ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಇಂದು ಬೆಂಗಳೂರಿಗೆ ಭೇಟಿ

ಬೆಂಗಳೂರು: ಕರ್ನಾಟಕದಲ್ಲಿಯೂ ಜನಪ್ರಿಯರಾಗಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಗುರುವಾರ (ಸೆಪ್ಟೆಂಬರ್ 1) ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ. ನಗರದ ಹೊರವಲಯದಲ್ಲಿ ನಿರ್ಮಿಸಲಾಗಿರುವ ‘ಶ್ರೀ ಧರ್ಮಸ್ಥಳ ನಿಸರ್ಗ ಚಿಕಿತ್ಸೆ ಹಾಗೂ ಯೋಗ ಶಿಕ್ಷಣ ಸಂಸ್ಥೆ’ಯನ್ನು (Sri Dharmasthala Manjunatheshwara Institute of Naturopathy and Yogic Sciences – SDMINYS) ಅವರು ಉದ್ಘಾಟಿಸಲಿದ್ದಾರೆ.

ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಬೆಳಿಗ್ಗೆ 11:30ಕ್ಕೆ ಬರಲಿರುವ ಅವರು ಹೆಲಿಕಾಪ್ಟರ್​ ಮೂಲಕ ನೆಲಮಂಗಲದಲ್ಲಿರುವ ಎಸ್​ಡಿಎಂ ನಿಸರ್ಗ ಕೇಂದ್ರ ತಲುಪಲಿದ್ದಾರೆ. ರಾಜ್ಯಸಭಾ ಸದಸ್ಯರೂ ಆಗಿರುವ ಸಂಸ್ಥೆಯ ಮುಖ್ಯಸ್ಥರಾದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರೊಂದಿಗೆ ಕೆಲ ಸಮಯ ಚರ್ಚೆ ನಡೆಸಲಿರುವ ಅವರು, ನಂತರ ‘ಕ್ಷೇಮವನ’ವನ್ನು ಲೋಕಾರ್ಪಣೆ ಮಾಡಲಿದ್ದಾರೆ.

ಕ್ಷೇಮವನದಲ್ಲಿ ಆದಿತ್ಯನಾಥ್ ಸುಮಾರು ಎರಡು ತಾಸು ಉಳಿದುಕೊಳ್ಳಲಿದ್ದಾರೆ. ಈ ವೇಳೆ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಸಹ ಉಪಸ್ಥಿತರಿರಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ (ಸೆಪ್ಟೆಂಬರ್ 2) ಮಂಗಳೂರಿಗೆ ಭೇಟಿ ನೀಡಲಿದ್ದು, ಅದಕ್ಕೆ ಒಂದು ದಿನ ಮೊದಲು ಆದಿತ್ಯನಾಥ್ ಬೆಂಗಳೂರಿಗೆ ಬರಲಿದ್ದಾರೆ. ಕರ್ನಾಟಕದ ಮುಂದಿನ ವಿಧಾನಸಭಾ ಸಿದ್ಧತೆಗೆ ಬಿಜೆಪಿ ಸಂಘಟನೆಯನ್ನು ಚುರುಕುಗೊಳಿಸಲು ಪ್ರಯತ್ನಿಸುತ್ತಿದೆ. ಬಿಜೆಪಿ ಕಾರ್ಯಕರ್ತರು, ಸಚಿವರು ಹಾಗೂ ಮುಖ್ಯಮಂತ್ರಿ ಸಹ ಆಗಾಗ ‘ಉತ್ತರ ಪ್ರದೇಶ ಮಾದರಿ’ (UP Model) ಬಗ್ಗೆ ಪ್ರಸ್ತಾಪಿಸುತ್ತಿರುತ್ತಾರೆ. ಈ ಹಿನ್ನೆಲೆಯಲ್ಲಿ ಯೋಗಿ ಆದಿತ್ಯನಾಥ್ ಭೇಟಿ ಮಹತ್ವ ಪಡೆದಿದೆ.

Leave a Reply

Your email address will not be published.