Gruhalakshmi Scheme Shock: 17 ಜಿಲ್ಲೆಗಳಲ್ಲಿ 1.12 ಲಕ್ಷ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯಿಂದ ಔಟ್! ಕಾರಣ ಏನು?
ಬೆಂಗಳೂರು, ಜೂನ್ 11: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಅತ್ಯಂತ ಜನಪ್ರಿಯವಾಗಿರುವ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಇದೀಗ ದೊಡ್ಡ ಆಘಾತ ಎದುರಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಡೆಸಿದ ಮರುಪರಿಶೀಲನೆಯಲ್ಲಿ, ರಾಜ್ಯದ 17 ಜಿಲ್ಲೆಗಳ ವ್ಯಾಪ್ತಿಯಲ್ಲಿ 1,12,092ಕ್ಕೂ ಹೆಚ್ಚು ಅನರ್ಹ ಫಲಾನುಭವಿಗಳನ್ನು ಗುರುತಿಸಿ ಯೋಜನೆಯ ಪಟ್ಟಿಯಿಂದ ಕೈಬಿಡಲಾಗಿದೆ.
ಮೃತರ ಖಾತೆಗೂ ಜಮೆಯಾಗುತ್ತಿದ್ದ ಗೃಹಲಕ್ಷ್ಮಿ ಹಣ!
ಪರಿಶೀಲನೆ ವೇಳೆ ಬೆಚ್ಚಿಬೀಳಿಸುವ ಸಂಗತಿಗಳು ಬೆಳಕಿಗೆ ಬಂದಿವೆ. ಒಟ್ಟು 67,869 ಮೃತ ಮಹಿಳೆಯರ ಖಾತೆಗಳಿಗೆ ಗೃಹಲಕ್ಷ್ಮಿ ಯೋಜನೆಯ ₹2,000 ಮಾಸಿಕ ಹಣ ಜಮೆಯಾಗುತ್ತಿರುವುದು ಪತ್ತೆಯಾಗಿದೆ.
ಅದರ ಜೊತೆಗೆ, ಆದಾಯ ತೆರಿಗೆ (IT) ಮತ್ತು ಜಿಎಸ್‌ಟಿ (GST) ಪಾವತಿಸುತ್ತಿರುವ 41,848 ಮಹಿಳೆಯರೂ ಯೋಜನೆಯ ಫಲಾನುಭವಿಗಳಾಗಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಅನರ್ಹರನ್ನು ಗುರುತಿಸಿ ಪಟ್ಟಿಯಿಂದ ಕೈಬಿಟ್ಟಿದೆ.
ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿ ಯೋಜನೆಯಿಂದ ಹೊರಕ್ಕೆ?
17 ಜಿಲ್ಲೆಗಳಲ್ಲಿ ಕೈಬಿಡಲಾದ ಫಲಾನುಭವಿಗಳ ಸಂಖ್ಯೆ ಹೀಗಿದೆ:
- ದಕ್ಷಿಣ ಕನ್ನಡ – 9,000
- ಉಡುಪಿ – 2,800
- ಗದಗ – 1,231
- ದಾವಣಗೆರೆ – 4,000
- ಬಾಗಲಕೋಟೆ – 524
- ಮೈಸೂರು – 18,000
- ಉತ್ತರ ಕನ್ನಡ – 6,380
- ಹಾವೇರಿ – 6,346
- ಕೊಡಗು – 2,687
- ಚಿತ್ರದುರ್ಗ – 12,637
- ಕೊಪ್ಪಳ – 7,200
- ರಾಯಚೂರು – 1,854
- ಶಿವಮೊಗ್ಗ – 8,114
- ಬಳ್ಳಾರಿ – 4,225
- ಧಾರವಾಡ – 6,397
- ಕಲಬುರಗಿ – 7,978
- ಬೆಂಗಳೂರು ದಕ್ಷಿಣ – 12,719
ಮೊದಲು ಅರ್ಜಿ ಹಾಕಿದರೆ ಸಾಕು ಅಂದರು, ಈಗ ಹೊಸ ಮಾನದಂಡ?
2023ರ ಆಗಸ್ಟ್‌ನಲ್ಲಿ ಆರಂಭವಾದ ಗೃಹಲಕ್ಷ್ಮಿ ಯೋಜನೆಯಡಿ ಮನೆಯ ಯಜಮಾನಿಗೆ ಪ್ರತಿ ತಿಂಗಳು ₹2,000 ಆರ್ಥಿಕ ನೆರವು ನೀಡಲಾಗುತ್ತಿದೆ. ಆರಂಭದಲ್ಲಿ ಅರ್ಜಿ ಸಲ್ಲಿಸಿದ ಮಹಿಳೆಯರಿಗೆ ಹಣ ಬಿಡುಗಡೆಯಾಗುತ್ತಿತ್ತು.
ಆದರೆ ಬಳಿಕ ಹಲವು ಅನರ್ಹ ಫಲಾನುಭವಿಗಳು ಯೋಜನೆಯ ಲಾಭ ಪಡೆಯುತ್ತಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಟ್ಟುನಿಟ್ಟಿನ ಪರಿಶೀಲನೆ ಆರಂಭಿಸಿತು.

11-06-2026 ದಿನ ಭವಿಷ್ಯ: ಗುರುವಾರದ 12 ರಾಶಿಗಳ ಸಂಪೂರ್ಣ ಭವಿಷ್ಯ – ಯಾರಿಗೆ ಶುಭ, ಯಾರಿಗೆ ಎಚ್ಚರಿಕೆ?
ಯೋಜನೆ ದುರುಪಯೋಗ ಆಗ್ತಿದೆಯೇ?
ಮೃತ ಫಲಾನುಭವಿಗಳ ಖಾತೆಗಳಿಗೆ ಹಣ ವರ್ಗಾವಣೆ ಆಗುವುದನ್ನು ತಡೆಯಲು ಮತ್ತು ಯೋಜನೆಯ ದುರುಪಯೋಗವನ್ನು ತಪ್ಪಿಸಲು ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಮೃತರ ಖಾತೆಗೆ ಜಮೆಯಾಗಿರುವ ಹಣವನ್ನು ಮರುಪಡೆಯಲು ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಅರ್ಹ ಫಲಾನುಭವಿಗಳಿಗೆ ಯಾವುದೇ ತೊಂದರೆ ಆಗದಂತೆ ಕ್ರಮ ವಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜನರಲ್ಲಿ ಆತಂಕ
ಗೃಹಲಕ್ಷ್ಮಿ ಯೋಜನೆಯ ಹಣವನ್ನೇ ನಂಬಿಕೊಂಡಿರುವ ಅನೇಕ ಮಹಿಳೆಯರಲ್ಲಿ ಆತಂಕ ಮನೆ ಮಾಡಿದೆ. ತಮ್ಮ ಹೆಸರು ಪಟ್ಟಿಯಲ್ಲಿದೆಯೇ ಅಥವಾ ಕೈಬಿಟ್ಟಿದೆಯೇ ಎಂಬುದನ್ನು ಪರಿಶೀಲಿಸಲು ಫಲಾನುಭವಿಗಳು ಸೇವಾ ಸಿಂಧು ಮತ್ತು ಸಂಬಂಧಿತ ಇಲಾಖೆಯ ಕಚೇರಿಗಳಿಗೆ ಭೇಟಿ ನೀಡುತ್ತಿದ್ದಾರೆ.
ಗೃಹಲಕ್ಷ್ಮಿ ಯೋಜನೆ ಪಾರದರ್ಶಕವಾಗಿ ಜಾರಿಯಾಗಬೇಕು ಮತ್ತು ಅರ್ಹರಿಗೆ ಮಾತ್ರ ಸೌಲಭ್ಯ ಸಿಗಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
