ರಾಜ್ಯಕ್ಕೆ ಆಗಮಿಸೋ ಮುನ್ನವೇ ಕೇಜ್ರಿವಾಲ್‌ಗೆ ಶಾಕ್, ಎಎಪಿ ತೊರೆದು ಬಿಜೆಪಿ ಸೇರ್ತಿದ್ದಾರೆ ಭಾಸ್ಕರ್ ರಾವ್!

ಇಂದು ಬೆಳಗ್ಗೆ ಬಿಜೆಪಿ ಕಚೇರಿಗೆ ಭಾಸ್ಕರ್ ರಾವ್ ಭೇಟಿ ನೀಡಿದ್ದರು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ರಾಜ್ಯ ಚುನಾವಣಾ ಸಹ ಉಸ್ತುವಾರಿ ಕೆ.ಅಣ್ಣಾಮಲೈ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್ ಕಟೀಲ್ ಅವರೊಂದಿಗೆ ಈ ವೇಳೆ ಚರ್ಚೆ ಮಾಡಿದ್ದರು..

ಬೆಂಗಳೂರು: ಆಮ್​ ಆದ್ಮಿ ಪಕ್ಷದ (Aam Aadmi Party) ರಾಜ್ಯ ಉಪಾಧ್ಯಕ್ಷ, ಮಾಜಿ ಐಪಿಎಸ್​ ಅಧಿಕಾರಿ ಭಾಸ್ಕರ್​ ರಾವ್ (Bhaskar Rao)​​ ಅವರು ಇಂದು ಬೆಂಗಳೂರಿನ (Bengaluru) ಬಿಜೆಪಿ (BJP) ಕೇಂದ್ರ ಕಚೇರಿಗೆ ಭೇಟಿ ನೀಡಿದ್ದರು. ರಾಜ್ಯದಲ್ಲಿ ಎಎಪಿ ಪಕ್ಷದ ಪ್ರಮುಖ ನಾಯಕರಾಗಿದ್ದ ಭಾಸ್ಕರ್ ರಾವ್​ ಅವರು ಬಿಜೆಪಿ ಕಚೇರಿಗೆ ಭೇಟಿ ನೀಡಿದ್ದು ಭಾರೀ ಕುತೂಹಲಕ್ಕೆ ಕಾರಣವಾಗಿತ್ತು. ಬೆಂಗಳೂರಿನ ಮಲ್ಲೇಶ್ವರದಲ್ಲಿರುವ (Malleshwaram) ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನಕ್ಕೆ ಭಾಸ್ಕರ್​ ರಾವ್​ ಅವರು ಭೇಟಿ ನೀಡಿರುವುದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಇದರ ನಡುವೆಯೇ ಅವರು ಭಾಸ್ಕರ್​ ರಾವ್​ ಅವರು ಮಾರ್ಚ್​ 1ರ ಬುಧವಾರ ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಲಿದ್ದಾರೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ..

ಕಂದಾಯ ಸಚಿವ ಆರ್​ ಅಶೋಕ್​​ ಭೇಟಿಯಾಗಿದ್ದ ಭಾಸ್ಕರ್ ರಾವ್

ಬಿಜೆಪಿ ಕಚೇರಿಗೆ ಭೇಟಿ ನೀಡಿದ ಬಳಿಕ ಕಂದಾಯ ಸಚಿವ ಆರ್​ ಅಶೋಕ್​​ ಜೊತೆಗೂ ಭಾಸ್ಕರ್ ರಾವ್ ಪದ್ಮನಾಭನಗರದಲ್ಲಿ ಮಾತುಕತೆ ನಡೆಸಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಆಪ್​​ ಪಕ್ಷದಿಂದ ಬಸವನಗುಡಿ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಭಾಸ್ಕರ್ ರಾವ್​ ಅವರು ಸಿದ್ಧತೆ ನಡೆಸಿದ್ದರು. ಆದರೆ ಇದರ ನಡುವೆಯೇ ಅವರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿ ಹಲವರಿಗೆ ಅಚ್ಚರಿ ಮೂಡಿಸಿದೆ.ದೆಹಲಿ ಸಿಎಂ, ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ ಸಮ್ಮುಖದಲ್ಲಿ ಎಎಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದ ಭಾಸ್ಕರ್ ರಾವ್ ಅವರು ಆ ಬಳಿಕ ಬಿಜೆಪಿ ಹಾಗೂ ಕಾಂಗ್ರೆಸ್​ ಪಕ್ಷಗಳ ವಿರುದ್ಧ ಹಲವು ಬಾರಿ ವಾಗ್ದಾಳಿ ನಡೆಸಿದ್ದರು.

ಬಸವನಗುಡಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆಗೆ ಒಲವು

ಭಾಸ್ಕರ್ ರಾವ್​ ಅವರು ಎಎಪಿಗೆ ಸೇರ್ಪಡಯಾದ ಬೆನ್ನಲ್ಲೇ ಅವರಿಗೆ ಪಕ್ಷದಲ್ಲಿ ಹೆಚ್ಚಿನ ಜವಾಬ್ದಾರಿಗಳನ್ನು ನೀಡಲಾಗಿತ್ತು. ಪಂಜಾಬ್​​ನಲ್ಲಿ ಭರ್ಜರಿ ಗೆಲುವು ಪಡೆದು ಉತ್ಸಾಹದಲ್ಲಿದ್ದ ಎಎಪಿಗೆ ರಾಜ್ಯದಲ್ಲಿ ಭಾಸ್ಕರ್ ರಾವ್​ ಅವರ ಪಕ್ಷ ಸೇರ್ಪಡೆ ಹೆಚ್ಚಿನ ಬಲವನ್ನು ನೀಡಿತ್ತು. ಭಾಸ್ಕರ್​ ರಾವ್​​ ಅವರು ರಾಜಕಾರಣ ಪ್ರವೇಶ ಮಾಡುತ್ತಾರೆ ಎಂಬ ಸುದ್ದಿ ಕೇಳಿ ಬಂದಾಗ, ಕಾಂಗ್ರೆಸ್ ಸೇರಿ ಬಸವನಗುಡಿ ವಿಧಾನಸಭಾ ಕ್ಷೇತ್ರ ಅಥವಾ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಹುರಿಯಾಳಾಗುತ್ತಾರೆ ಎಂಬ ದಟ್ಟ ವದಂತಿ ಇತ್ತು. ಕಡೆಗೆ ಅವರು ಆಮ್ ಆದ್ಮಿ ಪಕ್ಷ ಸೇರ್ಪಡೆ ಆಗಿದ್ದರು.

Leave a Reply

Your email address will not be published. Required fields are marked *