ಸಿಕ್ಕಸಿಕ್ಕವರ ಪವರ್ ಬ್ಯಾಂಕ್ ಬಳಸುತ್ತಿದ್ದೀರಾ ನಿಮ್ಮ ವೈಯಕ್ತಿಕ ಮಾಹಿತಿ ಸೋರುತ್ತಿರುವುದು ಎಚ್ಚರ

ಬೆಂಗಳೂರು: ಡಿಜಿಟಲ್ ಯುಗದಲ್ಲಿ ಜನ ಸ್ಮಾರ್ಟ್ ಆದಷ್ಟು ಸಮಸ್ಯೆಗಳು ಕೂಡ ಹೆಚ್ಚಾಗುತ್ತಿವೆ. ಇಷ್ಟು ದಿನ ಮೊಬೈಲ್ ಆ್ಯಪ್‍ಗಳಿಂದ ಸೈಬರ್ ಕಳ್ಳರಿಗೆ ಆಹಾರ ಆಗುತ್ತಿದ್ದ ಸಾಮಾನ್ಯ ಜನರು, ಈಗ ಜ್ಯೂಸ್ ಜಾಕಿಂಗ್ ಎನ್ನುವ ದಂಧೆಗೆ ಗೊತ್ತಿಲ್ಲದ ಹಾಗೆ ಸಿಕ್ಕಿಬೀಳುತ್ತಿದ್ದಾರೆ.

ಮೊಬೈಲ್ ಚಾರ್ಜಿಂಗ್ ಮೂಲಕವೂ ಜನರು ತಮ್ಮ ಡೇಟಾವನ್ನು ಕಳೆದುಕೊಳ್ಳುತ್ತಿದ್ದಾರೆ ಎನ್ನುವ ಆತಂಕದ ವರದಿಯನ್ನು ಸೈಬರ್ ತಜ್ಞರು ಬಿಚ್ಚಿಟ್ಟಿದ್ದಾರೆ. ಖಾಸಗಿ ಚಾರ್ಜಿಂಗ್ ಸ್ಟೇಷನ್ ಅಥವಾ ಅಪರಿಚಿತ ವ್ಯಕ್ತಿಗಳ ಪವರ್ ಬ್ಯಾಂಕ್ ಬಳಕೆ ಮಾಡುವಾಗ ವೈರಸ್‍ಗಳು ನಮ್ಮ ಮೊಬೈಲ್‍ನಲ್ಲಿ ಆಕ್ಟಿವ್ ಆಗಿರಲಿದ್ದು, ಈ ಮೂಲಕ ನಮ್ಮ ಮೊಬೈಲ್‍ನಲ್ಲಿನ ಡೇಟಾವನ್ನು ನಮಗೆ ಗೊತ್ತೇ ಆಗದ ಹಾಗೇ ಸೈಬರ್ ಕಿರಾತಕರು ಕದಿಯುತ್ತಿದ್ದಾರೆ.

ವಿಮಾನ ನಿಲ್ದಾಣ, ಬಸ್ ನಿಲ್ದಾಣ, ರೈಲ್ವೇ ನಿಲ್ದಾಣಗಳು, ಉದ್ಯಾನವನಗಳು ಮತ್ತು ಮಾಲ್‍ಗಳಲ್ಲಿ ಉಚಿತ ಚಾರ್ಜಿಂಗ್ ಪಾಯಿಂಟ್‍ಗಳನ್ನು ನೀಡುವ ಸಾರ್ವಜನಿಕ ಸ್ಥಳಗಳನ್ನು ಹ್ಯಾಕರ್‌ಗಳು ಗುರಿಯಾಗಿಸಿ ಜನರನ್ನು ಬಲಿಪಶುಗಳನ್ನಾಗಿಸುತ್ತಾರೆ. ಚಾರ್ಜಿಂಗ್‍ಗಾಗಿ ಬಳಸುವ ಯುಎಸ್‍ಬಿ ಪೋರ್ಟ್‍ಗಳು ಡೇಟಾ ಕೇಬಲ್ ಒಂದೇ ಆಗಿರುವುದರಿಂದ ಮೊಬೈಲ್‍ನಲ್ಲಿರುವ ವ್ಯಕ್ತಿಯ ಮಾಹಿತಿಯನ್ನು ಸುಲಭವಾಗಿ ಕದಿಯುವ ತಂತ್ರವನ್ನಾಗಿ ಹ್ಯಾಕರ್‌ಗಳು ಬಳಸುತ್ತಿದ್ದಾರೆ. ಹೀಗಾಗಿ ಬ್ಯಾಂಕಿಂಗ್ ಹಾಗೂ ಸೋಷಿಯಲ್ ಮೀಡಿಯಾ ಪ್ರೊಫೈಲ್‌ಗಳು, ವೈಯಕ್ತಿಕ ಡೇಟಾಕ್ಕಾಗಿ ಬಳಸುವ ಪಾಸ್‍ವರ್ಡ್‍ಗಳ ಬಗ್ಗೆ ಹ್ಯಾಕರ್‌ಗಳು ತಿಳಿದುಕೊಂಡು, ಅದನ್ನು ಹ್ಯಾಕ್ ಮಾಡಿ ಅವರಿಗೆ ಬೇಕಾದ ಮಾಹಿತಿಯನ್ನು ಸರಾಗವಾಗಿ ಕದಿಯುತ್ತಾರೆ. ಅವರಿಗೆ ಬೇಕಾದಂತೆ ಪಾಸ್‍ವರ್ಡ್‍ಗಳನ್ನು ಬದಲಾಯಿಸಿಕೊಂಡು ನಿಮ್ಮ ಗೌಪ್ಯ ಮಾಹಿತಿಯನ್ನು ಕದಿಯುವಂತ ವ್ಯವಸ್ಥಿತ ಜಾಲ ನಡೆಯುತ್ತಿದೆ.

ಈ ದಂಧೆಗೆ ಸೈಬರ್ ತಜ್ಞರ ಭಾಷೆಯಲ್ಲಿ ಜ್ಯೂಸ್ ಜಾಕಿಂಗ್ ಅಂತಾ ಕರೆಯುತ್ತಾರೆ. ಸದ್ಯ ಭಾರತದಲ್ಲಿ ಇತ್ತೀಚೆಗೆ ಇಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಸಾರ್ವಜನಿಕರೂ ಹೆಚ್ಚು ಎಚ್ಚರಿಕೆ ವಹಿಸಬೇಕು, ಆದಷ್ಟು ಖಾಸಗಿ ಚಾರ್ಜಿಂಗ್ ಸ್ಟೇಷನ್‍ಗಳ ಬಳಕೆ ಮಾಡದಂತೆ ಸೈಬರ್ ತಜ್ಞರು ಸಲಹೆ ನೀಡಿದ್ದಾರೆ.1

Leave a Reply

Your email address will not be published. Required fields are marked *