Kargil Vijay Diwas : 23 ತುಂಬುತ್ತಿರುವ ಹೊತ್ತಿನಲಿ ಒತ್ತರಿಸಿ ಬರುತ್ತಿವೆ ನೆನಪುಗಳು

Death… ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಆಪಲ್ ಕಂಪನಿಯ ಸ್ಥಾಪಕ, ಮಾಲೀಕ ಸ್ಟೀವ್ ಜಾಬ್ಸ್ ಅವರು ಯಮನ ಮನೆಯ ಕದತಟ್ಟಿ ವಾಪಸ್ ಬಂದ ಮೇಲೆ ಸಾವನ್ನು “Life’s change agent” ಎಂದು ವರ್ಣಿಸಿದ್ದರು. ಒಬ್ಬ ಸೈನಿಕನ ಪಾಲಿಗೆ ಸಾವೇ ಪ್ರಾರಬ್ಧ-Death is destiny.

ಎಷ್ಟು ನಿಜ ಅಲ್ವಾ?

ಹಾಗಂತ ಸಾವು ಇಂಥದ್ದೇ ದಿನ, ಕ್ಷಣ, ಸಂದರ್ಭದಲ್ಲಿ ಬರುತ್ತದೆ ಎಂದು ಊಹಿಸುವುದಕ್ಕಾಗುತ್ತಾ? ಬರುವ ಮುನ್ನ ಅದೇನಾದರೂ ಮುನ್ಸೂಚನೆ ಕೊಡುತ್ತದಾ? ಈ ಕೆಳಗಿನ ಪತ್ರವನ್ನೊಮ್ಮೆ ಓದಿ…

“ಆತ್ಮೀಯ ಅಪ್ಪ, ಅಮ್ಮಾ,

ಈ ಪತ್ರ ನಿಮ್ಮ ಕೈ ಸೇರುವ ಮೊದಲೇ ನಾನು ಆಗಸದಲ್ಲಿ ಅಪ್ಸರೆಯ ಆತಿಥ್ಯ ಸ್ವೀಕರಿಸುತ್ತಾ ನಿಮ್ಮನ್ನೆಲ್ಲಾ ನೋಡುತ್ತಿರುತ್ತೇನೆ. ಹಾಗೆಂದು ನನಗೆ ಯಾವ ಪಶ್ಚಾತ್ತಾಪವೂ ಇಲ್ಲ. ಒಂದು ವೇಳೆ ನಾನು ಮತ್ತೆ ಮನುಷ್ಯನಾಗಿ ಜನ್ಮವೆತ್ತಿದರೂ ಭಾರತೀಯ ಸೇನೆಯನ್ನೇ ಸೇರುತ್ತೇನೆ, ಈ ದೇಶಕ್ಕಾಗಿ ಹೋರಾಡುತ್ತೇನೆ. ನಿಮಗೆ ಸಾಧ್ಯವಾದರೆ, ಇಂಡಿಯನ್ ಆರ್ಮಿ ನಿಮ್ಮ ಸುಂದರ ನಾಳೆಗಳ ಸುರಕ್ಷತೆಗಾಗಿ ಎಲ್ಲಿ ಹೋರಾಡಿತೋ ಆ ಜಾಗವನ್ನೊಮ್ಮೆ ದಯವಿಟ್ಟು ನೋಡಿ ಬನ್ನಿ. ಸಮವಸ್ತ್ರ ತೊಟ್ಟ ಸೈನಿಕನ ತ್ಯಾಗವನ್ನು ಎಂದೂ ಮರೆಯಬೇಡಿ. ಮುಂದೊಂದು ದಿನ ನನ್ನ ಭಾವಚಿತ್ರವನ್ನು ಕರ್ಣಿ ಮಾತಾ ಮಂದಿರದಲ್ಲಿಡುತ್ತೀರೆಂದು ಆಶಿಸುತ್ತೇನೆ.

ಅಪ್ಪಾ, ನೀವು ನನ್ನ ಬಗ್ಗೆ ಹೆಮ್ಮೆ ಪಡಲೇಬೇಕು. ಅಮ್ಮಾ, ನೀನೂ ಕೂಡ..  ನಾನು ಮಾಡಿದ ತಪ್ಪುಗಳನ್ನೂ ಮನ್ನಿಸು. ಸರಿ… ನಮ್ಮ ಸೇನಾ ತುಕಡಿಯನ್ನು ಸೇರಿಕೊಳ್ಳುವ ಸಮಯ ಬಂತು. ನಮ್ಮ ತುಕಡಿಯಲ್ಲಿ 12 ಯುವಕರಿದ್ದೇವೆ-Dirty Dozen!

ನಿಮ್ಮೆಲ್ಲರಿಗೂ ಒಳ್ಳೆಯದಾಗಲಿ.
ವಿಜಯಂತ್ ಥಾಪರ್”

ಒಬ್ಬ ತಂದೆಯ ಜೀವನದಲ್ಲಿ ಬರಬಹುದಾದ ಅತ್ಯಂತ ದುಃಖಕರ ದಿನವೆಂದರೆ ತನ್ನ ಮಗನ ಚಟ್ಟಕ್ಕೆ ಹೆಗಲು ಕೊಡುವ ಸಂದರ್ಭ ಎಂದಿದ್ದರು ದಿವಂಗತ ಪ್ರಮೋದ್ ಮಹಾಜನ್. ಅಂದು ಕ್ಯಾಪ್ಟನ್ ವಿಜಯಂತ್ ಥಾಪರ್, ತನ್ನ ಅಪ್ಪನನ್ನು ದುಃಖದ ಮಡುವಿಗೆ ದೂಡಲು ಸಿದ್ಧನಾಗಿಯೇ ಹೊರಟಿದ್ದನೇನೋ! 1999, ಮೇ-ಜೂನ್‌ನಲ್ಲಿ ನಡೆದ ಕಾರ್ಗಿಲ್ ಯುದ್ಧವನ್ನು ಒಮ್ಮೆ ನೆನಪಿಸಿಕೊಳ್ಳಿ. ಕಾರ್ಗಿಲ್‌ನ ಪರ್ವತ ಶ್ರೇಣಿಗಳ ತುತ್ತ ತುದಿಯಲ್ಲಿ ಬಂಕರ್ ನಿರ್ಮಿಸಿಕೊಂಡು ಕುಳಿತಿದ್ದ ಭಯೋತ್ಪಾದಕರನ್ನು ನಾಶಪಡಿಸಲು ಹೊರಟಿದ್ದ ನಮ್ಮ ಸೈನಿಕರು, ಸೇನಾಧಿಕಾರಿಗಳಿಗೆ ತಾವು ವಾಪಸ್ ಬರುವುದಿಲ್ಲ ಎಂಬ ಸತ್ಯಸಂಗತಿ ತಿಳಿದೇ ಅಂಥದ್ದೊಂದು ಕಾರ್ಯಾಚರಣೆಗೆ ಹೊರಟಿದ್ದರು. ಅಂತಹವ ರಲ್ಲಿ 22 ವರ್ಷದ ಕ್ಯಾಪ್ಟನ್ ವಿಜಯಂತ್ ಥಾಪರ್ ಕೂಡ ಒಬ್ಬ. ಅವನದ್ದು ಸೇನಾ ಹಿನ್ನೆಲೆ ಹೊಂದಿದ್ದ ಕುಟುಂಬ. ಅಪ್ಪ, ಅಜ್ಜ, ಮುತ್ತಜ್ಜ ಎಲ್ಲರೂ ಭಾರತೀಯ ಸೇನೆ ಸೇರಿ ದೇಶಕ್ಕಾಗಿ ಹೋರಾಡಿದವರೇ. ವಿಜಯಂತ್ ಆ ಸೇನಾ ಪರಂಪರೆಯ ದೀವಿಗೆಯನ್ನು ಮುಂದೆ ಕೊಂಡೊಯ್ಯುತ್ತಿದ್ದನಷ್ಟೇ. ಆತನ ತಾತ ಡಾ. ಕರ್ತಾ ರಾಮ್ ಥಾಪರ್ ಭಾರತೀಯ ಸೇನೆಯಲ್ಲಿ ಕ್ಯಾಪ್ಟನ್ ಆಗಿದ್ದರು. ಅಜ್ಜ ಜೆ.ಎಸ್. ಥಾಪರ್ 15  ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಅವರ ಕೊನೆಯ ಪೋಸ್ಟಿಂಗ್ ಜಮ್ಮು-ಕಾಶ್ಮೀರವಾಗಿತ್ತು. ಮೊಮ್ಮಗನನ್ನು ಸೇನೆಗೆ ಸೇರುವಂತೆ ಹುರಿದುಂಬಿಸಿದ್ದೇ ಅವರು. ವಿಜಯಂತ್‌ನ ತಂದೆ ವಿ.ಎನ್. ಥಾಪರ್ ಕರ್ನಲ್ ಆಗಿದ್ದರು. 1958ರಲ್ಲಿ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಸೇರಿದ ಅವರು, 1962ರಲ್ಲಿ ಮರಾಠ ಕಾಲ್ದಳಕ್ಕೆ ಸೇರ್ಪಡೆಯಾಗಿದ್ದರು. ಚೀನಾ ಯುದ್ಧ, ಬಾಂಗ್ಲಾದೇಶ ವಿಮೋಚನೆಯಲ್ಲಿ ಪಾಲ್ಗೊಂಡಿದ್ದರು. ‘೧೪ ಜಮ್ಮು-ಕಾಶ್ಮೀರ್ ರೈಫಲ್ಸ್’ ತುಕಡಿಯನ್ನು ಮುನ್ನಡೆಸಿದ್ದರು. ಮೂವತ್ತೇಳು ವರ್ಷ ಸೇವೆಯ ನಂತರ 1999ರಲ್ಲಿ ನಿವೃತ್ತರಾದರು.

ಮಗ ವಿಜಯಂತ್ ಥಾಪರ್ ಭಾರತೀಯ ಸೇನೆಯನ್ನು ಸೇರಿ ಕೊಂಡಿದ್ದೂ ಅದೇ ವರ್ಷ.

ಆತ ಜನಿಸಿದ್ದು 1977, ಡಿಸೆಂಬರ್ 26ರಂದು. ಸೇನೆಯನ್ನು ಸೇರಬೇಕೆಂಬ ತುಡಿತ ಸಹಜವಾಗಿಯೇ ಇತ್ತು. ಆತನ ಪ್ರೀತಿಯ ಆಟಿಕೆಗಳು ಗನ್‌ಗಳಾಗಿದ್ದವು! ಅಪ್ಪನ ಮಿಲಿಟರಿ ಕ್ಯಾಪ್, ದಂಡ ಹಿಡಿದು ಅಧಿಕಾರಿಯಂತೆ ಮನೆ ತುಂಬ ವಾಕ್ ಮಾಡುತ್ತಿದ್ದ. ಹೊಸದಿಲ್ಲಿಯ ದೌಲಾ ಕುಂವಾನಲ್ಲಿರುವ ಪ್ರತಿಷ್ಠಿತ ಸೇನಾ ಶಾಲೆಯಲ್ಲಿ ಕಲಿತ ವಿಜಯಂತ್, ಡೆಹ್ರಾಡೂನ್‌ನಲ್ಲಿನ ಇಂಡಿಯನ್ ಮಿಲಿಟರಿ ಅಕಾಡೆಮಿಗೆ ಆಯ್ಕೆಯಾದ. 1998, ಡಿಸೆಂಬರ್ 12ರಂದು ಸೇನೆಗೆ ಅಧಿಕೃತವಾಗಿ ಸೇರ್ಪಡೆಯಾದ ವಿಜಯಂತ್ ಥಾಪರ್‌ಗೆ, ‘2 ರಜಪೂತ್ ರೈಫಲ್ಸ್’ನಂತಹ ಲೆಜೆಂಡರಿ ಸೇನಾ ತುಕಡಿಯಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರೆಯಿತು. ಗ್ವಾಲಿಯರ್ ಆತನ ಮೊದಲ ಪೋಸ್ಟಿಂಗ್. ಆದರೆ ಒಂದೇ ತಿಂಗಳಲ್ಲಿ ಜಮ್ಮು-ಕಾಶ್ಮೀರಕ್ಕೆ ತೆರಳಬೇಕಾಯಿತು. ಅಲ್ಲಿನ ಕುಪ್ವಾರದಲ್ಲಿ ಭಯೋತ್ಪಾದನೆಯನ್ನು ಮಟ್ಟಹಾಕುವ ಕಾರ್ಯಾಚರಣೆಯಲ್ಲಿ ತೊಡಗಿದ. ಎರಡು ಎನ್‌ಕೌಂಟರ್‌ಗಳಲ್ಲಿ ಭಾಗಿಯಾದ. ಈ ಮಧ್ಯೆ, ಭಯೋತ್ಪಾದಕರು ಕಾರ್ಗಿಲ್‌ನ ಪರ್ವತ ತುದಿಗಳನ್ನು ಆಕ್ರಮಿಸಿರುವ ವಿಚಾರ ಬೆಳಕಿಗೆ ಬಂತು. ಪ್ರಧಾನಿ ವಾಜಪೇಯಿಯವರು ಕಾರ್ಗಿಲ್ ಕಾರ್ಯಾಚರಣೆಗೆ ಆದೇಶ ನೀಡಿದರು. ಹಾಗಾಗಿ ಭಯೋತ್ಪಾದನೆ ಮೂಲೋತ್ಪಾಟನೆ ಕಾರ್ಯಾಚರಣೆಯಲ್ಲಿ ತೊಡಗಿರುವಾಗಲೇ ಡ್ರಾಸ್ ಸೆಕ್ಟರ್‌ನಲ್ಲಿ ಬರುವ ತೋಲೋಲಿಂಗ್, ಟೈಗರ್ ಹಿಲ್ಸ್ ಹಾಗೂ ಅದರ ಸುತ್ತಲಿನ ಬೆಟ್ಟಗಳಿಂದ ಭಯೋತ್ಪಾದಕರನ್ನು ಖಾಲಿ ಮಾಡಿಸಬೇಕೆಂದು ‘೨ ರಜಪೂತ್ ರೈಫಲ್ಸ್’ಗೆ ಆದೇಶ ಬಂತು.

ಕಾರ್ಗಿಲ್ ಯುದ್ಧದಲ್ಲೇ ಅತ್ಯಂತ ನಿರ್ಣಾಯಕ ಕದನವೆಂದರೆ ತೋಲೋಲಿಂಗ್‌ನ ಮರುವಶ!

ಶ್ರೀನಗರ ಹಾಗೂ ಲೆಹ್ ರಾಷ್ಟ್ರೀಯ ಹೆದ್ದಾರಿಗೆ ಬೆನ್ನು ಮಾಡಿ ಆಸೀನವಾಗಿರುವ ತೋಲೋಲಿಂಗ್, ಬಹುಮುಖ್ಯ ಸಂಪರ್ಕ ಸ್ಥಳ. ನಮ್ಮ ಸೈನಿಕರು ಕಡಿದಾದ ಬೆಟ್ಟವನ್ನೇರಿ ಶತ್ರು ನಾಶ ಮಾಡಬೇಕು. ಬೆಟ್ಟದ ತುದಿಯಲ್ಲಿ ಕುಳಿತಿರುವ ಶತ್ರುವಿಗೆ ಸೈನಿಕರನ್ನು ಕುರಿಗಳಂತೆ ಹೊಡೆದುರುಳಿಸುವ ಸುವರ್ಣಾವಕಾಶ. ಜತೆಗೆ ಅತ್ಯಾಧುನಿಕ ಜಾಮರ್‌ಗಳನ್ನು ಹೊಂದಿದ್ದ ಭಯೋತ್ಪಾದಕರು ನಮ್ಮ ಸೈನಿಕರ ರೇಡಿಯೋ ಸಂದೇಶಗಳನ್ನು ತಡೆದು ಕದ್ದಾಲಿಕೆ ಮಾಡಿ ಬಿಡುತ್ತಿದ್ದರು, ನಮ್ಮ ಕಾರ್ಯತಂತ್ರಗಳನ್ನು ಮೊದಲೇ ತಿಳಿದುಕೊಳ್ಳುತ್ತಿದ್ದರು. ಹೀಗಾಗಿ ‘2 ರಜಪೂತ್ ರೈಫಲ್ಸ್’ನ ಕಮಾಂಡಿಂಗ್ ಅಧಿಕಾರಿ ಕರ್ನಲ್ ಎಂ.ಬಿ. ರವೀಂದ್ರನಾಥ್ ಹಾಗೂ ಅವರ ಡೆಪ್ಯುಟಿ ಪದ್ಮಪಾಣಿ ಆಚಾರ್ಯ ಅವರಿಗೆ ದೊಡ್ಡ ಅಪಾಯವೇ ಎದುರಿಗಿತ್ತು. ಅದನ್ನು ಕೆಲವರು ಅಪಾಯದಂತೆ ಕಂಡರೆ, ಕ್ಯಾಪ್ಟನ್ ವಿಜಯಂತ್ ಥಾಪರ್‌ಗೆ ಅದೊಂದು ದೇವರೇ ಸೃಷ್ಟಿಸಿದ ಅವಕಾಶವೆನಿಸಿತು. ಈ ಮಧ್ಯೆ, ಕಾರ್ಯಾಚರಣೆಯೇನೋ ಆರಂಭವಾಯಿತು, ಆದರೆ ಶತ್ರುವನ್ನು ಸದೆಬಡಿಯುವುದು ತೀರಾ ಕಷ್ಟವೆನಿಸತೊಡಗಿತು. 1999, ಜೂನ್ 12ರಂದು ಸ್ವಲ್ಪ ಮಟ್ಟಿನ ಯಶಸ್ಸು ದೊರೆಯಿತು. ಮೇಜರ್ ಮೋಹಿತ್ ಸಕ್ಸೇನಾ ನೇತೃತ್ವದಲ್ಲಿ ಪ್ರಾರಂಭಿಕ ದಾಳಿ ನಡೆಯಿತಾದರೂ ಜೂನ್ 12ರ ರಾತ್ರಿಯ ಕಾರ್ಯಾಚರಣೆಯ ನೇತೃತ್ವವನ್ನು ವಿಜಯಂತ್ ಥಾಪರ್ ಮುಂದಾಳತ್ವದ ತಂಡಕ್ಕೆ ವಹಿಸಲಾಯಿತು. ತೋಲೋಲಿಂಗ್ ವ್ಯಾಪ್ತಿಯಲ್ಲಿ ಬರುವ ಅತ್ಯಂತ ಆಯಕಟ್ಟಿನ ಸ್ಥಳವೆಂದರೆ ‘ಬರ್ಬಾದ್ ಬಂಕರ್’. ಅದನ್ನು ಯಶಸ್ವಿಯಾಗಿ ಸ್ವಾಧೀನಪಡಿಸಿಕೊಂಡ ಥಾಪರ್ ನೇತೃತ್ವದ ಸೈನಿಕರು ಮುಂದಿನ ಹಾದಿಯನ್ನು ಸುಗಮಗೊಳಿಸಿದರು.

ಜೂನ್ 13, ಬೆಳಗಿನ ಜಾವ 4.10 ನಿಮಿಷ.

ಕರ್ನಲ್ ರವೀಂದ್ರನಾಥ್ ಅವರಿಂದ ರೇಡಿಯೋ ಸಂದೇಶ ಬಂತು. ಅಲ್ಲಿಂದ 20 ಕಿ.ಮೀ. ದೂರದಲ್ಲಿದ್ದ ಮೇಜರ್ ಜನರಲ್ ಮೋಹಿಂದರ್ ಪುರಿ ಅತ್ತ ಕಡೆ ಇದ್ದರು. ‘ಸರ್, ನಾನು ತೋಲೋಲಿಂಗ್‌ನ ಮೇಲಿದ್ದೇನೆ’! ಈ ಒಂದು ಸಂದೇಶ ನಮ್ಮ ಸೇನೆ ನಿಟ್ಟುಸಿರು ಬಿಡುವಂತೆ ಮಾಡಿತು. ಆದರೆ ಅದಕ್ಕೂ ಮೊದಲು ಸುಮಾರು 3 ವಾರಗಳ ಕಾಲ ನಮ್ಮ ಸೈನಿಕರು ಹಗಲಿರುಳು ಶ್ರಮಪಟ್ಟಿದ್ದರು. ಕಾರ್ಗಿಲ್ ಯುದ್ಧದಲ್ಲೇ ಅತಿ ಹೆಚ್ಚು ಸೈನಿಕರನ್ನು ಕಳೆದುಕೊಂಡ ಕದನವೇ ತೋಲೋಲಿಂಗ್ ಮರುವಶ. ಈ ಕಾರ್ಯಾಚರಣೆಯಲ್ಲಿ ಸುಮಾರು 100 ಸೈನಿಕರು ಹುತಾತ್ಮರಾದರು. ಕೊನೆಯ ದಿನದ ದಾಳಿಯೊಂದರಲ್ಲೇ 23 ಸೈನಿಕರು ಪ್ರಾಣಾರ್ಪಣೆ ಮಾಡಿದ್ದರು. ಮರುವಶದ ಸುದ್ದಿ ಕೇಳಿದ ಸೇನಾ ಜನರಲ್ ವೇದ್ ಪ್ರಕಾಶ್ ಮಲ್ಲಿಕ್, “Well-done” ಎಂದು ಮೆಚ್ಚುಗೆ ಸೂಚಿಸಿದರು. ಆ ವೇಳೆಗಾಗಲೇ ಮೇಜರ್ ರಾಜೇಶ್ ಅಧಿಕಾರಿ, ಕ್ಯಾಪ್ಟನ್ ವಿವೇಕ್ ಗುಪ್ತಾ, ಲೆಫ್ಟಿನೆಂಟ್ ಕರ್ನಲ್ ವಿಶ್ವನಾಥ್ ಅವರಂತಹ ಹೆಮ್ಮೆಯ ಪುತ್ರರನ್ನು ಈ ದೇಶ ಕಳೆದುಕೊಂಡಿತ್ತು. ತೋಲೋಲಿಂಗ್ ವಶದ ಬೆನ್ನಲ್ಲೇ ‘ತ್ರಿ ಪಿಂಪಲ್ಸ್’ ಎಂಬ ಪರ್ವತವನ್ನು ವಶಪಡಿಸಿಕೊಳ್ಳುವ ಕೆಲಸ ಕರ್ನಲ್ ಪದ್ಮಪಾಣಿ ಆಚಾರ್ಯ ನೇತೃತ್ವದ ತುಕಡಿಗೆ ವಹಿಸಲಾಯಿತು. ಆಚಾರ್ಯ ಅವರ ಡೆಪ್ಯುಟಿ ಮತ್ತಾರೂ ಅಲ್ಲ ಕ್ಯಾಪ್ಟನ್ ವಿಜಯಂತ್ ಥಾಪರ್. ಇಪ್ಪತ್ತೆರಡು ವರ್ಷದ ಆತ, ತೋಲೋಲಿಂಗ್ ಪರ್ವತ ವಶದ ಖುಷಿಯಲ್ಲೇ ತೇಲಾಡುತ್ತಿದ್ದ, ಹೊಸ ಜವಾಬ್ದಾರಿಗಾಗಿ ಹಾತೊರೆಯುತ್ತಿದ್ದ. ಅದಕ್ಕೆ ತಕ್ಕಂತೆ ಜವಾಬ್ದಾರಿಯೂ ಅರಸಿಕೊಂಡು ಬಂತು. ‘ತ್ರೀ ಪಿಂಪಲ್ಸ್’ ಶಿಖರವನ್ನು ವಶಪಡಿಸಿಕೊಳ್ಳುವ ಕಾರ್ಯಾಚರಣೆಗೆ ತೆರಳುವ ಮುನ್ನ, ಅಂದರೆ ಜೂನ್ 13ರಂದು ಅಮ್ಮನಿಗೆ ಕರೆ ಮಾಡಿದ.

ಅಮ್ಮ ತೃಪ್ತಾ ಅವರು ಮಗನ ಧ್ವನಿಯನ್ನು ಆಲಿಸಿದ್ದು ಅದೇ ಕಡೇ ಬಾರಿ!

“ಅಮ್ಮಾ ನಾವು ತೋಲೋಲಿಂಗ್ ಪರ್ವತವನ್ನು ವಶಪಡಿಸಿ ಕೊಂಡಿದ್ದೇವೆ. ಕಾರ್ಗಿಲ್ ಯುದ್ಧಕ್ಕೆ ಸಂಬಂಧಿಸಿದ ನ್ಯೂಸ್ ಪೇಪರ್ ಕ್ಲಿಪ್ಪಿಂಗ್‌ಗಳನ್ನು ಕಟ್ ಮಾಡಿ ಇಟ್ಟಿರು, ಪ್ಲೀಸ್…” ಎಂದು ಫೋನನ್ನೇನೋ ಕೆಳಗಿಟ್ಟ. ಆದರೆ ಆ ಕರೆಯ ಬೆನ್ನಲ್ಲೇ ‘ತಾನು ವಾಪಸ್ ಬರುವುದಿಲ್ಲ… ಈ ಪತ್ರ ನಿಮ್ಮ ಕೈ ಸೇರುವ ಮೊದಲೇ ನಾನು ಆಗಸದಲ್ಲಿ ಅಪ್ಸರೆಯ ಆತಿಥ್ಯ ಸ್ವೀಕರಿಸುತ್ತಾ ನಿಮ್ಮನ್ನೆಲ್ಲಾ ನೋಡುತ್ತಿರುತ್ತೇನೆ…’ ಎಂಬ ಸಂದೇಶವನ್ನು ಹೊತ್ತ ಪತ್ರವನ್ನೂ ಪೋಸ್ಟ್ ಮಾಡಿದ! ಬಹುಶಃ ಸಾವು ತನ್ನ ಆಗಮನದ ಬಗ್ಗೆ ಆತನಿಗೆ ಮೊದಲೇ ಸೂಚನೆ ನೀಡಿತ್ತೇನೋ. After all, death is a part of the soldier’s destiny.

ಅದು ಅತಿವೃಷ್ಟಿಯಿರಲಿ, ಅನಾವೃಷ್ಟಿಯಾಗಿರಲಿ, ಕೊಲೆಯಿರಲಿ, ಕದನವಾಗಿರಲಿ ನಿರ್ಭಾವುಕರಾಗಿ ಕೆಲಸ ಮಾಡಬೇಕಾದವರು ಪತ್ರಕರ್ತರು. ಅಂತಹ ಪತ್ರಕರ್ತರೂ ಕೆಲವೊಮ್ಮೆ ಕೆಲವು ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಗಿ, ಸಾವಿಗೆ ಕಣ್ಣೀರು ಸುರಿಸಿದ ಸಂದರ್ಭಗಳಿವೆ. ‘ಇಂಡಿಯಾ ಟುಡೆ’ ಪತ್ರಿಕೆಯ ಫೋಟೋಗ್ರಾಫರ್ ದಿಲೀಪ್ ಬ್ಯಾನರ್ಜಿ ಅವರಿಗೆ ತೋಲೋಲಿಂಗ್ ಕಾರ್ಯಾಚರಣೆ ವೇಳೆ ಕರ್ನಲ್ ಪದ್ಮಪಾಣಿ ಆಚಾರ್ಯ ಹಾಗೂ ಕ್ಯಾಪ್ಟನ್ ವಿಜಯಂತ್ ಥಾಪರ್ ಜತೆ ಒಂದಿಷ್ಟು ಸಮಯ ಕಳೆಯುವ ಅವಕಾಶ ದೊರೆತಿತ್ತು. ರಣರಂಗದಲ್ಲಿರುವ ಸೈನಿಕರು, ಸೇನಾಧಿಕಾರಿಗಳಿಗೆ ತಮ್ಮ ಮನೆಯವರಿಗೆ ಸಂದೇಶ ಕಳುಹಿಸಬೇಕೆಂದರೂ ಫೋನ್ ವ್ಯವಸ್ಥೆ ಇರುವುದಿಲ್ಲ. ಅಂತಹ ಸಂದರ್ಭದಲ್ಲಿ ತಮ್ಮ-ತಂಗಿಗೆ, ಪತ್ನಿಗೆ ಅಥವಾ ಅಮ್ಮ-ಅಪ್ಪನಿಗೆ ನಾನು ಸುರಕ್ಷಿತನಾಗಿದ್ದೇನೆ, ಆದಷ್ಟು ಬೇಗ ವಾಪಸ್ ಬರುತ್ತೇನೆಂದು ತಿಳಿಸಿ ಎಂದು ಪತ್ರಕರ್ತರ ಮೂಲಕ ಸಂದೇಶ ರವಾನಿಸುವುದುಂಟು. ಅವತ್ತು ಕರ್ನಲ್ ಆಚಾರ್ಯ ಮಾತಿಗೆ ಕುಳಿತಿದ್ದರು… “ನಾನು ಮತ್ತು ನನ್ನ ಹೆಂಡತಿ ಚಾರುಲತಾ ಒಂದು ಪಂಥ ಕಟ್ಟಿಕೊಂಡಿದ್ದೆವು. ಅವಳ ಹೊಟ್ಟೆಯಲ್ಲಿರುವುದು ಗಂಡು ಮಗು ಎಂದು ಆಕೆ ಹೇಳಿದಳು, ಇಲ್ಲಾ ಅದು ಹೆಣ್ಣು ಮಗು ಎಂದು ನಾನಂದೆ. ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮಾಡಿಸಿದಾಗ ಗಂಡು ಮಗು ಎಂದು ಗೊತ್ತಾಯಿತು. ಬರುವ ಆಗಸ್ಟ್‌ನಲ್ಲಿ ಹೆರಿಗೆಯಾಗುತ್ತದೆ. ಯುದ್ಧದಿಂದ ವಾಪಸ್ಸಾದ ಕೂಡಲೇ ಪಂಥದ ಒಪ್ಪಂದದಂತೆ ನೆಕ್‌ಲೆಸ್ ಕೊಡಿಸುತ್ತೇನೆ. ಹಾಗಂತ ಆಕೆಗೆ ಹೇಳಿ…” ಎಂದು ಮನವಿ ಮಾಡಿಕೊಂಡರು. “ನಾನು ಸುರಕ್ಷಿತನಾಗಿದ್ದೇನೆ ಎಂದು ನಮ್ಮ ಕುಟುಂಬದವರಿಗೂ ಹೇಳಿ” ಎಂದು ಥಾಪರ್ ಕೂಡ ಕೇಳಿಕೊಂಡ. ದಿಲ್ಲಿಗೆ ವಾಪಸ್ಸಾದ ಮೇಲೆ, ಹೈದರಾಬಾದ್‌ನಲ್ಲಿದ್ದ ಆಚಾರ್ಯ ಅವರ ಪತ್ನಿಗೆ ಕರೆ ಮಾಡಿದ ಬ್ಯಾನರ್ಜಿ, ಗಂಡನ ಭರವಸೆಯ ಸಂದೇಶವನ್ನು ಮುಟ್ಟಿಸಿದರು. ತದನಂತರ ದಿಲ್ಲಿಯಲ್ಲಿದ್ದ ವಿಜಯಂತ್ ಥಾಪರ್‌ನ ಅಮ್ಮನಿಗೆ ಕರೆ ಮಾಡಿ, “ನಿಮ್ಮ ಮಗ ಕ್ಷೇಮವಾಗಿದ್ದಾನೆ. ಸದ್ಯದಲ್ಲೇ ವಾಪಸ್ ಬರುತ್ತಾನಂತೆ” ಎಂದರು. ಮುಂದುವರಿದು, ‘ಅವನು ನಿಜಕ್ಕೂ ಧೈರ್ಯವಂತ..’ ಎಂದರು. ಎರಡು ದಿನಗಳ ನಂತರ ವಿಜಯಂತ್ ಥಾಪರ್ ಅಮ್ಮ ತೃಪ್ತಾ ಅವರೇ ದಿಲೀಪ್ ಬ್ಯಾನರ್ಜಿಯವರಿಗೆ ಕರೆ ಮಾಡಿದರು!

“ನನ್ನ ಮಗ ಖಂಡಿತ ಧೈರ್ಯವಂತನೇ… ಅಷ್ಟು ಮಾತ್ರವಲ್ಲ, he is no more”!!

ಅದರ ಬೆನ್ನಲ್ಲೇ ಕರ್ನಲ್ ಪದ್ಮಪಾಣಿ ಆಚಾರ್ಯ ಅವರೂ ಹುತಾತ್ಮರಾಗಿರುವ ಸುದ್ದಿ ಸಿಡಿಲಿನಂತೆ ಬಂದಪ್ಪಳಿಸಿತು. 1999, ಜೂನ್ 28ರ ರಾತ್ರಿ 8 ಗಂಟೆಗೆ ತ್ರೀ ಪಿಂಪಲ್ಸ್ ಶಿಖರವನ್ನು ಸ್ವಾಧೀನಪಡಿಸಿಕೊಳ್ಳಲು ಹೊರಟ ಆಚಾರ್ಯ ಹಾಗೂ ಥಾಪರ್ ನೇತೃತ್ವದ ತುಕಡಿ, ಇನ್ನೇನು ವಿಜಯ ಪತಾಕೆ ಹಾರಿಸಬೇಕು ಅಷ್ಟರಲ್ಲಿ ಆಚಾರ್ಯ ಬಲಿಯಾದರು. ಅದನ್ನು ಕಂಡು ಸಿಟ್ಟಿಗೆದ್ದು ಶತ್ರುಗಳತ್ತ ಮುನ್ನುಗ್ಗಿದ ವಿಜಯಂತ್ ಥಾಪರ್‌ನ ತಲೆಯನ್ನು ಗುಂಡೊಂದು ಸೀಳಿಕೊಂಡು ಹೋಯಿತು. ಬೆಳಗಾಗುವಷ್ಟರಲ್ಲಿ ಪರ್ವತವೇನೋ ವಶವಾಗಿತ್ತು. ಆದರೆ ಆಚಾರ್ಯ ಹಾಗೂ ಥಾಪರ್ ಅಗಲಿದ್ದರು. ಅವತ್ತು ವಿಜಯಂತ್ ಥಾಪರ್ ಹುತಾತ್ಮನಾದಾಗ “ನನ್ನಲ್ಲಿರುವ ಒಂದೇ ಕೊರಗೆಂದರೆ ಸೇನೆ ಸೇರಿ ದೇಶ ಸೇವೆ ಮಾಡುವ ನಮ್ಮ ಕುಟುಂಬದ ಪರಂಪರೆಯನ್ನು ಮುಂದುವರಿಸಲು ಇನ್ನು ಯಾರೂ  ಉಳಿದಿಲ್ಲ…” ಎಂದು ಆತನ ತಂದೆ ಕರ್ನಲ್ ವಿ.ಎನ್. ಥಾಪರ್ ದುಃಖಿಸುತ್ತಿದ್ದರು.
ಒಬ್ಬ ತಂದೆ-ತಾಯಿಗೆ ದೇವರು ಕೊಡಬಹುದಾದ ಅತ್ಯಂತ ಕ್ರೂರ ಶಿಕ್ಷೆಯೆಂದರೆ ಅವರು ಬದುಕಿರುವಾಗಲೇ ಕರುಳ ಕುಡಿಗಳನ್ನು ಕಿತ್ತುಕೊಳ್ಳುವುದು. ಆದರೆ ಸಾವೆಂಬುದು ಎದುರಿಗೆ ನಿಂತಿದೆ ಎಂದು ಗೊತ್ತಿದ್ದರೂ ಅದನ್ನು ಲೆಕ್ಕಿಸದೇ ಮಕ್ಕಳನ್ನು ದೇಶ ರಕ್ಷಣೆಗೆ ಕಳುಹಿಸುವ ಲಕ್ಷಾಂತರ ತಂದೆ-ತಾಯಂದಿರ ನಿಸ್ವಾರ್ಥತೆಗೆ, ದೇಶಪ್ರೇಮಕ್ಕೆ ಯಾವ ರೀತಿ ಕೃತಜ್ಞತೆ ಹೇಳುವುದು?! ಒಂದು ಕಾಶ್ಮೀರವನ್ನು ಉಳಿಸಿಕೊಳ್ಳುವುದಕ್ಕಾಗಿ ಅಂದು 527 ಸೈನಿಕರು ತಮ್ಮ ಜೀವವನ್ನೇ ಬಲಿ ಕೊಟ್ಟರು. 1363 ಸೈನಿಕರು ಊನಗೊಂಡರು, ಅಂಗಾಂಗ ಕಳೆದುಕೊಂಡರು. ಮೇಜರ್ ಪದ್ಮಪಾಣಿ ಆಚಾರ್ಯ ತೀರಿಕೊಂಡಾಗ ಅವರ ಪತ್ನಿಯ ಹೊಟ್ಟೆಯಲ್ಲಿ ಚೊಚ್ಚಲ ಮಗು ಬೆಳೆಯುತ್ತಿತ್ತು, ಕ್ಯಾಪ್ಟನ್ ವಿಕ್ರಂ ಬಾತ್ರಾ ಮಡಿದಾಗ ಅವರ ಭಾವಿ ಪತ್ನಿ ವಿವಾಹಕ್ಕೆ ತಯಾರಿ ನಡೆಸುತ್ತಿದ್ದಳು, ಲೆಫ್ಟಿನೆಂಟ್ ಹನೀಫುದ್ದೀನ್ ಹುತಾತ್ಮನಾಗುವುದರೊಂದಿಗೆ ಆತನ ವಿಧವೆ ತಾಯಿ ಇದ್ದ ಒಬ್ಬ ಮಗನನ್ನೂ ಕಳೆದುಕೊಂಡಳು, ಕ್ಯಾಪ್ಟನ್ ಕೆ. ಕ್ಲಿಫೋರ್ಡ್ ನೊಂಗ್ರುಮ್ ಮಡಿದಾಗ ಒಂದಿಡೀ ಮೇಘಾಲಯ ರಾಜ್ಯವೇ ಕಣ್ಣೀರ ಕಡಲಾಗಿತ್ತು. ಏಕೆ ಇದನ್ನೆಲ್ಲಾ ನೆನಪಿಸಿಕೊಳ್ಳಬೇಕಾಗಿದೆಯೆಂದರೆ ಈಗ ಕಾಶ್ಮೀರ ಮತ್ತೆ ಹೊತ್ತಿ ಉರಿಯುತ್ತಿದೆ. ಅದನ್ನೆಲ್ಲಾ ನೋಡಿ… ನೋಡಿ, ಆ ಒಂದು ಭಾಗವನ್ನು ಉಳಿಸಿಕೊಳ್ಳುವುದಕ್ಕೆ ಇಷ್ಟೆಲ್ಲಾ ಕಷ್ಟಪಡಬೇಕಾ, ಇನ್ನೆಷ್ಟು ವರ್ಷ ಹೋರಾಡಬೇಕು, ಪಾಕಿಸ್ತಾನಕ್ಕೆ ಬಿಟ್ಟುಕೊಡುವುದೇ ಒಳಿತು ಎಂಬ ಸಿನಿಕತನ ಮನದೊಳಗೆ ಸುಳಿಯುವ ಅಪಾಯವಿದೆ. ಹಾಗೇನಾದರೂ ಆದರೆ ಇವರೆಲ್ಲರ ಬಲಿದಾನಕ್ಕೆ ಬೆಲೆಯೇನು?

ಜುಲೈ 26-ಕಾರ್ಗಿಲ್ ವಿಜಯ ದಿನ. ಇಡೀ ಭಾರತವನ್ನೇ ಭಾವನಾತ್ಮಕವಾಗಿ ಒಂದು ಮಾಡಿದ ಆ ಕದನ ನಡೆದು 23 ವರ್ಷ ಕಳೆದು 24 ನೇ ವಾರ್ಷಿಕ ವಿಜಯ ದಿನ ಆಗಮಿಸಿದೆ.

Lest We Forget…..

Leave a Reply

Your email address will not be published. Required fields are marked *