕ್ಷ ರೂ.ಗಳಿಗೆ ಮಾರಾಟವಾಗಿದ್ದು ರೈತ ನವೀನ್ ಹರ್ಷಗೊಂಡಿದ್ದಾರೆ.
ಹಳ್ಳಿಕಾರ್ ತಳಿಯ ಎರಡು ಹಲ್ಲಿನ ಒಂಟಿ ಎತ್ತನ್ನು (Ox) ತಮಿಳುನಾಡು (Tamilnadu) ಮೂಲದ ಸರವಣಪಟ್ಟಿ ಗ್ರಾಮದ ಸಿರವೈ ತಂಬಿ 9.20 ಲಕ್ಷ ರೂ.ಗಳಿಗೆ ಖರೀದಿಸಿದ್ದಾರೆ. ʻಜಾಗ್ವಾರ್ʼ ಹೆಸರಿನ ಈ ಎತ್ತು ಹೊರ ರಾಜ್ಯಗಳಲ್ಲೂ ಎತ್ತಿನಗಾಡಿ ಸ್ಪರ್ಧೆಯಲ್ಲಿ ಪಾಲ್ಗೊಂಡು ಹಲವು ಪ್ರಶಸ್ತಿಗಳನ್ನ ಬಾಚಿಕೊಂಡಿತ್ತು. ತಮಿಳುನಾಡಿನಲ್ಲೂ ಪ್ರಶಸ್ತಿ ಗೆದ್ದು ಅಭಿಮಾನಿಗಳ ಮೆಚ್ಚುಗೆ ಗಳಿಸಿತ್ತು. ರೇಸ್‌ನಲ್ಲಿ ಕಣಕ್ಕಿಳಿದರೆ ಅಬ್ಬರಿಸುತ್ತಿದ್ದ ಜಾಗ್ವಾರ್ ವೇಗಕ್ಕೆ ಮನಸೋತ ತಮಿಳುನಾಡಿನ ವ್ಯಕ್ತಿ 9.20 ಲಕ್ಷ ರೂ. ನೀಡಿ ಖರೀದಿಸಿದ್ದಾರೆ.
ಈ ಹಿಂದೆ ಶ್ರೀರಂಗಪಟ್ಟಣದ ನವೀನ್ ಮಂಡ್ಯದ ಇಂಡವಾಳು ಗ್ರಾಮದ ಅಜಿತ್ ಅವರಿಂದ 1.20 ಲಕ್ಷ ರೂ.ಗೆ ಈ ಎತ್ತನ್ನು ಖರೀದಿಸಿದ್ದರು. ಸದ್ಯ 9.20 ಲಕ್ಷಕ್ಕೆ ಮಾರಾಟವಾಗಿದ್ದು, ಬರೋಬ್ಬರಿ 8 ಲಕ್ಷ ರೂ. ಲಾಭ ಗಳಿಸಿದ್ದಾರೆ. ಎತ್ತು ದಾಖಲೆ ಬೆಲೆಗೆ ಮಾರಾಟವಾದ ಬಳಿಕ ಗ್ರಾಮದಲ್ಲಿ ಅದ್ಧೂರಿ ಮೆರವಣಿಗೆಯೊಂದಿಗೆ ಬೀಳ್ಕೊಡಲಾಯಿತು.