ಯುಗಾದಿ – ವರುಷಕೊಂದು ಹೊಸತು ಜನ್ಮ.. ಹರುಷಕೊಂದು ಹೊಸತು ನೆಲೆಯು

ಪ್ರತಿ ದಿನ, ವರ್ಷಕ್ಕೂ ಒಂದು ಹೊಸ ಜನ್ಮ ಪಡೆಯುತ್ತಾ, ಏಕತಾನತೆ, ಯಾಂತ್ರೀಕತೆಯ ಈ ಕಾಲಘಟ್ಟದಲ್ಲಿ ಹರುಷಕ್ಕೆ ಹೊಸ ನೆಲೆಯನ್ನು ಹುಡುಕಲು ಅವಕಾಶವೀಯುವುದೇ ಯುಗಾದಿ ಹಬ್ಬ.

ಯುಗಾದಿ ಹಬ್ಬವನ್ನು ಹೊಸ ಯುಗದ ಆರಂಭ ಮತ್ತು ಸುಗ್ಗಿಯ ಸಮಯ ಎಂದು ಸಂಕೇತಿಸಲಾಗುತ್ತದೆ. ವರ್ಷದಿಂದ ವರ್ಷಕ್ಕೆ ನಮ್ಮ ಜೀವನದಲ್ಲಿ ಹೊಸ ಹರುಷ ಮೂಡಿಸುವ ಯುಗಾದಿ ಹಬ್ಬವು ತಿಂಗಳ ಚೈತ್ರ ಮಾಸದಿಂದ ಪ್ರಾರಂಭವಾಗುತ್ತದೆ.

ಯುಗಾದಿ(Ugadi) ಎಂದರೇ –

ಯುಗಾದಿ ಎಂಬ ಪದವು ಸಂಸ್ಕೃತದ ಯುಗ ಮತ್ತು ಆದಿ ಎಂಬ ಎರಡು ಪದಗಳ ಸಂಯೋಜನೆಯಾಗಿದ್ದು, ಇಲ್ಲಿ ʼಯುಗ್‌ʼ ಎಂದರೆ ʼಯುಗʼ ಮತ್ತು ʼಆದಿʼ ಎಂದರೆ ʼಆರಂಭʼ ಅಂದರೆ ಹೊಸಯುಗದ ( New Year) ಆರಂಭ ಎಂಬುದನ್ನು ಸೂಚಿಸುತ್ತದೆ.

ವಸಂತ ಕಾಲ ಬಂದಾಗ ಮಾವು ಚಿಗುರಲೇ ಬೇಕು ಎಂಬ ಹಾಡಿನಂತೆ ಚಿಗುರಿದ ಗಿಡ, ಮರಗಳು ಹಸಿರು ಸೀರೆಯುಟ್ಟಂತೆ ಕಂಗೊಳಿಸುವ ಪ್ರಕೃತಿ, ಗಾಳಿಗೆ ಕಂಪು ಬೀರುತ್ತಾ ತೂಗಾಡುತ್ತಿರುವ ಬಣ್ಣ ಬಣ್ಣದ ಹೂವುಗಳು, ಹೂವಿನ ಮಕರಂದಕ್ಕೆ ಮುತ್ತಿಡೊ ದುಂಬಿಗಳು, ಕಲರವದಿ ಎಲ್ಲಿಂದಲೋ ಬಂದಂತಹ ಬಣ್ಣ ಬಣ್ಣದ ಹಕ್ಕಿಗಳು, ಇವುಗಳ ಜೊತೆ ಮೈಮನದಲ್ಲಿ ನವ ಉಲ್ಲಾಸ, ನವ ಚೈತನ್ಯದ ಸಂಚಲನ ಮೂಡಿಸುವಂತೆ, ಹೊಸ ಋತುವಿಗೆ ಸ್ವಾಗತ ಕೋರಲು ಸಜ್ಜಾಗಿರುವ ಸಮಯವೇ ನೂತನ ವರ್ಷಾರಂಭದ ಸುದಿನ.

ಯುಗಾದಿ ಹಬ್ಬವು ಪೌರಾಣಿಕ ಹಾಗೂ ಐತಿಹಾಸಿಕ ವಿಶೇಷತೆಗಳ ದಿನವಾಗಿದೆ. ಇದು ಬ್ರಹ್ಮದೇವನ ಸೃಷ್ಟಿಯ ದಿನ. ಚೈತ್ರಶುದ್ಧ ಪಾಡ್ಯದಂದು ಸೂರ್ಯೋದಯವಾಗುತ್ತಿರುವಾಗ ಬ್ರಹ್ಮನು ವಿಶ್ವವನ್ನು ಸೃಷ್ಟಿಸಿದನೆಂದೂ, ಅಂದಿನಿಂದ ಕಾಲಗಣನೆಗಾಗಿ ಗ್ರಹ, ನಕ್ಷತ್ರ, ಮಾಸ, ಋತು, ವರ್ಷ ಇವುಗಳನ್ನು ಏರ್ಪಡಿಸಿದನೆಂದೂ ವ್ರತಖಂಡದಲ್ಲೂ ಪುರಾಣಗಳಲ್ಲೂ ಉಲ್ಲೇಖವಿದೆ.

ಯುಗಾದಿ ಹಬ್ಬದ ದಿನ ಬೇವು ಬೆಲ್ಲ ಸೇವಿಸಿ ಇತರರಿಗೆ ಹಂಚುವ ವಿಶೇಷ ಸಂಪ್ರದಾಯವಿದೆ. ಬೇವು ಬೆಲ್ಲವು ಜೀವನದಲ್ಲಿ ಎದುರಾಗುವ ಸುಖ ದುಃಖವನ್ನು, ನೋವು ನಲಿವನ್ನು ಸಮನಾಗಿ ಸ್ವೀಕರಿಸಬೇಕು ಎಂಬ ಅರ್ಥದಲ್ಲಿ ಸಿಹಿ ಕಹಿ ಎರಡನ್ನು ಈ ಹಬ್ಬದಲ್ಲಿ ಸೇವಿಸಲಾಗುತ್ತದೆ.

ಬೇವು ಬೆಲ್ಲಕ್ಕೆ ವಿಶೇಷವಾದ ಔಷಧಿ ಗುಣ ಇರುವುದನ್ನು ಆಯುರ್ವೇದದಲ್ಲಿ ತಿಳಿಸಲಾಗಿದೆ. ಬೇವು ಬೆಲ್ಲ ಸ್ವೀಕರಿಸಿದರೆ ಶರೀರ ವಜ್ರಕಾಯವಾಗುತ್ತೆಂಬ ಮಾತನ್ನು ವೇದಗಳಲ್ಲಿ ತಿಳಿಸಲಾಗಿದೆ. ನೂರು ವರ್ಷಗಳ ಆಯುಷ್ಯ, ಸದೃಢ ಆರೋಗ್ಯ, ಸಕಲ ಸಂಪತ್ತಿನ ಪ್ರಾಪ್ತಿಗಾಗಿಯೂ, ಸಕಲಾರಿಷ್ಟ ನಿವಾಣೆಗಾಗಿಯೂ ಬೇವೂ ಬೆಲ್ಲ ಸೇವನೆ ಮಾಡುತ್ತೇನೆಂದು ಹೇಳಿ ಬೇವು ಬೆಲ್ಲ ಸೇವಿಸಬೇಕೆಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ.

ಬಹಳಷ್ಟು ಮಹತ್ತರಗಳಿಗೆ ಸಾಕ್ಷಿಯಾಗಿರುವ, ಯುಗ ಯುಗಗಳಿಂದಲೂ ಆಚರಿಸಿಕೊಂಡು ಬರುತ್ತಿರುವ ಯುಗಾದಿ ಹಬ್ಬವನ್ನ ನೆಮ್ಮದಿಯಿಂದ ಸಂತಸದಿಂದ ಆಚರಿಸಬೇಕು. ಮನೆಯ ಹಿರಿಯರಿಗೆ ನಮಸ್ಕರಿಸಿ, ಅವರ ಆಶೀರ್ವಾದದ ನಂತರ ಬೇವು ಬೆಲ್ಲವನ್ನು ಸೇವಿಸುವುದು ಪ್ರತೀತಿ. ಹಿರಿಯರ ಆಶೀರ್ವಾದದಿಂದ ಸುಖ, ಸಂತೋಷ ವೃದ್ಧಿಯಾಗಲಿ ಎಂದು ಹೊಸ ವರ್ಷವನ್ನು ಬಹಳ ಸಡಗರ, ಸಂಭ್ರಮ, ಸಂತೋಷದಿಂದ ಆಚರಿಸುತ್ತಾರೆ.

ಯುಗಾದಿಯನ್ನು ಚಾಂದ್ರಮಾನ ಹಾಗೂ ಸೌರಮಾನ ಎಂದು ಎರಡು ಬಗೆಯಲಿ ಆಚರಿಸುವ ಪದ್ಧತಿ ಇದೆ. ಚಾಂದ್ರಮಾನ ಎಂದರೆ, ಚಂದ್ರನ ಚಲನೆಯನ್ನಾಧರಿಸಿ ದಿನಗಣನೆ ಮಾಡುವುದು ಎಂದರ್ಥ. ಸೌರಮಾನ ಎಂದರೆ, ಸೂರ್ಯನ ಗತಿಯಿಂದ ಎಣಿಕೆ ಮಾಡುವುದು ಎಂದರ್ಥ. ಚಂದ್ರನ ಗತಿ ಅತಿವೇಗವಾದ್ದರಿಂದ ಪ್ರತಿ ಪ್ರದಕ್ಷಿಣೆಗೂ ಒಂದು ತಿಂಗಳಂತೆ, ಹನ್ನೆರಡು ಪ್ರದಕ್ಷಿಣೆಗೆ ಒಂದು ಚಾಂದ್ರಮಾನ ಸಂವತ್ಸರವಾಗುತ್ತದೆ. ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ಗುಜರಾತ್‌ಗಳಲ್ಲಿ ಚಂದ್ರಮಾನ ಯುಗಾದಿ ಹಬ್ಬವನ್ನು ಆಚರಿಸಲಾಗುತ್ತದೆ. ಕೇರಳ ಮತ್ತು ಉತ್ತರ ಭಾರತದಲ್ಲಿ ಸೌರಮಾನ ಯುಗಾದಿ ಹಬ್ಬವನ್ನು ಆಚರಿಸಲಾಗುತ್ತದೆ. ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ಹೆಸರಿನಿಂದ ಯುಗಾದಿ ಹಬ್ಬವನ್ನು ಆಚರಿಸುತ್ತಾರೆ.

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತಿದೆ ಎಂಬಂತೆ ಈ ಬಾರಿಯು ಯುಗಾದಿ ಹಬ್ಬ ಮರಳಿ ಬಂದಿದೆ. ಯುಗಾದಿ ಬಂದಿತೆಂದರೆ ಎಲ್ಲೆಡೆಯಲ್ಲೂ ಎಲ್ಲರಲ್ಲಿಯೂ ಒಂದು ರೀತಿಯ ಹೊಸತನದ ಹುರುಪು, ಸಂತಸದ ಸಂಭ್ರಮ ಮೂಡುವಂತೆ ಮಾಡಿದೆ. ಮುಂಜಾನೆ ಬೇವು ಮಿಶ್ರಿತ ನೀರಿನಿಂದ ಎಣ್ಣೆಸ್ನಾನ, ಹೊಸ ಉಡುಗೆ ತೊಡುವ ಸಂಭ್ರಮ, ಮನೆಗಳಲ್ಲಿ ಹಸಿರು ತೋರಣ, ರಂಗೋಲಿಯ ಅಲಂಕಾರ, ದೇವರಿಗೆ ವಿಶೇಷ ಪೂಜೆ. ಹೊಸ ವರ್ಷದ ಸಂಕೇತವಾದ ಯುಗಾದಿಯನ್ನು ಎಲ್ಲಾ ಹಿಂದೂಗಳು ಆಚರಿಸುತ್ತಾರೆ. ಬೇವುಬೆಲ್ಲದಂತೆ ನೋವು ನಲಿವುಗಳ ಸಮತೋಲನ ಕಾಯ್ದುಕೊಂಡು ಜೀವನ ಸಾಗಿಸಿ ಬದುಕಬೇಕು. ಕಷ್ಟ-ಸುಖ, ನೋವು-ನಲಿವುಗಳ ಸಮ್ಮಿಶ್ರಣದಿಂದ ಬದುಕುವುದೇ ಜೀವನ. ಎರಡನ್ನು ಸಮದೃಷ್ಟಿಯಿಂದ ಸವಿಯುವುದನ್ನು ಕಲಿಯಲೆಂದೇ ಯುಗಾದಿಯಂದು ಬೇವು-ಬೆಲ್ಲವನ್ನು ತಿನ್ನಿಸುವರು.

ಯುಗಾದಿಯು ಕೇವಲ ಧಾರ್ಮಿಕ ಹಬ್ಬವಷ್ಟೇ ಅಲ್ಲ, ಬದಲಾಗಿ ವೈಜ್ಞಾನಿಕ ಕಾರಣಗಳನ್ನೊಳಗೊಂಡ ವಿಶೇಷ ಆಚರಣೆಯ ದಿನವಾಗಿದೆ. ಜನವರಿ 01 ರಂದು ಕೇವಲ ಕ್ಯಾಲೆಂಡರ್‌ನಲ್ಲಿ ದಿನಾಂಕದ ಬದಲಾವಣೆ ಅಷ್ಟೇ. ಆದರೆ ವೈಜ್ಞಾನಿಕವಾಗಿ ಅಥವಾ ಖಗೋಳವಾಗಿ ಯಾವುದೇ ಬದಲಾವಣೆಯೂ ಕೂಡ ಜನವರಿ 01 ರಂದು ಆಗುವುದಿಲ್ಲ. ಇಂದು ಭೂಮಿಯ ಆಕ್ಸಿಸ್‌ ವಾಲುತ್ತದೆ. ಉತ್ತರ ಗೋಳಾರ್ಧವು ಹೆಚ್ಚಿನ ಪ್ರಮಾಣದ ಸೂರ್ಯನ ಶಕ್ತಿಯನ್ನು ಪಡೆದುಕೊಳ್ಳುತ್ತದೆ. ಈ ಸಮಯದಲ್ಲಿ ಭೂಮಿಯು ಹೆಚ್ಚು ಉಷ್ಣತೆಗೆ ಒಳಗಾಗುತ್ತದೆ. ಆದ್ದರಿಂದ ಮನುಷ್ಯರಿಗೆ ಹೆಚ್ಚು ಶಾಖದ ಅನುಭವವಾಗುತ್ತದೆ. ಇದನ್ನು ಸಹಿಸುವ ಶಕ್ತಿಯನ್ನು ಯುಗಾದಿ ಆಚರಣೆ ನೀಡುತ್ತದೆ.

ಯುಗಾದಿಯಂತಹ ಶುಭ ದಿನವನ್ನು ನಮ್ಮ ಜೀವನದಲ್ಲಿ ಬದಲಾಯಿಸುವ ಮತ್ತು ನಮ್ಮೆಲ್ಲಾ ಕೆಟ್ಟ, ನಕರಾತ್ಮಕ ಗುಣಗಳನ್ನು ತ್ಯಜಿಸುವ ಮೂಲಕ ನಮ್ಮ ನಡವಳಿಕೆಯಲ್ಲಿ ಬದಲಾವಣೆಯ ನಿರ್ಣಯ ಕೈಗೊಳ್ಳುವುದಕ್ಕೆ ಬಳಸಬೇಕು.

ನಮ್ಮ ನೆಚ್ಚಿನ ಎಲ್ಲಾ ಓದುಗರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು

 ಅಮೃತ.ಕೆ. (Amrutha K)

ನವರಾತ್ರಿಯ ಮೊದಲನೇ ದಿನದಿಂದಲೇ ರಾಮನವಮಿ ಆಚರಣೆ ಆರಂಭ

Leave a Reply

Your email address will not be published. Required fields are marked *