ವಿವೇಕ್ ಅಗ್ನಿಹೋತ್ರಿ ಮುಂದಿನ ಚಿತ್ರ ‘ದಿ ಡೆಲ್ಲಿ ಫೈಲ್ಸ್​​’ ವಿರೋಧಿಸಿದ ಮಹಾರಾಷ್ಟ್ರ ಸಿಖ್ ಅಸೋಸಿಯೇಷನ್; ಕಾರಣವೇನು?

ಚಲನಚಿತ್ರ ನಿರ್ಮಾಪಕರು ಹಾಗೂ ನಿರ್ದೇಶಕರು ‘ಸಮಾಜದಲ್ಲಿರುವ ಶಾಂತಿಗೆ ಭಂಗ ತರುವುದನ್ನು ನಿಲ್ಲಿಸಬೇಕು’ ಎಂದು ಮಹಾರಾಷ್ಟ್ರ ಸಿಖ್ ಅಸೋಸಿಯೇಷನ್ ​​ಸೋಮವಾರ ಹೇಳಿದೆ. ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ತಮ್ಮ ಮುಂದಿನ ಚಲನಚಿತ್ರ ‘ದಿ ಡೆಲ್ಲಿ ಫೈಲ್ಸ್’ ಘೋಷಿಸಿದ ಬೆನ್ನಲ್ಲೇ ಈ ಹೇಳಿಕೆ ಬಂದಿದೆ. ವಿವೇಕ್ ನಿರ್ದೇಶನದ ‘ದಿ ಕಾಶ್ಮೀರ್ ಫೈಲ್ಸ್’ ಈ ವರ್ಷದ ಅತಿದೊಡ್ಡ ಬ್ಲಾಕ್‌ಬಸ್ಟರ್‌ಗಳಲ್ಲಿ ಒಂದಾಗಿ ಹೊರಹೊಮ್ಮಿತ್ತು. ಇತ್ತೀಚೆಗೆಷ್ಟೇ ಇದೇ ಸರಣಿಯಲ್ಲಿ ಹೊಸ ಚಿತ್ರವನ್ನು ನಿರ್ದೇಶಕ ಘೋಷಿಸಿದ್ದರು. ಸ್ವಾತಂತ್ರ್ಯಾನಂತರದ ಆದರೆ, ಇತಿಹಾಸದಲ್ಲಿ ಹೇಳದ ಕತೆಗಳನ್ನು ತೆರೆ ಮೇಲೆ ತರುವ ಪ್ರಯತ್ನದ ಚಿತ್ರ ಸರಣಿಯಲ್ಲಿ ‘ದಿ ಡೆಲ್ಲಿ ಫೈಲ್ಸ್’ ಮೂರನೇ ಚಿತ್ರವಾಗಿದೆ. ಇದಕ್ಕೂ ಮುನ್ನ ‘ದಿ ತಾಷ್ಕೆಂಟ್ ಫೈಲ್ಸ್’ ಹಾಗೂ ‘ದಿ ಕಾಶ್ಮೀರ್ ಫೈಲ್ಸ್’ ತೆರೆಕಂಡಿದ್ದವು. ಡೆಲ್ಲಿ ಫೈಲ್ಸ್​ನಲ್ಲಿ 1984 ರ ಸಿಖ್-ವಿರೋಧಿ ದಂಗೆಗಳ ಕುರಿತು ಕತೆ ಸಾಗಲಿದೆ ಎನ್ನಲಾಗಿದೆ. ಆದರೆ ನಿರ್ದೇಶಕರು ಕತೆಯ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ನೀಡಿಲ್ಲ. ಇದೀಗ ಮಹಾರಾಷ್ಟ್ರ ಸಿಖ್ ಅಸೋಸಿಯೇಷನ್ ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ‘​ಸೃಜನಶೀಲ ಅಭಿವ್ಯಕ್ತಿ ಮತ್ತು ವೈಯಕ್ತಿಕ ಲಾಭದ ಹೆಸರಿನಲ್ಲಿ ಸಿಖ್ ದಂಗೆಗಳಂತಹ ಮಾನವಕುಲದ ದುರದೃಷ್ಟಕರ ದುರಂತ ಅಧ್ಯಾಯಗಳನ್ನು ವ್ಯಾಪಾರೀಕರಣ ಮಾಡುವುದನ್ನು ವಿರೋಧಿಸುತ್ತದೆ’ ಎಂದು ತಿಳಿಸಲಾಗಿದೆ.

ಮಹಾರಾಷ್ಟ್ರ ಸಿಖ್ ಅಸೋಸಿಯೇಷನ್ ತನ್ನ ಪ್ರಕಟಣೆಯಲ್ಲಿ ‘‘ಸಮಾಜದಲ್ಲಿ ಈಗಾಗಲೇ ಧ್ರುವೀಕರಣವಿದೆ ಮತ್ತು ವಿವಿಧ ಸಮುದಾಯಗಳ ನಡುವೆ ದ್ವೇಷವಿದೆ. ಇತಿಹಾಸದ ದುರದೃಷ್ಟಕರ ದುರಂತ ಘಟನೆಗಳನ್ನು ವಾಣಿಜ್ಯಾತ್ಮಕ ದೃಷ್ಟಿಯಲ್ಲಿ (ಸಿನಿಮಾ) ಚಿತ್ರಿಸುವುದು ಸಮಾಜದಲ್ಲಿ ಅಶಾಂತಿಗೆ ಕಾರಣವಾಗುತ್ತದೆ’’ ಎಂದು ಸಂಘಟನೆ ಅಭಿಪ್ರಾಯ ಹಂಚಿಕೊಂಡಿದೆ.

‘ಭಾರತವು ವೈವಿಧ್ಯತೆಯಲ್ಲಿ ಏಕತೆಯ ಭೂಮಿಯಾಗಿದೆ. ವಿಭಿನ್ನ ನಂಬಿಕೆಗಳನ್ನು ಪ್ರತಿಪಾದಿಸುವ ಜನರು ಪರಸ್ಪರ ಸಾಮರಸ್ಯ ಮತ್ತು ಶಾಂತಿಯಿಂದ ಬದುಕಲು ಪ್ರಯತ್ನಿಸಿದ್ದಾರೆ. ಸಿಖ್ ಸಮುದಾಯವು ಇತಿಹಾಸದಲ್ಲಿನ ಕರಾಳ ಅಧ್ಯಾಯವನ್ನು ಮರೆಯಲು ಪ್ರಯತ್ನಿಸುತ್ತಿದೆ’ ಎಂದು ಹೇಳಿಕೆಯನ್ನು ತಿಳಿಸಲಾಗಿದೆ. ಸಿಖ್ ಗಲಭೆಗಳನ್ನು ಖಂಡಿಸಲಾಗಿದೆ. ಪುಸ್ತಕಗಳನ್ನು ಪ್ರಕಟಿಸಲಾಗಿದೆ. ಸಾಕ್ಷ್ಯಚಿತ್ರಗಳನ್ನು ತಯಾರಿಸಲಾಗಿದೆ. ಆದರೆ ಇದುವರೆಗೆ ಅದನ್ನು ವಾಣಿಜ್ಯೀಕರಣಗೊಳಿಸಿಲ್ಲ ಎಂದಿದೆ ಸಂಘಟನೆ. ಇಂತಹ ಚಿತ್ರದಿಂದ ಹಿಂದೆ ಸರಿಯಬೇಕು ಎಂದು ಎಲ್ಲರ ಪರವಾಗಿ ಸಂಘಟನೆ ವಿವೇಕ್ ಅಗ್ನಿಹೋತ್ರಿಯವರನ್ನು ತನ್ನ ಹೇಳಿಕೆಯಲ್ಲಿ ಒತ್ತಾಯಿಸಿದೆ.

 

ವಿವೇಕ್ ಅಗ್ನಿಹೋತ್ರಿ ಪ್ರತಿಕ್ರಿಯೆ ಏನು?

ಎನ್​ಡಿಟಿವಿ ಸಿಖ್ ಸಂಘಟನೆಯ ಹೇಳಿಕೆಗೆ ವಿವೇಕ್ ಅಗ್ನಿಹೋತ್ರಿ ನೀಡಿದ ಪ್ರತಿಕ್ರಿಯೆಯನ್ನು ವರದಿ ಮಾಡಿದೆ. ನಿರ್ಮಾಪಕರಾಗಿ ಮತ್ತು ತಮ್ಮ ಆತ್ಮಸಾಕ್ಷಿಯಂತೆ ಚಿತ್ರ ಮಾಡುಬವ ಹಕ್ಕನ್ನು ತಾವು ಹೊಂದಿರುವುದಾಗಿ ಹೇಳಿರುವ ವಿವೇಕ್, ಶೀರ್ಷಿಕೆಯ ಹೊರತಾಗಿ ತಾವಿನ್ನೂ ಕತೆಯನ್ನು ಬಹಿರಂಗಪಡಿಸಿಲ್ಲ ಎಂದಿದ್ದಾರೆ.

‘‘ಇದು ಯಾವ ಸಂಘಟನೆ ಎಂದು ನನಗೆ ತಿಳಿದಿಲ್ಲ. ನಾನು ಭಾರತೀಯ, ನಾನು ಪ್ರಜಾಸತ್ತಾತ್ಮಕ ರಾಷ್ಟ್ರದಲ್ಲಿ ವಾಸಿಸುತ್ತಿದ್ದೇನೆ. ಅದು ನನಗೆ ಅಭಿವ್ಯಕ್ತಿಯ ಸಂಪೂರ್ಣ ಸ್ವಾತಂತ್ರ್ಯ ನೀಡಿದೆ. ನನ್ನ ಆತ್ಮಸಾಕ್ಷಿಯು ಏನು ಹೇಳುತ್ತದೋ ಅದನ್ನು ಮಾಡುತ್ತೇನೆ. ನಾನು ಯಾರ ಬೇಡಿಕೆ ಅಥವಾ ಸಂಘಟನೆಗಳಿಗೆ ಸೇವಕನಲ್ಲ’’ ಎಂದಿದ್ದಾರೆ ವಿವೇಕ್ ಅಗ್ನಿಹೋತ್ರಿ.

‘‘ಹೊಸ ಚಿತ್ರದ ಕತೆಯನ್ನು ಘೋಷಿಸಿಲ್ಲ. ಜನರೇ ಊಹೆ ಮಾಡುತ್ತಿದ್ದಾರೆ. ಅವರು ಅದನ್ನು ಮಾಡುತ್ತಾರೆ ಸರಿ. ಆದರೆ ನಾನು ಮಾಡುವ ಚಿತ್ರಗಳನ್ನು ಪ್ರದರ್ಶಿಸಬೇಕೆ ಎಂದು ನಿರ್ಧರಿದುವುದು ಸೆನ್ಸಾರ್ ಬೋರ್ಡ್ ಸಿಬಿಎಫ್​ಸಿ ಮಾತ್ರ’’ ಎಂದು ವಿವೇಕ್ ಹೇಳಿದ್ದಾರೆ.

 

Leave a Reply

Your email address will not be published. Required fields are marked *