Dharwad IIT: ಕ್ಯಾಂಪಸ್​ನಲ್ಲಿದೆ ಚಾಲುಕ್ಯ, ವಿಜಯನಗರ ಸಾಮ್ರಾಜ್ಯದ ವಾಸ್ತುಶಿಲ್ಪ ಭಾರತದ ಪ್ರಥಮ ಹಸಿರು ಐಐಟಿ ಲೋಕಾರ್ಪಣೆಗೆ ಸಜ್ಜು

ಧಾರವಾಡ ಹೊರಹೊಲಯದ ಧಾರವಾಡ-ಬೆಳಗಾವಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಹೈಕೋರ್ಟ್ ಎದುರು ನಿರ್ಮಾಣವಾಗಿದೆ 852 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದೆ ದೇಶದ ಪ್ರಥಮ ಪರಿಸರ ಸ್ನೇಹಿ ಐಐಟಿ. ಏನಿದರ ವಿಶೇಷತೆ ಇಲ್ಲಿದೆ ಮಾಹಿತಿ

ಧಾರವಾಡ: ವಿದ್ಯಾಕಾಶಿ ಧಾರವಾಡದಲ್ಲಿ ಸುಮಾರು 535 ಎಕರೆ ವಿಶಾಲ ಪ್ರದೇಶದಲ್ಲಿ ನಿರ್ಮಾಣ ಮಾಡಲಾಗಿರುವ, ಭಾರತದ ಪ್ರಥಮ ಹಸಿರು ಐಐಟಿ ಖ್ಯಾತಿಯ, ಭಾರತೀಯ ತಂತ್ರಜ್ಞಾನ ಸಂಸ್ಥೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದ ಇಂದು (ಮಾ.12)ಲೋಕಾರ್ಪಣೆಗೊಳ್ಳಲು ಸಜ್ಜಾಗಿದೆ. ಧಾರವಾಡ-ಬೆಳಗಾವಿ ರಾಷ್ಟ್ರೀಯ ಹೆದ್ದಾರಿ ಮಧ್ಯದ ಹೈಕೋರ್ಟ್ ಎದುರು 852 ಕೋಟಿ ರೂ. ವೆಚ್ಚದಲ್ಲಿ ಪರಿಸರ ಸ್ನೇಹಿಯಾಗಿ ಧಾರವಾಡ ಐಐಟಿ  ರೂಪುಗೊಂಡಿದೆ. ಪ್ರಕತಿಗೆ ಯಾವುದೇ ರೀತಿಯ ಹಾನಿ ಉಂಟು ಮಾಡದೇ ಸುಮಾರು 18 ಬೃಹತ್ ಕಟ್ಟಡಗಳನ್ನು ಮೊದಲ ಹಂತದಲ್ಲಿ ನಿರ್ಮಿಸಲಾಗಿದೆ. ಈ ಸ್ಥಾಯಿ ಕ್ಯಾಂಪಸ್ 65 ಎಕರೆ ಸಂರಕ್ಷಿತ ಅರಣ್ಯ ವಲಯ ಹೊಂದಿದ್ದು ಅಲ್ಲಿನ ಪ್ರಾಣಿ ಹಾಗೂ ಪಕ್ಷಿ ಸಂಕುಲಕ್ಕೂ ಆಶ್ರಯ ತಾಣವಾಗಿದೆ. ಈ ಹಸಿರು ವಲಯಕ್ಕೆ ಯಾವುದೇ ರೀತಿಯ ಧಕ್ಕೆ ಉಂಟು ಮಾಡದೇ ಐಐಟಿಯು ವಿನೂತನ ತಂತ್ರಜ್ಞಾನ ಮೂಲಕ ತನ್ನ ಕ್ಯಾಂಪಸ್ ನಿರ್ಮಾಣ ಮಾಡಲಾಗಿದೆ. ದೇಶದಲ್ಲಿನ ಉಳಿದ ಐಐಟಿಗೆ ಹೋಲಿಸಿದರೆ ಧಾರವಾಡ ಐಐಟಿ ತುಂಬಾನೇ ವಿಭಿನ್ನವಾಗಿದೆ.

ಇದು ಮೂರನೇ ಜನರೇಶನ್ ಐಐಟಿ

ದೇಶದಲ್ಲಿಯೇ 2016ರಲ್ಲಿ ಘೋಷಣೆ ಮಾಡಿದ 3ನೇ ಜನರೇಶನ್ 6 ಐಐಟಿಗಳಲ್ಲಿ ಧಾರವಾಡ ಒಂದು. ಪ್ರಸ್ತುತ ವಾಲ್ಮಿ ಕಟ್ಟಡದಲ್ಲಿ ಕಾರ್ಯೋನ್ಮುಖವಾಗಿದ್ದು, ಆರಂಭದಲ್ಲಿ ನಾಲ್ಕು ವರ್ಷಗಳ ಕಂಪ್ಯೂಟರ್ ಸೈನ್ಸ್, ಇಲೆಕ್ಟ್ರಿಕಲ್ ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗ್​​ನಲ್ಲಿ ಬಿಟೆಕ್ ಕೋರ್ಸ್‌ಗಳು ಮಾತ್ರ ಇದ್ದವು. 2021ರಲ್ಲಿ ಮೂರು ಹೊಸ ನಾಲ್ಕು ವರ್ಷಗಳ ಕೋರ್ಸ್​​ಗಳಾದ ಸಿವಿಲ್, ಕೆಮಿಕಲ್ ಮತ್ತು ಬಯೋ ಹಾಗೂ ಮೆಥಮೆಟಿಕಲ್ ಎಂಜಿನಿಯರಿಂಗ್ ಆರಂಭವಾಗಿವೆ. ಜೊತೆಗೆ ಐದು ವರ್ಷಗಳ ವಿವಿಧ ವಿಷಯಗಳಲ್ಲಿ ಬಿಎಸ್ ಹಾಗೂ ಎಂಎಸ್ ಕೋರ್ಸ್​​ಗಳಿವೆ. ಇದರೊಂದಿಗೆ ಪಿಹೆಚ್​​ಡಿ ಕೋರ್ಸ್ ಇದ್ದು, ಈಗಾಗಲೇ ಮೂರು ಬ್ಯಾಚ್‌ಗಳು ಹೊರ ಬಿದ್ದಿದ್ದು ಶೇ. 90ರಷ್ಟು ವಿದ್ಯಾರ್ಥಿಗಳು ವಿವಿಧ ಕಂಪನಿಗಳಲ್ಲಿ ಗರಿಷ್ಠ ಸಂಬಳಕ್ಕೆ ಉದ್ಯೋಗ ಸೇರಿದ್ದು, ಶೇ. 10ರಷ್ಟು ಉನ್ನತ ವ್ಯಾಸಂಗಕ್ಕೆ ಹೊರ ದೇಶದಲ್ಲಿದ್ದಾರೆ. ಇಲ್ಲಿ ಇಲೆಕ್ಟ್ರಿಕಲ್ ವೆಹಿಕಲ್, ಆರ್ಟಿಫಿಶಿಯಲ್ ಇಂಟಲಿಜನ್ಸ್ ಹಾಗೂ ಭಾರತೀಯ ಭಾಷೆಗಳ ಕುರಿತಾದ ಸಂಶೋಧನೆಗಳು ನಡೆಯುತ್ತಿವೆ

ಧಾರವಾಡ ಐಐಟಿ ಪರಿಸರ ಸ್ನೇಹಿ ಕ್ಯಾಂಪಸ್..!

ಈ ಕ್ಯಾಂಪಸ್‌ನಲ್ಲಿ ಮೊದಲೇ ಇದ್ದ ಆರು ಚಿಕ್ಕ-ಚಿಕ್ಕ ಕೆರೆಗಳು ಹಾಗೂ 400 ಮಾವಿನ ಗಿಡಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಹುಲ್ಲುಹಾಸು ನಿರ್ಮಾಣ ಮಾಡಲು ಮಣ್ಣಿನ ಮರುಪೂರಣ ಮಾಡಲಾಗಿದೆ. ಪ್ರತಿಯೊಂದು ಕಟ್ಟಡಕ್ಕೂ ಮಳೆ ನೀರು ಕೊಯ್ಲು ನಿರ್ಮಿಸಿದ್ದು, ಮಳೆಯಿಂದ ಬಿದ್ದ ನೀರು ಪೋಲಾಗದಂತೆ ಹಾಗೂ ಸೂರ್ಯ ಬಿಸಿಲಿನಿಂದ ಸಿಗುವ ಸೌರಶಕ್ತಿ ಬಳಕೆ, ಘನತ್ಯಾಜ್ಯ ವಿಲೇವಾರಿ ಘಟಕ ಆವರಣದ ವೈಶಿಷ್ಟೃಗಳು. ಐಐಟಿಗೆ ಹೋಗುವ ಸುಮಾರು ಎರಡು ಕಿ.ಮೀ. ಉದ್ದದ ರಸ್ತೆಯನ್ನು ಕೂಡ ಕಟ್ಟಡ ಸಾಮಗ್ರಿ ತ್ಯಾಜ್ಯದಿಂದಲೇ ನಿರ್ಮಿಸಲಾಗಿದೆ. ಇಡೀ ಕ್ಯಾಂಪಸ್​​ನ್ನು ಪರಿಸರ ಸ್ನೇಹಿಯಾಗಿ ರೂಪಿಸಲಾಗಿದ್ದು, ಜೀವವೈವಿಧ್ಯ ಕಾಪಾಡಲು ಇಲ್ಲಿನ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಹಾಗೂ ಇತರೆ ಸಿಬ್ಬಂದಿ ಶಬ್ದ ಮಾಲಿನ್ಯ ಉಂಟು ಮಾಡದೆ ಇರುವ ಇಲೆಕ್ಟ್ರಿಕಲ್ ಬೈಕ್, ಕಾರು ಹಾಗೂ ಸೈಕಲ್‌ಗಳನ್ನು ಮಾತ್ರ ಬಳಸುವಂತೆ ಸೂಚಿಸಲಾಗಿದೆ. ಐದು ಸಾವಿರ ಗಿಡಗಳನ್ನು ಆವರಣದಲ್ಲಿ ನೆಡುವ ಮೂಲಕ ಒಟ್ಟಾರೆ ಉಷ್ಣಾಂಶವನ್ನು 2 ಡಿಗ್ರಿಯಷ್ಟು ಕಡಿಮೆ ಮಾಡಲು ವ್ಯವಸ್ಥೆ ಮಾಡಲಾಗಿದೆ.

ಚಾಲುಕ್ಯ ಮತ್ತು ವಿಜಯನಗರ ಸಾಮ್ರಾಜ್ಯದ ವಾಸ್ತುಶಿಲ್ಪ

ಇದಲ್ಲದರ ಜೊತೆಗೆ ಈ ಕ್ಯಾಂಪಸ್​ನಲ್ಲಿ ಬೇರೆ ವಿಶೇಷತೆಗಳೂ ಇವೆ. ಚಾಲುಕ್ಯ ಮತ್ತು ವಿಜಯ ನಗರ ಸಾಮ್ರಾಜ್ಯದ ವಾಸ್ತುಶಿಲ್ಪವನ್ನು ಮುಖ್ಯದ್ವಾರಕ್ಕೆ ಬಳಸಿಕೊಳ್ಳಲಾಗಿದೆ. ಹಂಪಿಯ ಪ್ರಸಿದ್ಧ ಕಲ್ಲಿನ ರಥ ಐಐಟಿ ಮುಖ್ಯದ್ವಾರದಲ್ಲಿ ಕಂಗೊಳಿಸುತ್ತಿದೆ. ಇನ್ನು, ಆವರಣದಲ್ಲಿ ಆಡಳಿತ ಸೌಧ, ಏಳು ಮಹಡಿಗಳ ಎರಡು ಶೈಕ್ಷಣಿಕ ಸೌಧ, ಜ್ಞಾನ ಸಂಪನ್ಮೂಲ ಮತ್ತು ದತ್ತಾಂಶ ಕೇಂದ್ರ, ಕೇಂದ್ರ ಬೋಧನಾ ಭವನ, ಇನ್ಸ್ಟ್ರುಮೆಂಟೇಶನ್ ಸೆಂಟರ್, ಸಿಬ್ಬಂದಿ ವಸತಿ, ವಿದ್ಯಾರ್ಥಿ ನಿಲಯಗಳು, 700 ಆಸನಗಳುಳ್ಳ ಸಭಾಗೃಹ, ಕ್ರೀಡಾಸೌಲಭ್ಯಗಳು ಮತ್ತು ಕ್ಯಾಂಟೀನ್ ಇರಲಿವೆ. ಕೇಂದ್ರೀಯ ವಿದ್ಯಾಲಯಕ್ಕಾಗಿ ಇದೇ ಆವರಣದಲ್ಲಿ ಪ್ರತ್ಯೇಕ ಕಟ್ಟಡ ನಿರ್ಮಾಣಗೊಳ್ಳಲಿದೆ. ಐಐಟಿ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಹಾಗೂ ಸಿಬ್ಬಂದಿ ಪ್ರತಿಯೊಂದು ವಸ್ತು ಖರೀದಿ ಹಾಗೂ ಇತರೆ ಕೆಲಸ ಕಾರ್ಯಗಳಿಗೆ ಕ್ಯಾಂಪಸ್ ಬಿಟ್ಟು ಹೊರ ಹೋಗದಂತೆ ಎಲ್ಲ ರೀತಿಯ ಸೌಲಭ್ಯಗಳಲ್ಲಿ ಕ್ಯಾಂಪಸ್​ ಒಳಗಡೆಯೇ ಕಲ್ಪಿಸಲಾಗುತ್ತಿರುವುದು ವಿಶೇಷ.

ಭಾರತದಲ್ಲಿಯೇ ಇಂಥ ಉತ್ತಮ ಪರಿಸರ ಹೊಂದಿರುವ ಐಐಟಿ ಇಲ್ಲ – ಪ್ರೊ. ವೆಂಕಪ್ಪಯ್ಯ ದೇಸಾಯಿ

ಇನ್ನು ಟಿವಿ-9 ಡಿಜಿಟಲ್ ಜೊತೆಗೆ ಮಾತನಾಡಿದ ಸಂಸ್ಥೆಯ ನಿರ್ದೇಶಕ ಪ್ರೊ. ವೆಂಕಪ್ಪಯ್ಯ ದೇಸಾಯಿ, ಇಡೀ ಭಾರತದಲ್ಲಿಯೇ ಧಾರವಾಡದ ಐಐಟಿಯಷ್ಟು ಉತ್ತಮ ಪರಿಸರ ಹೊಂದಿರುವ ಐಐಟಿಗಳಿಲ್ಲ. ಹೀಗಾಗಿ ಐಐಟಿ ಕಾಯಂ ಕಟ್ಟಡವನ್ನು ಪರಿಸರ ಪೂರಕವಾಗಿ ಕಟ್ಟಲಾಗಿದ್ದು, ಜಿ.ಆರ್.ಐ.ಎಚ್‌.ಎ. ಸಂಸ್ಥೆಯು ತಮ್ಮ ಗ್ರೀನ್ ರೇಟಿಂಗ್‌ನಲ್ಲಿ ನಮ್ಮ ಸಂಸ್ಥೆ ನೀಲನಕ್ಷೆ ಗುರುತಿಸಿ 5 ಸ್ಟಾರ್ ರ್ಯಾಂಕಿಂಗ್​ ನೀಡಿದೆ. ಇಂತಹ ಸಂಸ್ಥೆಯನ್ನು ಮಾ. 12 ರಂದು ದೇಶದ ಪ್ರಧಾನಿ ನರೇಂದ ಮೋದಿ ಅವರು ಲೋಕಾರ್ಪಣೆಗೊಳಿಸುತ್ತಿರುವುದು ಧಾರವಾಡದ ಹೆಮ್ಮೆಯೇ ಸರಿ.

8 ನೂತನ ವಿಶ್ವವಿದ್ಯಾಲಯಗಳ ಸ್ಥಾಪನೆ: ‘ಕರ್ನಾಟಕ ವಿವಿಗಳ ಕಾಯ್ದೆ-2000’ಕ್ಕೆ ತಿದ್ದುಪಡಿ ತರಲು ಸಚಿವ ಸಂಪುಟದ ಒಪ್ಪಿಗೆ

Leave a Reply

Your email address will not be published. Required fields are marked *