ಕೇಂದ್ರ ಸರ್ಕಾರ ದೇಶದ ಹೆಸರನ್ನು ಇಂಡಿಯಾ ಬದಲು ಭಾರತ ಎಂದು ಮರುನಾಮಕರಣ ಮಾಡುತ್ತಿದೆ ಅನ್ನೋ ಚರ್ಚೆ ಜೋರಾಗಿದೆ. ಜಿ20 ಭೋಜನಕೂಟಕ್ಕೆ ನೀಡಿದ ಆಮಂತ್ರ ಪತ್ರ ಈ ಚರ್ಚೆ ಹುಟ್ಟುಹಾಕಿದೆ.
ಭಾರತ ಅಥವಾ ಇಂಡಿಯಾ..ಇದೀಗ ಎಲ್ಲೆಡೆ ಇದೇ ಚರ್ಚೆ. ಕೇಂದ್ರ ಸರ್ಕಾರ ಜಿ20 ಶೃಂಗಸಭೆಯ ಆಮಂತ್ರದಲ್ಲಿ ಪ್ರಸಿಡೆಂಟ್ ಆಫ್ ಭಾರತ್ ಎಂದು ಉಲ್ಲೇಖಿಸಿದೆ. ಇಷ್ಟು ದಿನ ಪ್ರಸಿಡೆಂಟ್ ಆಫ್ ಇಂಡಿಯಾ ಬದಲು ಇದೀಗ ಭಾರತ್ ಎಂದು ಕೇಂದ್ರ ಸರ್ಕಾರದ ಅಧಿಕೃತ ಪತ್ರದಲ್ಲಿ ಉಲ್ಲೇಖಿಸಿರಿವುದು ಈ ಎಲ್ಲಾ ಚರ್ಚೆಗಳಿಗೆ ಮೂಲವಾಗಿದೆ. ಇದಕ್ಕೂ ಮೊದಲು ಹಲವು ಬಾರಿ ಇಂಡಿಯಾ ಹೆಸರನ್ನು ಭಾರತ ಎಂದು ಮರುನಾಮಕರಣ ಮಾಡಬೇಕು ಅನ್ನೋ ಕೂಗು ಎದ್ದಿತ್ತು. ಪ್ರಮುಖವಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್) ಹಲವು ಬಾರಿ ಭಾರತ ಎಂದು ಕರೆಯಲು ಮನವಿ ಮಾಡಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಕೇಂದ್ರದ ಸರ್ಕಾರದ ನಡುವೆ ಪರ ವಿರೋಧಕ್ಕೆ ಕಾರಣವಾಗಿದೆ.