ಜಯದೇವಪ್ಪ ಹಾಲಪ್ಪ ಪಟೇಲ್ ಕರ್ನಾಟಕ ರಾಜ್ಯದ 20 ನೇ ಮುಖ್ಯಮಂತ್ರಿ ಅವಿಭಜಿತ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಕಾರಿಗನೂರಿನ ಲಿಂಗಾಯತ ಸಮಾಜದ ಸುಸಂಸ್ಕೃತ ಕುಟುಂಬದಲ್ಲಿ ಜನಿಸಿದ ಧೀಮಂತ ನಾಯಕ ಜಯದೇವಪ್ಪ ಹಾಲಪ್ಪ ಪಟೇಲ್ ಅವರು ಹುಟ್ಟಿದ್ದು 1ನೇ ಅಕ್ಟೋಬರ್ 1930ರಂದು.

ಅಸಾಮಾನ್ಯ ಬುದ್ಧಿವಂತರಾಗಿದ್ದ ಅವರು ಅತಿ ಹೆಚ್ಚು ಪ್ರವಾಸ ಮಾಡಿದ್ದರು. ವಿಶ್ವಕೋಶ ದಂತಹ ಮಾಹಿತಿಯ ಕಣಜ.ಗ್ರಹಿಕೆ – ಅವರಿಗೆ ಭಗವಂತ ನೀಡಿದ್ದ ಬಹುದೊಡ್ಡ ವರ .ತೀಕ್ಷ್ಣಮತಿ. ಸಮಾಧಾನಿ. ಸ್ಥಳದಲ್ಲಿಯೇ ಕಗ್ಗಂಟು ವಿನಂತಹ ಸಮಸ್ಯೆ ಬಗೆಹರಿಸುತ್ತಿದ್ದ ಚತುರ. ಮಾತುಗಾರ. ಮಾತಿನ ಮೂಲಕವೇ ಜನರ ಮನಸ್ಸು ಕದಿಯುತ್ತಿದ್ದ ಮೋಡಿಗಾರ. ಅವರಲ್ಲಿದ್ದ ಓದುವ ಗುಣದ ಜೊತೆಗೆ ಪ್ರವಾಸದ ಅನುಭವಗಳು ಅಂತಸ್ಸಾಮರ್ಥ್ಯವನ್ನು ಹೆಚ್ಚಿಸಿದ್ದವು. ಹೀಗಾಗಿ ಕನ್ನಡಿಗರ ನೆನಪಿನ ಬುತ್ತಿಯಲ್ಲಿದ್ದಾರೆ.

ಅತ್ಯಂತ ಸಾಮಾನ್ಯನ ಜೊತೆಯೂ ಬೆರೆಯುತ್ತಿದ್ದ ದೊಡ್ಡ ಮನುಷ್ಯ. ಉದಾರಿ. ಕರುಣಾಮಯಿ. ಈ ನಾಡು ಸುಧಾರಣೆ ಗೊಳ್ಳಲು ಕಾರಣರಾದ ಡಿ.ದೇವರಾಜ ಅರಸ್ ಅವರ ಪುತ್ರಿಗೂ ಸಂಕಷ್ಟದ ಸಮಯದಲ್ಲಿ ಆರ್ಥಿಕ ನೆರವು ನೀಡಿದ ಕೃತಜ್ಞ. ಸಾಂಸ್ಕ್ರತಿಕ ಮತ್ತು ಧಾರ್ಮಿಕ ಕ್ಷೇತ್ರಗಳ ಪುನರುಜ್ಜೀವನ ಮಾಡಿದ ರಾಯಭಾರಿ.

ಏನೆ ಅಡೆ ತಡೆಗಳು ಬಂದರೂ ಸಾಮಾನ್ಯನ ಕೈಗೆ ಜಿಲ್ಲಾಡಳಿತ ದೊರೆಯಬೇಕೆಂಬ ದೃಷ್ಟಿಯಿಂದ ಹೊಸದಾಗಿ ಏಳು ಜಿಲ್ಲೆಗಳನ್ನು ಸೃಜಿಸಿದ ಸರದಾರ. ಇದರಿಂದ, ಸ್ಥಳೀಯ ಯುವಕರು ಹೆಚ್ಚು ಸಂಖ್ಯೆಯಲ್ಲಿ ಆಡಳಿತ, ರಾಜಕೀಯ ಕ್ಷೇತ್ರದಲ್ಲಿ ಪಾಲ್ಗೊಳ್ಳುವ ಅವಕಾಶ ದೊರಕಿಸಿದ ಮುತ್ಸದ್ದಿ.

ಹಗರಣವಿಲ್ಲದ ಆಡಳಿತ ನೀಡಿದ ಮುಖ್ಯಮಂತ್ರಿಯವರ ತಂಡ, ಸಮಗ್ರ ಪ್ರಗತಿಯನ್ನೇ ಚಿಂತಿಸಿದ, ಸಾಕಾರಗೊಳಿಸಿದ ಸರಕಾರ. ಸಿ.ಭೈರೇಗೌಡ, ನಾಗೇಗೌಡ, ಬಿ.ಸೋಮಶೇಖರ್ ಮೊದಲಾದ ಹಿರಿ ಕಿರಿ ಸಚಿವರು ಶ್ರಮ ವಹಿಸಿ ದುಡಿದರು. ಪಟೇಲ್ ಅವರಿಗೂ ಗೌರವ ತಂದರು. ರಾಜಕೀಯ ಕಿತಾಪತಿಯಿಂದ ಸಿ.ಭೈರೇಗೌಡರಿಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡಲಾಗದುದಕ್ಕೆ ವಿಷಾದವಿತ್ತು.

ಅವರಲ್ಲಿದ್ದ ವಿಶೇಷ ಗುಣ ಹಾಸ್ಯದ ಮಾತುಗಾರಿಕೆ. ಅವರು ಉದ್ಧರಿಸುತ್ತಿದ್ದ ಪ್ರತಿ ಹಾಸ್ಯದ ಹಿಂದೆ ಒಂದು ವಿಚಾರವಿರುತ್ತಿತ್ತು. ಅದನ್ನು ಅರ್ಥ ಮಾಡಿಕೊಳ್ಳದ, ಅವರ ಜೊತೆಯಲ್ಲಿಯೇ ಇದ್ದ ಅನೇಕ ಸಣ್ಣ ಜನರು ಅಪ ಪ್ರಚಾರ ಮಾಡಿದರು. ಗೇಲಿ ಮಾಡಿದರು. ಮಾಧ್ಯಮದಲ್ಲಿಯೂ ಬರೆಸಿದರು. ಆದರೂ ಪಟೇಲರು ಅದಕ್ಕೆಲ್ಲ ಜಪ್ಪಯ್ಯ ಅನ್ನುತ್ತಿರಲಿಲ್ಲ. ಅದನ್ನೆಲ್ಲ ಮೀರಿ ಕನ್ನಡಿಗರ ಹೃದಯದಲ್ಲಿ ಬೇರೂರಿದ್ದಾರೆ.

ಅನ್ಯಾಯ, ಮೋಸಗಾರಿಕೆ ಅವರಿಗೆ ಹಿಡಿಸುತ್ತಿರಲಿಲ್ಲ. ನಿಮ್ಮ ಮಕ್ಕಳಿಗೆ ಶಿಕ್ಷಣ ನೀಡಿ, ಶಿಕ್ಷಣದ ಮೂಲಕ ಸಮಾಜವನ್ನು ಪ್ರಗತಿಯ ಕಡೆಗೆ ಕೊಂಡೋಯ್ಯಿರಿ ಎಂದು ಕರೆ ನೀಡುತ್ತಿದ್ದ ಅವರು ಕುಡಿಯುವ ನೀರು, ವಸತಿಗೂ ಅಷ್ಡೆ ಪ್ರಾಧಾನ್ಯ ನೀಡಿದ್ದರು.

ವಂಶಾಡಳಿತದ ವಿರೋಧಿಯಾಗಿದ್ದ ಅವರು ತಮ್ಮ ಮಕ್ಕಳಿಗೆ ರಾಜಕೀಯ ಅವಕಾಶ ಕಲ್ಪಿಸಲಿಲ್ಲ. ಸಮಸ್ಯೆಗಳನ್ನು ಜೀವಂತವಾಗಿರಿಸಿಕೊಂಡು ರಾಜಕೀಯ ಮಾಡದೇ, ಬಗೆಹರಿಸಲು ನೆರವು ನೀಡಿದವರು. ದ್ವೇಷ ಮಾಡಿದವರಲ್ಲ. ಕರ್ನಾಟಕದಲ್ಲಿ ತಂತ್ರಜ್ಞಾನದ ಚಿಗುರಿನ ಮೊಳಕೆಯೊಡಸಿದ ಇನ್ಫೋ ಸಿಸ್ ನ ನಾರಾಯಣಮೂರ್ತಿಯವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿದವರು ಅಂದಿನ ಮುಖ್ಯಮಂತ್ರಿ ಜೆ.ಹೆಚ್.ಪಟೇಲರು. ತಂತ್ರಜ್ಞಾನ ಕ್ಷೇತ್ರದ ಪ್ರಗತಿಯಿಂದ ರಾಜ್ಯಕ್ಕೆ ಅಪಾರ ಆದಾಯ ಬಂದಿತು.ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿಯಾಗಿದ್ದ ಬಿ.ಎಸ್.ಪಾಟೀಲರ ಕೊಡುಗೆ- ಹಗರಣ ರಹಿತ ಸರಕಾರಕ್ಕೆ ಕಾರಣವಾಯಿತು.

ಇಡೀ ಕರ್ನಾಟಕದ ಪ್ರಗತಿಗೆ ಚಿಂತಿಸಿದ ಜೆ.ಹೆಚ್.ಪಟೇಲರು, ಜಲ ಸಮಸ್ಯೆ ಬಗೆಹರಿಸಲು ತಾವೇ ಮುಂದಾಗಿ ಮಾತುಕತೆಯ ಮೂಲಕ ಬಗೆಹರಿಸಿಕೊಂಡಿರುವುದನ್ನು ಇತಿಹಾಸ ನೆನಪಿಸುತ್ತಿದೆ. ಅಂದಿನ ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿಯವರ ಜನ್ಮ ದಿನಾಚರಣೆಯ ಮುಖ್ಯ ಅತಿಥಿಯಾಗಿದ್ದ ಜೆ.ಹೆಚ್.ಪಟೇಲರು ಕನ್ನಡದಲ್ಲೇ ಮೊದಲು ಮಾತು ಶುರು ಮಾಡಿದರು. ಅತಿ ಭಾಷಾ ನಿಷ್ಠೆಯಿರುವ , ರಾಜಧಾನಿ ಚೆನ್ನೈ ನಗರ ವಾಗಿದ್ದರಿಂದ ಹೆದರಿಕೆಗೆ ಕಾರಣವಾಗಿತ್ತು. ನಿಶ್ಯಬ್ಧತೆ ನೆಲೆಯೂರಿತ್ತು. ಆ ಸಮಾರಂಭದಲ್ಲಿ ಪಟೇಲರು ಹೇಳಿದ್ದು : “ಈ ನೆಲ, ನದಿ,ಬೆಟ್ಟಗಳು ಮಾನವನನ್ನು ಒಂದುಗೂಡಿಸಬೇಕೆ ಹೊರತು ವಿಭಜಿಸಬಾರದು.” ಚಪ್ಪಾಳೆಯ ಸುರಿಮಳೆಯಾಯಿತು.

ಕನ್ನಡ ನಾಡಿನ ಹೆಸರನ್ನು ವಿಶ್ವಮಟ್ಟದಲ್ಲಿ ಜೀವಂತವಾಗಿಸಿದ 12 ನೇ ಶತಮಾನದ ಬಸವ ಕ್ರಾಂತಿಯ ನೆನಪಿಗಾಗಿ ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರ ರಚಿಸಿ ಸಮಗ್ರ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡಿ ಮತ್ತೊಮ್ಮೆ ಇತಿಹಾಸ ಮರುಕಳಿಸುವಂತೆ ಮಾಡಿದ ಬಸವತತ್ವ ನಿಷ್ಠ

ಸಂಸತ್ತಿನಲ್ಲಿ ಕನ್ನಡ ವ್ಯವಹರಣೆಯ ಕಾರಣಕರ್ತರು, ಚಿಂತಕ, ಸಮಾಜವಾದಿ, ಮುತ್ಸದ್ದಿ, ಹಾಸ್ಯ ಮಿಶ್ರಿತ ಮತ್ತು ಬಿಚ್ಚು ಮಾತಿನ ಮಾತುಗಾರ, ಸಹೃದಯಿ, ಹಗರಣ ರಹಿತ ಮುಖ್ಯಮಂತ್ರಿಯಾಗಿ ಈ ನಾಡಿಗೆ ಆಡಳಿತ ನೀಡಿದ ಜೆ.ಹೆಚ್.ಪಟೇಲ್ ಅವರು, ಜನರ ನಡುವೆ ಜೀವಂತವಾಗಿರುವ ನಾಯಕ. ಉತ್ತಮ ತಂಡದೊಂದಿಗೆ ಕನ್ನಡಿಗರ ಪ್ರಗತಿಗಾಗಿ ಅನೇಕ ಕಾರ್ಯಕ್ರಮಗಳ ಮೂಲಕ ಜನಪರ ಆಡಳಿತ ನೀಡಿದರು. ಇಂದಿನ ಯುವ ಜನಾಂಗದಲ್ಲಿ ಪಟೇಲ್ ಅವರ ಜೋಕುಗಳು ಜೀವಂತವಾಗಿವೆ.

ಇಂತಹ ಧೀಮಂತ ನಾಯಕನ ಜನ್ಮದಿನದ ಸಂಧರ್ಭದಲ್ಲಿ ಅವರಿಗೆ ಸಮಸ್ತ ಕನ್ನಡನಾಡಿನ ಶತ ಶತ ನಮನಗಳು..

Leave a Reply

Your email address will not be published. Required fields are marked *