ಎಳೆ-ಎಳೆಯಾಗಿ ತೆರೆದುಕೊಳ್ಳುವ ಕಾಶ್ಮೀರದ ಫೈಲು!

ದಿ ಕಾಶ್ಮೀರ್ ಫೈಲ್ಸ್. ವಿವೇಕ್ ಅಗ್ನಿಹೋತ್ರಿಯ ಅತ್ಯದ್ಭುತ ಸಿನಿಮಾಗಳಲ್ಲೊಂದು. ಕಾಶ್ಮೀರಿ ಪಂಡಿತರ ನೋವು, ದುಃಖ, ಅಸಹಾಯಕತೆ, ಅವರನ್ನು ಹುಳುಗಳಂತೆ ಹೊಸಕಿದ ರೀತಿ, ಈ ಶತಮಾನದ ಭಯಾನಕ ನರಮೇಧವಾಗಿ ಅದು ರೂಪುಗೊಂಡ ಪರಿ ಇವೆಲ್ಲವನ್ನೂ ಸುಮಾರು ಮೂರು ಗಂಟೆಗಳಲ್ಲಿ ಕಟ್ಟಿಕೊಟ್ಟ ರೀತಿ ಪರಮಾದ್ಭುತವಾದ್ದು. ಮೊನ್ನೆ ಶುಕ್ರವಾರ ದೇಶದಾದ್ಯಂತ ಬಿಡುಗಡೆಯಾಗಿದೆ. ಸುದೀರ್ಘ ಕಾಲ ಮಾಧ್ಯಮಗಳು, ಪತ್ರಕರ್ತರು, ಪ್ರೊಫೆಸರ್ಗಳು, ಬುದ್ಧಿವಂತರೆನಿಸಿಕೊಂಡವರು, ಇತಿಹಾಸತಜ್ಞರು ಮುಚ್ಚಿಟ್ಟಿದ್ದ ಸಂಗತಿಗಳನ್ನು ಎಳೆ-ಎಳೆಯಾಗಿ ಆಧುನಿಕ ಶೈಲಿಗೇ ಒಗ್ಗುವಂತೆ ವಿವೇಕ್ ಬಿಚ್ಚಿಡುವ ರೀತಿ ಮನೋಜ್ಞವಾದ್ದು. ಪ್ರತೀ ಸಿನಿಮಾ ಮುಗಿದಮೇಲೂ ಗೌಜು-ಗದ್ದಲದೊಂದಿಗೆ ಮಂದಿ ಥಿಯೇಟರ್ನಿಂದ ಹೊರಬರುತ್ತಾರಲ್ಲವೇ? ಈ ಸಿನಿಮಾ ಮುಗಿಯುವಾಗ ಜನ ಮೌನವಾಗಿಬಿಡುತ್ತಾರೆ. ಭಾವುಕವಾಗಿದ್ದರಂತೂ ಅನೇಕ ಗಂಟೆಗಳ ಕಾಲ ಅದೇ ಗುಂಗಿನಲ್ಲಿ ಕಳೆದುಹೋಗಿಬಿಡುತ್ತಾರೆ. ಸ್ವಲ್ಪಮಟ್ಟಿಗಾದರೂ ಪಾಪ ಪ್ರಜ್ಞೆ ಇದ್ದವರು ಇಷ್ಟು ದಿನ ಇದರ ಬಗ್ಗೆ ತಿಳಿದುಕೊಳ್ಳಲಾಗಲಿಲ್ಲವಲ್ಲ ಎಂಬ ಚಿಂತೆಯಿಂದ ನರಳಿದರೂ ಅಚ್ಚರಿಯಿಲ್ಲ! ವಿವೇಕ್ ಹಳೆಯ ಇತಿಹಾಸವನ್ನು ಹೊಸಪೀಳಿಗೆಗೆ ಮುಟ್ಟಿಸುವ ಮಹಾಸಾಹಸ ಮಾಡಿದ್ದಾರೆ. ಪಂಡಿತರಿಗಾಗಿ ಏನೂ ಮಾಡುವುದು ಬೇಕಿಲ್ಲ; ಕೊನೆಯ ಪಕ್ಷ ಸಿನಿಮಾ ನೋಡಿ ‘ನಾವು ಏನೂ ಮಾಡಲಿಲ್ಲ’ ಎಂಬ ಸತ್ಯವನ್ನು ಅರಿತುಕೊಂಡರೆ ಸಾಕು. ಅದಕ್ಕಾಗಿಯಾದರೂ ಒಮ್ಮೆ ಸಿನಿಮಾ ನೋಡಿ.

ಇಷ್ಟಕ್ಕೂ ಕಾಶ್ಮೀರ ಭಾರತದ ಜ್ಞಾನಕೇಂದ್ರ. ಸರ್ವಜ್ಞ ಪೀಠ ಇದ್ದ ಜಾಗವದು. ಭೂಲೋಕದ ಸ್ವರ್ಗ ಎಂದು ಸುಮ್ಮಸುಮ್ಮನೆ ಹೇಳಿಲ್ಲ. ಸ್ವರ್ಗ ಅನ್ನೋದು ಭೋಗದ ತಾಣವಲ್ಲ. 72 ಸುಂದರಿಯರನ್ನು ಮನಸೋ ಇಚ್ಛೆ ಅನುಭವಿಸುತ್ತಾ, ಶುಂಠಿ ಬೆರೆಸಿದ ಮದ್ಯವನ್ನು ಕುಡಿಯುತ್ತಾ ಕಾಲ ಕಳೆಯಲು ಇರುವ ಸ್ಥಳವಲ್ಲ. ವಾಸ್ತವವಾಗಿ ಸ್ವರ್ಗವೆಂದರೆ ಜ್ಞಾನದ ನೆಲೆವೀಡು. ಎಲ್ಲಿ ಮುಕ್ತವಾದ ಚಿಂತನೆಗೆ, ಜ್ಞಾನ ಪ್ರಸರಣಕ್ಕೆ ಅವಕಾಶವಿದೆಯೋ ಅದು ಮಾತ್ರವೇ ಸ್ವರ್ಗವಾಗಲು ಸಾಧ್ಯ. ಕಾಶ್ಮೀರ ಅಂತಹದ್ದೇ ಪ್ರದೇಶವಾಗಿತ್ತು. ಹೀಗಾಗಿಯೇ ನಾವು ಕಾಶ್ಮೀರವನ್ನು ಸ್ವರ್ಗವೆಂದರೆ ಇದನ್ನು ಒಂದು ಭಾಗವಾಗಿ ಹೊಂದಿರುವ ಭಾರತವನ್ನು ಜಗತ್ತಿನ ಮಂದಿ ಸ್ವರ್ಗವೆನ್ನುತ್ತಿದ್ದುದು. ಭಾರತವನ್ನು ವಿಶ್ವಗುರು ಎಂದಾಗ ಆಡಿಕೊಳ್ಳುವ ಅಯೋಗ್ಯ ಬುದ್ಧಿಜೀವಿಗಳಿದ್ದಾರಲ್ಲ, ಅವರಿಗೆ ಇವೆಲ್ಲವೂ ಅರ್ಥವಾಗಲು ಇನ್ನು ಕೆಲವಾದರೂ ಜನ್ಮಗಳು ಬೇಕು. ಇಂತಹ ಜ್ಞಾನಸಂಪನ್ನ ರಾಷ್ಟ್ರವನ್ನು ನಾಶ ಮಾಡಿದಾಗಲೇ ತಮ್ಮ ವೈಭವ ಸ್ಥಾಪನೆಗೆ ಅವಕಾಶವೆಂಬುದು ಮುಸಲ್ಮಾನರಿಗೆ ಗೊತ್ತಿಲ್ಲದ ಸಂಗತಿಯೇನಾಗಿರಲಿಲ್ಲ. ಹೀಗಾಗಿಯೇ ಕಾಶ್ಮೀರದ ಹಿಂದೂಗಳ ಮೇಲೆ ಬರ್ಬರ ದಾಳಿಗಳು ನಡೆದು ಅಲ್ಲಿನ ಪಂಡಿತರನ್ನು ಒತ್ತಾಯವಾಗಿ ಮತಾಂತರಿಸಿದ್ದು. ಮತಾಂತರಗೊಂಡ ಮೊದಲ ಪೀಳಿಗೆ ಸ್ವಲ್ಪವಾದರೂ ಪರಂಪರೆಯನ್ನು ನೆನಪಿನಲ್ಲಿ ಇರಿಸಿಕೊಳ್ಳುತ್ತದೆ. ಆದರೆ ಬರಬರುತ್ತಾ ಅದರಿಂದ ದೂರವಾಗುವ ಪೀಳಿಗೆಗಳು ತಾವೇ ಪರಂಪರೆಯ ವಿರೋಧಿಗಳಾಗಿ ನಾಶಕ್ಕೆ ನಿಂತುಬಿಡುತ್ತಾರೆ. ಕಾಶ್ಮೀರ ಇದಕ್ಕೊಂದು ಜೀವಂತ ಉದಾಹರಣೆ. ಅಲ್ಲಿನ ಮುಸಲ್ಮಾನರ ಅಡ್ಡ ಹೆಸರುಗಳು ಇಂದಿಗೂ ಭಟ್ ಎಂತಲೋ ಟಿಕೂ ಎಂತಲೋ ಟಪ್ಲೂ ಎಂತಲೋ ಇವೆ. ಪಂಡಿತರು ದಾಳಿಗೆ ಹೆದರಿ ತಮ್ಮ ನಂಬಿಕೆಗಳನ್ನು ಬದಲಾಯಿಸಿಕೊಂಡರು. ಹೆಸರು ಮಾತ್ರ ಹಾಗೆಯೇ ಉಳಿಯಿತು. ಮುಂದೆ ಅದೇ ಪೀಳಿಗೆಯ ಇಂದಿನ ಭಟ್, ಟಪ್ಲೂಗಳು ದೇಶವಿರೋಧಿಗಳಾಗಿ ಭಯೋತ್ಪಾದಕರ ಪಾಳೆಯದಲ್ಲಿ ನಿಂತು ತಮ್ಮದ್ದೇ ಜನರನ್ನು ಹತ್ಯೆಮಾಡುವ ಪರಿ ಎಂಥವನನ್ನೂ ದಂಗು ಬಡಿಸುವಂಥದ್ದು. ಸಿನಿಮಾ ಇವೆಲ್ಲವನ್ನೂ ಸೂಕ್ಷ್ಮವಾಗಿ ತಿಳಿಸಿಕೊಡುತ್ತದೆ. ಇಡಿಯ ಸಿನಿಮಾ ಹಾಗೆ ನೋಡಿದರೆ ಒಂದು ಕುಟುಂಬದ ಕಥೆ ಎಂದು ಹೇಳಬಹುದೇನೋ. ಅನುಪಮ್ ಖೇರ್ ಪುಷ್ಕರ್ನಾಥ್ರ ಪಾತ್ರದಲ್ಲಿ ಮನೋಜ್ಞ ಅಭಿನಯ ನೀಡಿದ್ದಾರೆ. ಎ.ಆರ್ ರಂಗನಾಥ್ ಟ್ವೀಟ್ ಮಾಡುತ್ತಾ, ‘ಅನುಪಮ್ ಖೇರ್ ನಟನೆ ಮಾಡುವಲ್ಲಿ ತಮಗಿದ್ದ ಎಲ್ಲ ಸಾಮಥ್ರ್ಯವನ್ನು ಈ ಸಿನಿಮಾದಲ್ಲಿ ಪೂರ್ಣ ವ್ಯಯಿಸಿಬಿಟ್ಟಿದ್ದಾರೆ’ ಎಂದು ಹೇಳಿದ್ದು ಖಂಡಿತ ಅತಿಶಯೋಕ್ತಿ ಅಲ್ಲ. ತನ್ನದ್ದೇ ವಿದ್ಯಾರ್ಥಿಯ ಬಂದೂಕಿನ ನಳಿಕೆಗೆ ಸ್ವಂತ ಮಗನನ್ನೇ ಕಳೆದುಕೊಂಡ ತಂದೆಯಾಗಿ, ಸೊಸೆ ಮತ್ತು ಮೊಮ್ಮಗನ ಹತ್ಯೆಯನ್ನು ಕಣ್ಣಾರೆ ಕಂಡವನಾಗಿ, ನಿರಾಶ್ರಿತರಿಗಾಗಿ ನಿರ್ಮಿಸಲ್ಪಟ್ಟ ಡೇರೆಗಳಲ್ಲಿ ಹೀನ ಬದುಕನ್ನು ಸವೆಸಿದವನಾಗಿ, ಕೊನೆಗೆ ಕೊನೆಗಾಲದವರೆಗೂ ಆರ್ಟಿಕಲ್ 370ನ್ನು ತೆಗೆಯಬೇಕೆಂಬ ಹೋರಾಟದ ನೇತೃತ್ವ ವಹಿಸಿದವರಾಗಿ ಅವರು ನಿರ್ವಹಿಸಿದ ಪಾತ್ರ ನಿಸ್ಸಂಶಯವಾಗಿ ಮನಸ್ಸಿನಲ್ಲುಳಿಯುವಂಥದ್ದು. 90ರ ದಶಕದಲ್ಲಿ ಕಾಶ್ಮೀರ ಹೊತ್ತಿ ಉರಿಯುವಾಗ ಅದರ ಹಿಂದೆ ಇದ್ದದ್ದು ಜಿಹಾದಿ ಮಾನಸಿಕತೆಯೇ. ಯಾವುದನ್ನು ಆಕ್ರಮಣಕಾರರು ನಿರಂತರವಾಗಿ ಪ್ರಯತ್ನಿಸಿಯೂ ಮಾಡಲಾಗಲಿಲ್ಲವೋ ಅದನ್ನು ಸ್ವತಂತ್ರ ಭಾರತದಲ್ಲಿ ಜಿಹಾದಿಗಳು ಮಾಡುವ ನಿಶ್ಚಯ ಕೈಗೊಂಡರು! ಕೇಂದ್ರ ಸರ್ಕಾರ ಅವರ ಬೆಂಬಲಕ್ಕೆ ನಿಂತು ತಾನು ಏನನ್ನೂ ಕಾಣಲಿಲ್ಲವೆಂತಲೂ, ಏನನ್ನೂ ಕೇಳಲಿಲ್ಲವೆಂತಲೂ ತನಗೆ ತಾನು ಹೇಳಿಕೊಳ್ಳುತ್ತಾ, ಏನನ್ನೂ ಆಡುವುದಿಲ್ಲವೆಂತಲೂ ನಿಶ್ಚಯಮಾಡಿಬಿಟ್ಟಿತು. ಅಲ್ಲಿಗೆ ಕಾಶ್ಮೀರಿ ಪಂಡಿತರು ಸ್ವಂತ ನೆಲದಲ್ಲಿಯೇ ಪರಕೀಯರಾಗಿಬಿಟ್ಟರು. ದಿನ ಬೆಳಗಾದರೆ ಕಾಶ್ಮೀರದಿಂದ ಪಂಡಿತರ ಹತ್ಯೆಯ ಹಸಿ-ಹಸಿ ಚಿತ್ರಗಳು ಬರುತ್ತಿದ್ದವು. 70 ವರ್ಷದ ಡಿ.ಎನ್ ಮುಜು ಕಾಶ್ಮೀರದ ಜಿಹಾದಿಗಳ ಬರ್ಬರ ದಾಳಿಗೆ ತುತ್ತಾದರು. ಅವರನ್ನು ಚೂರಿಯಿಂದ ಪದೇ ಪದೇ ಇರಿಯಲಾಗಿತ್ತು. ಅವರ ಪತ್ನಿಯನ್ನು ಅದೇ ಅವಸ್ಥೆಯಲ್ಲಿ ರಸ್ತೆಯಲ್ಲಿ ಎಸೆದು ಹೋಗಲಾಗಿತ್ತು. ಪ್ರೇಮಭರಿತ ಕವನಗಳ ಮೂಲಕ ಕಾಶ್ಮೀರಿ ಭಾಷೆಯನ್ನು ಶ್ರೀಮಂತಗೊಳಿಸಿದ್ದ ಸರ್ವಾನಂದ್ ಕೌಲ್‌ರನ್ನು ಇದೇ ರೀತಿ ದಾರುಣವಾಗಿ ಹತ್ಯೆ ಮಾಡಲಾಗಿತ್ತು, ಅವರ ಮಗ ವೀರೇಂದ್ರನನ್ನು ಮನೆಯಿಂದ ಹೊರಗೆಳೆದು ಹಣೆಯಮೇಲೆ ತಿಲಕವಿಡುವ ಜಾಗದಲ್ಲೇ ಮೊಳೆಯಿಂದ ಹೊಡೆದರು. ಕಣ್ಣುಗಳನ್ನು ಕಿತ್ತು, ಕೈ-ಕಾಲುಗಳನ್ನು ಮುರಿದು ಕಟುಕರು ಮಾಂಸವನ್ನು ಕಡಿಯುವಂತೆ ಕಡಿದು ಬಿಸಾಡಿದರು. ಹಿಂದೂ-ಮುಸಲ್ಮಾನರು ಎಂಬ ಭೇದವೆಣಿಸದೇ ರೋಗಿಗಳ ಸೇವೆಗೈಯ್ಯುತ್ತಿದ್ದ ಸರಳಾ ಭಟ್ರನ್ನು ನಿರ್ದಾಕ್ಷಿಣ್ಯವಾಗಿ ಕೊಂದರು. ಆನಂತರ ಜಗತ್ತಿನ ಮುಂದೆ ಆಕೆ ಸೈನ್ಯದ ಪರವಾಗಿ ಗೂಢಚರ್ಯೆ ನಡೆಸುತ್ತಿದ್ದಾಕೆ ಎಂದು ಬಿಂಬಿಸಲಾಯ್ತು. ಒಬ್ಬರೇ ಇಬ್ಬರೇ, ಸಾವಿರಾರು ಜನರ ಹತ್ಯೆಯಾಯ್ತು. ಲಕ್ಷಾಂತರ ಜನ ಕಾಶ್ಮೀರ ಬಿಟ್ಟೋಡಿದರು. ವಿವೇಕ್ ಅಗ್ನಿಹೋತ್ರಿ ಈ ಚಿತ್ರದಲ್ಲಿ ಪ್ರತಿಯೊಬ್ಬರ ಕಥೆಯನ್ನೂ ವಿವರಿಸುವುದಿಲ್ಲವಾದರೂ ಪೂರ್ಣ ಸಿನಿಮಾ ನೋಡುವ ವೇಳೆಗೆ ಸಾಧಾರಣವಾಗಿ ಕಥೆ ಅರಿವಾಗಿಬಿಟ್ಟಿರುತ್ತದೆ. ಇಡಿಯ ಚಿತ್ರದ ಎಳೆ ಶುರುವಾಗುವುದು ಕೃಷ್ಣ ಪಂಡಿತ್ ಎಂಬ ಹುಡುಗ ಜೆಎನ್ಯು ಥರದ ಯುನಿವರ್ಸಿಟಿಯಲ್ಲಿ ವಿದ್ಯಾರ್ಥಿ ನಾಯಕನಾಗುವ ಪ್ರಯತ್ನ ಮಾಡುವುದರೊಂದಿಗೆ. ಆತನ ತಲೆಕೆಡಿಸುವ ಶಿಕ್ಷಕಿ, ಪಂಡಿತನಾದರೂ ಆತ ಕಾಶ್ಮೀರಿ ಮುಸಲ್ಮಾನರ ಆಜಾದಿಗಾಗಿ ಹೋರಾಡುವ ನಾಯಕನಂತೆ ರೂಪಿಸುವ ಹೊಣೆ ಹೊರುತ್ತಾಳೆ. ಭಾವನಾತ್ಮಕ ಸಂಗತಿಗಳನ್ನು ತಲೆಗೆ ತುಂಬಿಸಿ ಆತನನ್ನು ಹೋರಾಟಕ್ಕೆ ಪ್ರೇರೇಪಿಸುತ್ತಾಳೆ. ತನ್ನ ತಾಯಿ-ತಂದೆಯರನ್ನು, ಅಣ್ಣನನ್ನು ಮುಸಲ್ಮಾನರ ಜಿಹಾದಿಗೆ ಕಳಕೊಂಡ ಕೃಷ್ಣ ತನ್ನ ತಾತನ ಹೋರಾಟವನ್ನು ಅವಮಾನಿಸುವಂತೆ ಜಿಹಾದಿಗಳ ಪರವಾದ ದನಿಯಾಗಿಬಿಡುತ್ತಾನೆ. ತೀರಿಕೊಂಡ ತಾತನ ಅಂತಿಮ ಆಸೆಯನ್ನು ನೆರವೇರಿಸಲೆಂದೇ ಅಸ್ಥಿ ಹೊತ್ತು ಕಾಶ್ಮೀರಕ್ಕೆ ಬರುವುದರೊಂದಿಗೆ ಎಳೆಗಳು ಬಿಚ್ಚಿಕೊಳ್ಳಲಾರಂಭಿಸುತ್ತವೆ. ಜೆಕೆಎಲ್ಎಫ್ನ ನಾಯಕನೊಂದಿಗೆ ಆತನ ಭೇಟಿ ಇಡಿಯ ಪ್ರಕರಣಕ್ಕೆ ಒಂದು ಟ್ವಿಸ್ಟ್ ನೀಡುವಂಥದ್ದು. ವಿವೇಕ್ ಚಿತ್ರಕಥೆಯನ್ನು ಎಷ್ಟು ಸೂಕ್ಷ್ಮವಾಗಿ ಹೆಣೆದಿದ್ದಾರೆಂದರೆ ಜೆಕೆಎಲ್ಎಫ್ ನಾಯಕನ ಮನೆಯ ಗೋಡೆಯ ಮೇಲೆ ಪ್ರೊಫೆಸರ್ಳ ಕೈಹಿಡಿದು ಆತ ನಡೆಯುವ ಚಿತ್ರ ಸಾಕ್ಷಾತ್ ಅರುಂಧತಿ ರಾಯ್ಳನ್ನೇ ನೆನಪಿಸಿಬಿಡುತ್ತದೆ. ಕೃಷ್ಣ ಪಂಡಿತ್ನ ತಂದೆ, ತಾಯಿ ಮತ್ತು ಅಣ್ಣನನ್ನು ಕೊಂದಿದ್ದು ಮುಸ್ಲೀಂ ಭಯೋತ್ಪಾದಕರಲ್ಲ ಬದಲಿಗೆ ಸ್ವತಃ ಭಾರತೀಯ ಸೇನೆ ಎಂಬುದನ್ನು ನಂಬಿಸುವಲ್ಲಿ ಅವರು ಯಶಸ್ವಿಯೂ ಆಗಿಬಿಡುತ್ತಾರೆ.

ಇತಿಹಾಸದ ಸುಳ್ಳು ಚಿತ್ರಣಗಳನ್ನು ಕಟ್ಟಿಕೊಡುವುದರಲ್ಲಿ ಎಡಪಂಥೀಯರು ನಿಸ್ಸೀಮರು. ಈ ವಿಚಾರದಲ್ಲಿ ಅವರು ಬ್ರಿಟೀಷರ ಸಂತಾನವೇ. ಭಾರತೀಯರ ಬೌದ್ಧಿಕ ಸಾಮಥ್ರ್ಯವನ್ನು ಆರ್ಯರ ಪಾದಗಳಿಗೆ ಧಾರೆ ಎರೆದು ಈ ಆರ್ಯರು ಭಾರತೀಯರೇ ಅಲ್ಲವೆಂದು ಸಾಬೀತುಪಡಿಸಿಬಿಟ್ಟರು. ಆರ್ಯರನ್ನು ಭಾರತೀಯರೆಂದು ಸಾಧಿಸ ಹೊರಟವರನ್ನೆಲ್ಲ ಕೋಮುವಾದಿಗಳೆಂದು ಜರಿದು ಬಾಯ್ಮುಚ್ಚಿಸಿಬಿಟ್ಟರು. ಮೊಘಲರ ಕ್ರೌರ್ಯದ ಕುರಿತಂತೆ ಮಾತನಾಡಿದರೆ ಹಳೆಯದ್ದನ್ನೆಲ್ಲ ಏಕೆ ನೆನಪಿಸಿಕೊಳ್ಳುತ್ತೀರಿ ಎಂದರು, ದಲಿತರ ಮೇಲೆ ಮೇಲ್ವರ್ಗದವರು ಮಾಡಿದ್ದನ್ನು ಮಾತ್ರ ಶೋಷಣೆ ಎಂದು ಕರೆದು ಮತ್ತೆ ಮತ್ತೆ ನೆನಪಿಸುತ್ತಾ ಉಳಿದುಬಿಟ್ಟರು. ಭಾರತದ ಮೇಲೆ ಇಸ್ಲಾಮಿಗಳು ಮಾಡಿದ ಆಕ್ರಮಣವನ್ನು ಲೂಟಿಗಾಗಿ ಮಾತ್ರ ಎಂದು ನಾಮಕರಣ ಮಾಡಿ ಇಸ್ಲಾಮಿನ ಬರ್ಬರತೆಯ ಚಿತ್ರಣವನ್ನು ಪರದೆಯ ಹಿಂದೆ ಸರಿಸಿಬಿಟ್ಟರು. ಕೊನೆಗೆ ಇಡಿಯ ಇತಿಹಾಸದಲ್ಲಿ ತಮಗೆ ಬೇಕಾದ್ದನ್ನು ಬೆಳಕಿಗೆ ತಂದು ಬೇಡವಾದ್ದನ್ನು ಮುಚ್ಚಿಡುವ ಕಲೆಯನ್ನು ಕರಗತ ಮಾಡಿಕೊಂಡುಬಿಟ್ಟರು. ಇಂಥವರೇ ಸೇರಿಕೊಂಡು ಇಂದು ರಷ್ಯಾ ಉಕ್ರೇನಿನ ಮೇಲೆ ಮಾಡುತ್ತಿರುವ ಪ್ರಹಾರವನ್ನು ತಪ್ಪೆನ್ನುತ್ತಿದ್ದಾರೆ. ಉಕ್ರೇನು ನ್ಯಾಟೊದೊಂದಿಗೆ ಕೈಜೋಡಿಸಿ ರಷ್ಯಾದ ಗಡಿಗೆ ಅಮೇರಿಕಾದ ಸೇನೆ ತಂದು ನಿಲ್ಲಿಸುವ ಪ್ರಯತ್ನ ಮಾಡುತ್ತಿರುವುದನ್ನು ಯಾರ ಮುಂದೆಯೂ ಹೇಳದೇ ಮುಚ್ಚಿಟ್ಟುಬಿಟ್ಟಿದ್ದಾರೆ. ಇವರುಗಳೇ ಕಾಶ್ಮೀರದಲ್ಲಿ ನಡೆಯುವ ಹಿಂದೂ ಹತ್ಯೆಯನ್ನೂ ಮುಸಲ್ಮಾನರ ಸ್ವಾತಂತ್ರ್ಯ ಹೋರಾಟವೆಂದು ಬಿಂಬಿಸಿ ಇಡಿಯ ಭಾರತವನ್ನು ದೋಷಿಯೆಂದು ಕಟಕಟೆಯಲ್ಲಿ ನಿಲ್ಲಿಸಿಬಿಡುತ್ತಾರೆ. ಪಾಕಿಸ್ತಾನದಲ್ಲಿ ದಿನನಿತ್ಯ ನಡೆಯುತ್ತಿರುವ ಹಿಂದೂಗಳ ಮಾರಣ ಹೋಮ, ಹೆಣ್ಣುಮಕ್ಕಳ ಅಪಹರಣ, ಮಾನಭಂಗ, ಬಾಂಗ್ಲಾದೇಶದ ಹಿಂದೂ ನರಮೇಧಗಳು ಇವರ ಕಣ್ಣಿಗೆ ಕಾಣುವುದೇ ಇಲ್ಲ. ಭಾರತದಲ್ಲಿ ಸತ್ತ ಅಖ್ಲಾಕ್ನ ಜಪ ಮಾತ್ರ ಸದಾ ನಡೆಸುತ್ತಾರೆ. ಇಡಿಯ ಚಿತ್ರ ಇಂತಹ ಅನೇಕ ಬೌದ್ಧಿಕ ಅಪಸವ್ಯಗಳನ್ನು ಅನಾವರಣಗೊಳಿಸುತ್ತದೆ. ಎಲ್ಲ ಸತ್ಯ ಗೊತ್ತಿದ್ದಾಗಲೂ ಸುಳ್ಳು ಹೇಳುವ ಪತ್ರಕರ್ತ, ಎಲ್ಲವನ್ನೂ ಮಾಡಬೇಕೆಂಬ ಮನಸ್ಸಿದ್ದಾಗಲೂ ಅಸಹಾಯಕತೆಯಿಂದ ನರಳುವ ಅಧಿಕಾರಿ, ಸ್ನೇಹಿತನಾಗಿದ್ದು ಏನೂ ಮಾಡಲಾಗದ ಸ್ಥಿತಿಗೆ ತಲುಪುವ ಮಂದಿ ಇವೆಲ್ಲವೂ ಕೂಡ ಮನೋಜ್ಞವಾಗಿ ತಿಳಿಸಲ್ಪಟ್ಟಿದೆ. ಮಾಧ್ಯಮದವರ ಕುರಿತಂತೆ ನಡೆಯುವ ಪ್ರತಿಯೊಂದು ಚರ್ಚೆಯೂ ನಗೆ ಉಕ್ಕಿಸುತ್ತದೆ ಎನ್ನುವುದಾದರೂ ಪ್ರಾಮಾಣಿಕವಾದ ಸತ್ಯವನ್ನು ನುಡಿಯುತ್ತದೆ ಎಂಬುದೂ ಅಷ್ಟೇ ನಿಜ. ಕೃಷ್ಣನಿಗೆ ಸತ್ಯ ಗೊತ್ತಾದಾಗ ಅದು ನಿಜಕ್ಕೂ ಭಯಾನಕವಾದ ಸಂಗತಿ. ತನ್ನ ತಂದೆ, ತಾಯಿ ತೀರಿಕೊಂಡಿದ್ದು ಯಾವುದೋ ಅಪಘಾತದಲ್ಲಲ್ಲ, ಅದರ ಹಿಂದೆ ಭಯಾನಕವಾದ್ದೊಂದು ಸತ್ಯವಿದೆ ಎಂದರಿಯುವಾಗ ಆತ ಹುಚ್ಚನಾಗಿಬಿಡುತ್ತಾನೆ. ಯಾವ ಆಜಾದಿಗಾಗಿ ಹೋರಾಟ ನಡೆಸಬೇಕಿತ್ತೋ ಅದೇ ಆಜಾದಿಯ ಹೋರಾಟದ ನಡುವೆ ಸತ್ಯದ ಅನಾವರಣ ಮಾಡುತ್ತಾನೆ. ತನ್ನ ತಾಯಿಯನ್ನು ಮರಕೊಯ್ಯುವ ಯಂತ್ರದಲ್ಲಿ ಜೀವಂತ ಸೀಳಿಬಿಟ್ಟ ಕಥೆಯನ್ನು ಆತ ಹೇಳುತ್ತಿರುವಾಗ ಇಡಿಯ ಸಿನಿಮಾ ಮಂದಿರ ಸ್ತಬ್ಧವಾಗಿಬಿಡುತ್ತದೆ. 24 ಜನರನ್ನು ಹಣೆಗೆ ಗುಂಡಿಟ್ಟು ಕೊಲ್ಲುವ ಜಿಹಾದಿ ಭಯೋತ್ಪಾದಕ, ಕೊನೆಗೆ ಕಥಾನಾಯಕ ಅಣ್ಣ ಆರೇಳು ವರ್ಷದ ಪುಟ್ಟ ಬಾಲಕನನ್ನು ಗುಂಡಿಟ್ಟು ಕೊಂದು ಬಿಸಾಡುವ ದೃಶ್ಯ ಮನಕಲಕಿಬಿಡುತ್ತದೆ. ಸಿನಿಮಾ ಮುಗಿಸಿ ಎದ್ದು ಬರುವಾಗ ಹೃದಯ ಭಾರವಾಗಿಬಿಡುತ್ತದೆ. ಉದ್ದಕ್ಕೂ ಅದೆಷ್ಟು ಬಾರಿ ಕಂಗಳು ತೇವಗೊಳ್ಳುತ್ತವೋ ದೇವರೇ ಬಲ್ಲ!

ಈ ವಿಚಾರವನ್ನು ಅರಿಯದ ಅನೇಕ ಮಂದಿ ಇದು ಸತ್ಯವೋ ಸುಳ್ಳೋ ಎಂಬ ಗೊಂದಲದಲ್ಲಿ ಬೀಳುತ್ತಾರೆ. ಇದು ಸತ್ಯವಾಗಿದ್ದರೆ ಇಷ್ಟು ದಿನ ನಮ್ಮ ಗಮನಕ್ಕೆ ಬರದೇ ಇದ್ದುದು ಹೇಗೆ ಎಂಬ ಅನುಮಾನ ಕಾಡಲಾರಂಭಿಸುತ್ತದೆ. ಮುಸಲ್ಮಾನರ ಕ್ರೌರ್ಯವನ್ನು ಕಂಡೂ ಕಂಡು ಅವರೊಂದಿಗೆ ಸೌಹಾರ್ದದಿಂದ ಬದುಕಬೇಕೆಂಬ ಉದ್ದುದ್ದ ಭಾಷಣವನ್ನು ಬಿಗಿಯುವುದಾದರೂ ಹೇಗೆ ಎಂಬ ಚಿಂತೆ ಕಾಡುತ್ತದೆ. ಕೊನೆಗೆ ಸ್ವತಂತ್ರ ಭಾರತದಲ್ಲಿ ನಮ್ಮೆಲ್ಲರ ಕಣ್ಣೆದುರಿಗೆ ಅನ್ಯಾಯಕ್ಕೆ ಬಲಿಯಾದ ಪಂಡಿತರಿಗೆ ನ್ಯಾಯ ಕೊಡಿಸಲಾಗಲಿಲ್ಲವಲ್ಲ ಎಂಬ ಕೊರಗು ಆವರಿಸುತ್ತದೆ.
ಸಿನಿಮಾ ನೋಡಿದ ನಂತರ ಹೆಚ್ಚು ಭಾರವಾಗಿ ಹೊರಬರುವುದು ಸತ್ಯ. ಆದರೆ ಈ ಭಾರ ಪಂಡಿತರಿಗೆ ನಾವು ಮಾಡಿದ ಅನ್ಯಾಯದಿಂದ ಉಂಟಾದದ್ದು, ಸ್ವತಂತ್ರ ಭಾರತದಲ್ಲಿ ಒಂದಿಡೀ ಜನಾಂಗವನ್ನೇ ನಾಶಮಾಡುವ ಹವಣಿಕೆಯನ್ನು ಶಾಂತವಾಗಿದ್ದು ಬೆಂಬಲಿಸಿದುದರ ಕಾರಣಕ್ಕೆ ಉಂಟಾದದ್ದು, ಬಾಬ್ರಿ ಮಸೀದಿ ಧ್ವಂಸದಿಂದಾಗಿ ಮುಸಲ್ಮಾನರಲ್ಲಿ ತೀವ್ರವಾದಿತನ ಹೆಚ್ಚಾಯ್ತು ಎಂದು ವಾದಿಸುವ ಅಯೋಗ್ಯ ಬುದ್ಧಿಜೀವಿಗಳು ಪಂಡಿತರ ಮಾರಣ ಹೋಮದ ನಂತರವೂ ಹಿಂದೂಗಳೇಕೆ ತೀವ್ರವಾದಿಗಳಾಗಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸುವಲ್ಲಿ ಸೋತುಹೋಗುತ್ತಾರೆ. ಈ ಸಿನಿಮಾ ಗೆಲ್ಲಬೇಕು, ರಾಷ್ಟ್ರದ ಅನೇಕ ಪುರಸ್ಕಾರಗಳು ಅದಕ್ಕೆ ಲಭಿಸಬೇಕು. ಅಗತ್ಯಬಿದ್ದರೆ ಇದು ಆಸ್ಕರ್ ಪ್ರಶಸ್ತಿಗೂ ಹೆಸರಿಸಲ್ಪಡಬೇಕು. ಹಾಗಾಗಬೇಕೆಂದರೆ ನಾವೆಲ್ಲರೂ ಸಿನಿಮಾ ಮಂದಿರಕ್ಕೆ ಹೋಗಿ ಇದನ್ನೊಮ್ಮೆ ನೋಡಲೇಬೇಕು!

Leave a Reply

Your email address will not be published. Required fields are marked *