ಆಪ್ ಸೇರ್ಪಡೆಗೂ ಮುನ್ನ ಎಂಇಎಸ್ ಮುಖಂಡರೊಂದಿಗೆ ಭಾಸ್ಕರ್ ರಾವ್ ಚರ್ಚೆ: ಬೆಳಗಾವಿಯಿಂದಲೇ ಸ್ಪರ್ಧೆ?

ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರು ಎಂಇಎಸ್ ಮುಖಂಡರ ಜೊತೆಗೆ ಇರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅವರು ಬೆಳಗಾವಿ ಜಿಲ್ಲೆಯಿಂದಲೇ ಚುನಾವಣೆಗೆ ಸ್ಪರ್ಧಿಸಲಿದ್ದಾರೆಯೇ? ಎಂಬ ಚರ್ಚೆಗಳು ತೀವ್ರಗೊಂಡಿವೆ.

ಬೆಳಗಾವಿ: ಎಂಇಎಸ್ ಮುಖಂಡರ ಜೊತೆಗೆ ಭಾಸ್ಕರ್‌ರಾವ್ ಇರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇತ್ತೀಚೆಗಷ್ಟೇ ಆಮ್ ಆದ್ಮಿ ಪಕ್ಷಕ್ಕೆ ಸೇರಿರುವ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಬೆಳಗಾವಿ ಜಿಲ್ಲೆಯಿಂದಲೇ ಚುನಾವಣೆಗೆ ಸ್ಪರ್ಧಿಸಲಿದ್ದಾರೆಯೇ? ಎಂಬ ಚರ್ಚೆಗಳು ತೀವ್ರಗೊಂಡಿವೆ. ಆಪ್ ಸೇರ್ಪಡೆಗೂ ಮುನ್ನ ಬೆಳಗಾವಿ ಎಂಇಎಸ್ ಮುಖಂಡರ ಜೊತೆ ಭಾಸ್ಕರ್ ರಾವ್ ಸಭೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಎಂಇಎಸ್ ಮುಖಂಡರ ಜೊತೆ ಭಾಸ್ಕರ್‌ ರಾವ್ ಇರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಈ ಚರ್ಚೆಗೆ ಪುಷ್ಠಿ ನೀಡಿದೆ.

ಬೆಳಗಾವಿ ಜಿಲ್ಲೆಯಲ್ಲೇ ನಿವೃತ್ತ ಐಪಿಎಸ್ ಅಧಿಕಾರಿ ಕ್ಷೇತ್ರ ಹುಡುಕಾಟ ನಡೆಸಿರಬಹುದು ಎಂಬ ಚರ್ಚೆಗಳು ಗರಿಗೆದರಿವೆ. ಐಪಿಎಸ್ ಹುದ್ದೆಗೆ ರಾಜೀನಾಮೆ ‌ನೀಡುವ ಮೊದಲು ಭಾಸ್ಕರ್ ರಾವ್ ಬೆಳಗಾವಿಗೆ ಅನೇಕ ಸಲ ಭೇಟಿ ನೀಡಿದ್ದರು. ಮರಾಠಿ ಪ್ರಾಬಲ್ಯದ ಕ್ಷೇತ್ರದಲ್ಲಿ ಸ್ಪರ್ಧೆಯ ಸಾಧಕ-ಬಾಧಕಗಳ ಬಗ್ಗೆ ಮುಖಂಡರ ಜೊತೆಗೆ ಭಾಸ್ಕರ್ ರಾವ್ ಚರ್ಚೆ ನಡೆಸಿರಬಹುದು ಎನ್ನಲಾಗುತ್ತಿದೆ. ಬೆಳಗಾವಿ ಉತ್ತರ, ಬೆಳಗಾವಿ ದಕ್ಷಿಣ, ಬೆಳಗಾವಿ ಗ್ರಾಮೀಣ, ಖಾನಾಪುರ, ನಿಪ್ಪಾಣಿಯಲ್ಲಿ ಮರಾಠಿ ಮತದಾರರ ಪ್ರಾಬಲ್ಯ ಇದೆ. ಈ ಪೈಕಿ ಒಂದು ಕ್ಷೇತ್ರದಲ್ಲಿ ಸ್ಪರ್ಧೆ ಬಗ್ಗೆ ಗಂಭೀರ ಚರ್ಚೆ ನಡೆಸಿರುವ ಸಾಧ್ಯತೆ ಇದೆ.

ಬೆಳಗಾವಿ ಉತ್ತರ ವಲಯ ಐಜಿಪಿಯಾಗಿ ಹಾಗೂ ಬೆಳಗಾವಿ ನಗರ ಪೊಲೀಸ್ ಆಯುಕ್ತರಾಗಿಯೂ ಭಾಸ್ಕರ್ ರಾವ್ ಕೆಲಸ ಮಾಡಿದ್ದರು. ಬೆಳಗಾವಿ ಎಂಇಎಸ್ ಮುಖಂಡರ ಜತೆಗೆ ಭಾಸ್ಕರ್ ರಾವ್ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಎಂಇಎಸ್ ನಗರ ಘಟಕದ ಅಧ್ಯಕ್ಷ ದೀಪಕ್ ದಳವಿ, ಮಾಜಿ ಶಾಸಕ ಮನೋಹರ್ ಕಿಣೇಕರ್ ಜೊತೆ ಭಾಸ್ಕರ್‌ರಾವ್ ಇರುವ ಫೋಟೋ ವೈರಲ್ ಆಗಿದೆ. ಈ ಫೋಟೊ ಬೆಳಗಾವಿ ಜಿಲ್ಲೆಯ ರಾಜಕಾರಣದಲ್ಲಿ ತರಹೇವಾರಿ ಚರ್ಚೆ ಹುಟ್ಟುಹಾಕಿದೆ‌.

Leave a Reply

Your email address will not be published.