ಅಬ್ಬಾ ಒಂದು ಹೊಸ ಸಂಸತ್‌ ಭವನಕ್ಕೆ ಅದೆಷ್ಟು ಕೆಸರೆರಚಾಟ, ಅದೆಷ್ಟು ಬೆಂಕಿ ಹಚ್ಚುವ ಕೆಲಸ, ಅದೆಷ್ಟು ದಿಕ್ಕು ತಪ್ಪಿಸುವ ಕುತಂತ್ರ…

 

ನರೇಂದ್ರ ಮೋದಿ ಎನ್ನುವ ವ್ಯಕ್ತಿಯ ಬಗ್ಗೆ ಕಳೆದ ಎರಡು ದಶಕಗಳಿಂದ ಹಗಲು, ರಾತ್ರಿ ಬೈದುಕೊಂಡು ಓಡಾಡುತ್ತಿರುವ ಸಾಕಷ್ಟು ಜನರಿದ್ದಾರೆ. ಆದರೆ ಅವರಿಗಿಂತ ಹೆಚ್ಚಿನ ಸಂಖ್ಯೆಯ ಜನರು ಆ ವ್ಯಕ್ತಿಯನ್ನು ಮೆಚ್ಚಿ ಪ್ರಧಾನಿ ಸ್ಥಾನದಲ್ಲಿ ಕೂರಿಸಿದ್ದಾರೆ. ಇದನ್ನು ಸಹಿಸಿಕೊಳ್ಳಲಾಗದೇ ಅದೆಷ್ಟು ಕಥೆ ಕಟ್ಟುತ್ತಿದ್ದಾರೆ ಎನ್ನುವುದನ್ನು ನೋಡಿದರೆ ಅಸಹ್ಯ ಮೂಡಿಸುತ್ತದೆ.

 

ಕಟ್ಟುಕಥೆಗಳು….

೧. ಹೊಸ ಸಂಸತ್‌ ಭವನ ನಿರ್ಮಿಸಿ ಭಾರತದ ಇತಿಹಾಸವನ್ನು ಮರೆಮಾಚಲಾಗುತ್ತಿದೆ.

೨. ಸಿಂಗೋಲ್‌ ಮೂಲಕ ಪ್ರಜಾಪ್ರಭುತ್ವದಿಂದ ರಾಜಪ್ರಭುತ್ವದ ಕಡೆಗೆ ಹೆಜ್ಜೆ

೩. ಮೂಲಭೂತವಾದಿ ಬ್ರಾಹ್ಮಣರನ್ನು ಮಾತ್ರ ಕರೆದು ಹೊಸ ಸಂಸತ್‌ ಭವನ ಉದ್ಘಾಟನೆ

೪. ಪರಿಶಿಷ್ಟ ಪಂಗಡದ ರಾಷ್ಟ್ರಪತಿಗೆ ಅವಮಾನ

೫. ಹಳೆಯ ಸಂಸತ್‌ ಭವನ ಇರುವಾಗ ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿ ಹೊಸ ಕಟ್ಟಡ ಹಣದ ದುರ್ಬಳಕೆ

೬. ಮೋದಿಯಿಂದ ಸರ್ವಾಧಿಕಾರದ ವರ್ತನೆ

 

ಈಗ ಮೇಲಿನ ಒಂದೊಂದೇ ಕಟ್ಟು ಕಥೆಯ ಬಗ್ಗೆ ಮಾತನಾಡಲೇಬೇಕು. ಇಲ್ಲವಾದಲ್ಲಿ ಈ ಕಟ್ಟುಕ ಕಥೆಗಳನ್ನು ಸತ್ಯವಾಗಿಸುವ ಪ್ರಯತ್ನ ನಡೆಯಬಹುದು.

 

೧. ಭಾರತದ ಇತಿಹಾಸ ಮರೆಮಾಚುವುದು: ಭಾರತದ ಇತಿಹಾಸವು ಮೊಘಲರು, ಬ್ರಿಟಿಷರು ಹಾಗೂ ನೆಹರು ಕಾಲದಿಂದ ಆರಂಭವಾಗಿಲ್ಲ. ವಿಶ್ವದ ಅತ್ಯಂತ ಹಳೆಯ ನಾಗರೀಕತೆ ಹೊಂದಿರುವ ಭಾರತಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಈ ಇತಿಹಾಸವನ್ನು ಮೋದಿ ಮರೆ ಮಾಚಿಲ್ಲ. ಮೋದಿಯನ್ನು ವಿರೋಧಿಸುತ್ತಿರುವರಿಗೆ ಭಾರತದ ಭವ್ಯ ಇತಿಹಾಸಗಳು ಕಥೆ-ಪುರಾಣದಂತೆ ಕಾಣಿಸುತ್ತವೆ. ಂಒಘಲರು ಹಾಗೂ ಬ್ರಿಟಿಷರು ಭಾರತಕ್ಕೆ ಬರುವರೆಗೆ ಭಾರತ ಅಂಧಕಾರದಲ್ಲಿತ್ತು ಎನ್ನುವ ಕೂಪ ಮಂಡೂಕಗಳು ಭಾರತದ ಇತಿಹಾಸದ ಬಗ್ಗೆ ಕಥೆ ಹೇಳುವುದೇ ಆಶ್ಚರ್ಯ ಮೂಡಿಸುತ್ತದೆ. ಅಷ್ಟಕ್ಕೂ ಇಲ್ಲಿಯವರೆಗೆ ಇಂತಹ ಆಸ್ಥಾನ ಪಂಡಿತರು ಬರೆದ ಕಥೆಯನ್ನು ಇತಿಹಾಸವೆಂದು ನಂಬಿಕೊಂಡಿದ್ದವರು ಪ್ರಶ್ನಿಸಲು ಆರಂಭಿಸಿದ್ದು ತಡೆಯಲಾಗುತ್ತಿಲ್ಲ. ಹೊಸ ಸಂಸತ್‌ ಭವನದಲ್ಲಿ ಭಾರತದ ಭವ್ಯ ಇತಿಹಾಸ, ಪರಂಪರೆಯನ್ನು ಹೇಳಲು ಹೊರಟಿದ್ದನ್ನು ಸಹಿಸಲಾಗುತ್ತಿಲ್ಲ. ಸ್ವತಂತ್ರ ಭಾರತದ ಇತಿಹಾಸವೆಂದರೆ ನೆಹರು, ಗಾಂಧಿ ಪರಿವಾರ ಎನ್ನುವ ಮಟ್ಟಿಗೆ ಬಿಂಬಿಸಲಾಗಿತ್ತು. ಅದಕ್ಕೆ ತಿಲಾ<ಜಲಿ ಹಾಡಿ ಭಾರತದ ಎಲ್ಲ ಪ್ರಧಾನಿಗಳಿಗೆ ಸಮಾನ ಅವಕಾಶ ನೀಡಿ ಪ್ರಧಾನಿಗಳ ವಸ್ತು ಸಂಗ್ರಹಾಲಯ ನಿರ್ಮಿಸಿದ್ದು ಮೋದಿ. ಇತಿಹಾಸ ಮರೆಮಾಚಬೇಕಿದ್ದರೆ ಮೋದಿಗೆ ಆ ಕೆಲಸ ಮಾಡುವ ಅಗತ್ಯವಿರಲಿಲ್ಲ. ಅಂದ್ಹಾಗೆ ಹಳೆಯ ಸಂಸತ್‌ ಭವನವನ್ನು ದೇಶದ ಭವ್ಯ ಪರಂಪರೆ ಹಾಗೂ ಇತಿಹಾಸ ಸಾರುವ ವಸ್ತು ಸಂಗ್ರಹಾಲಯ ಮಾಡುವ ಪ್ರಸ್ತಾವನೆಯನ್ನು ಈಗಾಗಲೇ ಕೇಂದ್ರ ಮುಂದಿಟ್ಟಿದೆ. ಹೀಗಿರುವಾಗ ಹಳೆಯ ಸಂಸತ್‌ ಭವನದ ಇತಿಹಾಸವನ್ನು ಮಣ್ಣಿನಡಿಗೆ ಹಾಕಲಾಗುತ್ತದೆ ಎನ್ನುವ ಮಾತು ಹೇಸಿಗೆಯ ಪರಮಾವಧಿ. ವಾಜಪೇಯಿ ಕಟ್ಟಿದ ಚತುಷ್ಪಥ ರಸ್ತೆಗೆ ತಮ್ಮ ಭಾವಚಿತ್ರ ಹಾಕಿಕೊಂಡವರು ಇಂದು ಇತಿಹಾಸ ತಿದ್ದಲು ಹೊರಟಿದ್ದಾರೆ ಎನ್ನುವ ಸುಳ್ಳಿನ ಅರಮನೆ ಕಟ್ಟುತ್ತಿರುವುದು ವಿಪರ್ಯಾಸ.

 

೨. ಸಿಂಗೋಲ್‌: ಸಿಂಗೋಲ್‌ ಅಥವಾ ರಾಜದಂಡ ಎನ್ನುವುದು ರಾಜಪ್ರಭುತ್ವದ ಪ್ರತೀಕ. ದೇಶವನ್ನು ಪ್ರಜಾಪ್ರಭುತ್ವದಿಂದ ರಾಜಪ್ರಭುತ್ವದೆಡೆಗೆ ಕೊಂಡೊಯ್ಯುವ ಸ್ಥಿತಿ ನಿರ್ಮಿಸಲಾಗುತ್ತಿದೆ ಎಂದು ಒಂದಿಷ್ಟು ಜನರು ಬೊಬ್ಬೆ ಹಾಕುತ್ತಿದ್ದಾರೆ. ಧಾರ್ಮಿಕ ಹಾಗೂ ಐತಿಹಾಸಿಕ ಹಿನ್ನೆಲೆಯುಳ್ಳ ರಾಜದಂಡವನ್ನು ವಾಕಿಂಗ್‌ ಸ್ಟಿಕ್‌ ಎಂದು ಹೇಳಿಕೊಳ್ಳುವ ಮಟ್ಟಿಗೆ ದರ್ಪ ಹೊಂದಿದವರು ಪ್ರಜಾಪ್ರಭುತ್ವದ ಪಾಠ ಮಾಡುವುದು ವಿಶೇಷವಾಗಿ ಕಾಣಿಸುತ್ತದೆ. ಭಾರತದ ಪರಂಪರೆ ಹಾಗೂ ಸಂಸ್ಕೃತಿಗೆ ನಮ್ಮ ಪ್ರಜಾಪ್ರಭುತ್ವದಲ್ಲಿ ಜಾಗ ಕೊಟ್ಟರೇ ಸಂವಿಧಾನಕ್ಕೆ ಯಾವುದೇ ಅಪಚಾರ ಆಗುವುದಿಲ್ಲ. ನಮ್ಮನ್ನು ಲೂಟಿ ಮಾಡಿದವರನ್ನು ಶಾಂತಿ ಧೂತರು ಎಂದರೆ ಅಪಚಾರ ಆಗದ ಸಂದರ್ಭದಲ್ಲಿ ನಮ್ಮ ಹಿರಿಮೆ-ಗರಿಮೆಯನ್ನು ನೆನೆಸಿಕೊಂಡರೆ ಏನಾಗುತ್ತದೆ?

 

೩. ಮೂಲಭೂತವಾದಿ ಬ್ರಾಹ್ಮಣರು: ಮೂಲಭೂತವಾದಿಗಳು ಎಲ್ಲ ಕಡೆ ಇದ್ದಾರೆ ಎನ್ನುವುದನ್ನು ನಾನು ಕೂಡ ಒಪ್ಪಿಕೊಳ್ಳುತ್ತೇನೆ. ಆದರೆ ಇಂದು ಸಿಂಗೋಲ್‌ ಪ್ರತಿಷ್ಠಾಪನೆಗೆ ಸಂಸತ್‌ ಭವನಕ್ಕೆ ಬಂದ ಅಧೀನಂ ಮಠ ಪರಂಪರೆಯ ಶ್ರೀಗಳನ್ನು ಮೂಲಭೂತವಾದಿ ಬ್ರಾಹ್ಮಣರು ಎಂದು ಕೆಲ ರಾಜಕೀಯ ಮುಖಂಡರು ಹಾಗೂ ಬೆಂಬಲಿಗರು ಹೇಳಿಕೊಂಡು ಹೊಟ್ಟೆಗೆ ಬೆಂಕಿ ಹಾಕಿಕೊಂಡಿದ್ದಾರೆ. ಕೆಲವರಿಗೆ ಬ್ರಾಹ್ಮಣರನ್ನು ಬೈಯದಿದ್ದರೆ ತಿಂದ ಅನ್ನ ಮೈಗೆ ಹತ್ತುವುದಿಲ್ಲ. ಹೀಗಾಗಿ ಅಧೀನಂ ಕೂಡ ಬ್ರಾಹ್ಮಣರಂತೆ ಕಂಡಿದ್ದಾರೆ. ನಿಜವಾಗಿ ಅವರು ಬ್ರಾಹ್ಮಣರಲ್ಲ. ಶೈವ ಪರಂಪರೆಯನ್ನು ಪಾಲಿಸುವರಾಗಿದ್ದಾರೆ. ಹೀಗಾಗಿ ಅಲ್ಲಿನ ಆಚರಣೆ ನೋಡಿ ಬ್ರಾಹ್ಮಣರು ಎಂದು ತಲೆ ಕೆಡಿಸಿಕೊಳ್ಳಬೇಡಿ. ಅಂದ್ಹಾಗೆ ಚೋಳರ ಕಾಲದಲ್ಲಿಯೂ ಇವರಿದ್ದರು. ಚೋಳರಿಂದ ತುಂಬಾ ಗೌರವವನ್ನು ಸಂಪಾದಿಸಿದವರಾಗಿದ್ದರು. ಅದೇ ಹಿನ್ನೆಲೆಯಲ್ಲಿ ರಾಜದಂಡವನ್ನು ನೆಹರುಗೆ ಅಧೀನಂನಿಂದ ನೀಡಲಾಗಿತ್ತು. ಅದನ್ನು ತುಂಬಾ ಗೌರವದಿಂದ ಕಂಡ ನೆಹರು, ವಾಕಿಂಗ್‌ ಸ್ಟಿಕ್‌ ಮಾಡಿಕೊಂಡಿದ್ದರು, ಅಷ್ಟೆ.

 

೪. ರಾಷ್ಟ್ರಪತಿಗೆ ಅವಮಾನ: ಸಂಸತ್ತು ಹಾಗೂ ದೇಶದ ಆಡಳಿತ ವ್ಯವಸ್ಥೆಗೆ ಸಂಬಂಧಿಸಿ ರಾಷ್ಟ್ರಪತಿಗೆ ಉನ್ನತ ಸ್ಥಾನವಿದೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ಕಟ್ಟಡ ಉದ್ಘಾಟನೆಗೆ ಯಾರು ಬರಬೇಕು ಎನ್ನುವುದಕ್ಕೆ ಯಾವುದೇ ಸಂವಿಧಾನಬದ್ಧ ಚೌಕಟ್ಟಿಲ್ಲ. ಈ ದೇಶದಲ್ಲಿ ಪ್ರತಿಯೊಂದಕ್ಕೂ ರಾಜಕೀಯವಿದೆ. ಮೋದಿ ಕಟ್ಟಡ ಉದ್ಘಾಟಿಸಿದರೆ ಬಿಜೆಪಿಗೆ ಅದು ರಾಜಕೀಯವಾಗಿ ಒಳ್ಳೆಯದಾಗಿ ಕಾಣಿಸುತ್ತದೆ. ಅದೇ ಕಾಂಗ್ರೆಸ್‌ಗೆ ಸಹಿಸಿಕೊಳ್ಳಲಾಗದು. ಆದರೆ ಇದಕ್ಕೆ ಕಾಂಗ್ರೆಸ್‌ ಹಾಗೂ ಕೆಲ ಪ್ರತಿಪಕ್ಷಗಳು ಸಂವಿಧಾನ ಮಾನ-ಮರ್ಯಾದೆಯ ಗಂಭೀರ ನೆಪ ಹೇಳುತ್ತಿದ್ದಾರೆಯಷ್ಟೆ. ಸೈದ್ಧಾಂತಿಕವಾಗಿ ತಾವು ಒಪ್ಪದ ಮೋದಿಯು ಇಂತಹದೊಂದು ಐತಿಹಾಸಿಕ ಕಟ್ಟಡ ಕಟ್ಟಿದರೆ, ಅವರ ಹೆಸರು ಇನ್ನೊಂದು ಶತಮಾನದ ಕಾಲ ಜನರು ನೆನಪಿಸಿಕೊಳ್ಳುತ್ತಾರೆ ಎನ್ನುವ ದೂರದ ದುರಾಲಚನೆ ಮಾತ್ರ ಇಂದಿನ ಬಹಿಷ್ಕಾರಕ್ಕೆ ಕಾರಣವಾಗಿದೆ. ಈ ದೇಶದಲ್ಲಿ ಎಲ್ಲವನ್ನೂ ನೆಹರು, ಗಾಂಧಿ ಕಟ್ಟಿದ್ದಾರೆ ಎನ್ನುವುದು ಇತಿಹಾಸದಲ್ಲಿ ಇರಬೇಕು ಎಂದು ಕೆಲವರು ಬಯಸಿರಬಹುದು. ಆದರೆ ದೇಶವನ್ನು ಆಯಾ ಕಾಲಕ್ಕೆ ಎಲ್ಲರೂ ತಮ್ಮಿಂದ ಸಾಧ್ಯವಾದಷ್ಟು ಕಟ್ಟುವ ಕೆಲಸ ಮಾಡಲೇಬೇಕಾಗುತ್ತದೆ. ಅದನ್ನು ಸ್ಮರಿಸುವ, ಉಲ್ಲೇಖಿಸುವ ಹಾಗೂ ಒಪ್ಪುವ ಔದಾರ್ಯವನ್ನು ಎಲ್ಲರೂ ಹೊಂದಬೇಕು. ಉಲ್ಲವಾದಲ್ಲಿ ಸಹಿಷ್ಣುತೆ ಹಾಗೂ ಅಸಹಿಷ್ಣುತೆಯ ಪುಕ್ಕಟೆ ಪಾಠಕ್ಕೆ ಬೆಲೆ ಬರುವುದಿಲ್ಲ. ಆದಿವಾಸಿ ಮಹಿಳೆಯರ ಬಗ್ಗೆ ಅಷ್ಟೊಂದು ಗೌರವವಿದ್ದರೆ ಯಶ್ವಂತ್‌ ಸಿನ್ಹಾ ಪ್ರತಿಪಕ್ಷಗಳ ಅಭ್ಯರ್ಥಿ ಆಗುತ್ತಿರಲಿಲ್ಲ. ದ್ರೌಪದಿ ಮುರ್ಮು ಬಗ್ಗೆ ಹೇಸಿಗೆಯ ಹೇಳಿಕೆ ನೀಡಿದವರು ಆಯಾ ಪಕ್ಷದ ಸದಸ್ಯರಾಗಿ ಮುಂದುವರಿಯುತ್ತಿರಲಿಲ್ಲ. ಜಾತಿ ರಾಜಕಾರಣ ಮಾಡಲು ಅವಕಾಶ ಹುಡುಕುವುದು ಹಾಗೂ ಮೋದಿ ಹೆಸರು ಹೊಸ ಸಂಸತ್‌ ಭವನದ ಉದ್ಘಾಟನಾ ಫಲಕದಲ್ಲಿ ಕಾಣಿಸಬಾರದು ಎನ್ನುವುದು ಮಾತ್ರ ಅಜೆಂಡಾ ಆದಾಗ ಇಂತಹ ಹೋರಾಟ ಅನಿವಾರ್ಯ. ಇದನ್ನು ತಿಳಿದ ಸುಪ್ರೀಂ ಕೋರ್ಟ್‌ ಕೂಡ ಮಂಗಳಾರತಿ ಮಾಡಿ ಅರ್ಜಿಯನ್ನು ವಜಾ ಮಾಡಿದ್ದು ಮರೆಯಬಾರದು.

 

೫. ಹಣದ ದುರ್ಬಳಕೆ: ಮುಖ್ಯಮಂತ್ರಿ-ಸಚಿವರಾದ ಕೂಡಲೇ ಸರ್ಕಾರಿ ಬಂಗಲೆಗೆ ಕೋಟಿಗಟ್ಟಲೇ ಖರ್ಚು ಮಾಡಿ ನವೀಕರಣ ಮಾಡುವವರು ದೇಶದ ಪ್ರಜಾಪ್ರಭುತ್ವಕ್ಕೆ ಹೊಸ ದೇಗುಲ ನಿರ್ಮಾಣ ಆಗುತ್ತಿರುವಾಗ ಹಣದ ದುರ್ಬಳಕೆ ಬಗ್ಗೆ ಪಾಠ ಮಾಡುತ್ತಿದ್ದಾರೆ. ವಿಶ್ವದ ಐದನೇ ದೊಡ್ಡ ಆರ್ಥಿಕತೆಯ ದೇಶವು ಒಂದು ಸಂಸತ್‌ ಭವನಕ್ಕೆ ಸಾವಿರ ಕೋಟಿ ಖರ್ಚು ಮಾಡದ ಸ್ಥಿತಿಯಲ್ಲಿ ಇದೆಯೇ ಎನ್ನುವುದನ್ನು ಮೊದಲು ನೋಡಬೇಕಿದೆ. ನಾನು ಹಿಂದೆಯೇ ಹೇಳಿದಂತೆ ನಮ್ಮ ದೇಶದಲ್ಲಿ ಸೊಪ್ಪಿನ ಭೂತಗಳು ಹೆಚ್ಚಾಗಿವೆ. ಹೆದ್ದಾರಿ ಮಾಡಿದರೆ ಇಷ್ಟೊಂದು ವೈಭೋಗದ ಹೆದ್ದಾರಿ ಏಕಿತ್ತಾ ಎನ್ನುತ್ತಾರೆ. ಮಾಡದಿದ್ದರೆ ಈ ಸರ್ಕಾರ ಏನು ಮಾಡಿದೆ ಎಂದು ಪ್ರಶ್ನಿಸುತ್ತಾರೆ. ಅಂದ್ಹಾಗೆ ಈ ಹೊಸ ಸಂಸತ್‌ ಭವನವು ಮೋದಿಯ ಕನಸಿನ ಕೂಸಲ್ಲ. ಹೊಸ ಸಂಸತ್‌ ಭವನದ ಪ್ರಸ್ತಾವನೆಯನ್ನು ಮೊದಲು ಮುಂದಿಟ್ಟಿದ್ದು, ಯುಪಿಎ ಕಾಲಾವಧಿಯ ಸ್ಪೀಕರ್‌ ಮೀರಾಕುಮಾರಿ. ಸಂಸತ್ತಿನ ಎಲ್ಲ ಸದಸ್ಯರು ಕಲಾಪಕ್ಕೆ ಬಂದರೆ, ಜಂಟಿ ಕಲಾಪವಾದಾಗ ಜಾಗವೇ ಇರುವುದಿಲ್ಲ. ಸಂಸದರು ಕೂರಲು ಕೂಡ ಸಾಧ್ಯವಿಲ್ಲ ಎಂದು ಈ ಪ್ರಸ್ತಾಪ ಮಾಡಲಾಗಿತ್ತು. ಬರಾಕ್‌ ಒಬಾಮಾ ಅವರು ಸಂಸತ್ತಿಗೆ ಭೇಟಿ ನೀಡಿದ್ದಾಗ ಸಂಶದರು ಹಾಗೂ ಗಣ್ಯರು ಕೂತ್ತಿದ್ದನ್ನು ನೋಡಿ ಮುಜುಗರ ಪಡುವಂತಾಗಿತ್ತು. ಇನ್ನೊಂದೆಡೆ ಇನ್ನೈದು ವರ್ಷದಲ್ಲಿ ಸಂಸತ್‌ ಸದಸ್ಯರ ಸಂಖ್ಯೆ ಕೂಡ ಏರಲಿದೆ. ಆಗ ಅವರನ್ನು ಕಾಂಗ್ರೆಸ್‌ ಕಚೇರಿಯಲ್ಲಿ ಕೂರಿಸಿ ಕಲಾಪ ನಡೆಸಲು ಸಾಧ್ಯವಿದೆಯೇ ಅಥವಾ ಯಾವುದಾದರೂ ಕಾಂಗ್ರೆಸ್‌ ನಾಯಕರ ಕನ್ವೆನ್ಷನಲ್‌ ಹಾಲ್‌ನ್ನುಬಾಡಿಗೆ ಪಡೆದು ಕಲಾಪ ನಡೆಸಬೇಕೆ? ನಮ್ಮಜ್ಜ ಕಟ್ಟಿದ ಮನೆಯೆಂದು ಪ್ರೀತಿ ಇರಬೇಕು ನಿಜ. ಆದರೆ ಅಜ್ಜನ ಮೇಲಿನ ಪ್ರೀತಿಯಿಂದ ಮನೆಯಲ್ಲಿ ಜಾಗವಿಲ್ಲವೆಂದು ಮಕ್ಕಳನ್ನು ಬೀದಿಯಲ್ಲಿ ಅಥವಾ ಪಕ್ಕದ ಮನೆಯಲ್ಲಿ ಮಲಗಿಸಲು ಸಾಧ್ಯವಿಲ್ಲ. ಒಂದೊಮ್ಮೆ ಹಾಗೆ ಮಾಡಿದರೆ ಊರು ತುಂಬ ಜನರು ನಗುತ್ತಾರೆ.

 

೬. ಸರ್ವಾಧಿಕಾರಿ ಮೋದಿ: ಮೋದಿ ಸರ್ವಾಧಿಕಾರಿಯಂತೆ ವರ್ತಿಸುತ್ತಾರೆ. ತನ್ನ ಹಿಂದಿನ ಎಲ್ಲ ಇತಿಹಾಸವನ್ನು ಮರೆಮಾಚುವುದೇ ಮೋದಿಯ ಷಡ್ಯಂತ್ರ ಎಂದು ಸಾಕಷ್ಟು ಜನ ಭಾಷಣ ಮಾಡುತ್ತಿದ್ದಾರೆ. ಆದರೆ ಈ ಸರ್ವಾಧಿಕಾರದ ಬಗ್ಗೆ ಭಾಷಣ ಮಾಡುವರ ಹಿನ್ನೆಲೆಯ ಪಕ್ಷದ ಹಿಂದಿನ ತಲೆಮಾರಿನ ನಾಯಕರ ಸಮಾಧಿಗೆ ಹತ್ತಾರು ಎಕರೆ ಜಾಗ ಬಳಸಲಾಗಿದೆ. ಈ ಸಮಾಧಿಯ ಬಗೆಗೂ ಇದೇ ರೀತಿಯ ವಾರ್ತಾಲಾಪ ಮಾಡುವ ಧೈರ್ಯವನ್ನು ತೋರಿಸಿ ನೋಡೋಣ. ಸಂಸತ್‌ ಭವನ ಅಥವಾ ಪ್ರಾಜೆಕ್ಟ್‌ ವಿಸ್ತಾ ಮೂಲಕ ಮೋದಿಯು ಸ್ವಂತ ಮನೆ ಕಟ್ಟುತ್ತಿಲ್ಲ. ಸರ್ಕಾರಿ ಬಂಗಲೆಯನ್ನೇ ತಮ್ಮ ಮನೆಯನ್ನಾಗಿಸಿಕೊಂಡವರು ಹೇಳುವ ಕಥೆ ಕೇಳಿದರೆ ನಗು ಬರುತ್ತದೆ. ಮೋದಿ ಸರ್ವಾಧಿಕಾರಿಯಾಗಿದ್ದರೆ ಹೊಸ ಸಂಸತ್‌ ಭವನದಲ್ಲಿ ಭಾರತದ ಪರಂಪರೆಯನ್ನು ಅಷ್ಟೊಂದು ವಿವರವಾಗಿ ಸಾರುವ ಅಗತ್ಯವಿರಲಿಲ್ಲ. ನೆಹರು ಹಾಗೂ ಗಾಂಧಿ ಹೊರತಾದ ಎಲ್ಲ ಪ್ರಧಾನಿಗಳಿಗೂ ಗೌರವ ಕೊಡುವಂಥ ಕೆಲಸ ಮಾಡುವ ಅಗತ್ಯ ಬರುತ್ತಿರಲಿಲ್ಲ.

 

ಮೋದಿಯನ್ನು ವಿರೋಧಿಸುವ ಭರದಲ್ಲಿ ಈ ದೇಶದ ಇತಿಹಾಸ,ಸಂಸ್ಕೃತಿ, ಪರಂಪರೆ ಹಾಗೂ ಉತ್ತಮ ಕೆಲಸಗಳನ್ನು ಟೀಕಿಸುವ ಕೆಲಸ ಮಾಡಬೇಡಿ. ಕೆಲ ದಶಕ ಅಥವಾ ಶತಮಾನದ ಬಳಿಕ ಮೋದಿ ಕಟ್ಟಿಸಿದ ಈ ಕಟ್ಟಡದ ಬದಲಿಗೆ ಬೇರೆ ಕಟ್ಟಡವನ್ನು ಕಟ್ಟಬೇಕಾಗಬಹುದು. ಆದರೆ ಮೋದಿ ಕಟ್ಟಿಸಿದ್ದಾರೆ ಎಂದು ಅಲ್ಲೇ ಜೋತಾಡಲು ಸಾಧ್ಯವಿಲ್ಲ. .

 

Leave a Reply

Your email address will not be published. Required fields are marked *