KPTCL, ESCOM ನೌಕರರ ವೇತನ ಹೆಚ್ಚಳ – ಮುಷ್ಕರಕ್ಕೂ ಮೊದಲೇ ಜಯ

ಬೆಂಗಳೂರು: ಮುಷ್ಕರಕ್ಕೆ ಕರೆ ನೀಡಿದ ಬೆನ್ನಲ್ಲೇ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಮಮಿತ (KPTCL) ಮತ್ತು ಎಲ್ಲಾ ಎಸ್ಕಾಂಗಳ ನೌಕರರ ವೇತನ ಹೆಚ್ಚಳ ಮಾಡಿ ಇಂಧನ ಸಚಿವ ಸುನೀಲ್ ಕುಮಾರ್ (Sunil Kumar) ಆದೇಶ ಪ್ರಕಟಿಸಿದ್ದಾರೆ.

ವೇತನ  (Salary)  ಪರಿಷ್ಕರಣೆಗೆ ಪಟ್ಟು ಹಿಡಿದು, ಗುರುವಾರದಿಂದ ಎಸ್ಕಾಂ ಸಿಬ್ಬಂದಿ ಅನಿರ್ದಿಷ್ಟ ಅವಧಿಗೆ ಹೋರಾಟಕ್ಕೆ ಸಿದ್ಧರಾಗಿದ್ದ ಬೆನ್ನಲ್ಲೇ ಕೆಪಿಟಿಸಿಎಲ್ ಎಂಡಿಗೆ ಸಚಿವರು ಈ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಬ್ಬಂದಿಗೆ 2022ರಿಂದ ಪೂರ್ವಾನ್ವಯವಾಗುವಂತೆ ಶೇ.20ರಷ್ಟು ವೇತನ ಹೆಚ್ಚಳ ಮಾಡಲು ಆದೇಶಿಸಿದ್ದಾರೆ. ಇದೀಗ ಸಚಿವರ ಭರವಸೆಯಿಂದ ಎಸ್ಕಾಂ ಸಿಬ್ಬಂದಿ ಹೋರಾಟಕ್ಕೂ ಮುನ್ನವೇ ಜಯ ಸಿಕ್ಕಿದೆ.

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ನೌಕರರು ಗುರುವಾರ ಇಡೀ ರಾಜ್ಯದ ಎಲ್ಲಾ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಕೆಲಸ ಸ್ಥಗಿತ ಮಾಡಿ ಮುಷ್ಕರ ನಡೆಸಲು ನಿರ್ಧರಿಸಿದ್ದರು. ಲೈನ್‍ಮ್ಯಾನ್‍ಗಳಿಂದ ಹಿಡಿದು ಎಂಜಿನಿಯರ್‍ಗಳವರೆಗೆ ಸುಮಾರು 60 ಸಾವಿರ ನೌಕರರು ಮುಷ್ಕರದಲ್ಲಿ ಭಾಗಿಯಾಗಲಿದ್ದರು. ಶೇ. 40% ವೇತನ ಹೆಚ್ಚಳ ಆಗಬೇಕು. 2022ರ ಏಪ್ರಿಲ್ 1 ರಿಂದ ಬಾಕಿ ವೇತನ ಬಿಡುಗಡೆ ಮಾಡಬೇಕು. ತಕ್ಷಣವೇ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು. ವಿದ್ಯುತ್ ಕಂಪನಿಗಳ ಖಾಸಗೀಕರಣ ಉದ್ದೇಶದ ಪ್ರಸ್ತಾವಿತ ಮಸೂದೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದರು.

ಒಂದು ದಿನ ಕೆಪಿಟಿಸಿಎಲ್ ನೌಕರರು ಕೆಲಸ ನಿಲ್ಲಿಸಿದರೆ 1 ಸಾವಿರ ಕೋಟಿ ರೂ. ನಷ್ಟ ಸಂಭವಿಸುವ ಸಾಧ್ಯತೆಯಿದೆ. ಒಂದು ದಿನ ವಿದ್ಯುತ್ ಉತ್ಪಾದನೆ ನಿಂತರೆ ಒಂದು ವಾರ ರಾಜ್ಯಕ್ಕೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತದೆ. ಈ ಅವ್ಯವಸ್ಥೆ ಸರಿಪಡಿಸಲು 10 ರಿಂದ 15 ದಿನಗಳು ಬೇಕಾಗುತ್ತದೆ. 

Leave a Reply

Your email address will not be published. Required fields are marked *