8 ನೂತನ ವಿಶ್ವವಿದ್ಯಾಲಯಗಳ ಸ್ಥಾಪನೆ: ‘ಕರ್ನಾಟಕ ವಿವಿಗಳ ಕಾಯ್ದೆ-2000’ಕ್ಕೆ ತಿದ್ದುಪಡಿ ತರಲು ಸಚಿವ ಸಂಪುಟದ ಒಪ್ಪಿಗೆ

8 ನೂತನ ವಿಶ್ವವಿದ್ಯಾಲಯಗಳ ಸ್ಥಾಪನೆ: ‘ಕರ್ನಾಟಕ ವಿವಿಗಳ ಕಾಯ್ದೆ-2000’ಕ್ಕೆ ತಿದ್ದುಪಡಿ ತರಲು ಸಚಿವ ಸಂಪುಟದ ಒಪ್ಪಿಗೆ.

ಬೆಂಗಳೂರು:

ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ಕನಿಷ್ಠ ಒಂದು ವಿಶ್ವವಿದ್ಯಾಲಯವಾದರೂ ಇರಿಸಲು ರಾಜ್ಯ  ಬಿಜೆಪಿ ಸರ್ಕಾರ ಚಿಂತನೆ ಮಾಡಿದೆ . ಇದರ ಭಾಗವಾಗಿ, 2022-23ರ ಬಜೆಟ್‌ನಲ್ಲಿ ಹೊಸ ಮಾದರಿಯ 7 ನೂತನ ವಿಶ್ವವಿದ್ಯಾಲಯಗಳನ್ನು ಆರಂಭಿಸುವುದಾಗಿ ಘೋಷಿಸಲಾಗಿತ್ತು. ಕಡಿಮೆ ಸ್ಥಳಾವಕಾಶ, ಕಡಿಮೆ ಸಿಬ್ಬಂದಿ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಬಲದೊಂದಿಗೆ ಕೆಲಸ ಮಾಡುವುದು ಈ ನೂತನ ವಿಶ್ವವಿದ್ಯಾಲಯಗಳ ಗುಣಲಕ್ಷಣಗಳಾಗಿವೆ. ಇದರಂತೆ ಚಾಮರಾಜನಗರ, ಬೀದರ್, ಹಾವೇರಿ, ಹಾಸನ, ಕೊಡಗು, ಕೊಪ್ಪಳ ಮತ್ತು ಬಾಗಲಕೋಟೆಗಳಲ್ಲಿ ಹೊಸ ವಿ.ವಿ.ಗಳು ತಲೆಯೆತ್ತಲಿವೆ. ಇವುಗಳ ಜತೆಗೆ, ಇದುವರೆಗೂ ಏಕೀಕೃತ ವಿಶ್ವವಿದ್ಯಾಲಯವನ್ನು ಹೊಂದಿದ್ದ ಮಂಡ್ಯದ ಸರಕಾರಿ ಕಾಲೇಜನ್ನು ಕೂಡ ಇಡೀ ಜಿಲ್ಲೆಗೆ ಅನ್ವಯವಾಗುವಂತೆ ಹೊಸ ವಿಶ್ವವಿದ್ಯಾಲಯವಾಗಿ ಮಾಡಲಾಗುತ್ತಿದೆ.

ಈ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿರುವ ಪ್ರಾದೇಶಿಕ ಅಸಮಾನತೆಯನ್ನು ನಿವಾರಿಸಿ, ವಿದ್ಯಾರ್ಥಿಗಳಿಗೆ ಅವರವರ ಊರುಗಳ ಸಮೀಪದಲ್ಲೇ ಗುಣಮಟ್ಟದ ಶಿಕ್ಷಣ ಒದಗಿಸಲು ಬದ್ಧವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ.

ನೂತನ ವಿಶ್ವವಿದ್ಯಾಲಯಗಳಿಗೆ ಸಂಬಂಧಪಟ್ಟ ಸಂಕ್ಷಿಪ್ತ ವಿವರಗಳು ಕೆಳಕಂಡಂತಿವೆ-

ಚಾಮರಾಜನಗರ ವಿಶ್ವವಿದ್ಯಾಲಯ:
ರಾಜ್ಯದ ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲಿ ಒಂದಾದ ಚಾಮರಾಜನಗರದ ಕಾಲೇಜುಗಳು ಮೊದಲಿನಿಂದಲೂ ಮೈಸೂರು ವಿವಿ ವ್ಯಾಪ್ತಿಯಲ್ಲೇ ಇದ್ದವು. ಕ್ರಮೇಣ ಇಲ್ಲಿ ಮೈಸೂರು ವಿವಿ ವತಿಯಿಂದ ಸ್ನಾತಕೋತ್ತರ ಕೇಂದ್ರವೊಂದನ್ನು ಸ್ಥಾಪಿಸಲಾಗಿತ್ತು. ಈಗ ಈ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಯ ನಿಟ್ಟಿನಲ್ಲಿ ನೂತನ ವಿಶ್ವವಿದ್ಯಾಲಯವನ್ನೇ ಆರಂಭಿಸಲಾಗುತ್ತಿದೆ. ಇದರ ವ್ಯಾಪ್ತಿಗೆ ಜಿಲ್ಲೆಯಲ್ಲಿರುವ 18 ಪ್ರಥಮ ದರ್ಜೆ ಕಾಲೇಜುಗಳು ಬರಲಿವೆ.

ಹಾಸನ ವಿಶ್ವವಿದ್ಯಾಲಯ:
ಮೈಸೂರು ವಿವಿ ವ್ಯಾಪ್ತಿಯಲ್ಲಿದ್ದ ಹಾಸನದಲ್ಲಿ ಮೂರು ದಶಕಗಳಿಂದಲೂ ಹೇಮಗಂಗೋತ್ರಿ ಎನ್ನುವ ಹೆಸರಿನ ಸ್ನಾತಕೋತ್ತರ ಕೇಂದ್ರ ಮಾತ್ರವೇ ಇತ್ತು. ಈಗ ಇಲ್ಲೂ ಒಂದು ಪ್ರತ್ಯೇಕ ವಿ.ವಿ.ಯನ್ನು ಸ್ಥಾಪಿಸಲಾಗುತ್ತಿದೆ. ಇದರ ವ್ಯಾಪ್ತಿಯಲ್ಲಿ 36 ಕಾಲೇಜುಗಳು ಕಾರ್ಯ ನಿರ್ವಹಿಸಲಿವೆ.

ಹಾವೇರಿ ವಿಶ್ವವಿದ್ಯಾಲಯ:
ಧಾರವಾಡದ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿದ್ದ ಜಿಲ್ಲೆಯಲ್ಲಿ ಒಂದು ಸ್ವತಂತ್ರ ವಿಶ್ವವಿದ್ಯಾಲಯ ಇರಬೇಕೆನ್ನುವುದು ಈ ಭಾಗದ ಜನರ ಬಹುದಿನಗಳ ಕನಸಾಗಿತ್ತು. ಇದಕ್ಕೆ ಸ್ಪಂದಿಸಿ, ಸ್ಥಾಪಿಸುತ್ತಿರುವ ನೂತನ ಹಾವೇರಿ ವಿ.ವಿ.ಯಲ್ಲಿ ಜಿಲ್ಲೆಯ 40 ಪ್ರಥಮ ದರ್ಜೆ ಕಾಲೇಜುಗಳು ಇರಲಿವೆ.

ಬೀದರ್ ವಿಶ್ವವಿದ್ಯಾಲಯ:
ಬೀದರ್ ಜಿಲ್ಲೆಯು ಇದುವರೆಗೂ ಗುಲ್ಬರ್ಗ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿತ್ತು. ಕರ್ನಾಟಕದ ತುತ್ತತುದಿಯಲ್ಲಿರುವ ಈ ಜಿಲ್ಲೆಯಲ್ಲಿ ಒಳ್ಳೆಯ ಶೈಕ್ಷಣಿಕ ಪರಿಸರವಿದೆ. ಇದನ್ನು ಪರಿಗಣಿಸಿ ಹೊಸ ವಿಶ್ವವಿದ್ಯಾಲಯವನ್ನು ಇಲ್ಲಿಗೆ ಮಂಜೂರು ಮಾಡಲಾಗಿದೆ. ಇದರಡಿಯಲ್ಲಿ ಜಿಲ್ಲೆಯ 140 ಪ್ರಥಮ ದರ್ಜೆ ಕಾಲೇಜುಗಳು ಇರಲಿವೆ.

ಕೊಡಗು ವಿಶ್ವವಿದ್ಯಾಲಯ:
ಮಂಗಳೂರು ವಿಶ್ವವಿದ್ಯಾಲಯದ ಅಡಿಯಲ್ಲಿದ್ದ ಕೊಡಗು ಜಿಲ್ಲೆಯಲ್ಲಿ ಇನ್ನು ಮುಂದೆ ಸ್ವತಂತ್ರವಾದ ಪ್ರತ್ಯೇಕ ವಿ.ವಿ.ಯೇ ಮೈದಾಳಲಿದೆ. ಇದರಡಿಯಲ್ಲಿ 24 ಕಾಲೇಜುಗಳು ಬರಲಿವೆ.

ಕೊಪ್ಪಳ ವಿಶ್ವವಿದ್ಯಾಲಯ:
ಮೊದಲು ಗುಲ್ಬರ್ಗ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿದ್ದ ಕೊಪ್ಪಳ ಜಿಲ್ಲೆಯು ಇತ್ತೀಚೆಗೆ ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿ.ವಿ.ಯ ಪರಿಧಿಯಲ್ಲಿತ್ತು. ನೂತನ ವಿ.ವಿ.ಯಲ್ಲಿ 40 ಕಾಲೇಜುಗಳು ಇರಲಿವೆ.

ಬಾಗಲಕೋಟೆ ವಿಶ್ವವಿದ್ಯಾಲಯ:
ಜಿಲ್ಲೆಯ ಪ್ರಥಮ ದರ್ಜೆ ಕಾಲೇಜುಗಳು ಇದುವರೆಗೂ ಬೆಳಗಾವಿಯ ಶ್ರೀ ರಾಣಿ ಚೆನ್ನಮ್ಮ ವಿವಿ ವ್ಯಾಪ್ತಿಯಲ್ಲಿದ್ದವು. ನೂತನ ವಿ.ವಿ.ಯಡಿಯಲ್ಲಿ 71 ಕಾಲೇಜುಗಳು ಇರಲಿವೆ.

ಮಂಡ್ಯ ವಿಶ್ವವಿದ್ಯಾಲಯ:
ಮಂಡ್ಯ ಜಿಲ್ಲೆಯು ಇದುವರೆಗೆ ಮೈಸೂರು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿತ್ತು. ಇತ್ತೀಚೆಗೆ, ಇಲ್ಲಿನ ಸರಕಾರಿ ಕಾಲೇಜನ್ನು ಏಕೀಕೃತ ವಿ.ವಿ. ಆಗಿ ಮಾಡಿದ್ದು  ಈಗ ಜಿಲ್ಲಾ ವ್ಯಾಪ್ತಿಗೆ ನೂತನ ವಿ.ವಿ.ಯನ್ನು ಆರಂಭಿಸಲಾಗುತ್ತಿದೆ. ಇದರಡಿಯಲ್ಲಿ ಜಿಲ್ಲೆಯ ಎಲ್ಲಾ ಪ್ರಥಮ ದರ್ಜೆ ಕಾಲೇಜುಗಳೂ ಬರಲಿವೆ.

ಇಂದು ಉತ್ತರ ಪ್ರದೇಶ ನೂತನ ಮುಖ್ಯಮಂತ್ರಿಯಾಗಿ ಯೋಗಿ(ಬುಲ್ಡೋಜರ್ ಬಾಬಾ) ಪ್ರಮಾಣ ವಚನ ಸ್ವೀಕಾರ

 

Leave a Reply

Your email address will not be published. Required fields are marked *