ಕೊಲ್ಕತ್ತಾ: ದೇಶದ ಭದ್ರತಾ ದೃಷ್ಟಿಯಿಂದ ಅತ್ಯಂತ ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಲ್ಪಡುವ ಸಿಲಿಗುರಿ ಕಾರಿಡಾರ್ ಅಥವಾ ‘ಚಿಕನ್ ನೆಕ್’ ಪ್ರದೇಶಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದೆ. ಪಶ್ಚಿಮ ಬಂಗಾಳ ಸರ್ಕಾರ ಸುಮಾರು 120 ಎಕರೆ ಭೂಮಿಯನ್ನು ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸಿರುವುದಾಗಿ ವರದಿಯಾಗಿದೆ.
ಭಾರತವನ್ನು ಈಶಾನ್ಯ ರಾಜ್ಯಗಳೊಂದಿಗೆ ಸಂಪರ್ಕಿಸುವ ಏಕೈಕ ಭೂ ಮಾರ್ಗವೇ ಸಿಲಿಗುರಿ ಕಾರಿಡಾರ್. ಈ ಪ್ರದೇಶದ ಅಗಲ ಕೆಲವೆಡೆ ಕೇವಲ 20 ಕಿಲೋಮೀಟರ್ಗಳಷ್ಟೇ ಇರುವುದರಿಂದ ಇದನ್ನು ‘ಚಿಕನ್ ನೆಕ್’ ಎಂದು ಕರೆಯಲಾಗುತ್ತದೆ. ಭಾರತಕ್ಕೆ ಸೇನಾ, ಸಾರಿಗೆ ಹಾಗೂ ತಂತ್ರಜ್ಞಾನದ ದೃಷ್ಟಿಯಿಂದ ಈ ಪ್ರದೇಶ ಜೀವನಾಡಿಯಂತಿದೆ.

ಭೂಮಿ ಹಸ್ತಾಂತರದ ನಂತರ ಈ ಪ್ರದೇಶದಲ್ಲಿ ಸೇನಾ ಮೂಲಸೌಕರ್ಯ, ರಸ್ತೆ ಅಭಿವೃದ್ಧಿ, ಭದ್ರತಾ ವ್ಯವಸ್ಥೆ ಹಾಗೂ ಸಂಪರ್ಕ ಸೌಲಭ್ಯಗಳನ್ನು ಮತ್ತಷ್ಟು ಬಲಪಡಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ನೇಪಾಳ, ಭೂತಾನ್, ಬಾಂಗ್ಲಾದೇಶ ಹಾಗೂ ಚೀನಾ ಗಡಿಗಳ ಸಮೀಪದಲ್ಲಿರುವ ಈ ಕಾರಿಡಾರ್ ರಾಷ್ಟ್ರೀಯ ಭದ್ರತಾ ದೃಷ್ಟಿಯಿಂದ ಅತ್ಯಂತ ಮಹತ್ವ ಪಡೆದಿದ್ದು, ಕೇಂದ್ರ ಸರ್ಕಾರದ ಯೋಜನೆಗಳಿಗೆ ರಾಜ್ಯ ಸರ್ಕಾರದ ಈ ನಿರ್ಧಾರ ದೊಡ್ಡ ಬೆಂಬಲವಾಗಿ ಕಾಣಲಾಗಿದೆ.
