ಗಾಂಧಿನಗರ: ಗುಜರಾತ್‍ನ 17ನೇ ಮುಖ್ಯಮಂತ್ರಿಯಾಗಿ ಬಿಜೆಪಿ (BJP) ನಾಯಕ ಭೂಪೇಂದ್ರ ಪಟೇಲ್ (Bhupendra Patel) ಸೋಮವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ರಾಜ್ಯ ಬಿಜೆಪಿ ಮುಖ್ಯಸ್ಥ ಸಿ.ಆರ್. ಪಾಟೀಲ್ ತಿಳಿಸಿದರು.
ಈಗಾಗಲೇ ಗುಜರಾತ್‍ನಲ್ಲಿ (Gujarat) ಬಹುತೇಕ ಕ್ಷೇತ್ರಗಳ ಚುನಾವಣೆ (Election) ಪಕ್ಕಾ ಆಗಿದ್ದು, ಬಿಜೆಪಿ ಭರ್ಜರಿ ಗೆಲುವು ಸಾಧಿಸಲು ಸಿದ್ಧವಾಗಿದೆ. ಸತತ 7ನೇ ಬಾರಿಗೆ ಬಿಜೆಪಿ ಸರ್ಕಾರ ರಚಿಸುವ ಮೂಲಕ ದಾಖಲೆಯನ್ನು ನಿರ್ಮಾಣ ಮಾಡಲಿದೆ. ಹಾಲಿ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಘಟ್ಲೋಡಿಯಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಇದೀಗ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, 1.92 ಲಕ್ಷ ಮತಗಳಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ.
ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಆಗಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಡಿಸೆಂಬರ್ 12ರಂದು ಮಧ್ಯಾಹ್ನ 2 ಗಂಟೆಗೆ ಭೂಪೇಂದ್ರ ಪಟೇಲ್ ಗುಜರಾತ್ ಮುಖ್ಯಮಂತ್ರಿಯಾಗಿ ಎರಡನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಪ್ರಮಾಣ ವಚನ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.