ಮಳೆಯಿಂದ ಕರ್ನಾಟಕದ ಶಿವಮೊಗ್ಗ, ಕೊಡಗು, ಬೆಳಗಾವಿ ಸೇರಿ 8 ಜಿಲ್ಲೆಗಳಲ್ಲಿ ಹಳದಿ ಅಲರ್ಟ್​ ಘೋಷಣೆ

ಬೆಂಗಳೂರು: ಕರ್ನಾಟಕದಲ್ಲಿ ಮಳೆಯ ಆರ್ಭಟ (Heavy Rainfall) ಕೊಂಚ ಕಡಿಮೆಯಾಗಿದೆ. ಬುಧವಾರದಿಂದ ಕರಾವಳಿ, ಮಲೆನಾಡಿನಲ್ಲಿ ವರುಣನ ಅಬ್ಬರ ಕೊಂಚ ಇಳಿಮುಖವಾಗಿದೆ. ನಿನ್ನೆ ಶಿವಮೊಗ್ಗ (Shimoga Rain), ಚಿಕ್ಕಮಗಳೂರು (Chikmagalur Rain), ಕೊಡಗು (Kodagu Rains), ಹಾಸನ, ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಬೆಳಗಾವಿ ಜಿಲ್ಲೆಗಳಲ್ಲಿ ಮಳೆಯಿಂದಾಗಿ ಆರೆಂಜ್ ಅಲರ್ಟ್​ (Orange Alert) ಘೋಷಿಸಲಾಗಿತ್ತು. ಇಂದು ಈ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಮುಂದುವರೆಯಲಿದೆ. ಹೀಗಾಗಿ, ಶುಕ್ರವಾರದವರೆಗೆ ಈ 8 ಜಿಲ್ಲೆಗಳಲ್ಲಿ ಹಳದಿ ಅಲರ್ಟ್​ (Yellow Alert) ಘೋಷಿಸಲಾಗಿದೆ.

ನಿಮ್ಮ ಇಂದಿನ ರಾಶಿ ಭವಿಷ್ಯ ತಿಳಿದುಕೊಳ್ಳಿ 11-08-2022

ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಕೊಡಗು, ಹಾಸನ, ಶಿವಮೊಗ್ಗ, ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ. ಮಳೆಯ ಬಿರುಸು ಕಡಿಮೆಯಾಗಿದ್ದರೂ ವರುಣನ ಅಬ್ಬರ ಸಂಪೂರ್ಣವಾಗಿ ಕಡಿಮೆಯಾಗಿಲ್ಲ. ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಯಲ್ಲಿ ಗಾಳಿಯ ವೇಗ 60 ಕಿ.ಮೀ. ತಲುಪುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಮೀನುಗಾರರು ಈ ಅವಧಿಯಲ್ಲಿ ಸಮುದ್ರಕ್ಕೆ ತೆರಳದಂತೆ ಎಚ್ಚರಿಕೆ ನೀಡಲಾಗಿದೆ.

ಉತ್ತರ ಒಳನಾಡಿನ ಬೆಳಗಾವಿ, ಬೀದರ್, ಧಾರವಾಡ, ಕಲಬುರ್ಗಿ ಜಿಲ್ಲೆಗಳಲ್ಲಿಯೂ ಇಂದು ಮಳೆಯಾಗುವ ಸಾಧ್ಯತೆ ಇದೆ. ಇನ್ನು ಬೆಂಗಳೂರಿನಲ್ಲಿ ಇಂದು ಸಾಧಾರಣ ಮಳೆಯಾಗಲಿದ್ದು, ಮೋಡ ಕವಿದ ವಾತಾವರಣ ಮುಂದುವರಿಯಲಿದೆ. ದಕ್ಷಿಣ ರಾಜ್ಯದ ಕರಾವಳಿ ಪ್ರದೇಶಗಳಲ್ಲಿ ಭಾರೀ ಮಳೆಯ ಹಿನ್ನೆಲೆಯಲ್ಲಿ ಇನ್ನೂ ಮೂವರು ಸಾವನ್ನಪ್ಪಿದ್ದಾರೆ. ಈ ಮೂಲಕ ಕರ್ನಾಟಕದಲ್ಲಿ ಮಳೆಯಿಂದ ಮೃತಪಟ್ಟವರ ಸಂಖ್ಯೆ 70ಕ್ಕೆ ಏರಿಕೆಯಾಗಿದೆ.

ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಎರಡು ಕಂತುಗಳಲ್ಲಿ 4254 ಕೋಟಿ ರೂಪಾಯಿಗಳ ಬಿಡುಗಡೆ

ಇಂದು ಯಾವ ರಾಜ್ಯಗಳಲ್ಲಿ ಮಳೆ?: ಕರ್ನಾಟಕ ಮಾತ್ರವಲ್ಲದೆ ಇಂದು ಮಧ್ಯಪ್ರದೇಶ, ಗುಜರಾತ್, ಕೇರಳ ಮತ್ತು ಮಾಹೆಯ ಕೆಲವು ಪ್ರದೇಶಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಪಶ್ಚಿಮ ಬಂಗಾಳ, ಒಡಿಶಾ, ಜಾರ್ಖಂಡ್, ರಾಜಸ್ಥಾನ, ಕೊಂಕಣ, ಗೋವಾ, ಮಹಾರಾಷ್ಟ್ರ ಮತ್ತು ವಿದರ್ಭದಲ್ಲಿ ಭಾರೀ ಮಳೆಯಾಗಲಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾ, ಉತ್ತರಾಖಂಡ, ಹಿಮಾಚಲ ಪ್ರದೇಶ ಮತ್ತು ಲಕ್ಷದ್ವೀಪಗಳಲ್ಲಿ ಗುಡುಗು ಸಹಿತ ಸಾಕಷ್ಟು ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ. ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ಸಿಕ್ಕಿಂ, ಬಿಹಾರ, ಉತ್ತರ ಪ್ರದೇಶ, ಹರಿಯಾಣ, ಚಂಡೀಗಢ, ದೆಹಲಿ, ತಮಿಳುನಾಡು, ಪಂಜಾಬ್, ಜಮ್ಮು ಮತ್ತು ಕಾಶ್ಮೀರ, ಲಡಾಖ್, ಕರಾವಳಿ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಗುಡುಗು ಸಹಿತ ಚದುರಿದ ಮಳೆಯ ಮುನ್ಸೂಚನೆ ನೀಡಲಾಗಿದೆ.

Leave a Reply

Your email address will not be published.