ಪಂಜಾಬ್ ನಲ್ಲಿನ ಅಭೂತಪೂರ್ವ ಗೆಲುವಿನ ಬಳಿಕ ಅರವಿಂದ್ ಕೇಜ್ರಿವಾಲ್ ವಿವಿಧ ರಾಜ್ಯಗಳಲ್ಲಿ ಆಮ್ ಆದ್ಮಿಯನ್ನು ಗಟ್ಟಿಗೊಳಿಸಲು ಇನ್ನಿಲ್ಲದ ಪರಿಶ್ರಮ ಪಡುತ್ತಿದ್ದಾರೆ. ರಾಷ್ಟ್ರ ನಾಯಕನಾಗಿ ಬೆಳೆಯಲು ಮುಂದಾಲೋಚನೆ ಹಾಕಿಕೊಂಡಿರುವ ಅರವಿಂದ್ ಕೇಜ್ರಿವಾಲ್ ವಿವಿಧ ನಗರಗಳಿಗೆ ಭೇಟಿ ನೀಡಿ ಕಾರ್ಯಕ್ರಮ ಮಾಡುತ್ತಿದ್ದಾರೆ. ಅದರ ಭಾಗವಾಗಿ ಇಂದು ಕರ್ನಾಟಕಕ್ಕೂ ಆಗಮಿಸಿದ್ದರು. ಬೆಂಗಳೂರಿನಲ್ಲಿ ಬೃಹತ್ ಸಮಾವೇಶವನ್ನೂ ಕೆಜ್ರಿವಾಲ್ ಹಮ್ಮಿಕೊಂಡಿದ್ದರು. ಆದರೆ ಅರವಿಂದ್ ಕೇಜ್ರಿವಾಲ್ ರ ಇಂದಿನ ಸಮಾವೇಶ ಸಂಪೂರ್ಣವಾಗಿ ಫ್ಲಾಪ್ ಆಗಿದೆ. ಬಂದ ದಾರಿಗೆ ಸುಂಕವಿಲ್ಲ ಎನ್ನುವಂತೆ ಅರವಿಂದ್ ಕೇಜ್ರಿವಾಲ್ ದೆಹಲಿಗೆ ಹೊರಟು ಹೋಗಿದ್ದಾರೆ.

ಇಂದಿನ ಕಾರ್ಯಕ್ರಮಕ್ಕೆ ಸಹಸ್ರಾರು ಜನರು ಸೇರುವ ನಿರೀಕ್ಷೆಯಿತ್ತು. ಆದರೆ ಎಲ್ಲಾ ನಿರೀಕ್ಷೆಗಳು ಹುಸಿಯಾಗಿದ್ದು, ಕೆಲವೇ ನೂರು ಜನ ರಷ್ಟು ಮಾತ್ರ ಸಮಾವೇಶಕ್ಕೆ ಸೇರಿದ್ದರು. ಸಮಾವೇಶಕ್ಕೆ ಬಂದವರಿಗಿಂತ ಸ್ವಯಂಸೇವಕರ ಸಂಖ್ಯೆಯೇ ಜಾಸ್ತಿ ಇದ್ದಂತೆ ಕಂಡು ಬರುತ್ತಿತ್ತು! ಕರ್ನಾಟಕಕ್ಕೆ ಭಾರೀ ನಿರೀಕ್ಷೆ ಇಟ್ಟುಕೊಂಡು ಬಂದಿದ್ದ ಕೇಜ್ರಿವಾಲ್ ಗೆ ಹಿನ್ನಡೆಯಾಗಿದ್ದು, ಕರ್ನಾಟಕದಲ್ಲಿ ನೀರಸ ಸ್ವಾಗತ ದೊರೆತಿದೆ. ಕೇವಲ ಹತ್ತೇ ನಿಮಿಷದಲ್ಲಿ ಭಾಷಣವನ್ನು ಮುಗಿಸಿ ಕೇಜ್ರಿವಾಲ್ ದೆಹಲಿಗೆ ಹಿಂದಿರುಗಿದ್ದಾರೆ. ಇನ್ನು ಕೇಜ್ರಿವಾಲ್ ಆಗಮಿಸುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಗೋ ಬ್ಯಾಕ್ ಕೇಜ್ರಿವಾಲ್ ಟ್ರೆಂಡ್ ದೇಶದಲ್ಲೇ ನಂ.೧ ಆಗಿತ್ತು.
ಕಾರ್ಯಕ್ರಮದಲ್ಲಿ ಕೇಜ್ರಿವಾಲ್ ರನ್ನು ಭೇಟಿಯಾಗಲು ನಾಯಕರ ಕ್ಯೂ ಸಹ ಇರಲಿಲ್ಲ. ರೈತರ ಸಮಾವೇಶದಕ್ಕೆ ತೆರಳಿದರೆ ಅಲ್ಲಿ ಜನರೇ ಇರಲಿಲ್ಲ. ಇನ್ನು ಖಾಲಿ ಸಭೆ ಕಂಡ ಕೇಜ್ರಿವಾಲ್ ಹತ್ತೇ ನಿಮಿಷಕ್ಕೆ ಭಾಷಣ ಮುಕ್ತಾಯ ಮಾಡಿದರು. ಇನ್ನು ಕೇಜ್ರಿ ಭಾಷಣ ಸಹ ಸಪ್ಪೆ ಸಪ್ಪೆಯಾಗಿತ್ತು. ಇದು ರಾಜ್ಯದ ಜನರಿಗೆ ಆಮ್ ಆದ್ಮಿ ಬಗ್ಗೆ ಭರವಸೆ ಇಲ್ಲವಾ ಎನ್ನುವ ಪ್ರಶ್ನೆಯನ್ನು ಹುಟ್ಟುಹಾಕಿದೆ. ಕೇಜ್ರಿವಾಲ್ ರಾಜ್ಯಕ್ಕೆ ಎಂಟ್ರಿಕೊಡುವ ಮೊದಲೇ ತಾಜ್ ವೆಸ್ಟ್ ಎಂಡ್ ನಲ್ಲಿ ಲಕ್ಷಾಂತರ ರೂಪಾಯಿ ಕೊಟ್ಟು ವಾಸ್ತವ್ಯ ಹೂಡುವ ಕುರಿತು ಭಾರೀ ಟೀಕೆ ಕೇಳಿ ಬಂದಿತ್ತು. ಸದಾ ಸರಳತೆಯ ಬಗ್ಗೆ ಮಾತನಾಡೋ ಕೇಜ್ರಿವಾಲ್ ಗೆ ಇಷ್ಟೋಂದು ಐಷಾರಮಿ ಹೋಟೆಲ್ ಬೇಕಾ ಎಂದು ಜನರು ಪ್ರಶ್ನಿಸಿದ್ದರು.
