ನವದೆಹಲಿ: ಆ್ಯಸಿಡ್ ದಾಳಿಗೆ ಒಳಗಾಗಿ ಬದುಕುಳಿದ 17 ವರ್ಷದ ಹುಡುಗಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಾರ್ಖಂಡ್‌ನಿಂದ ದೆಹಲಿಗೆ ಏರ್‌ಲಿಫ್ಟ್ ಮಾಡಲಾಗಿದೆ.
ಈ ಕುರಿತು ಜಾರ್ಖಂಡ್ ರಾಜ್ಯ ಸರ್ಕಾರ ಮಾಹಿತಿ ನೀಡಿದೆ. ರಾಜೇಂದ್ರ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನ ವೈದ್ಯಕೀಯ ಮಂಡಳಿಯು ಬಾಲಕಿಯನ್ನು ದೆಹಲಿಯ ಏಮ್ಸ್‌ಗೆ ಶಿಫಾರಸು ಮಾಡಿದೆ.
ರಿಮ್ಸ್ ಸೂಪರಿಂಟೆಂಡೆಂಟ್ ನೇತೃತ್ವದಲ್ಲಿ ರಚನೆಯಾದ ವೈದ್ಯಕೀಯ ಮಂಡಳಿ ನೀಡಿದ ವರದಿಯ ಆಧಾರದ ಮೇಲೆ ಮುಖ್ಯಮಂತ್ರಿ ಹೇಮಂತ್ ಸೊರೆನ್ ಬುಧವಾರ ಬಾಲಕಿಯನ್ನು ಏರ್‌ಲಿಫ್ಟ್ ಮಾಡುವ ನಿರ್ಧಾರ ಕೈಗೊಂಡರು ಎಂದು ಮುಖ್ಯಮಂತ್ರಿಗಳ ಸಚಿವಾಲಯದ ಪ್ರಕಟಣೆ ತಿಳಿಸಿದೆ.
ಆ್ಯಸಿಡ್ ಸಂತ್ರಸ್ತೆ ಮತ್ತು ಆಕೆಯ ಕುಟುಂಬಕ್ಕೆ ಎಲ್ಲಾ ಸಹಕಾರ ನೀಡುವಂತೆ ಸೋರೆನ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ನಿಟ್ಟಿನಲ್ಲಿ ಅಗತ್ಯ ವ್ಯವಸ್ಥೆಗಳೊಂದಿಗೆ ಸಂತ್ರಸ್ತೆಗೆ ಉತ್ತಮ ಚಿಕಿತ್ಸೆ ಕೊಡಿಸಲು ರಾಂಚಿ ಡಿಸಿ ಅವರು ದೆಹಲಿಗೆ ಸ್ಥಳಾಂತರಿಸುವ ಕ್ರಮ ಕೈಗೊಂಡಿದ್ದಾರೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.
ಜಾರ್ಖಂಡ್‌ನ ಚತ್ರಾ ಜಿಲ್ಲೆಯ 17ರ ಹುಡುಗಿ ಆಗಸ್ಟ್ 5 ರಂದು ಆ್ಯಸಿಡ್ ದಾಳಿಗೆ ಒಳಗಾಗಿದ್ದಳು. ಅದೇ ದಿನ ಆರೋಪಿಯನ್ನು ಬಂಧಿಸಲಾಗಿದ್ದು, ಕಾನೂನು ಪ್ರಕ್ರಿಯೆ ನಡೆಯುತ್ತಿದೆ ಎಂದು ಛತ್ರದ ಉಪ ಆಯುಕ್ತ ಅಬು ಇಮ್ರಾನ್ ತಿಳಿಸಿದ್ದಾರೆ.