ಬೆಂಗಳೂರು: ಪೊಲೀಸ್ ಕಸ್ಟಡಿಯಲ್ಲಿ ನಡೆಯುವ ಹಿಂಸೆ ಹಾಗೂ ಲಾಕಪ್ ಡೆತ್ ಪ್ರಕರಣಗಳಿಗೆ ಸಂಪೂರ್ಣ ಬ್ರೇಕ್ ಹಾಕುವ ಉದ್ದೇಶದಿಂದ ರಾಜ್ಯ ಪೊಲೀಸ್ ಮಹಾನಿರ್ದೇಶಕ ಹಾಗೂ ಐಜಿಪಿ ಡಾ. ಎಂ.ಎ. ಸಲೀಂ ರಾಜ್ಯಾದ್ಯಂತ ಕಠಿಣ ಹೊಸ ಮಾರ್ಗಸೂಚಿಗಳನ್ನು ಜಾರಿಗೊಳಿಸಿದ್ದಾರೆ. ತನಿಖೆಯಲ್ಲಿ ಪಾರದರ್ಶಕತೆ ಕಾಪಾಡಲು ಹಾಗೂ ಸಾಕ್ಷ್ಯ ನಾಶವಾಗುವ ಘಟನೆಗಳನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ.
ಸ್ಥಳೀಯ ಮಟ್ಟದಲ್ಲಿ ನಡೆಯುವ ತನಿಖೆಯಲ್ಲಿ ಎಫ್‌ಐಆರ್ ದಾಖಲಿಸುವ ವಿಳಂಬ, ಮಹಜರುಗಳಲ್ಲಿನ ಲೋಪದೋಷ, ಸಾಕ್ಷ್ಯ ಸಂಗ್ರಹದಲ್ಲಿ ವೈಫಲ್ಯಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಡಿಜಿ-ಐಜಿಪಿ, ಪ್ರಕರಣಗಳ ತನಿಖೆ ಸಿಐಡಿಗೆ ವರ್ಗಾವಣೆಯಾಗುವಷ್ಟರಲ್ಲಿ ಪ್ರಮುಖ ಸಾಕ್ಷ್ಯಗಳು ನಾಶವಾಗುತ್ತಿರುವುದು ನ್ಯಾಯಾಂಗ ಪ್ರಕ್ರಿಯೆಗೆ ಹಿನ್ನಡೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಹೊಸ ನಿರ್ದೇಶನದ ಪ್ರಕಾರ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) 2023ರ ಸೆಕ್ಷನ್ 196 ಅಡಿಯಲ್ಲಿ ಕಸ್ಟಡಿಯಲ್ಲಿ ಹಿಂಸೆ ಅಥವಾ ಸಾವು ಸಂಭವಿಸಿದ ತಕ್ಷಣವೇ ಎಫ್‌ಐಆರ್ ದಾಖಲಿಸುವುದು ಕಡ್ಡಾಯಗೊಳಿಸಲಾಗಿದೆ. ದೂರು ಬಂದ ಕೂಡಲೇ ಅಥವಾ ಪೊಲೀಸ್ ಇಲಾಖೆ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಳ್ಳಬೇಕಿದ್ದು, ಅದರ ಪ್ರತಿಯನ್ನು ಕೂಡಲೇ ಹಿರಿಯ ಅಧಿಕಾರಿಗಳಿಗೆ ರವಾನಿಸಬೇಕು ಎಂದು ಸೂಚಿಸಲಾಗಿದೆ.
ಸಿಐಡಿ ತನಿಖೆ ವಹಿಸಿಕೊಳ್ಳುವವರೆಗೆ DySP ಅಥವಾ ಅದಕ್ಕಿಂತ ಮೇಲ್ದರ್ಜೆಯ ಅಧಿಕಾರಿಯನ್ನು ತನಿಖೆಯ ಉಸ್ತುವಾರಿಗೆ ನೇಮಿಸುವ ಅಧಿಕಾರವನ್ನು ಯುನಿಟ್ ಹೆಡ್‌ಗಳಿಗೆ ನೀಡಲಾಗಿದೆ. ಇದರಿಂದ ತನಿಖೆಯ ಆರಂಭದಿಂದಲೇ ನಿಷ್ಪಕ್ಷಪಾತತೆ ಕಾಯ್ದುಕೊಳ್ಳುವ ಉದ್ದೇಶವಿದೆ.

ಕಸ್ಟಡಿಯಲ್ ಹಿಂಸೆ ಪ್ರಕರಣಗಳಲ್ಲಿ ಸ್ಥಳೀಯ ಪೊಲೀಸರು BNSS ಸೆಕ್ಷನ್ 103 ಹಾಗೂ 185ರ ಅಡಿಯಲ್ಲಿ ಸ್ಥಳ ಮಹಜರು ನಡೆಸಬೇಕು. ಸಿಸಿಟಿವಿ ದೃಶ್ಯಾವಳಿಗಳನ್ನು ತಕ್ಷಣ ವಶಪಡಿಸಿಕೊಳ್ಳಬೇಕು ಹಾಗೂ ಸಂತ್ರಸ್ತರ ಹೇಳಿಕೆಗಳನ್ನು ಆಡಿಯೋ-ವಿಡಿಯೋ ರೂಪದಲ್ಲಿ ದಾಖಲಿಸಬೇಕು ಎಂದು ಸೂಚಿಸಲಾಗಿದೆ.
ಇನ್ನು ಕಸ್ಟಡಿಯಲ್ಲಿ ಸಾವು ಸಂಭವಿಸಿದ ಪ್ರಕರಣಗಳಲ್ಲಿ ಮ್ಯಾಜಿಸ್ಟ್ರೇಟ್ ತನಿಖೆ ಕಡ್ಡಾಯವಾಗಿದ್ದು, ಮರಣೋತ್ತರ ಪರೀಕ್ಷೆಯ ಸಂಪೂರ್ಣ ವಿಡಿಯೋಗ್ರಫಿ ನಡೆಸಬೇಕು. ಘಟನಾ ಸ್ಥಳಕ್ಕೆ ವಿಧಿವಿಜ್ಞಾನ ತಜ್ಞರನ್ನು ಕರೆಸಿ, ಜೈವಿಕ ಹಾಗೂ ಭೌತಿಕ ಮಾದರಿಗಳನ್ನು ಎರಡು ದಿನಗಳೊಳಗೆ ಎಫ್‌ಎಸ್‌ಎಲ್‌ಗೆ ಕಳುಹಿಸಬೇಕು ಎಂದು ಆದೇಶಿಸಲಾಗಿದೆ.
ಅಲ್ಲದೆ, ಸಿಐಡಿ ತಂಡಗಳು ಆರೋಪಿ ಅಧಿಕಾರಿಗಳು ಹಾಗೂ ಸಾಕ್ಷಿಗಳೊಂದಿಗೆ ಘಟನಾ ಸ್ಥಳವನ್ನು ಮರುಸೃಷ್ಟಿಸಿ, ಎಫ್‌ಎಸ್‌ಎಲ್ ಹಾಗೂ ಲೋಕೋಪಯೋಗಿ ಇಲಾಖೆ ತಜ್ಞರ ನೆರವಿನಿಂದ ಘಟನಾ ಸ್ಥಳದ ವಿವರವಾದ ನಕ್ಷೆ ಸಿದ್ಧಪಡಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ರಾಜ್ಯದ ಪೊಲೀಸ್ ಹಾಗೂ ನ್ಯಾಯಾಂಗ ವ್ಯವಸ್ಥೆಯ ಮೇಲಿನ ಸಾರ್ವಜನಿಕರ ನಂಬಿಕೆಯನ್ನು ಬಲಪಡಿಸಲು ಸ್ವತಂತ್ರ, ವಸ್ತುನಿಷ್ಠ ಹಾಗೂ ನಿಷ್ಪಕ್ಷಪಾತ ತನಿಖೆ ಅತ್ಯಗತ್ಯವಾಗಿದ್ದು, ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಡಿಜಿ-ಐಜಿಪಿ ಡಾ. ಎಂ.ಎ. ಸಲೀಂ ಸೂಚಿಸಿದ್ದಾರೆ.
