ಸಂವಿಧಾನ ಜಾಗೃತಿಗಾಗಿ ದಾವಣಗೆರೆ ಜಿಲ್ಲೆಯಾದ್ಯಂತ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ ನಡೆಯುತ್ತಿದ್ದು ಮಂಗಳವಾರ ಹೊನ್ನಾಳಿ ತಾಲ್ಲೂಕಿನ ಬೇವಿನಹಳ್ಳಿಗೆ ಜಾಥಾ ಆಗಮಿಸಿದಾಗ ಮಾಲಾರ್ಪಣೆ ಮಾಡಿ ಸಂವಿಧಾನಕ್ಕೆ ಗೌರವ ಸೂಚಿಸುವ ಮೂಲಕ ಶಾಸಕರಾದ ಡಿ.ಜಿ.ಶಾಂತನಗೌಡರವರು ಡಾ; ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆ ಸ್ಥಾಪನೆ ಮಾಡುವುದಾಗಿ ಭರವಸೆ ನೀಡಿದರು.
ಜಿಲ್ಲೆಯಲ್ಲಿ ಸಂವಿಧಾನ ಜಾಗೃತಿ ಜಾಥಾ ನಡೆಯುತ್ತಿದ್ದು ಮಂಗಳವಾರ ಸಂಜೆ ಹೊನ್ನಾಳಿ ತಾಲ್ಲೂಕಿನ ಕುಳಗಟ್ಟೆ ಗ್ರಾಮಕ್ಕೆ ಆಗಮಿಸಿದಾಗ ಗ್ರಾಮದ ಜನರು ಹಾಗೂ ಶಾಲಾ, ಕಾಲೇಜಿನ ವಿದ್ಯಾರ್ಥಿಗಳು ವೀಕ್ಷಣೆ ಮಾಡಿ ಸಂವಿಧಾನದ ಪ್ರಸ್ತಾವನೆಯನ್ನು ಓದುವ ಮೂಲಕ ಗೌರವ ಸಲ್ಲಿಸಿದರು.
ಈ ವೇಳೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಗ್ರಾಮಪಂಚಾಯಿತಿ ಅಭಿವೃದ್ದಿ ಅಧಿಕಾರಿ, ವಿವಿಧ ಇಲಾಖೆ ಅಧಿಕಾರಿಗಳು, ದಲಿತ ಸಂಘಟನೆ ಮುಖಂಡರು, ಆಶಾ ಕಾರ್ಯಕರ್ತೆಯರು, ಶಾಲಾ ಶಿಕ್ಷಕರು ಮತ್ತು ಗ್ರಾಮದ ಮಹಿಳೆಯರು ಈ ಜಾಥಾದಲ್ಲಿ ಭಾಗವಹಿಸಿದರು.
ಡಾ; ಬಿ.ಅರ್.ಅಂಬೇಡ್ಕರ್ ರವರು ದೇಶಕ್ಕೆ ನೀಡಿದ ಸಂವಿಧಾನ ಸರ್ವಕಾಲಕ್ಕೂ ಪ್ರಸ್ತುತವಾಗಿದ್ದು ಎಲ್ಲರಿಗೂ ಸಾಮಾಜಿಕ ನ್ಯಾಯ, ಸಮಾನ ಕಾನೂನು, ಅವಕಾಶಗಳನ್ನು ಕಲ್ಪಿಸಿಂತವರು. ಇವರ ತತ್ವಾದರ್ಶಗಳು ದೇಶದ ಜನರಿಗೆ ಸದಾ ಮಾದರಿಯಾಗಿದ್ದು ಇದನ್ನು ಶಾಶ್ವತವಾಗಿಸಲು ಬೇವಿನಹಳ್ಳಿ ಗ್ರಾಮದಲ್ಲಿ ಡಾ; ಬಿ.ಆರ್.ಅಂಬೇಡ್ಕರ್ ರವರ ಪ್ರತಿಮೆ ಜೊತೆಗೆ ಬುದ್ದ, ಬಸವ ಇವರ ಪ್ರತಿಮೆಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಬೇವಿನಹಳ್ಳಿ ಗ್ರಾಮದಲ್ಲಿ ಸ್ವಂತವಾಗಿ ಒಂದು ಎಕರೆ ಜಾಗವನ್ನು ದಲಿತರ ಸಾಮಾಜಿಕ ಕಾರ್ಯಗಳಿಗಾಗಿ ದಾನ ನೀಡುವುದಾಗಿ ವಾಗ್ದಾನ ಮಾಡಿದ ಶಾಸಕರು ದಲಿತ ಸಂಘರ್ಷ ಸಮಿತಿಯಿಂದ ವಿದ್ಯಾರ್ಥಿಗಳಿಗೆ ನೀಡಲಾದ ನೋಟ್ ಪುಸ್ತಕ ಮತ್ತು ಪೆನ್ನುಗಳನ್ನು ವಿತರಣೆ ಮಾಡಿದರು. ಈ ವೇಳೆ ಸಂವಿಧಾನದ ಪ್ರಸ್ತಾವನೆಯನ್ನು ಓದಿದರು.
ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಕೆ.ನಾಗರಾಜ್ ಇವರು ಪ್ರಾಸ್ತಾವಿಕವಾಗಿ ಮಾತನಾಡಿ ಸಂವಿಧಾನ ಜಾಗೃತಿ ಕಾರ್ಯಕ್ರಮವನ್ನು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಳಗಳಲ್ಲಿ ಸಂಚರಿಸುವ ಮೂಲಕ ಜನಸಾಮಾನ್ಯರಲ್ಲಿ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿದ್ದು ಸಾರ್ವಜನಿಕರು ಜಾಥಾ ಬಂದಾಗ ಭಾಗವಹಿಸುವ ಮೂಲಕ ಸಂವಿಧಾನಕ್ಕೆ ಗೌರವ ಸಲ್ಲಿಸಬೇಕೆಂದು ಮನವಿ ಮಾಡಿದರು.
ಫೆಬ್ರವರಿ 7 ರಂದು ಹೊನ್ನಾಳಿ ತಾ; ಲಿಂಗಾಪುರ, ಹುಣಸಗಟ್ಟ, ಕ್ಯಾಸನಕೆರೆ, ಜಿ.ಕೋಮಾರನಹಳ್ಳಿ, ನಿಲಗೋಲ್, ದಾಗಿನಕಟ್ಟೆ, ಬಸವಪಟ್ಟಣನಲ್ಲಿ ಸಂಚರಿಸಿ ಕೋಟೆಹಾಳ್‍ನಲ್ಲಿ ಜಾಥಾ ನಿಲುಗಡೆಯಾಗಲಿದೆ. ಫೆ.8 ರಂದು ಹೊನ್ನಾಳಿ ತಾ; ಕೋಟೆಹಾಳ್, ಕುಂಬುಳೂರು, ಚನ್ನಗಿರಿ ತಾ; ಕತ್ತಲಗೆರೆ, ಕಾರಿಗನೂರು, ದಾವಣಗೆರೆ ತಾ; ಕುಕ್ಕವಾಡ, ಕೈದಾಳ್, ಲೋಕಿಕೆರೆ ಗ್ರಾಮ ಪಂಚಾಯಿತಿಗಳಲ್ಲಿ ಜಾಥಾ ಸಂಚರಿಸಲಿದೆ.
ಈ ವೇಳೆ ಉಪವಿಭಾಗಾಧಿಕಾರಿ ಹುಲ್ಲುಮನೆ ತಿಮ್ಮಣ್ಣ, ಹೊನ್ನಾಳಿ ಹಾಗೂ ನ್ಯಾಮತಿ ತಹಶೀಲ್ದಾರರು ಉಪಸ್ಥಿತರಿದ್ದರು.