ರೈತರಿಗೆ ಅವಮಾನ ಜಿ ಟಿ ಮಾಲ್ 7 ದಿನ ಕ್ಲೋಸ್

ಬೆಂಗಳೂರು: ರೈತನಿಗೆ ಅವಮಾನ ಮಾಡಿದ ಜಿ.ಟಿ ಮಾಲ್ (GT Mall) ಅನ್ನು 7 ದಿನಗಳ ಕಾಲ ಮುಚ್ಚಿಸುತ್ತೇವೆ ಎಂದು ಸಚಿವ ಬೈರತಿ ಸುರೇಶ್ (Byrathi Suresh) ಘೋಷಣೆ ಮಾಡಿದ್ದಾರೆ.

ವಿಧಾನಸಭೆಯಲ್ಲಿ ನಡೆದ ಚರ್ಚೆಗೆ ಸರ್ಕಾರದ ಪರವಾಗಿ ಉತ್ತರಿಸಿದ ಅವರು, ಈಗಾಗಲೇ ಬಿಬಿಎಂಪಿ ಆಯುಕ್ತರ ಹತ್ತಿರ ಮಾತನಾಡಿದ್ದೇವೆ. ಕಾನೂನಿನಲ್ಲಿ ಅವಕಾಶ ಇದೆ. ಸರ್ಕಾರದ ಕ್ರಮ ಕೈಗೊಳ್ಳಬಹುದು. ಹಾಗಾಗಿ 7 ದಿನ ಮಾಲ್ ಮುಚ್ಚಿಸುತ್ತೇವೆ, ಕ್ರಮ ಜರುಗಿಸುತ್ತೇವೆ ಎಂದರು.

ಇದಕ್ಕೂ ಮುನ್ನ ವಿಧಾನಸಭೆಯಲ್ಲಿ ಸ್ಪೀಕರ್ ಯು.ಟಿ.ಖಾದರ್ ವಿಷಯ ಪ್ರಸ್ತಾಪಿಸಿ ಗರಂ ಆಗಿದ್ದರು. ಅವನು ಎಷ್ಟೇ ದೊಡ್ಡವನು ಇರಲಿ. ಅವನಿಗೆ ಏನು ಅನ್ನೋದನ್ನ ತೋರಿಸಬೇಕು. ಅವಮಾನ ಮಾಡಿದ್ದನ್ನು ಖಂಡಿಸಬೇಕು. ಸರ್ಕಾರ ಕಠಿಣ ಕ್ರಮ ಜರುಗಿಸಬೇಕು. ಎಲ್ಲಾ ಮಾಲ್‌ಗಳಿಗೂ ಒಂದೇ ರೂಲ್ಸ್ ಮಾಡಬೇಕು ಎಂದು ಸೂಚಿಸಿದರು.

ಇದೇ ವೇಳೆ ಸರ್ಕಾರದಿಂದ ಒಂದು ಆದೇಶ ಹೊರಡಿಸಲಿ. ಆ ಮಾಲ್‌ಗೆ ವಾರಗಳ ಕಾಲ ಪವರ್ ಕಟ್ ಮಾಡಲಿ ಎಂದು ಶಾಸಕ ಲಕ್ಷ್ಮಣ ಸವದಿ ಆಗ್ರಹಿಸಿದರೆ, ರೈತನಿಗೆ ಅವಮಾನ ಮಾಡಿದ ಆ ಮಾಲ್ ಅನ್ನು ಮುಚ್ಚಬೇಕು ಎಂದು ಶಾಸಕ ಪ್ರಕಾಶ್ ಕೋಳಿವಾಡ ಒತ್ತಾಯಿಸಿದರು

ಅಲ್ಲದೆ ರಾಜ್ಯದ ಎಲ್ಲಾ ಕ್ಲಬ್‌ಗಳು, ಮಾಲ್‌ಗಳಲ್ಲಿ ಒಂದೇ ರೂಲ್ಸ್ ತರಬೇಕು. ಪಂಚೆ ಸೇರಿದಂತೆ ಸಾಂಪ್ರದಾಯಿಕ ಉಡುಗೆಗಳನ್ನು ಧರಿಸುವುದನ್ನು ಬಿಡಬೇಕು ಎಂದು ಅಶೋಕ್ ಪಟ್ಟಣ, ಬೈರತಿ ಸುರೇಶ್ ಅಭಿಪ್ರಾಯ ವ್ಯಕ್ತಪಡಿಸಿದ್ರು. ಒಟ್ಟಾರೆಯಾಗಿ ಇಡೀ ಸದನ ಮಾಲ್ ನಡವಳಿಕೆ ಖಂಡಿಸಿ ಆಕ್ರೋಶವನ್ನು ವ್ಯಕ್ತಪಡಿಸಿತು. ಆ ಬಳಿಕ ಸರ್ಕಾರದ ಪರವಾಗಿ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ 7 ದಿನಗಳ ಕಾಲ ಮಾಲ್ ಮುಚ್ಚುವ ಘೋಷಣೆ ಮಾಡಿದರು.

Leave a Reply

Your email address will not be published. Required fields are marked *