75ನೇ ಹುಟ್ಟುಹಬ್ಬಕ್ಕಾಗಿ ‘ಮೈಸೂರು ಹುಲಿಯಾ…’ ಮತ್ತು ‘ಸೆಲ್ಫ್‌ ಮೇಡ್‌ ಸಿದ್ದಣ್ಣ..!’ ಹಾಡು

ಬೆಂಗಳೂರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ 75ನೇ ಹುಟ್ಟುಹಬ್ಬಕ್ಕಾಗಿ ‘ಮೈಸೂರು ಹುಲಿಯಾ…’ ಮತ್ತು ‘ಸೆಲ್ಫ್‌ ಮೇಡ್‌ ಸಿದ್ದಣ್ಣ..!’ ಎಂಬ ಸಿನಿಮಾ ಮಾದರಿಯ ಎರಡು ಹಾಡುಗಳು ಸಿದ್ಧಗೊಂಡಿದ್ದು, ಆ.3 ರಂದು ಬಿಡುಗಡೆಯಾಗುತ್ತಿವೆ. ಎರಡೂ ಹಾಡುಗಳಿಗೂ ಜೇಮ್ಸ್‌ ಚಿತ್ರದ ನಿರ್ದೇಶಕ ಚೇತನ್‌ ಕುಮಾರ್‌ ಸಾಹಿತ್ಯ ಬರೆದಿದ್ದು, ಒಂದು ಹಾಡು ಸಲಗ ಸಿನಿಮಾದ ‘ಟಿಣಿಂಗ ಮಿಣಿಂಗ ಟಿಶ್ಯಾ’ ಖ್ಯಾತಿಯ ಗಿರಿಜಾ ಸಿದ್ದಿ, ಮತ್ತೊಂದು ಹಾಡು ‘ಚುಟುಚುಟು ಅಂತೈತಿ’ ಖ್ಯಾತಿಯ ರವೀಂದ್ರ ಸೊರಗಾವಿ ದನಿಯಲ್ಲಿ ಮೂಡಿಬರುತ್ತಿರುವುದು ವಿಶೇಷ.

ದಾವಣಗೆರೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಐದಾರು ಲಕ್ಷ ಜನ ಸೇರುವ ನಿರೀಕ್ಷೆ ಇದ್ದು, ಈ ವೇದಿಕೆಯಲ್ಲಿ ಹಾಡಲು ಸಿದ್ದರಾಮಯ್ಯ ಅವರ ಜೀವನ ಕುರಿತ ಅಂಶಗಳನ್ನು ಒಳಗೊಂಡ ಎರಡು ಹಾಡುಗಳನ್ನು ಸಿದ್ಧಪಡಿಸಲಾಗಿದೆ. ಎರಡು ಕೂಡಾ ಲಿರಿಕಲ್‌ ವಿಡಿಯೋ ಹಾಡುಗಳಾಗಿದ್ದು, ಈಗಾಗಲೇ ರೆಕಾರ್ಡ್‌ ಮಾಡಲಾಗಿದೆ. ಎ2 ಎಂಟರ್‌ಟೈನ್‌ಮೆಂಟ್‌ ಯುಟ್ಯೂಬ್‌ ಚಾನೆಲ್‌ನಲ್ಲಿ ಕೂಡಾ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

ಸಿದ್ದರಾಮೋತ್ಸವ: ಕಾರ್ಯಕರ್ತರಿಗೆ ಭರ್ಜರಿ ಭೋಜನ ವ್ಯವಸ್ಥೆ, ಇಲ್ಲಿದೆ ಊಟದ ಮೆನು

ಮೈಸೂರು ಹುಲಿಯಾ..! ಎಂಬ ಹಾಡನ್ನು ‘ಸಲಗ’ ಚಿತ್ರದ ಬಳಿಕ ಮನೆಮಾತಾಗಿದ್ದ ಗಿರಿಜಾ ಸಿದ್ದಿ ಅವರು ಹಾಡಿದ್ದು, ಮೊದಲ ಬಾರಿಗೆ ಜನಪದ ಶೈಲಿಯಲ್ಲಿ ದನಿ ನೀಡಿದ್ದಾರೆ. ಸಂಗೀತ ನಿರ್ದೇಶಕ ವೀರ್‌ ಸಮರ್ಥ್‌ ಈ ಹಾಡಿಗೆ ಸಂಗೀತ ನೀಡಿದ್ದಾರೆ. ‘ಕೈ ಹಿಡಿಯೋ ಕೈ ಸಿದ್ದರಾಮಯ್ಯ…’ಎಂಬ ಸಾಲುಗಳು ಈ ಹಾಡಿನಲ್ಲಿವೆ. ‘ಸೆಲ್ಫ್‌ ಮೇಡ್‌ ಸಿದ್ದಣ್ಣ..!’ ಎಂಬ ಹಾಡಿಗೆ ರ್ಯಾಂಬೊ 2 ಸಿಮಿಮಾದ ‘ಚುಟುಚುಟು ಅಂತೈತಿ’ ಹಾಡು ಹಾಡಿದ್ದ ರವೀಂದ್ರ ಸೊರಗಾವಿ ದನಿ ನೀಡಿದ್ದಾರೆ. ಹರ್ಷ ವರ್ಧನ್‌ ರಾಜ್‌ ಸಂಗೀತ ಸಂಯೋಜನೆ ಮಾಡಿದ್ದಾರೆ. ಥರ ಥರ ಟಗರು ಥರ ಎಂಬ ಸಾಲುಗಳು ಈ ಹಾಡಿನಲ್ಲಿವೆ.

Leave a Reply

Your email address will not be published. Required fields are marked *