ಮುಂಬೈ(ಏ.03): ರಂಜಾನ್ ತಿಂಗಳು ಆರಂಭವಾಗುತ್ತಿದ್ದಂತೆ ಮಸೀದಿಗಳಲ್ಲಿ ಧ್ವನಿವರ್ಧಕಗಳ ಮೂಲಕ ಗಟ್ಟಿ ಧ್ವನಿಯಲ್ಲಿ ಪ್ರಾರ್ಥನೆ ಸಲ್ಲಿಸುವ ಬಗ್ಗೆ ಮತ್ತೊಮ್ಮೆ ಚರ್ಚೆ ಆರಂಭವಾಗಿದೆ. ಈ ಬಾರಿ ಮಹಾರಾಷ್ಟ್ರ ನವನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ ಇದರ ವಿರುದ್ಧ ಧ್ವನಿ ಎತ್ತಿದ್ದಾರೆ. ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆಗೆದುಹಾಕುವಂತೆ ಅವರು ಮಹಾರಾಷ್ಟ್ರದ ಉದ್ಧವ್ ಠಾಕ್ರೆ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಮುಂಬೈನ ಮುಸ್ಲಿಂ ಕೊಳೆಗೇರಿಗಳ ಮದರಸಾಗಳಲ್ಲಿ ಪಾಕಿಸ್ತಾನಿ ಬೆಂಬಲಿಗರು ಇರುವ ಬಗ್ಗೆ ರಾಜ್ ಠಾಕ್ರೆ ಮಾತನಾಡಿದ್ದು, ಈ ಮದರಸಾಗಳ ಮೇಲೆ ದಾಳಿ ನಡೆಸುವಂತೆ ಠಾಕ್ರೆ ಪ್ರಧಾನಿ ಮೋದಿಯವರನ್ನು ಒತ್ತಾಯಿಸಿದ್ದಾರೆ.

ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ನಡೆದ ರ್ಯಾಲಿಯಲ್ಲಿ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ರಾಜ್ ಠಾಕ್ರೆ, “ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಏಕೆ ಜೋರಾಗಿ ನುಡಿಸಲಾಗುತ್ತದೆ? ಇದನ್ನು ನಿಲ್ಲಿಸದಿದ್ದರೆ ಮಸೀದಿಗಳ ಹೊರಗೆ ಧ್ವನಿವರ್ಧಕಗಳನ್ನು ಅಳವಡಿಸಿ ಜೋರಾಗಿ ಹನುಮಾನ್ ಚಾಲೀಸಾ ನುಡಿಸಲು ಪ್ರಾರಂಭಿಸುತ್ತೇವೆ ಎಂದು ಉದ್ಧವ್ ಠಾಕ್ರೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. “ನಾನು ಪ್ರಾರ್ಥನೆ ಅಥವಾ ಯಾವುದೇ ನಿರ್ದಿಷ್ಟ ಧರ್ಮದ ವಿರೋಧಿಯಲ್ಲ. ನನ್ನ ಧರ್ಮದ ಬಗ್ಗೆ ನನಗೆ ಹೆಮ್ಮೆ ಇದೆ ಎಂದಿದ್ದಾರೆ. ಇದೇ ವೇಳೆ ತಮ್ಮ ಸೋದರ ಸಂಬಂಧಿ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ವ್ಯಂಗ್ಯವಾಡಿದ ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ, ಚುನಾವಣಾ ಸಮಯದಲ್ಲಿ ತಮ್ಮನ್ನು ವಿರೋಧಿಸಿದ ಶಕ್ತಿಗಳೊಂದಿಗೆ ಮೈತ್ರಿ ಮಾಡಿಕೊಂಡು ಸಿಎಂ ಸರ್ಕಾರ ರಚಿಸಿದ್ದಾರೆ. ಈ ಮೂಲಕ ಮತದಾರರಿಗೆ ದ್ರೋಹ ಬಗೆದಿದ್ದಾರೆ. ಎಂದಿದ್ದಾರೆ.
